ಲಿವರ್ ಪೂಲ್ ವಿವಿ ಬೆಂಗಳೂರು ಕ್ಯಾಂಪಸ್ ಆರಂಭ, ದಕ್ಷಿಣ ಭಾರತದ ಮೊದಲ ವಿಶ್ವವಿದ್ಯಾಲಯ

Published : Oct 15, 2026, 10:33 PM IST
Bengaluru Gets University of Liverpool Campus

ಸಾರಾಂಶ

ದಕ್ಷಿಣ ಭಾರತದ ತನ್ನ ಪ್ರಪ್ರಥಮ ಕ್ಯಾಂಪಸ್ ಲಿವರ್ ಪೂಲ್ ವಿವಿ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ 27 ಲಕ್ಷ ವಿದ್ಯಾರ್ಥಿಗಳಿದ್ದು, 4,500 ಕಾಲೇಜುಗಳು ಸಕ್ರೀಯವಾಗಿದೆ.

ಬೆಂಗಳೂರು (ಅ.15) : ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಲಿವರ್ ಪೂಲ್ ವಿಶ್ವವಿದ್ಯಾಲಯ ಇಲ್ಲಿನ ವೈಟ್ ಫೀಲ್ಡ್ ನಲ್ಲಿರುವ ಅಲೆಂಬಿಕ್ ಸಿಟಿಯಲ್ಲಿ ಅಭಿವೃದ್ಧಿ ಪಡಿಸಿರುವ ದಕ್ಷಿಣ ಭಾರತದ ತನ್ನ ಪ್ರಪ್ರಥಮ ಕ್ಯಾಂಪಸ್ಸನ್ನು ಗುರುವಾರ ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಲಿವರ್ ಪೂಲ್ ವಿವಿ ಕುಲಪತಿ ಟಿಮ್ ಜೋನ್ಸ್, ಲಿವರ್ ಪೂಲ್ ನಗರದ ಮೇಯರ್ ಸ್ಟೀವ್ ರೋದರ್ ಹ್ಯಾಂ, ಕರ್ನಾಟಕದಲ್ಲಿರುವ ಬ್ರಿಟಷ್ ಡೆಪ್ಯುಟಿ ಹೈಕಮಿಷನರ್ ಹರ್ಷವೀರ್ ಸಂಘಾ, ಬ್ರಿಟಿಷ್ ಕೌನ್ಸಿಲ್ ಆಫ್ ಇಂಡಿಯಾ ಕಂಟ್ರಿ ಡೈರೆಕ್ಟರ್ ಆಲಿಸನ್ ಬಾರೆಟ್ ಅವರು ನೂತನ ಕ್ಯಾಂಪಸ್ ಅನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಕ್ಷಿಪ್ರ ಕ್ರಾಂತಿ

2024ರ ನವೆಂಬರಿನಲ್ಲಿ ರಾಜ್ಯದ ಸಂಶೋಧನೆ, ಉನ್ನತ ಶಿಕ್ಷಣ ಮತ್ತು ಔದ್ಯಮಿಕ ವಲಯಕ್ಕೆ ಬಂಡವಾಳ ಆಕರ್ಷಿಸಲು ಲಂಡನ್ ನಗರದಲ್ಲಿ ರೋಡ್-ಶೋ ನಡೆಸಿದಾಗ ಅನೇಕ ವಿಶ್ವವಿದ್ಯಾಲಯಗಳನ್ನು ಹೊಂದಿರುವ ರಸೆಲ್ ಸಮೂಹದ ಜತೆಗಿನ ಮಾತುಕತೆಯಲ್ಲಿ ಈ ಕ್ಯಾಂಪಸ್ ಆರಂಭಕ್ಕೆ ತಯಾರಿಗಳು ಶುರುವಾಗಿತ್ತು ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಅತ್ಯಂತ ಕ್ಷಿಪ್ರ ಅವಧಿಯಲ್ಲಿ ಬೆಂಗಳೂರಿನ ಕ್ಯಾಂಪಸ್ ಆರಂಭವಾಗುತ್ತಿರುವುದು ಒಂದು ದಾಖಲೆಯಾಗಿದೆ. ಇದರಿಂದ ರಾಜ್ಯದ ಯುವಜನರು ಇಲ್ಲೇ ಜಾಗತಿಕ ಗುಣಮಟ್ಟದ ಪಠ್ಯಕ್ರಮ ಓದಿ, ಪದವೀಧರರಾಗಿ ಹೊರಹೊಮ್ಮಬಹುದು ಎಂದಿದ್ದಾರೆ.

