ಬಹುತೇಕ ಅರಣ್ಯದಿಂದ ಆವೃತವಾಗಿರುವ ಕೊಡಗಿಗೆ ನಕ್ಸಲ್ ಟೀಂ ಎಂಟ್ರಿಯಾಗಿರುವ ಸಾಧ್ಯತೆ ಇರಬಹುದು ಎನ್ನಲಾಗಿದೆ. ಹೀಗಾಗಿ ವಿಕ್ರಮ್ ಗೌಡ ಎನ್ಕೌಂಟರ್ ಆದಾಗಿನಿಂದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗದ ಅರಣ್ಯ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಯುತ್ತಿದೆ.
ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ನ.24): ನಕ್ಸಲ್ ನಾಯಕ ವಿಕ್ರಮ್ ಗೌಡನ ಎನ್ಕೌಂಟರ್ ಆಗುತ್ತಿದ್ದಂತೆ ಕೊಡಗು ಜಿಲ್ಲೆಯತ್ತ ಆತನ ಸಹಚರರು ಬಂದಿರುವ ಸಾಧ್ಯತೆ ಇದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಎಎನ್ಎಫ್ ಟೀಂ ಕೂಂಬಿಂಗ್ ಆರಂಭಿಸಿದೆ. ಎನ್ಕೌಂಟರ್ ವೇಳೆ ವಿಕ್ರಮ್ ಗೌಡನ ಜೊತೆಗೆ ಇದ್ದ ಎನ್ನಲಾದ ಇನ್ನೂ ನಾಲ್ಕೈದು ನಕ್ಸಲರು ಕೊಡಗಿನತ್ತ ಬಂದಿರಬಹುದು ಎನ್ನಲಾಗಿದ್ದು, ನಕ್ಸಲ್ ನಿಗ್ರಹಪಡೆ ಕಾರ್ಯಾಚರಣೆ ನಡೆಸುತ್ತಿದೆ.
ಬಹುತೇಕ ಅರಣ್ಯದಿಂದ ಆವೃತವಾಗಿರುವ ಕೊಡಗಿಗೆ ನಕ್ಸಲ್ ಟೀಂ ಎಂಟ್ರಿಯಾಗಿರುವ ಸಾಧ್ಯತೆ ಇರಬಹುದು ಎನ್ನಲಾಗಿದೆ. ಹೀಗಾಗಿ ವಿಕ್ರಮ್ ಗೌಡ ಎನ್ಕೌಂಟರ್ ಆದಾಗಿನಿಂದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗದ ಅರಣ್ಯ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಯುತ್ತಿದೆ.
ಚಿಕ್ಕಮಗಳೂರು: ವಿಕ್ರಂ ಗೌಡ ಹತ್ಯೆ ಬಳಿಕ ನಾವಿಕನಿಲ್ಲದ ದೋಣಿ ಎನ್ನುವ ಸ್ಥಿತಿಗೆ ಬಂದ ನಕ್ಸಲ್ ಚಟುವಟಿಕೆ!
ಕೊಡಗು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪಶ್ಚಿಮಘಟ್ಟ ಹಾದು ಹೋಗಿದ್ದು ಭಾರೀ ಪ್ರಮಾಣದಲ್ಲಿ ಎರಡು ಜಿಲ್ಲೆಗಳ ನಡುವೆ ಹೊಂದಿಕೊಂಡಂತೆ ಅರಣ್ಯವಿದೆ. ಜೊತೆಗೆ ಕೊಡಗು ಜಿಲ್ಲೆಯಲ್ಲಿ ಬಹುತೇಕ ಬೆಟ್ಟಗುಡ್ಡಗಳಿಂದ ಕೂಡಿರುವ ಕಾಫಿ ತೋಟಗಳಿದ್ದು ಹುಡುಕಾಟ ನಡೆಯುತ್ತಿದೆ. ಹೀಗಾಗಿ ಕೊಡಗು, ದಕ್ಷಿಣ ಕನ್ನಡ ಗಡಿ ಭಾಗದ ಅರಣ್ಯದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ.
ಮುಂಬೈ ಬಿಟ್ಟು ಬರದಿದ್ದರೇ ನಕ್ಸಲ್ ಆಗುತ್ತಿರಲಿಲ್ಲ ವಿಕ್ರಂಗೌಡ; ಊರಿಗೆ ಮರಳಿದ್ದೇ ಆತನ ಜೀವನದ ಟರ್ನಿಂಗ್ ಪಾಯಿಂಟ್!
2012 ರಿಂದಲೂ ಜಿಲ್ಲೆಯಲ್ಲಿ ಪ್ರತಿ ಚುನಾವಣೆಯ ಸಂದರ್ಭ ಕೊಡಗಿನಲ್ಲಿ ನಕ್ಸಲರು ಪ್ರತ್ಯಕ್ಷವಾಗಿದ್ದಾರೆ. 2014 ರ ಲೋಕಸಭಾ ಚುನಾವಣೆ, 2018 ರ ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭಾ ಚುನಾವಣೆಯ ವೇಳೆಯಲ್ಲೂ ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗವಾಗಿರುವ ಕೂಜಿಮಲೆ ಎಂಬಲ್ಲಿ ನಕ್ಸಲರು ಪ್ರತ್ಯಕ್ಷವಾಗಿದ್ದರು. ಈ ಕುರಿತು ಮಾತನಾಡಿರುವ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು 2012 ರಿಂದಲೂ ಪ್ರತೀ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ. ಇದೀಗ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ಆತನ ಸಹಚರರು ಕೊಡಗಿನತ್ತ ಬಂದಿರುವ ಸಾಧ್ಯತೆ ಇದೆ.
ಹೀಗಾಗಿ ಎಎನ್ಎಫ್ ಟೀಂ ತೀವ್ರ ಕೂಂಬಿಂಗ್ ನಡೆಸುತ್ತಿದೆ. ಅದರ ಜೊತೆಗೆ ನಮ್ಮ ವಿಶೇಷ ತಂಡವೂ ಕೂಡ ಸಿದ್ಧವಿದೆ. ಎಲ್ಲಾ ಶಸ್ತ್ರಾಸ್ತ್ರಗಳ ಜೊತೆಗೆ ಸಿದ್ಧವಿದ್ದೇವೆ. ಅಲ್ಲದೆ ನಮ್ಮ ಗುಪ್ತಚರದಳ ಕೂಡ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕೊಡಗಿನಲ್ಲಿ ಇಂತಹ ಸಮಾಜಘಾತುಕ ಶಕ್ತಿಗಳಿಗೆ ಜನರು ಬೆಂಬಲಿಸುವುದಿಲ್ಲ. ಯಾವುದೇ ಅನಮಾನಸ್ಪದ ವ್ಯಕ್ತಿಗಳು ಬಂದರೂ ಮಾಹಿತಿ ನೀಡುತ್ತಾರೆ. ಜೊತೆಗೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಸೇವೆ ಸಲ್ಲಿಸಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರು ನಮಗೆ ಮಾಹಿತಿ ನೀಡುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ನಾವು ಅಲರ್ಟ್ ಆಗಿದ್ದೇವೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಹೇಳಿದ್ದಾರೆ.