ಇನ್ಮುಂದೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಮೆ! ಇಲ್ಲಿದೆ ಮಾಹಿತಿ

By Kannadaprabha News  |  First Published Jun 23, 2023, 2:46 PM IST

ಇನ್ನು ಮುಂದೆ ಕರ್ನಾಟಕ ಅರಣ್ಯ ಇಲಾಖೆಯ ಅಧೀನದಲ್ಲಿರುವ ರಾಜ್ಯದ ಸಂರಕ್ಷಿತ ಪ್ರದೇಶಗಳಿಗೆ ಬರುವ ಪ್ರವಾಸಿಗರಿಗೆ ವಿಮೆ ಭದ್ರತೆ ಒದಗಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.


ವಸಂತಕುಮಾರ ಕತಗಾಲ

ಕಾರವಾರ (ಜೂ.23) ಇನ್ನು ಮುಂದೆ ಕರ್ನಾಟಕ ಅರಣ್ಯ ಇಲಾಖೆಯ ಅಧೀನದಲ್ಲಿರುವ ರಾಜ್ಯದ ಸಂರಕ್ಷಿತ ಪ್ರದೇಶಗಳಿಗೆ ಬರುವ ಪ್ರವಾಸಿಗರಿಗೆ ವಿಮೆ ಭದ್ರತೆ ಒದಗಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.

Tap to resize

Latest Videos

ಈ ಕುರಿತು ಅವಶ್ಯಕ್ರಮ ಕೈಗೊಳ್ಳಲು ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ಈ ಕುರಿತು ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕರು, ವನ್ಯಜೀವಿ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಬುಧವಾರ ಪತ್ರ ಬರೆದಿದ್ದಾರೆ.

ಬೆಳಗಾವಿಯ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಮನವಿ ಮೇರೆಗೆ ಈ ಆದೇಶ ಹೊರಡಿಸಲಾಗಿದೆ.

 

ಪ್ರವಾಸಿ ತಾಣ​ಗಳ ಚೇತ​ರಿ​ಕೆಗೆ ‘ಶಕ್ತಿ’ ಯೋಜನೆ ಟಾನಿಕ್‌

ರಾಜ್ಯವು ಅಗಾಧವಾದ ವನ್ಯಜೀವಿ ಸಂಪತ್ತನ್ನು ಹೊಂದಿದ್ದು, ಹಲವಾರು ಹುಲಿಸಂರಕ್ಷಿತ ಪ್ರದೇಶಗಳು, ರಾಷ್ಟ್ರೀಯ ಉದ್ಯಾನಗಳು ಹಾಗೂ ಅಭಯಾರಣ್ಯಗಳನ್ನು ಹೊಂದಿದೆ. ರಾಜ್ಯದ ಪ್ರಕೃತಿ ಸೌಂದರ್ಯವು ಸಂರಕ್ಷಿತ ಪ್ರದೇಶಗಳ ಹೊರಗೂ ಕೂಡ ಹಬ್ಬಿದ್ದು ಹಲವು ಗಿರಿಧಾಮಗಳು, ಜಲಪಾತಗಳನ್ನು ಹೊಂದಿದ್ದು ತನ್ಮೂಲಕ ದೇಶದಲ್ಲಿಯೇ ಪರಿಸರ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ರಾಜ್ಯಗಳಲ್ಲಿ ಒಂದಾಗಿದೆ. ಅಲ್ಲದೇ ರಾಜ್ಯದ ಕರಾವಳಿಯೂ ಹಲವಾರು ಸುಪ್ರಸಿದ್ಧ ತಾಣಗಳನ್ನು ಹೊಂದಿದೆ. ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಇಂತಹ ಪರಿಸರ ಪ್ರವಾಸೋದ್ಯಮ ಸ್ಥಳಗಳಲ್ಲಿ ಚಾರಣ, ಹಿನ್ನೀರು ಸಫಾರಿ, ಕಯಾಕಿಂಗ್‌, ಬೋಟಿಂಗ್‌, ರಾರ‍ಯಪ್ಟಿಂಗ್‌ ಸೇರಿದಂತೆ ಹಲವು ಚಟುವಟಿಕೆಯನ್ನು ಪ್ರವಾಸಿಗರಿಗೆ ಒದಗಿಸಲಾಗುತ್ತಿದೆ. ಕೆಲವು ಚಟುವಟಿಕೆ ನೀರಿನಲ್ಲಿ ಮುಳುಗುವಿಕೆ, ವನ್ಯಜೀವಿಗಳಿಂದ ದಾಳಿ ಸೇರಿದಂತೆ ಅನೇಕ ಅಪಾಯ ಹೊಂದಿದ್ದು, ಆಕಸ್ಮಿಕವಾಗಿ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

