ಹುಲಿಯ ಜಾಡು ತುಮಕೂರು ಜಿಲ್ಲೆಯಾಗಿರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿರುವ ಅರಣ್ಯ ಇಲಾಖೆ ಮೊನ್ನೆ ಹುಲಿ ಸತ್ತ ಅರಣ್ಯ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದೆ.
ಉಗಮ ಶ್ರೀನಿವಾಸ್
cತುಮಕೂರು : ಹುಲಿಯ ಜಾಡು ತುಮಕೂರು ಜಿಲ್ಲೆಯಾಗಿರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿರುವ ಅರಣ್ಯ ಇಲಾಖೆ ಮೊನ್ನೆ ಹುಲಿ ಸತ್ತ ಅರಣ್ಯ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದೆ.
ಹುಲಿ ಸತ್ತ ಜಾಗದ ಸುತ್ತಮುತ್ತ ಹಾಗೂ ಕೆರೆ ಅಂಗಳದ ಬಳಿ 10ಕ್ಕೂ ಹೆಚ್ಚು ಕ್ಯಾಮರಾಗಳನ್ನು ಆರಂಭಿಕವಾಗಿ ಅಳವಡಿಸಿದ್ದು ಕ್ಯಾಮರಾದಲ್ಲಿ ಹುಲಿ ಜಾಡು ಪತ್ತೆಯಾಗಬಹುದೆಂಬ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆ ಇದೆ. ಹೆಣ್ಣು ಹುಲಿ ಅಥವಾ ಹುಲಿ ಸಂಸಾರ ಇರಬಹುದೆಂಬ ಊಹಾಪೋಹಗಳು ಹಬ್ಬಿದ್ದು ಇದಕ್ಕೆಲ್ಲಾ ಇತಿಶ್ರೀ ಹಾಡಲು ಅರಣ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಗುಬ್ಬಿ ತಾಲೂಕು ನಿಟ್ಟೂರು ಹೋಬಳಿಯ ಅಂಕಸಂದ್ರ ಬಳಿ ಸಿಕ್ಕ ಮೃತ ಹುಲಿಯ ವಿವರಗಳು ಎಲ್ಲೂ ಪತ್ತೆಯಾಗಿಲ್ಲ. ಅದರ ದೇಹ ಪತ್ತೆಯಾದ ಕೂಡಲೇ ದೇಹದ ಎರಡು ಬದಿಯ ಹುಲಿ ಪಟ್ಟೆಗಳನ್ನು ಫೋಟೋ ತೆಗೆದು ಹುಲಿ ಸಂರಕ್ಷಿತ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಮಾಹಿತಿ ಪ್ರಕಾರ ಮೃತ ಹುಲಿಯ ಪಟ್ಟೆಯ ಗುರುತು ಇರುವ ಹುಲಿ ಯಾವ ಕೇಂದ್ರದಲ್ಲೂ ಇಲ್ಲ. ಹೀಗಾಗಿ ಈ ಹುಲಿ ವಲಸೆ ಬಂದಿಲ್ಲವೆಂದು ಖಾತ್ರಿಯಾಗಿದೆ. ಆದರೆ ಅರಣ್ಯ ಇಲಾಖೆಯ ಮತ್ತೊಂದು ಮೂಲಗಳ ಪ್ರಕಾರ ಬೇರೆ ಬೇರೆ ಕಾಡಿನಲ್ಲಿದ್ದೂ ಕ್ಯಾಮರಾಗೆ ಸಿಗದ ಹುಲಿ ತುಮಕೂರು ಜಿಲ್ಲೆಯ ಕಾಡಿಗೆ ಹೋಗಿರಬಹುದೆಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದೆಲ್ಲದ್ದಕ್ಕೂ ಇತಿಶ್ರೀ ಹಾಡಲು ಅರಣ್ಯ ಇಲಾಖೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಹುಲಿಯ ಶವ ಪತ್ತೆಯಾಗಿರುವುದನ್ನು ಇಲಾಖೆ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಷ್ಟ್ರೀಯ ಪ್ರಾಣಿಯಾದ ಹುಲಿ ಸಂರಕ್ಷಣೆಗೆ ಹಲವಾರು ಕ್ರಮ ಕೈಗೊಳ್ಳಲಾಗುತ್ತಿದೆ. ಇಂತಹ ಹೊತ್ತಲ್ಲಿ ಹುಲಿಯ ಸಾವು ಚಿಂತೆಗೀಡು ಮಾಡಿದೆ.
