Grama Vastavya: 7 ದಿನದಲ್ಲಿ ಭೂಪರಿವರ್ತನೆಗೆ ಮಸೂದೆ, ಸಚಿವ ಅಶೋಕ್‌

By Kannadaprabha NewsFirst Published Nov 27, 2022, 7:00 AM IST
Highlights

ಚಿಕ್ಕಬಳ್ಳಾಪುರದ ಜರಬಂಡಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ: ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ: ಸಚಿವ ಅಶೋಕ್‌

ಚಿಕ್ಕಬಳ್ಳಾಪುರ(ನ.27):  ಕಂದಾಯ ಇಲಾಖೆ ಕಾನೂನುಗಳನ್ನು ಸರಳೀಕರಿಸಿ ಜನಸ್ನೇಹಿಯಾಗಿ ರೂಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಹಮ್ಮಿಕೊಳ್ಳುತ್ತಿದ್ದು, ಭೂ ಪರಿವರ್ತನೆಗೆ ಅರ್ಜಿ ಹಾಕಿದ 7 ದಿನದಲ್ಲಿ ಅನುಮತಿ ನೀಡುವ ತಿದ್ದುಪಡಿ ಮಸೂದೆಯನ್ನು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಪ್ರಕಟಿಸಿದರು. ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿಯಲ್ಲಿ ಶನಿವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕಂದಾಯ ಇಲಾಖೆಯಲ್ಲಿ ಬದಲಾವಣೆ ತರಬೇಕಿದೆ. ಒಂದೇ ಸೂರಿನಡಿ ನಾಗರಿಕರು ಅಧಿಕಾರಿಗಳ ಮುಂದೆ ತಮ್ಮ ಕಷ್ಟಗಳನ್ನು ಹೇಳಲು ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ. ಈವರೆಗೂ ನಡೆಸಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರಾಜ್ಯದ ರೈತರಲ್ಲಿ, ನಾಗರಿಕರಲ್ಲಿ ವಿಶ್ವಾಸ, ನಂಬಿಕೆ ಮೂಡಿಸಿದೆ ಎಂದರು.

ಕೆಲವರು ಈ ಕಾರ್ಯಕ್ರಮಕ್ಕೆ ಅಶೋಕ್‌ ಗ್ರಾಮ ವಾಸ್ತವ್ಯ ಅಂತ ಹೆಸರಿಡಿ ಅಂತ ಹೇಳಿದರು. ಆದರೆ ನಾವು ಮಾಡುವ ಕಾರ್ಯಕ್ರಮಗಳು ಶಾಶ್ವತವಾಗಿ ಇರಬೇಕೆಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅಂತ ಹೆಸರು ಇಟ್ಟಿದ್ದೇವೆಂದು ಇದೇ ವೇಳೆ ತಿಳಿಸಿದರು.

ನನ್ನನ್ನು ಸೋಲಿಸಿಬಿಟ್ಟರು: ಕಣ್ಣೀರಿಟ್ಟ ಸಚಿವ ಎಂಟಿಬಿ ನಾಗರಾಜ್‌

71,172 ಅರ್ಜಿಗಳ ವಿಲೇವಾರಿ: 

ರೈತರು, ವಿಕಲಚೇನರು, ಮಹಿಳೆಯರು, ಗ್ರಾಮಸ್ಥರು ಪಿಂಚಣಿ, ಖಾತೆ ವಿಚಾರಕ್ಕಾಗಿ, ಸ್ಮಶಾನಕ್ಕಾಗಿ ಅರ್ಜಿ ಹಿಡಿದು ಕಚೇರಿಗಳಿಗೆ ಸುತ್ತಾಡುವ ಪದ್ಧತಿ ತೊಲಗಬೇಕಿದೆ. ಅಧಿಕಾರಿಗಳು ಜನ ಸೇವಕರಾಗಬೇಕು. ಸರ್ಕಾರದ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪಿಸಬೇಕು, ಈ ದಿಕ್ಕಿನಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಲಾಗಿದೆ. ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯದಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುತ್ತಿದೆ. ಇಲ್ಲಿವರೆಗೂ ಗ್ರಾಮ ವಾಸ್ತವ್ಯದಲ್ಲಿ 71,172 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗಿದೆ ಎಂದರು.

ಬೆಂಗಳೂರಿನಲ್ಲಿ ಡಿಸೆಂಬರ್‌ನಲ್ಲಿ 10 ಸಾವಿರ ಸೈಟ್‌ ವಿತರಣೆ

ಸರ್ಕಾರಿ ಜಮೀನಲ್ಲಿ ಅಥವಾ ಗೋಮಾಳದಲ್ಲಿ ಯಾರೇ ಮನೆ ಕಟ್ಟಿದರೂ ಅವರಿಗೆ ಹಕ್ಕು ಪತ್ರ ವಿತರಿಸುವ ಕಾರ್ಯ ಸರ್ಕಾರ ಮಾಡುತ್ತಿದೆ. ಬೆಂಗಳೂರಿನಲ್ಲಿ ಡಿಸೆಂಬರ್‌ನಲ್ಲಿ ಬರೊಬ್ಬರಿ 10 ಸಾವಿರ ಬಡವರಿಗೆ ಉಚಿತವಾಗಿ ಸರ್ಕಾರದಿಂದ ನಿವೇಶನ ವಿತರಿಸುವ ಕಾರ್ಯವನ್ನು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಕಂದಾಯ ಸಚಿವ ಆರ್‌.ಅಶೋಕ್‌ ಪ್ರಕಟಿಸಿದರು.

