ವರದಿ : ಗೋಪಾಲ್ ಯಡಗೆರೆ
ಶಿವಮೊಗ್ಗ (ಮೇ.09): ಕೋವಿಡ್ ರೋಗಿಗಳಿಂದ ತುಂಬಿರುವ ಮೆಗ್ಗಾನ್ ಆಸ್ಪತ್ರೆಯಲ್ಲಿ ಗುಣಮುಖರಾಗಿರುವ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಒಪ್ಪುತ್ತಿಲ್ಲ. ಇದು ಆಸ್ಪತ್ರೆಯ ಆಡಳಿತ ಮಂಡಳಿಗೆ ದೊಡ್ಡ ಸಮಸ್ಯೆ ತಂದಿಟ್ಟಿದೆ.
ಐದಾರು ದಿನಗಳ ಬಳಿಕ ಅನೇಕರು ಬಹುತೇಕ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಇವರು ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳಬಹುದು. ಆದರೆ, ಇಂಥ ರೋಗಿಗಳು ತಾವು ಕೋವಿಡ್‌ನಿಂದ ಗುಣಮುಖರಾಗಿರುವುದನ್ನು ಒಪ್ಪಿಕೊಳ್ಳುತ್ತಿಲ್ಲ. ಆತಂಕ ಮತ್ತು ಭಯದಿಂದಾಗಿ ತಮಗೆ ಇನ್ನೂ ಸುಸ್ತು ಹಾಗೆಯೇ ಇದೆ. ಇನ್ನು ಕೆಲ ದಿನ ಇಲ್ಲೇ ಇರುವುದಾಗಿ ಹಟ ಹಿಡಿಯುತ್ತಿದ್ದಾರೆ. ಮತ್ತೆ ಕೆಲವರು ತಮಗೆ ಉಸಿರಾಟ ಸರಾಗವಾಗಿಲ್ಲ. ಆಕ್ಸಿಜನ್ ಬೇಕು ಎಂದು ಹಟ ಹಿಡಿಯುತ್ತಿದ್ದಾರೆ. ಆಕ್ಸಿಜನ್ ಮಟ್ಟ95 ಇದ್ದರೂ ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳುತ್ತಿವೆ.
ಶಿವಮೊಗ್ಗ ಜಿಲ್ಲೆಗೆ ‘ಅಮೃತ್ ನೋನಿ’ ಉಚಿತ ಆಂಬ್ಯುಲೆನ್ಸ್ : ಇಲ್ಲಿ ಸಂಪರ್ಕಿಸಿ ...
ಇದರಿಂದಾಗಿ ಆಸ್ಪತ್ರೆಗೆ ದಾಖಲಾಗಲು ಬರುತ್ತಿರುವ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಆಸ್ಪತ್ರೆಯಲ್ಲಿ ಪ್ರತಿ ಬೆಡ್‌ಗಳಿಗೂ ಗುರುತು ಹಾಕಲು ನಿರ್ಧರಿಸಲಾಗಿದೆ. ಹಸಿರು, ಹಳದಿ ಮತ್ತು ಕೆಂಪು ಮಾರ್ಕ್ಗಳನ್ನು ಹಾಕಲಾಗುತ್ತದೆ. ಹಸಿರು ಬಣ್ಣ ಇರುವ ರೋಗಿಗಳು ಗುಣಮುಖರಾಗಿದ್ದಾರೆ ಎಂದರ್ಥ. ಹಳದಿ ಬಣ್ಣದ ಗುರುತು ಇರುವವರಿಗೆ ಇನ್ನೂ ಚಿಕಿತ್ಸೆ ಬೇಕಾಗಿದೆ ಮತ್ತು ಕೆಂಪು ಗುರುತು ಇರುವವರು ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದರ್ಥ.
'ಶಿವಮೊಗ್ಗದಲ್ಲಿ ಎಲ್ಲವೂ ಸುವ್ಯವಸ್ಥಿತ : ರೋಗಿಗಳಿಗೆ ಯಾವ ಕೊರತೆಯೂ ಇಲ್ಲಿಲ್ಲ' ..