ವರದಿ ಬಂದಿಲ್ಲ:
ಸತ್ತ ಹುಲಿಯ ಮರಣೋತ್ತರ ಪರೀಕ್ಷೆ ವರದಿ ಇನ್ನು ಬಂದಿಲ್ಲ. ಹೀಗಾಗಿ ಹುಲಿಯ ಸಾವಿಗೆ ನಿಖರ ಕಾರಣ ಗೊತ್ತಿಲ್ಲ. ಹುಲಿ ದೇಹದ ಹೊರ ಭಾಗದಲ್ಲಿ ಯಾವುದೇ ಗಾಯದ ಗುರುತಿಲ್ಲ. ಆದರೆ ದೇಹದೊಳಗೆ ಏನಾದರೂ ಆಗಿರಬಹುದೆಂಬ ಶಂಕೆಗೆ ವರದಿ ಉತ್ತರ ನೀಡಬಲ್ಲದಾಗಿದೆ.
ಹುಲಿ ಸಂಸಾರ:
ಸದ್ಯ ಜಿಲ್ಲೆಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿರುವ ಈ ಹುಲಿ ಹಲವಾರು ಪ್ರಶ್ನೆಗಳು ಉಳಿಸಿ ಹೋಗಿದೆ. ಹೊರಗಿನಿಂದ ಯಾರಾದರೂ ತಂದು ಬಿಸಾಡಿರಬಹುದೆಂಬ ಊಹೆ ಸತ್ಯಕ್ಕೆ ದೂರವಾಗಿದೆ. ಹುಲಿ ಸತ್ತ ಸ್ಥಳವನ್ನು ಗಮನಿಸಿದರೆ ಆ ಜಾಗದಲ್ಲೇ ಸತ್ತಿರಬಹುದು ವಿನಃ ಹೊರಗಿನಿಂದ ತಂದಿಲ್ಲ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಗಂಡು ಹುಲಿ ಪತ್ತೆಯಾಗಿರುವುದರಿಂದ ಇನ್ನೊಂದು ಹೆಣ್ಣು ಹುಲಿ ಅಥವಾ ಅದರ ಸಂಸಾರ ಅಂದರೆ ಮರಿಗಳು ಇರಬಹುದೆಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹುಲಿ ಜಾಡು ಪತ್ತೆಗೆ ಅರಣ್ಯ ಇಲಾಖೆ ಮುಂದಾಗಿದೆ. ಒಟ್ಟಾರೆಯಾಗಿ ಸುಮಾರು 75 ವರ್ಷಗಳಿಂದ ಹುಲಿ ಇದೆ ಎನ್ನುವ ಜನರ ಮಾತಿಗೆ ಶವವಾಗಿ ಪತ್ತೆಯಾದ ಹುಲಿ ಮತ್ತಷ್ಟು ಪುಷ್ಠಿ ನೀಡಿದೆ.
ಮುಖ್ಯಾಂಶಗಳು
1. ಹುಲಿ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ
2. ಹುಲಿ ಸತ್ತ ಜಾಗದ ಬಳಿ ಮತ್ತಷ್ಟುಕ್ಯಾಮರಾ ಅಳವಡಿಸಲು ಯೋಜನೆ
3. ಕ್ಯಾಮರಾದಲ್ಲಿ ಹುಲಿ ಇರುವಿಕೆ ಪತ್ತೆಯಾದರೆ ಮುಂದಿನ ಕ್ರಮದ ಬಗ್ಗೆ ಚಿಂತನೆ
4. ಪ್ರತಿ ದಿನ ಕ್ಯಾಮರಾದಲ್ಲಿ ಸೆರೆಯಾಗಿದ್ದನ್ನು ಪರಿಶೀಲನೆ
ಹುಲಿ ಸತ್ತ ಜಾಗವಾದ ಅಂಕಸಂದ್ರ ಅರಣ್ಯ ವ್ಯಾಪ್ತಿಯಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಹುಲಿ ಇರುವಿಕೆ ಬಗ್ಗೆ ಏನಾದರೂ ಮಾಹಿತಿ ಸಿಗಬಹುದೆಂಬ ನಿರೀಕ್ಷೆಯಿದೆ.
ಅನುಪಮ, ಡಿಸಿಎಫ್
ವಿಷ ಪ್ರಾಷಣವಾಗಿತ್ತಾ ?.....
ಮೇಲ್ನೋಟಕ್ಕೆ ಸತ್ತ ಹುಲಿಯ ಹೊರಭಾಗದಲ್ಲಿ ಯಾವುದೇ ಗಾಯವಿರದಿದ್ದರೂ ಒಳಗೆ ರಕ್ತಸ್ರಾವ ಆಗಿತ್ತು ಎನ್ನಲಾಗಿದೆ. ಹೀಗಾಗಿ ಯಾವುದಾದರೂ ಹಾವು ಕಚ್ಚಿರಬಹುದಾ ಎಂಬ ಸಂಶಯ ವ್ಯಕ್ತವಾಗಿದೆ. ಎಲ್ಲಾ ಊಹಾಪೋಹಗಳಿಗೆ ಮರಣೋತ್ತರ ಪರೀಕ್ಷೆ ವರದಿ ಬರುವ ತನಕ ಕಾಯಬೇಕಾಗಿದೆ.