ಈ ಕ್ಯಾಂಪಸ್ ಸ್ಥಾಪಿಸುವ ಕನಸು ನನಸಾಗಲು ನೆರವಾದ ಆಗಿನ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್, ಸಹ ಕುಲಾಧಿಪತಿ ಪ್ರೊ ತಾರೀಖ್ ಅಲಿ ಸೇರಿ ಇತರರನ್ನೂ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತೇನೆ ಎಂದು ಸಚಿವರು ಹೇಳಿದರು. ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ 27 ಲಕ್ಷ ವಿದ್ಯಾರ್ಥಿಗಳಿದ್ದು, 4,500 ಕಾಲೇಜುಗಳು ನಮ್ಮಲ್ಲಿವೆ. ಇನ್ನೊಂದೆಡೆ, ನಾವು ಪ್ರತೀವರ್ಷ 1.6 ಲಕ್ಷ ಎಂಜಿನಿಯರಿಂಗ್ ಪದವೀಧರರನ್ನು ಸೃಷ್ಟಿಸುತ್ತಿದ್ದೇವೆ. ಇವುಗಳಿಗೆ ಪೂರಕವಾಗಿ 24 ಸಾವಿರಕ್ಕೂ ಹೆಚ್ಚು ನವೋದ್ಯಮಗಳು ಮತ್ತು 50ಕ್ಕೂ ಅಧಿಕ ಯೂನಿಕಾರ್ನ್ ದರ್ಜೆಯ ಉದ್ದಿಮೆಗಳಿವೆ. ಲಿವರ್ ಪೂಲ್ ವಿ.ವಿ.ಯು ಇವುಗಳೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಳ್ಳಬೇಕು. ಇದರಿಂದ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ಕೈಗಾರಿಕಾ ರಂಗಗಳ ನಡುವೆ ಹೊಸ ಬಾಂಧವ್ಯ ಸಾಧ್ಯವಾಗಲಿದೆ ಎಂದು ಅವರು ಆಶಿಸಿದ್ದಾರೆ.

ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆ, ಆಧುನಿಕ ತಯಾರಿಕೆ, ಜೈವಿಕ ತಂತ್ರಜ್ಞಾನ, ಶುದ್ಧ ಇಂಧನ, ನಗರ ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆ ಮತ್ತು ನಾವೀನ್ಯತೆಗೆ ಒಳ್ಳೆಯ ಅವಕಾಶಗಳಿವೆ. ಇದರಿಂದ ಅಂತಿಮವಾಗಿ ನಮ್ಮ ಕೈಗಾರಿಕಾ ಕಾರ್ಯಪರಿಸರಕ್ಕೆ ಲಾಭವಾಗಲಿದೆ. ಇಂತಹ ಸಿದ್ಧತೆ ನಮಗೆ ಅತ್ಯಗತ್ಯವಾಗಿದೆ ಎಂದು ಅವರು ನುಡಿದಿದ್ದಾರೆ.

ಜಗತ್ತಿನ ಬೇರೆಬೇರೆ ದೇಶಗಳ 14ಕ್ಕೂ ಹೆಚ್ಚು ವಿ.ವಿ.ಗಳು ರಾಜ್ಯದಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಮುಂದೆ ಬಂದಿವೆ. ಹಾಗೆಯೇ ರಾಜ್ಯದ ಮತ್ತು ದೇಶದ ಅತ್ಯುತ್ತಮ ಸಂಸ್ಥೆಗಳು ಕೂಡ ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಿ, ಒಡಂಬಡಿಕೆ ಮಾಡಿಕೊಂಡಿವೆ. ಈ ಸಂಸ್ಥೆಗಳ ಕ್ಯಾಂಪಸ್ಸುಗಳು ಮತ್ತು ಸಂಶೋಧನಾಲಯಗಳು ಮುಂಬರುವ ದಿನಗಳಲ್ಲಿ ಕ್ವಿನ್ ಸಿಟಿಯಲ್ಲಿ ನೆಲೆಯೂರಲಿವೆ. ಈ ನಿಟ್ಟಿನಲ್ಲಿ ಸರಕಾರವು ಆಸಕ್ತ ಸಂಸ್ಥೆಗಳಿಗೆ ಅಗತ್ಯ ಅನುಕೂಲಗಳನ್ನು ಒದಗಿಸಲಿದೆ ಎಂದು ಪಾಟೀಲ ವಿವರಿಸಿದ್ದಾರೆ.

PREV
Read more Articles on
click me!

Recommended Stories

ಹೈಯರ್ ಸ್ಟಡೀಸ್‌ಗೆ ಬ್ರಿಟನ್‌ಗೆ ಹೋಗೋ ಕಾಲ ಮುಗೀತು! ಬೆಂಗಳೂರಲ್ಲೇ ಆರಂಭವಾಯ್ತು 'ಲಿವರ್‌ಪೂಲ್ ವಿವಿ' ಕ್ಯಾಂಪಸ್!
Bengaluru Weater forecast: ಬೆಂಗಳೂರಿಗರೇ ಗಮನಿಸಿ; ಇಂದು ರಾತ್ರಿಯಿಡೀ ಮಳೆಯಾಗುವ ಸಾಧ್ಯತೆ! ಹವಾಮಾನ ಇಲಾಖೆ ಎಚ್ಚರಿಕೆ ಏನು?