2009ರಲ್ಲಿ ಕೇರಳದ ಪೆರಿಯಾರ್‌ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಿನ್ನೀರಿನಲ್ಲಿ ಪ್ರವಾಸಿ ಬೋಟ್‌ ಮುಳುಗಿ ಸಂಭವಿಸಿದ ದುರಂತದಲ್ಲಿ ಹಲವಾರು ಪ್ರವಾಸಿಗರು ಮೃತಪಟ್ಟಿದ್ದರು. ಇಂತಹ ಘಟನೆಗಳು ಪ್ರವಾಸಿಗರ ಸುರಕ್ಷತೆ ಹಾಗೂ ಅನಿರೀಕ್ಷಿತ ದುರ್ಘಟನೆ ಸಂಭವಿಸಿದಾಗ ವಿಮೆ ಸೌಲಭ್ಯವನ್ನು ಒದಗಿಸುವ ಮಹತ್ವತೆಯನ್ನು ಒತ್ತಿಹೇಳುತ್ತವೆ. ಸುಸ್ಥಿರ ಪ್ರವಾಸೋದ್ಯಮ ವ್ಯವಸ್ಥೆಯನ್ನು ನಿರ್ಮಿಸುವುದು ಹಾಗೂ ಪ್ರವಾಸಿಗರಿಗೆ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಅನುಭವ ಒದಗಿಸುವುದು ಕರ್ನಾಟಕ ಪ್ರವಾಸೋದ್ಯಮ ನೀತಿ 2020-25ರ ಪ್ರಮುಖ ಭಾಗವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧೀನದಲ್ಲಿರುವ ಪರಿಸರ ಪ್ರವಾಸೋದ್ಯಮ ಸ್ಥಳಗಳಲ್ಲಿ ಪ್ರವಾಸಿಗರಿಗೆ ವಿಮೆ ಭದ್ರತೆಯನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅರಣ್ಯಇಲಾಖೆ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಗೆ ಜನವರಿ ಹಾಗೂ ಮೇ ತಿಂಗಳಿನಲ್ಲಿ ಪತ್ರ ಬರೆದಿದ್ದರು.

ಕರ್ನಾಟಕ ಸರ್ಕಾರದ ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆ ಈಗಾಗಲೇ ತನ್ನ ಅಧೀನದಲ್ಲಿರುವ ಘಟಕಗಳಲ್ಲಿ ಈ ಸೌಲಭ್ಯವನ್ನು ಒದಗಿಸುತ್ತಿದ್ದು, ಇದೇ ಮಾದರಿಯಲ್ಲಿ ಅರಣ್ಯ ಇಲಾಖೆಯ ಅಧೀನದಲ್ಲಿರುವ ಪ್ರವಾಸಿ ಸ್ಥಳಗಳಲ್ಲೂ ವಿಮೆ ಸೌಲಭ್ಯವನ್ನು ಅನುಷ್ಠಾನ ಮಾಡಬಹುದೆಂದು ಅವರು ಅರಣ್ಯ ಇಲಾಖೆಯ ಗಮನ ಸೆಳೆದಿದ್ದರು.

ಇದೀಗ ಗಿರಿಧರ ಕುಲಕರ್ಣಿ ಮನವಿಯ ಮೇರೆಗೆ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅನುಸರಿಸುವ ಮಾದರಿ ಅನ್ವಯ ರಾಜ್ಯದ ಸಂರಕ್ಷಿತ ಪ್ರದೇಶಗಳಲ್ಲಿ ನಡೆಸುತ್ತಿರುವ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಾಗಿ ಆಗಮಿಸುವ ಪ್ರವಾಸಿಗರಿಗೆ ವಿಮೆ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಅವಶ್ಯಕ್ರಮ ಕೈಗೊಳ್ಳಲು ಹಾಗೂ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಪ್ರಧಾನ ಮುಖ್ಯಅರಣ್ಯಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಪರವಾಗಿ ವನ್ಯಜೀವಿ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್‌ಪುಷ್ಕರ್‌ ಅವರು ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕರು, ವನ್ಯಜೀವಿ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗಗಳ ಉಪಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಬುಧವಾರ ಸೂಚನೆ ನೀಡಿದ್ದಾರೆ.

 

ನ್ಯೂಯಾರ್ಕ್‌ ಟೈಮ್ಸ್ 52 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳಕ್ಕೆ ಸ್ಥಾನ

ಪರಿಸರ ಪ್ರವಾಸೋದ್ಯಮ ಸ್ಥಳಗಳಲ್ಲಿ ಪ್ರವಾಸಿಗರಿಗೆ ವಿಮೆ ಭದ್ರತೆಯನ್ನು ಒದಗಿಸುವಂತೆ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೆ. ನನ್ನ ಮನವಿಯನ್ನು ಅರಣ್ಯ ಇಲಾಖೆ ಪರಿಗಣಿಸಿರುವುದು ಸಂತಸ ತಂದಿದ್ದು, ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಮೆ ಭದ್ರತೆಯು ಪ್ರವಾಸಿಗರಿಗೆ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಅನುಭವ ಒದಗಿಸುವಲ್ಲಿ ಸಹಕಾರಿಯಾಗಲಿದೆ.

ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ

click me!