ಚಿಕ್ಕಬಳ್ಳಾಪುರದಲ್ಲಿ 22 ಸಾವಿರ ಮಂದಿಗೆ ಉಚಿತ ನಿವೇಶನ

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಅನೇಕ ನಿರ್ಧಾರಗಳನ್ನು ಪ್ರಕಟಿಸಿದರು. ಅದರಲ್ಲಿ ಹೊಸದಾಗಿ ಘೊಷಣೆ ಆಗಿರುವ ಮಂಚೇನಹಳ್ಳಿ ತಾಲೂಕು ಕೇಂದ್ರದಲ್ಲಿ ಆಡಳಿತ ಸೌಧ ನಿರ್ಮಾಣಕ್ಕೆ .15 ಕೋಟಿ ಅನುದಾನ ಬಿಡುಗಡೆ, ಚಿಕ್ಕಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 22 ಸಾವಿರ ಮಂದಿಗೆ ಉಚಿತವಾಗಿ ನಿವೇಶನ ವಿತರಿಸಲು ಒಟ್ಟು 826 ಎಕರೆ ಜಮೀನಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಕಿಸಿ ಕೊಡುವ ಘೋಷಣೆಗಳೂ ಸೇರಿವೆ.

ಎತ್ತಿನ ಬಂಡಿಯಲ್ಲಿ ಸಚಿವರ ಅದ್ಧೂರಿ ಮೆರವಣಿಗೆ

ಚಿಕ್ಕಬಳ್ಳಾಪುರ: ಜರಬಂಡಹಳ್ಳಿಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಕಂದಾಯ ಸಚಿವ ಆರ್‌.ಅಶೋಕ್‌ಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ಜರಬಂಡಹಳ್ಳಿ ಪ್ರವೇಶಕ್ಕೂ ಮುನ್ನ ನುಲುಗುಮ್ಮನಹಳ್ಳಿಯಲ್ಲಿ ಕಳಶ ಹೊತ್ತ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದ್ದು, ಆ ಬಳಿಕ ಅವರನ್ನು ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆದೊಯ್ಯಲಾಯಿತು. ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೇ ವೆಂಕಟರವಣಸ್ವಾಮಿ ದೇವರ ದರ್ಶನ ಪಡೆದ ಅಶೋಕ್‌ ಅವರನ್ನು, ನಂತರ ಜರಬಂಡಹಳ್ಳಿಯ ಕಾರ್ಯಕ್ರಮದ ವೇದಿಕೆವರೆಗೂ ಎತ್ತಿನಬಂಡಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಅವರು ಕಂದಾಯ ಸಚಿವರಿಗೆ ಸಾಥ್‌ ನೀಡಿದರು. ಸಚಿವರ ಗ್ರಾಮ ವಾಸ್ತವ್ಯದಿಂದಾಗಿ ಜರಬಂಡಹಳ್ಳಿ, ಹನುಮಂತಪುರ, ನಲುಗುಮ್ಮನಹಳ್ಳಿ ಗ್ರಾಮಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗ್ರಾಮದ ಮುಖ್ಯ ಬೀದಿಗಳ ತಳಿರು, ತೋರಣಗಳಿಂದ ಸಿಂಗಾರಗೊಂಡು ಹಬ್ಬದ ಸಂಭ್ರಮ ಇತ್ತು. ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್ಪಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಸಮಸ್ಯೆ, ಅಹವಾಲುಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಕಾರ್ಯ ಮಾಡಿದರು.

18,216 ಫಲಾನುಭವಿಗಳಿಗೆ ಸೌಲಭ್ಯ ವಿತರಣೆ: ಜರಬಂಡಹಳ್ಳಿ ಕಾರ್ಯಕ್ರಮದಲ್ಲಿ 18,216 ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಿಸಿದರೆ, ಗ್ರಾಪಂ ವ್ಯಾಪ್ತಿಯಲ್ಲಿ .7, 85 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಾಯಿತು.

ಪ್ರತಿಜ್ಞಾವಿಧಿ ಬೋಧಿಸಿದ ಅಶೋಕ್‌

ಚಿಕ್ಕಬಳ್ಳಾಪುರ: ಜರಬಂಡಹಳ್ಳಿಯಲ್ಲಿ ಶನಿವಾರ ಕಂದಾಯ ಸಚಿವ ಆರ್‌.ಅಶೋಕ್‌ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ವಾಸ್ತವ್ಯ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಸಂವಿಧಾನ ದಿನದ ಹಿನ್ನೆಲೆಯಲ್ಲಿ ವೇದಿಕೆಯಲ್ಲಿ ಆರ್‌.ಅಶೋಕ್‌, ದೇಶದ ಸಂವಿಧಾನ ಪೀರಿಕೆಯ ಪ್ರಸ್ತಾವನೆಯನ್ನು ಓದಿ ಎಲ್ಲರೂ ಪಾಲಿಸುವಂತೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ಮುಖ್ಯ ವೇದಿಕೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರವನ್ನು ಇಟ್ಟು ಸಚಿವರು ಪುಷ್ಪನಮನ ಸಲ್ಲಿಸಿದರು.

