ಗುಡ್ಡದ ಮೇಲೆ ಹಾಕುವ ವಿಂಡ್ ಫ್ಯಾನ್ ರೆಕ್ಕೆ-ಕಂಬ ಕೊಪ್ಪಳದಲ್ಲಿಯೇ ಉತ್ಪಾದನೆ; ₹400 ಕೋಟಿ ಹೂಡಿಕೆ!

Published : Oct 15, 2025, 07:08 PM IST
Koppal Factory News

ಸಾರಾಂಶ

ಪವನ ವಿದ್ಯುತ್‌ ಕ್ಷೇತ್ರದ ಪ್ರಮುಖ ಕಂಪನಿ ಐನಾಕ್ಸ್‌ವಿಂಡ್‌, ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ₹400 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಈ ಯೋಜನೆಯಡಿ ದೈತ್ಯಾಕಾರದ ಬ್ಲೇಡ್‌ಗಳು ಮತ್ತು ಗೋಪುರಗಳನ್ನು ಉತ್ಪಾದಿಸಲಾಗುವುದು, ಇದರಿಂದಾಗಿ ನೇರವಾಗಿ 1,000 ಉದ್ಯೋಗಗಳು ಸೃಷ್ಟಿಯಾಗಲಿವೆ.

ಬೆಂಗಳೂರು (ಅ.15): ಪವನ ವಿದ್ಯುತ್‌ ಕ್ಷೇತ್ರದಲ್ಲಿ ಅಗತ್ಯವಾಗಿ ಬೇಕಾಗಿರುವ ದೈತ್ಯಾಕಾರದ ಬ್ಲೇಡ್‌ಗಳು ಮತ್ತು ಗೋಪುರಗಳ ಉತ್ಪಾದನೆಗೆ ಹೆಸರಾಗಿರುವ ಐನಾಕ್ಸ್‌ವಿಂಡ್‌ ಕಂಪನಿಯು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕ್ಯಾದಿಗುಪ್ಪ ಕೈಗಾರಿಕಾ ಪ್ರದೇಶದಲ್ಲಿ ₹400 ಕೋಟಿ ಬಂಡವಾಳ ಹೂಡಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಬುಧವಾರ ತಿಳಿಸಿದ್ದಾರೆ.

ತಮ್ಮನ್ನು ಇಲ್ಲಿನ‌ ಖನಿಜ ಭವನದಲ್ಲಿ ಭೇಟಿಯಾದ ಕಂಪನಿಯ ಕಾರ್ಪೊರೇಟ್ ತಂತ್ರಗಾರಿಕೆ ವಿಭಾಗದ ಅಧ್ಯಕ್ಷ ಸಂತೋಷ್‌ ಖೈರ್ನಾರ್‌ ಜೊತೆ ಚರ್ಚೆ ನಡೆಸಿದರು.

ಬಳಿಕ ಮಾಹಿತಿ ನೀಡಿದ ಸಚಿವರು, ʻಐನಾಕ್ಸ್‌ವಿಂಡ್‌ ಕಂಪನಿಯ ಮಾಲೀಕರಾಗಿರುವ ದೇವಾಂಶ್‌ ಜೈನ್‌ ಅವರು ತಮ್ಮ ಕಂಪನಿಗೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆಯೇ 70 ಎಕರೆ ಭೂಮಿ ಬೇಕು. ಅತ್ಯುತ್ತಮ ಮತ್ತು ವಿಶಾಲ ರಸ್ತೆಗಳು ಇಲ್ಲದ ಕಡೆ ಭೂಮಿ ಒದಗಿಸಿದರೆ ಬೃಹದಾಕಾರದ ಬ್ಲೇಡುಗಳು ಮತ್ತು ಗೋಪುರಗಳನ್ನು ಸಾಗಿಸಲು ಸಾಧ್ಯವಾಗುವುದಿಲ್ಲ ಎಂದು ನನಗೆ ಪತ್ರ ಬರೆದು ಕೋರಿದ್ದರು. 

ವಿಜಯಪುರದಿಂದ ಕೊಪ್ಪಳಕ್ಕೆ ಶಿಫ್ಟ್:

ಮೊದಲಿಗೆ ವಿಜಯಪುರ ಜಿಲ್ಲೆಯಲ್ಲಿ ಈ ಕಂಪನಿ ಬಂಡವಾಳ ಹೂಡಿಕೆಗೆ ಒಲವು ತೋರಿತ್ತು. ಆದರೆ ಅಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಕೈಗಾರಿಕಾ ಪ್ರದೇಶವಿಲ್ಲ. ಕಂಪನಿಯು ಎರಡು ಹಂತಗಳಲ್ಲಿ ಒಟ್ಟು 400 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ತೀರ್ಮಾನಿಸಿದೆ. ಕುಷ್ಟಗಿ ತಾ.ನಲ್ಲಿ ಈಗಾಗಲೇ ಇದ್ದ ಕೆಐಎಡಿಬಿ ಭೂಮಿಯನ್ನೇ ಈಗ ಕೊಡಲಾಗುತ್ತಿದೆ ಎಂದು ಹೇಳಿದ್ದಾರೆ.

1000 ಉದ್ಯೋಗ ಸೃಷ್ಟಿ: 

ಐನಾಕ್ಸ್‌ವಿಂಡ್‌ ಕಂಪನಿಯು ಮೊದಲನೆಯ ಹಂತದಲ್ಲಿ 300 ಕೋಟಿ ರೂ. ಹೂಡಲಿದ್ದು ಬ್ಲೇಡುಗಳನ್ನು ತಯಾರಿಸಲಿದೆ. ಎರಡನೆಯ ಹಂತದಲ್ಲಿ 100 ಕೋಟಿ ರೂ. ಹೂಡಿಕೆಯೊಂದಿಗೆ ಗೋಪುರಗಳನ್ನು ಉತ್ಪಾದಿಸಲಿದೆ. ಈ ಯೋಜನೆಯಿಂದ ನೇರವಾಗಿ 1,000 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಕಂಪನಿಯು ಪವನ ವಿದ್ಯುತ್‌ ಕ್ಷೇತ್ರಕ್ಕೆ ಬೇಕಾಗುವ ಬಾನೆತ್ತರದ ಕಂಬಗಳನ್ನೂ ತಯಾರಿಸಲಿದೆ. ಹೊಸ ಕೈಗಾರಿಕಾ ನೀತಿಯ ಅನ್ವಯ ಕೊಡುವ ಎಲ್ಲ ಸೌಲಭ್ಯಗಳನ್ನೂ ಐನಾಕ್ಸ್‌ವಿಂಡ್‌ ಕಂಪನಿಗೂ ಕೊಡಲಾಗುವುದು. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೂ ಒಳ್ಳೆಯದಾಗಲಿದ್ದು, ಪ್ರಾದೇಶಿಕ ಅಸಮಾನತೆ ನಿವಾರಣೆಯತ್ತ ಒಂದು ದೊಡ್ಡ ಹೆಜ್ಜೆಯಾಗಲಿದೆ ಎಂದು ಪಾಟೀಲ ಭರವಸೆ ವ್ಯಕ್ತಪಡಿಸಿದ್ದಾರೆ.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ಬಕುಮಾರ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್