ಮತದಾರರ ಪಟ್ಟಿ ಅಕ್ರಮ: ಬಿಬಿಎಂಪಿ ಸಿಬ್ಬಂದಿಗೆ ನಡುಕ..!

By Kannadaprabha NewsFirst Published Nov 27, 2022, 7:30 AM IST
Highlights

ಮಾಹಿತಿ ನೀಡಲೂ ಅವಕಾಶ ನೀಡದ ತನಿಖಾ ಸಂಸ್ಥೆ, ಸಿಬ್ಬಂದಿಯ ಹೆದರಿಸುವ ಯತ್ನ, ವಾಟ್ಸಪ್ಪಲ್ಲಿ ಅಳಲು

ಬೆಂಗಳೂರು(ನ.27):  ಮತದಾರರ ಪಟ್ಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಐಎಎಸ್‌ ಅಧಿಕಾರಿಗಳು ಅಮಾನತುಗೊಂಡ ಬೆನ್ನಲ್ಲೇ ತನಿಖಾ ಸಂಸ್ಥೆಗಳು ವಿಚಾರಣೆ ತೀವ್ರಗೊಳಿಸಿದ್ದು, ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿ, ಸಿಬ್ಬಂದಿಗೆ ಸಂಕಷ್ಟ ತಂದೊಡ್ಡಿದೆ.

ವಿಚಾರಣೆ ನೆಪದಲ್ಲಿ ಕಂದಾಯ ಅಧಿಕಾರಿ, ಸಿಬ್ಬಂದಿಯ ವೈಯಕ್ತಿಕ ಮತ್ತು ಕಚೇರಿ ಮಾಹಿತಿ, ಯಾರಿಗೆ ಯಾವ ಸಂದರ್ಭದಲ್ಲಿ ಕರೆ ಮಾಡಿದ್ದಿರಿ, ಮಾತ್ರವಲ್ಲದೆ ಕಾರ್ಯಚಟುವಟಿಕೆಯ ಮಾಹಿತಿಯನ್ನೆಲ್ಲಾ ಕೇಳಲಾಗುತ್ತಿದೆ. ಸ್ವಲ್ಪ ಕಾಲಾವಕಾಶ ಕೊಡಿ ಸಾರ್‌ ಹೇಳಿದ ಸಿಬ್ಬಂದಿಯನ್ನು ಗದರಿಸುವುದು, ಹೆದರಿಸುವ ಕೆಲಸ ಮಾಡುತ್ತಿದ್ದಾರಂತೆ. ಹೀಗಾಗಿ ಮಾನಸಿಕ ನೆಮ್ಮದಿ ಹಾಳಾಗಿದ್ದು, ತೆರಿಗೆ ಸಂಗ್ರಹದ ಗುರಿ ಮುಟ್ಟಲಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಮತದಾರರ ಪಟ್ಟಿಅಕ್ರಮ ಕಾಂಗ್ರೆಸ್‌ ಸಂಸ್ಕೃತಿ: ಸಚಿವ ಅಶ್ವತ್ಥನಾರಾಯಣ

ಡಾಟಾ ಎಂಟ್ರಿ ಆಪರೇಟರ್ಸ್‌, ಕಂದಾಯ ಸಿಬ್ಬಂದಿ, ಟಿಐ,ಆರ್‌ಐ, ಸಹಾಯಕ ಕಂದಾಯ ಅಧಿಕಾರಿಗಳು ಬಿಬಿಎಂಪಿ ಎಂಪ್ಲಾಯೀಸ್‌ ಅಸೋಸಿಯೇಷನ್‌ಗೆ ಈ ಕುರಿತು ದೂರು ನೀಡಿದ್ದು, ಮತದಾರರಲ್ಲಿ ಮತ ಜಾಗೃತಿ ಮೂಡಿಸುವ ಕೆಲಸದ ಭಾಗವಾಗಿ ನಮಗೆ ಕೆಲವು ಜವಾಬ್ದಾರಿ ವಹಿಸಲಾಗಿತ್ತು. ಅದನ್ನು ಮೇಲಾಧಿಕಾರಿಗಳ ಅಣತಿಯಂತೆ ಮಾಡಿ ಮುಗಿಸಿದ್ದೇವೆ. ರಜೆಯನ್ನೂ ಪರಿಗಣಿಸದೆ ಕೆಲಸ ಮಾಡಿಕೊಟ್ಟಿದ್ದೇವೆ. ಆದರೂ ನಮ್ಮನ್ನು ಮತದಾರರ ಪಟ್ಟಿಅಕ್ರಮದಲ್ಲಿ ಸಿಲುಕಿಸಲು ಸಾಕಷ್ಟುಪ್ರಯತ್ನಗಳು ನಡೆಯುತ್ತಿವೆ ಎಂದು ಹಲವರು ವಾಟ್ಸ್‌ ಆ್ಯಪ್‌ ಮೂಲಕ ದೂರಿನ ಸಂದೇಶ ಕಳುಹಿಸಿದ್ದಾರೆ ಎಂದು ಸಂಘದ ಮೂಲಗಳು ತಿಳಿಸಿವೆ.