ವಿದ್ಯಾರ್ಥಿಗಳೊಂದಿಗೆ ಸಚಿವರ ನೃತ್ಯ

ಚಿಕ್ಕಬಳ್ಳಾಪುರ: ಗ್ರಾಮ ವಾಸ್ತವ್ಯದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಕನ್ನಡ ನಾಡು ಸಂಸ್ಕೃತಿ ಬಿಂಬಿಸುವ ಹಾಡುಗಳಿಗೆ ನೃತ್ಯ ಮಾಡಿ ರಂಜಿಸಿದರು. ಈ ವೇಳೆ ಕಂದಾಯ ಸಚಿವರು ಆರ್‌. ಅಶೋಕ್‌ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರೂ ಮಕ್ಕಳ ಜತೆ ಮಕ್ಕಳಂತೆ ಹೆಜ್ಜೆ ಹಾಕಿರಂಜಿಸಿದರು.

ಡಾ.ಸುಧಾಕರ್‌ ತಾಯಿ ಹೆಸರಲ್ಲಿ ಮೊಬೈಲ್‌ ಕ್ಲಿನಿಕ್‌

ಚಿಕ್ಕಬಳ್ಳಾಪುರ: ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರ ತಾಯಿ ಹೆಸರಲ್ಲಿ ಮಹತ್ವದ ಯೋಜನೆಯೊಂದಕ್ಕೂ ಚಾಲನೆ ನೀಡಲಾಯಿತು. ಸುಧಾಕರ್‌ ತಾಯಿ ಶಾಂತಮ್ಮ ಹೆಸರಲ್ಲಿ ಆರಂಭಿಸಿರುವ ‘ಶಾಂತ ಮೊಬೈಲ್‌ ಕ್ಲಿನಿಕ್‌’ ವಾಹನಕ್ಕೆ ಕಂದಾಯ ಸಚಿವ ಆರ್‌.ಅಶೋಕ್‌ ಹಸಿರು ನಿಶಾನೆ ತೋರಿದರು.

Grama Vastavya: ಹನುಮಂತಪುರದಲ್ಲಿಂದು ಸಚಿವ ಅಶೋಕ್‌ ಗ್ರಾಮ ವಾಸ್ತವ್ಯ

ಈ ವೇಳೆ ಮಾತನಾಡಿದ ಸಚಿವ ಸುಧಾಕರ್‌, ಮಂಚೇನಹಳ್ಳಿ ತಾಲೂಕಿನ ಪ್ರತಿ ಹಳ್ಳಿಗೂ ಈ ಮೊಬೈಲ್‌ ವಾಹನ ಸಂಚರಿಸಲಿದ್ದು, ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಿದೆ. ತಜ್ಞ ವೈದ್ಯರ ಜೊತೆಗೆ ಸಿಬ್ಬಂದಿ ಪ್ರಯೋಗಾಲಯ ವ್ಯವಸ್ಥೆಯೂ ಇದರಲ್ಲಿದೆ. ಅಗತ್ಯ ಇರುವವರಿಗೆ ಉಚಿತವಾಗಿ ಔಷಧಿಗಳನ್ನೂ ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರತಿ ಹಳ್ಳಿಗೂ ವಿಸ್ತರಿಸಲಾಗುವುದೆಂದು ಘೋಷಿಸಿದರು.

ಉಚಿತ ಆರೋಗ್ಯ ಶಿಬಿರ, ವಸ್ತು ಪ್ರದರ್ಶನ

ಚಿಕ್ಕಬಳ್ಳಾಪುರ: ಗ್ರಾಮ ವಾಸ್ತವ್ಯದ ಹಿನ್ನಲೆಯಲ್ಲಿ ಆಗಮಿಸಿದ್ದ ಜನರಿಗೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ ಅವಶ್ಯಕತೆ ಇರುವವರಿಗೆ ಔಷಧಗಳನ್ನು ಉಚಿತವಾಗಿ ನೀಡಲಾಯಿತು. ಇನ್ನೂ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಕೈಗಾರಿಕೆ ಇಲಾಖೆಯಿಂದ ಸಾರ್ವಜನಿಕರಿಗೆ ಇಲಾಖೆ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ವಿಶೇಷವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಸ್ತ್ರೀಶಕ್ತಿ ಸಂಘಗಳ ತಯಾರಿಸಿ ಕರಕಶುಲ ಉತ್ಪನ್ನಗಳ ಕುರಿತು ತರಹೇವಾರಿ ಮಳಿಗೆಗಳು ಉಪಯುಕ್ತ ಮಾಹಿತಿ ನೀಡಿದವು.
 

click me!