ಹಸಿರು ಗುರುತು ಇರುವವರನ್ನು ಮನವೊಲಿಸುವಂತೆ ಮತ್ತು ಅವರನ್ನು ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಶುಶ್ರೂಷಕರು ಮಾಡಲು ಅನುಕೂಲವಾಗುತ್ತದೆ ಎನ್ನುತ್ತಾರೆ ಡಿಎಚ್‌ಓ ಡಾ.ರಾಜೇಶ್ ಸುರಗಿಹಳ್ಳಿ.
ಆಸ್ಪತ್ರೆಯಲ್ಲಿ ಕೆಲವು ರೋಗಿಗಳು ತಾವೇ ಆಕ್ಸಿಜನ್ ನಾಬ್ ತಿರುಗಿಸಿಕೊಂಡು ಹೆಚ್ಚಿಗೆ ಮಾಡುತ್ತಿರುತ್ತಾರೆ. ಈ ಬಗ್ಗೆ ರೋಗಿಗಳಿಗೆ ಮನವರಿಕೆ ಮಾಡಿಕೊಡಬೇಕಿದೆ. ಆಕ್ಸಿಜನ್ ಹೆಚ್ಚು ಸಿಕ್ಕರೆ ಬೇಗ ಗುಣವಾಗುತ್ತದೆ ಎಂಬುದು ತಪ್ಪು. ಹೆಚ್ಚು ಆಕ್ಸಿಜನ್ ನೀಡಿದರೆ ರೋಗಿಗೆ ತೊಂದರೆಯೂ ಆಗಬಹುದು. ಆಕ್ಸಿಜನ್ ಎಷ್ಟುಬೇಕು ಎಂಬುದನ್ನು ವೈದ್ಯರು ನಿರ್ಧರಿಸಬೇಕು.
- ಡಾ.ರಾಜೇಶ್, ಡಿಎಚ್‌ಒ, ಶಿವಮೊಗ್ಗ
ಸೋಂಕು ಪರೀಕ್ಷೆ ಫಲಿತಾಂಶ ವಿಳಂಬ : ಕೋವಿಡ್ ಸೋಂಕು ಸಂಬಂಧ ದ್ರವ ಮಾದರಿಯನ್ನು ಪರೀಕ್ಷೆ ನೀಡಿದರೂ ಎರಡು ದಿನವಾದರೂ ಫಲಿತಾಂಶ ಬರುತ್ತಿಲ್ಲ. ಇದು ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಕೆಲವರಿಗೆ ನಾಲ್ಕು ದಿನವಾದರೂ ಫಲಿತಾಂಶ ಬಂದಿಲ್ಲ. ಇದನ್ನು ಒಪ್ಪಿಕೊಳ್ಳುವ ಡಾ. ರಾಜೇಶ್ ಸುರಗೀಹಳ್ಳಿ ಅವರು ಎರಡು ಲ್ಯಾಬ್‌ಗಳಲ್ಲಿ ಪರೀಕ್ಷೆ ಮಾಡಲಾಗುತ್ತಿದೆ.
ವಾರಕ್ಕೊಮ್ಮೆ ಒಂದು ಲ್ಯಾಬ್ ಅನ್ನು ಸ್ಥಗಿತಗೊಳಿಸಿ ಸ್ಯಾನಿಟೈಜ್ ಮಾಡಬೇಕಾಗುತ್ತದೆ. ಇದು ಕೂಡ ವಿಳಂಬಕ್ಕೆ ಕಾರಣವಾಗುತ್ತದೆ. ದ್ರವ ಮಾದರಿ ಪಡೆದ 48 ಗಂಟೆಗಳ ಒಳಗೆ ಫಲಿತಾಂಶ ನೀಡಬೇಕು ಎನ್ನುವುದು ನಮ್ಮ ಗುರಿ. ಇದಕ್ಕಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದ್ದೇವೆ. ಪ್ರತಿ ದಿನ ಸರಾಸರಿ 2 ಸಾವಿರ ಮಾದರಿಗಳು ಬರುತ್ತಿದ್ದು, ಕೋವಿಡ್ ಲಕ್ಷಣಗಳು ಇಲ್ಲದವರೂ ಬಂದು ಪರೀಕ್ಷೆ ಮಾಡಿಸುತ್ತಿರುವುದು ಸಮಸ್ಯೆ ಉಲ್ಬಣವಾಗಲು ಕಾರಣವಾಗುತ್ತಿದೆ ಎನ್ನುತ್ತಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona