ಕನ್ನಡ ವಿರೋಧಿ ದಾಂದಲೆ ಸಹಿಸುವುದಿಲ್ಲ: ಸುನಿಲ್‌ ಕುಮಾರ್‌

By Kannadaprabha NewsFirst Published Nov 27, 2022, 7:28 AM IST
Highlights

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕಿಡಿಗೇಡಿಗಳು ಮಾಡಿರುವ ದಾಂದಲೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ, ಕನ್ನಡದ ನೆಲ ಜಲ ಭಾಷೆ ವಿಚಾರದಲ್ಲಿ ರಾಜಕೀಯ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಉಡುಪಿ ನ.(27) : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕಿಡಿಗೇಡಿಗಳು ಮಾಡಿರುವ ದಾಂದಲೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ, ಕನ್ನಡದ ನೆಲ ಜಲ ಭಾಷೆ ವಿಚಾರದಲ್ಲಿ ರಾಜಕೀಯ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ನೆಲ ಜಲದ ಸಂಸ್ಕೃತಿಯನ್ನು ಭೂಭಾಗದ ಗಡಿಪ್ರದೇಶವನ್ನು ಉಳಿಸುವ ಬಗ್ಗೆ ಮುಖ್ಯಮಂತ್ರಿ ಅವರು ಸ್ಪಷ್ಟಸಂದೇಶ ನೀಡಿದ್ದಾರೆ. ನಮ್ಮತನವನ್ನು ಗಟ್ಟಿಮಾಡುವುದಕ್ಕೆ ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಕನ್ನಡದ ವಿರುದ್ಧ ಘೋಷಣೆಗಳನ್ನು ಯಾರೋ ಬರೆದಿದ್ದಾರೆ ಅಂತ ಪ್ರತಿಕ್ರಿಯೆ ನೀಡಬೇಕಾಗಿಲ್ಲ ಎಂದು ಹೇಳಿದರು.

ಮಂಗಳೂರು ಸ್ಫೋಟ ಪ್ರಕರಣ: ಸಮಾಜವನ್ನು ದುರ್ಬಲಗೊಳಿಸಲು ಬಿಡುವುದಿಲ್ಲ: ಸಚಿವ ಸುನಿಲ್ ಕುಮಾರ್

ಸಿಎಂ ಬೊಮ್ಮಾಯಿ ಅವರ ವಿರುದ್ಧ ಬೆಳಗಾವಿಯ ಮರಾಠ ಸಂಘದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿ ರಾಜ್ಯದ ಮುಖ್ಯಮಂತ್ರಿಗಳಿಗೆ ಗೌರವ ಕೊಡಬೇಕಾಗಿರುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಕರ್ತವ್ಯ. ಇದರ ವಿರುದ್ಧ ಕೆಲವು ಪುಂಡರು ಕೆಲಸ ಮಾಡುತ್ತಿದ್ದಾರೆ ಅಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಮಾನ ನಾಗರಿಕ ಸಂಹಿತೆಗೆ ಸರ್ಕಾರ ಬದ್ಧ

ಕರ್ನಾಟಕದಲ್ಲಿ ಸಮಾನ ನಾಗರಿಕ ಸಂಹಿತೆ ತರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೇಳಿದ್ದಾರೆ. ಅದನ್ನು ಸ್ವಾಗತಿಸುತ್ತೇವೆ. ಸಮಾನ ನಾಗರಿಕ ಸಂಹಿತೆ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಕ್ಯಾಬಿನೆಟ್‌ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಸಮಾನ ನಾಗರಿಕ ಸಂಹಿತೆ ಯಾಕೆ ಬೇಕು ಎನ್ನುವ ಚರ್ಚೆಯೇ ಬೇಕಾಗಿಲ್ಲ, ಪ್ರತ್ಯೇಕತೆಗೆ ಅವಕಾಶ ಇಲ್ಲ. ದೇಶದಲ್ಲಿ ಏಕರೂಪದ ಕಾನೂನು ತರುತ್ತೇವೆ ಎಂದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿಯೂ ಹೇಳಿದ್ದೇವೆ. ಅದರಂತೆ ಬೇರೆ ರಾಜ್ಯಗಳು ಅದನ್ನು ಜಾರಿಗೊಳಿಸಲು ಈಗಾಗಲೇ ಮುಂದಾಗಿದೆ, ಕರ್ನಾಟಕ ರಾಜ್ಯದಲ್ಲಿಯೂ ಜಾರಿಯಾಗುತ್ತದೆ ಎಂದರು.

ಎನ್‌ಐಎ - ಕೇಂದ್ರದ ಸ್ಪಂದನೆ

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಕದ್ರಿ ದೇವಸ್ಥಾನದ ವಿರುದ್ಧ ಹುನ್ನಾರ ನಡೆದಿರುವುದು ಪತ್ತೆಯಾಗಿದೆ. ಇದರಿಂದ ರಾದ್ಯದಲ್ಲಿ ಹಿಂದೂ ಚಟುವಟಿಕೆಯ ಕೇಂದ್ರಗಳನ್ನು ಗುರಿ ಮಾಡಲಾಗುತ್ತಿದೆ ಎಂದು ಬಹಿರಂಗವಾಗಿದೆ. ಇದನ್ನು ಬಗ್ಗು ಬಡಿದೇ ಬಡಿಯುತ್ತೇವೆ, ಯಾವುದೇ ಕಾರಣಕ್ಕೂ ಇಂತಹ ಚಟುವಟಿಕೆ ವಿಜೃಂಭಿಸಲು ಬಿಡುವುದಿಲ್ಲ ಎಂದು ಸಚಿವರು ಹೇಳಿದರು.

ಬಿಜೆಪಿಯಿಂದ ವಿಜಯ ಸಂಕಲ್ಪ ರಾಜ್ಯ ಯಾತ್ರೆ: ಸಚಿವ ಸುನೀಲ್‌ ಕುಮಾರ್‌

ಈ ಹುನ್ನಾರದ ಆಳ ಅಗಲದ ತನಿಖೆಗೆ ಎನ್‌ಐಎಗೆ ಒಪ್ಪಿಸಿದ್ದೇವೆ. ಸರ್ಕಾರ ಕೂಡ ಇನ್ನಷ್ಟುತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳಲಿದೆ. ರಾಜ್ಯ ಸರ್ಕಾರದಿಂದ ಕರಾವಳಿಯಲ್ಲಿ ಎನ್‌ಐಎ ಕಚೇರಿ ಸ್ಥಾಪನೆಗೆ ಎಲ್ಲ ಪ್ರಕ್ರಿಯೆ ಆಗಿದೆ. ಇದಕ್ಕೆ ಸ್ಪಂದಿಸಿ ಕೇಂದ್ರ ಸರ್ಕಾರ ಕೂಡ ಪ್ರಕ್ರಿಯೆಗಳನ್ನು ಆರಂಭಿಸಿದೆ ಎಂದು ಸಚಿವರು ಹೇಳಿದರು.

click me!