ಯಂತ್ರೋಪಕರಣ ಉಪಯೋಗಿಸಿ ಅದಾಯ ಹೆಚ್ಚಿಸಿಕೊಳ್ಳಲು ಸೂಚನೆ : ಡಾ. ಯತೀಂದ್ರ

By Kannadaprabha News  |  First Published Mar 13, 2024, 11:00 AM IST

ಆಧುನಿಕ ಯಂತ್ರೋಪಕರಣಗಳನ್ನು ಉಪಯೋಗಿಸಿಕೊಂಡು ರೈತರು ತಮ್ಮ ಅದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.


  ಮೈಸೂರು :  ಆಧುನಿಕ ಯಂತ್ರೋಪಕರಣಗಳನ್ನು ಉಪಯೋಗಿಸಿಕೊಂಡು ರೈತರು ತಮ್ಮ ಅದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.

ಮೈಸೂರು ತಾಲೂಕು ವರುಣ ಹೋಬಳಿಯ ಇಲಾಖೆಯ ಸಂಪರ್ಕ ಕೇಂದ್ರ ಕಚೇರಿ ಆವರಣದಲ್ಲಿ ಫಲಾನುಭವಿ ರೈತರಿಗೆ ಸಹಾಯಧನದಲ್ಲಿ ಕೃಷಿ ಯಂತ್ರೋಪಕರಣಗಳಾದ ಪವರ್ ಟಿಲ್ಲರ್, ಪವರ್ ವೀಡರ್, ಬ್ರಷ್ ಕಟರ್, ಎಣ್ಣೆಗಾಣ, ರೋಟೋವೇಟರ್, ಡಿಸೆಲ್ ಮೋಟಾರ್, ತುಂತುರು ನೀರಾವರಿ ಘಟಕಗಳು ಸೇರಿದಂತೆ ವಿವಿಧ ಯಂತ್ರೋಪಕರಣಗಳನ್ನು ಅವರು ವಿತರಿಸಿ ಮಾತನಾಡಿದರು.

Latest Videos

undefined

ಪ್ರಸ್ತುತ ಸನ್ನಿವೇಷದಲ್ಲಿ ಕೂಲಿ ಆಳುಗಳ ಕೊರತೆ ಹೆಚ್ಚಿದ್ದೂ, ರೈತರು ತಮ್ಮ ದಿನ ನಿತ್ಯದ ಕೃಷಿ ಚಟುವಟಿಕೆಗಳ ನಿರ್ವಹಣೆಗಾಗಿ, ಕೃಷಿ ಇಲಾಖೆ ವತಿಯಿಂದ ಸಹಾಯಧನದಲ್ಲಿ ದೊರೆಯುವ ಆಧುನಿಕ ಯಂತ್ರೋಪಕರಣಗಳ ಸೌಲಭ್ಯವನ್ನು ಪಡೆಯುವ ಮೂಲಕ ವ್ಯವಸಾಯದಲ್ಲಿ ಖರ್ಚನ್ನು ಕಡಿಮೆಗೊಳಿಸಿ, ತಮ್ಮ ಆದಾಯವನ್ನು ಹೆಚ್ಚಳ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಪಿಎಂಕೆಎಸ್ ವೈ ಯೋಜನೆಯಡಿ ಶೇ.90ರ ಸಹಾಯಧನದಲ್ಲಿ ತುಂತುರು ನೀರಾವರಿ ಘಟಕಗಳನ್ನು ಸಹ ವಿತರಣೆ ಮಾಡಲಿದ್ದು, ಜೊತೆಗೆ ಮಳೆಯಾಶ್ರಿತ ಪ್ರದೇಶದ ರೈತರಿಗೆ ಅನುಕೂಲವಾಗುವಂತೆ ಕೃಷಿ ಭಾಗ್ಯ ಯೋಜನೆಯನ್ನು ಮರುಜಾರಿ ಮಾಡಿರುವುದರಿಂದ ಹೆಚ್ಚಿನ ರೈತರು ಕೃಷಿ ಭಾಗ್ಯಯೋಜನೆಯ ಸದುಪಯೋಗವನ್ನು ಪಡೆಯಲು ಕೂಡಲೇ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಜಯರಾಮ ಮಾತನಾಡಿ, ಕೃಷಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆ, ಕೃಷಿ ಸಂಸ್ಕರಣೆ ಯೋಜನೆ, ಸೂಕ್ಷ್ಮ ನೀರಾವರಿ ಯೋಜನೆ, ಕೃಷಿ ಭಾಗ್ಯ ಯೋಜನೆ ಸೇರಿದಂತೆ ಮುಂತಾದ ಅಭಿವೃದ್ದಿ ಯೋಜನೆಗಳ ಮೂಲಕ ರೈತರಿಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಕೋರಿದರು.

ಕೃಷಿ ಅಧಿಕಾರಿ ಆನಂದಕುಮಾರ್, ತಾಂತ್ರಿಕ ವ್ಯವಸ್ಥಾಪಕ ಎಸ್.ಜೆ. ಹೇಮಂತ್, ಲೆಕ್ಕ ಸಹಾಯಕ ಪ್ರದೀಪ್, ಗ್ರಾಪಂ ಸದಸ್ಯರಾದ ಮಹದೇವು, ಶಿವಕುಮಾರ್, ರೈತರಾದ ಮಹೇಶ್, ಪ್ರಸನ್ನ, ರವಿ ಮೊದಲಾದವರು ಇದ್ದರು.

click me!