ಹೈನುಗಾರಿಕೆಯಿಂದ ಉದ್ಯೋಗ ಸೃಷ್ಟಿ: ಗೌಡ

By Kannadaprabha News  |  First Published Feb 17, 2023, 5:52 AM IST

ಹೈನುಗಾರಿಕೆಯಿಂದ ಉದ್ಯೋಗ ಸೃಷ್ಟಿಯಾಗಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಿದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಒಂದು ಕುಟುಂಬ ಎರಡರಿಂದ ಮೂರು ಹಸುಗಳನ್ನು ಸಾಕಾಣಿಕೆ ಮಾಡಿ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ ಹೇಳಿದರು.


 ಶಿರಾ : ಹೈನುಗಾರಿಕೆಯಿಂದ ಉದ್ಯೋಗ ಸೃಷ್ಟಿಯಾಗಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಿದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಒಂದು ಕುಟುಂಬ ಎರಡರಿಂದ ಮೂರು ಹಸುಗಳನ್ನು ಸಾಕಾಣಿಕೆ ಮಾಡಿ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ ಹೇಳಿದರು.

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಜಿಲ್ಲಾ ರೈತರ ಮತ್ತು ಎಂಪಿಸಿಎಸ್‌ ನೌಕರರ ಹಾಗೂ ಸಾಮಾನ್ಯ ಕಲ್ಯಾಣ ಟ್ರಸ್ಟ್‌ ಹಾಗೂ ತಡಕಲೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ತಾಲೂಕಿನ ತಡಕಲೂರು ಗ್ರಾಮದಲ್ಲಿ ರೈತರಿಗೆ ಬೃಹತ್‌ ಉಚಿತ ತಪಾಸಣೆ, ಚಿಕಿತ್ಸೆ ಮತ್ತು ರಕ್ತದಾನ ಶಿಬಿರ, ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಸಾಧಕರಿಗೆ ಸನ್ಮಾನ ಹಾಗೂ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

ಹೈನುಗಾರಿಕೆಯು ಪವಿತ್ರವಾದ ಉದ್ಯಮವಾಗಿದ್ದು, ರೈತರು ವ್ಯವಸಾಯದ ಜೊತೆಗೆ ಹೈನುಗಾರಿಕೆಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಶಿರಾ ತಾಲೂಕು ಬಯಲುಸೀಮೆ ಪ್ರದೇಶವಾಗಿದ್ದು, ಯುವಕರು ಉದ್ಯೋಗಕ್ಕಾಗಿ ವಲಸೆ ಹೋಗದೆ ತಮ್ಮ ಊರಿನಲ್ಲಿಯೇ ಹೈನುಗಾರಿಕೆ ಮಾಡುವ ಮೂಲಕ ಹೆಚ್ಚು ಹೆಚ್ಚು ಆದಾಯ ಗಳಿಸಬಹುದು. ರೈತರು ಕೃಷಿ ಜೊತೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಒಂದು ಮನೆಯಲ್ಲಿ ಎರಡರಿಂದ ಮೂರು ಹಸುಗಳನ್ನು ಸಾಕಾಣಿಕೆ ಮಾಡಿದರೆ ಅದರಿಂದ ತಮ್ಮ ಕುಟುಂಬದ ದಿನ ನಿತ್ಯದ ವ್ಯವಹಾರಗಳಿಗೆ ಬೇಕಾದ ಆದಾಯ ಸಿಗುತ್ತದೆ. ಈ ನಿಟ್ಟಿನಲ್ಲಿ ರೈತರು ಆಸಕ್ತಿ ವಹಿಸಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದರು.

ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಮಾತನಾಡಿ, ರಾಸುಗಳಿಗೆ ಚರ್ಮಗಂಟು ರೋಗ ಹಾಗೂ ಅತಿವೃಷ್ಟಿಯಿಂದ ಮೇವಿನ ಕೊರತೆ ಉಂಟಾಗಿ ಈ ಬಾರಿ ತುಮಕೂರು ಹಾಲು ಒಕ್ಕೂಟಕ್ಕೆ ಜಿಲ್ಲೆಯಲ್ಲಿ ಹಾಲಿನ ಕೊರತೆ ಉಂಟಾಗುತ್ತಿದೆ. ಆದರೂ ಸಹ ತುಮಕೂರು ಹಾಲು ಒಕ್ಕೂದಿಂದ ಮಹಾರಾಷ್ಟ್ರದಲ್ಲಿ ಅಮೂಲ್‌ಗೆ ಪೈಪೋಟಿ ನೀಡಿ ಸುಮಾರು 2.10 ಲಕ್ಷ ಲೀಟರ್‌ ಹಾಲು ಸರಬರಾಜು ಮಾಡಲಾಗುತ್ತಿದೆ. ಹಾಗೂ ಆಂಧ್ರಪ್ರದೇಶ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು 40 ಸಾವಿರ ಲೀ. ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ತುಮಕೂರು ಹಾಲು ಒಕ್ಕೂಟದಿಂದ ಹಾಲನ್ನು ಸರಬರಾಜು ಮಾಡಲಾಗುತ್ತಿದೆ. ರೈತರು ಹಾಲಿನ ಉತ್ಪಾದನೆಗೆ ಹೆಚ್ಚು ಒತ್ತು ನೀಡಿದರೆ ರೈತರಿಗೂ ಉತ್ತಮ ಆದಾಯ ಬರುತ್ತದೆ. ಒಕ್ಕೂಟಕ್ಕೂ ಲಾಭವಾಗುತ್ತದೆ ಎಂದು ತಿಳಿಸಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾನು ಪಶುಸಂಗೋಪನಾ ಸಚಿವನಾಗಿ ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡಿದ್ದೆ. ಪಶು ಭಾಗ್ಯ ಮತ್ತು ಕ್ಷೀರಭಾಗ್ಯ ಎಂಬ ಎರಡು ಹೊಸ ಯೋಜನೆಗಳನ್ನು ಜಾರಿಗೆ ತಂದು ಹೈನುಗಾರರಿಗೆ ಅನುಕೂಲಕರವಾದ ವಾತಾವರಣ ಕಲ್ಪಿಸಲಾಗಿತ್ತು. ನಂದಿನಿ ಹಾಲಿನ ಟ್ರೇಡ್‌ ಮಾರ್ಕ್ ಇಡೀ ದೇಶದಲ್ಲಿಯೇ ಹೆಸರು ಮಾಡಿದೆ. ಆದ್ದರಿಂದ ರೈತರು ವ್ಯವಸಾಯದ ಜೊತೆಗೆ ಉಪಕಸುಬಾಗಿ ಹೈನುಗಾರಿಕೆಯನ್ನು ಅಳವಡಿಸಿಕೊಳ್ಳಿ. ಹೈನುಗಾರಿಕೆಯಲ್ಲಿ ತೊಡಗಿರುವ ಯಾವ ರೈತರೂ ಸಾಲದ ಸಮಸ್ಯೆಗಳಿಗೆ ತುತ್ತಾಗುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಪಿ.ಸುರೇಶ್‌, ಟಿ.ಎಂ.ಪ್ರಸಾದ್‌, ಶಿರಾ ಘಟಕದ ಉಪ ವ್ಯವಸ್ಥಾಪಕ ಮಧುಸೂಧನ್‌, ಕೆ.ಎಲ್‌.ಸುರೇಶ್‌, ವಿಸ್ತರಣಾಧಿಕಾರಿ ದಿವಾಕರ್‌.ಸಿ.ಆರ್‌, ಸಮಾಲೋಕ ಬಿ.ಕೆ.ಪ್ರವೀಣ್‌, ಶ್ರೀನಿವಾಸ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಜಿ.ಎಸ್‌.ರವಿ, ತಾ.ಪಂ. ಮಾಜಿ ಉಪಾಧ್ಯಕ್ಷ ರಂಗನಾಥ್‌ ಗೌಡ, ನಿಡಗಟ್ಟೆಚಂದ್ರಶೇಖರ್‌, ಮದ್ದೇವಳ್ಳಿ ರಾಮಕೃಷ್ಣಪ್ಪ, ಲಿಂಗದಹಳ್ಳಿ ಸುಧಾಕರ್‌ ಗೌಡ, ಸಂತೇಪೇಟೆ ನಟರಾಜ್‌, ಲಿಂಗದಹಳ್ಳಿ ಚೇತನ್‌ಕುಮಾರ್‌, ಗ್ರಾ.ಪಂ. ಅಧ್ಯಕ್ಷೆ ನಾಗಮಣಿ ವೀರಲಿಂಗಪ್ಪ, ಉಪಾಧ್ಯಕ್ಷೆ ಸುಶೀಲಮ್ಮ ಗುರುಮೂರ್ತಿ, ತಡಕಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಗುಣ್ಣಯ್ಯ.ಸಿ ಸೇರಿದಂತೆ ಹಲವರು ಹಾಜರಿದ್ದರು.

ಬೃಹತ್‌ ಆರೋಗ್ಯ ತಪಾಸಣಾ ಶಿಬಿರ

ಸಮಾರಂಭದಲ್ಲಿ ಸಿದ್ಧಗಂಗಾ ಮೆಡಿಕಲ್‌ ಕಾಲೇಜು ಮತ್ತು ರೀಸಚ್‌ರ್‍ ಸೆಂಟರ್‌, ಹೇಮಾವತಿ ಕೀಲು ಮತ್ತು ಮೂಳೆ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಸಿದ್ದಾರ್ಥ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಶ್ರೀದೇವಿ ವೈದ್ಯಕೀಯ ತಂಡ, ಮಲ್ಲೇಶ್ವರಂ ಕಣ್ಣಿನ ಆಸ್ಪತ್ರೆ, ಶ್ರೀರಂಗ ಕೀಲು ಮತ್ತು ಮೂಳೆ ಮತ್ತು ಅಪಘಾತ ಹಾಗೂ ಕೃತಕ ಕೀಲು ಜೋಡಣಾ ಕೇಂದ್ರದ ವೈದ್ಯರು ಭಾಗವಹಿಸಿ ಚಿಕಿತ್ಸೆ ನೀಡಿದರು. ಸುಮಾರು 1000 ರೈತರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು. ಸುಮಾರು 2 ಕೋಟಿ ರು..ಗಳ ವಿವಿಧ ಫಲಾನುಭವಿಗಳಿಗೆ ಚೆಕ್‌ ವಿತರಿಸಲಾಯಿತು. 1000 ಫಲಾನುಭವಿಗಳಿಗೆ ಯಶಸ್ವಿನಿ ಸ್ಮಾರ್ಚ್‌ ಕಾರ್ಡ್‌ ವಿತರಿಸಲಾಯಿತು ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಯಿತು.

click me!