ಅಕ್ರಮದಲ್ಲಿ ಬಿಬಿಎಂಪಿ ಅಧಿಕಾರಿಗಳು?

ಚಿಲುಮೆ ಸಂಸ್ಥೆ ನಡೆಸಿರುವ ಅಕ್ರಮಗಳು ಬಿಬಿಎಂಪಿಯ ಆಂತರಿಕ ತನಿಖೆಯಲ್ಲೂ ಸ್ಪಷ್ಟವಾಗಿದೆ ಎಂದು ಮೂಲಗಳು ತಿಳಿಸಿದ್ದು, ಮತದಾರರ ಪಟ್ಟಿಪರಿಷ್ಕರಣೆ ಕಾರ್ಯವನ್ನು ಚಿಲುವೆ ಸಂಸ್ಥೆಯವರು ಕ್ಷೇತ್ರಗಳಿಗೆ ಭೇಟಿ ಕೊಟ್ಟು ನಡೆಸಿಲ್ಲ. ಬದಲಿಗೆ ಎಸಿ ಕೊಠಡಿಯಲ್ಲಿ ಕುಳಿತುಕೊಂಡೇ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿದ್ದರು. ಫೋನ್‌ ಕರೆಗಳ ಮೂಲಕ ಮತದಾರರ ಹೆಸರು, ಮಾಹಿತಿ ತಿಳಿದು ಕ್ಷಣಾರ್ಧದಲ್ಲಿ ಮತದಾರರ ಹೆಸರನ್ನು ಡಿಲಿಟ್‌ ಮಾಡುತ್ತಿದ್ದರು ಎನ್ನಲಾಗಿದೆ.

Voters Data Theft Case: ವೋಟರ್‌ಗೇಟ್‌ ಹಗರಣ ಸಾಬೀತು: ಕಾಂಗ್ರೆಸ್‌

ಚಿಲುಮೆ ಸಂಸ್ಥೆಯವರು ಕೇವಲ ಒಂದೆರಡು ತಿಂಗಳಲ್ಲಿ ಒಂದೂವರೆ ಲಕ್ಷ ಮತದಾರರ ಹೆಸರುಗಳನ್ನು ಡಿಲಿಟ್‌ ಮಾಡಿದ್ದರೂ ಡಿಲಿಟ್‌ ಆಗಿರುವ ಯಾವುದೇ ದಾಖಲೆ ಈವರೆಗೂ ಸಿಕ್ಕಿಲ್ಲ. ಇದಕ್ಕೆ ಬಿಬಿಎಂಪಿ ಅಧಿಕಾರಿಗಳ ಬೆಂಬಲವೂ ಇತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಯಾವುದೇ ಮತದಾರರ ಹೆಸರು ಪಟ್ಟಿಯಿಂದ ರದ್ದು ಪಡಿಸಬೇಕಾದರೆ ನಿಯಮದ ಪ್ರಕಾರವೇ ಆಗಬೇಕು. ಅದಕ್ಕೆ ಸಾಕಷ್ಟುನಿಯಮಗಳು ಇವೆ. ಆದರೆ ಅದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ 1.65 ಲಕ್ಷ ಮತದಾರರ ಹೆಸರನ್ನು ತೆಗೆದು ಹಾಕುವ ಸಂದರ್ಭದಲ್ಲಿ ನಿಯಮಗಳನ್ನು ಅನುಸರಿಸಿಲ್ಲ ಎಂಬುದು ಆಂತರಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈವರೆಗೆ ಐವರ ಅಮಾನತು

ಮತದಾರರ ಪಟ್ಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೂ ಮಹದೇವಪುರ ವಿಧಾನಸಭಾ ಕ್ಷೇತ್ರದ ಕೆ.ಚಂದ್ರಶೇಖರ್‌, ಶಿವಾಜಿ ನಗರದ ಸುಹೇಲ್‌ ಅಹಮದ್‌ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಿ.ಭಿ.ಭೀಮಾಶಂಕರ್‌ ಎಂಬ ಕಂದಾಯ ಅಧಿಕಾರಿಗಳು ಅಮಾನತುಗೊಂಡಿದ್ದರು. ಇದೀಗ ಇಬ್ಬರು ಐಎಎಸ್‌ ಅಧಿಕಾರಿಗಳಾದ ಬೆಂಗಳೂರು ಕೇಂದ್ರ ಅಪರ ಜಿಲ್ಲಾ ಚುನಾವಣಾಧಿಕಾರಿ ರಂಗಪ್ಪ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್‌ ಅವರು ಅಮಾನತುಗೊಂಡಿದ್ದು, ಪ್ರಕರಣ ಇನ್ನಷ್ಟು ತೀವ್ರತೆ ಪಡೆದುಕೊಳ್ಳುತ್ತಿದೆ.
 

click me!