ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಹರಿದು 9 ವರ್ಷದ ಬಾಲಕಿ ದುರ್ಮರಣ; ಮುಗಿಲು ಮುಟ್ಟಿದ ಆಕ್ರಂದನ

Published : Oct 15, 2025, 02:44 PM IST
Bengaluru News

ಸಾರಾಂಶ

ಬೆಂಗಳೂರಿನ HAL ರಸ್ತೆಯ ಶಿವಲಿಂಗಯ್ಯ ಕಾಲೋನಿಯಲ್ಲಿ, ಚಾಲಕನ ನಿರ್ಲಕ್ಷ್ಯದಿಂದ ವಾಟರ್ ಟ್ಯಾಂಕರ್ ಹಿಮ್ಮುಖವಾಗಿ ಚಲಿಸುವಾಗ 9 ವರ್ಷದ ಅನುಶ್ರೀ ಎಂಬ ಬಾಲಕಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯ ನಂತರ ಚಾಲಕ ಪರಾರಿಯಾಗಿದ್ದಾನೆ.

ಬೆಂಗಳೂರು (ಅ.15): ರಾಜಧಾನಿ ಬೆಂಗಳೂರಿನ HAL ರಸ್ತೆಯ ಶಿವಲಿಂಗಯ್ಯ ಕಾಲೋನಿಯಲ್ಲಿ ಇಂದು ನಡೆದ ಹೃದಯ ವಿದ್ರಾವಕ ಘಟನೆಯಲ್ಲಿ 9 ವರ್ಷದ ಪುಟ್ಟ ಬಾಲಕಿ ವಾಟರ್ ಟ್ಯಾಂಕರ್ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಬುಧವಾರ ಬೆಳಿಗ್ಗೆ ಸುಮಾರು 11:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮೃತ ಬಾಲಕಿಯನ್ನು ಗುಲ್ಬರ್ಗ ಮೂಲದ ದಂಪತಿಯ ಮಗಳು ಅನುಶ್ರೀ (9) ಎಂದು ಗುರುತಿಸಲಾಗಿದೆ. ಅನುಶ್ರೀ ಕುಟುಂಬವು ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಶಿವಲಿಂಗಯ್ಯ ಕಾಲೋನಿಯಲ್ಲಿ ವಾಸವಿತ್ತು.

ಘಟನೆ ವಿವರ:

ಬೆಳಗ್ಗೆ ಕಟ್ಟಡವೊಂದಕ್ಕೆ ನೀರು ಸರಬರಾಜು ಮಾಡಲು ವಾಟರ್ ಟ್ಯಾಂಕರ್ ಕಾಲೋನಿಗೆ ಬಂದಿತ್ತು. ಈ ಸಮಯದಲ್ಲಿ ಬಾಲಕಿ ಅನುಶ್ರೀ ಅದೇ ರಸ್ತೆಯಲ್ಲಿ ಆಟವಾಡುತ್ತಿದ್ದಳು. ನೀರು ಖಾಲಿಯಾದ ನಂತರ ಚಾಲಕ ಟ್ಯಾಂಕರ್ ಅನ್ನು ಹಿಮ್ಮುಖವಾಗಿ (ರಿವರ್ಸ್) ತೆಗೆಯುತ್ತಿದ್ದಾನೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಅನುಶ್ರೀಗೆ ಡಿಕ್ಕಿ ಹೊಡೆದಿದ್ದಾನೆ. ಟ್ಯಾಂಕರ್‌ನ ಡಿಕ್ಕಿಯಿಂದಾಗಿ ಬಾಲಕಿ ಕೆಳಗೆ ಬಿದ್ದಿದ್ದಾಳೆ. ಚಾಲಕನಿಗೆ ಬಾಲಕಿ ಕೆಳಗೆ ಬಿದ್ದಿರುವುದು ಅರಿವಿಗೆ ಬಾರದೆ, ಆತ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮುಂದುವರಿಸಿದ್ದಾನೆ. ಪರಿಣಾಮವಾಗಿ, ಟ್ಯಾಂಕರ್ ಬಾಲಕಿ ಮೇಲೆ ಸಂಪೂರ್ಣವಾಗಿ ಹರಿದು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳೀಯರು ತಕ್ಷಣವೇ ಬಾಲಕಿಯನ್ನು ರಕ್ಷಿಸಲು ಪ್ರಯತ್ನಿಸಿದರಾದರೂ, ಗಂಭೀರವಾಗಿ ಗಾಯಗೊಂಡಿದ್ದ ಅನುಶ್ರೀ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಮುದ್ದು ಮಗಳ ದಾರುಣ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಪೊಲೀಸ್ ತನಿಖೆ:

ಘಟನೆ ನಡೆದ ತಕ್ಷಣವೇ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಜೀವನ್‌ ಭೀಮನಗರ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನನ್ನು ಪತ್ತೆಹಚ್ಚಲು ಮತ್ತು ಅಪಘಾತಕ್ಕೆ ಕಾರಣವಾದ ನಿರ್ಲಕ್ಷ್ಯದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ನಗರದಲ್ಲಿ ಇಂತಹ ಭಾರಿ ವಾಹನಗಳ ಚಾಲಕರು ವಸತಿ ಪ್ರದೇಶಗಳಲ್ಲಿ ರಿವರ್ಸ್ ತೆಗೆದುಕೊಳ್ಳುವಾಗ ಹೆಚ್ಚಿನ ಎಚ್ಚರ ವಹಿಸದಿರುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್