ಗಮನ ಸೆಳೆದ ಆಮಂತ್ರಣ ಪತ್ರಿಕೆ: ಮದುವೆಗೆ ಬನ್ನಿ, ನಾಟಕ ನೋಡಿ!

By Kannadaprabha News  |  First Published Feb 10, 2020, 11:12 AM IST

ಮದುವೆ ಮಂಟಪದಲ್ಲಿ‘ಮೈಸೂರು ಮಲ್ಲಿಗೆ’ನಾಟಕ ಪ್ರದರ್ಶನ| ನೂರಾರು ಮಲ್ಲಿಗೆ ಸಸಿಗಳ ವಿತರಣೆ-ಪುಸ್ತಕಗಳ ಸಮರ್ಪಣೆ|ಅಡವಿಸ್ವಾಮಿ ಅವರ ವಿವಾಹ ಮಹೋತ್ಸವದ ವಿಶೇಷತೆ|


ಕೆ.ಎಂ. ಮಂಜುನಾಥ್

ಬಳ್ಳಾರಿ(ಫೆ.10): ಮದುವೆ ಮನೆಯಲ್ಲಿ ‘ಮೈಸೂರು ಮಲ್ಲಿಗೆ’ನಾಟಕ ಪ್ರದರ್ಶನ. ಮಲ್ಲಿಗೆ ಹೂವಿನ ಸಸಿ ವಿತರಣೆ. ಓದೋ ಆಸಕ್ತಿ ಮೂಡಿಸಲು ಪುಸ್ತಕಗಳ ಸಮರ್ಪಣೆ !

Tap to resize

Latest Videos

ನಗರದ ಬಸವ ಭವನದಲ್ಲಿ ಫೆ. 13 ಮತ್ತು 14ರಂದು ಜರಗುವ ನಗರದ ರಂಗತೋರಣ ಸಾಂಸ್ಕೃತಿಕ ಸಂಘಟನೆಯ ಕಾರ್ಯಕರ್ತ ಅಡವಿಸ್ವಾಮಿ ಅವರ ವಿವಾಹ ಮಹೋತ್ಸವದ ವಿಶೇಷತೆ ಇದು.

ವಿದ್ಯಾರ್ಥಿಗಳಲ್ಲಿ ರಂಗ ಸಂಸ್ಕಾರ ನೀಡುತ್ತಾ ಬಂದಿರುವ ನಾಡಿನ ಪ್ರತಿಷ್ಠಿತ ರಂಗಸಂಸ್ಥೆ ‘ರಂಗತೋರಣ’ದಲ್ಲಿ ಸಕ್ರಿಯವಾಗಿರುವ ಅಡವಿಸ್ವಾಮಿ ತಮ್ಮ ಮದುವೆ ವಿಶಿಷ್ಟವಾಗಿ ಇರಬೇಕು. ರಂಗಕಂಪು ಮದುವೆ ಮನೆಯಲ್ಲೂ ಹರಡಬೇಕು ಎಂಬ ಆಶಯದಿಂದ ಫೆ. 13ರಂದು ಸಂಜೆ 6.30ಕ್ಕೆ ಪ್ರೇಮಕವಿ ಕೆ.ಎಸ್‌. ನರಸಿಂಹಸ್ವಾಮಿ ಅವರ ಮೂಲ ಕವನಗಳನ್ನು ಖ್ಯಾತ ರಂಗಕರ್ಮಿ ರಾಜೇಂದ್ರ ಕಾರಂತ ಅವರು ರಂಗರೂಪಕ್ಕೆ ಇಳಿಸಿರುವ ಮೈಸೂರು ಮಲ್ಲಿಗೆ ನಾಟಕ ಪ್ರದರ್ಶನ ಏರ್ಪಡಿಸಿದ್ದಾರೆ, ಡಾ. ಬಿ. ರಾಜಾರಾಂ ಅವರು ವಿನ್ಯಾಸ-ನಿರ್ದೇಶನ ಮಾಡಲಿದ್ದಾರೆ.

ಫೆ. 14ರಂದು ಲಿಂಗಸೂಗೂರಿನ ಕರಡಕಲ್‌ ಗ್ರಾಮದ ಉಮಾದೇವಿ ಮತ್ತು ಮಡಿವಾಳಯ್ಯ ಸ್ವಾಮಿ ಹಿರೇಮಠ ಅವರ ಪುತ್ರಿ ಅಕ್ಷತಾ ಅವರೊಂದಿಗೆ ಬೆಳಗ್ಗೆ 9.55ರಿಂದ 10.11ರವರೆಗಿನ ಮೀನಲಗ್ನ ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿಯಲಿರುವ ಗಿರಿಜಮ್ಮ- ಲಿಂ. ಅಮರಯ್ಯಸ್ವಾಮಿ ಹಿರೇಮಠ ಪುತ್ರ ಅಡವಿಸ್ವಾಮಿ ಅವರು ಮದುವೆಗೆ ಬರುವವರಿಗೆ ಮಲ್ಲಿಗೆ ಹೂವಿನ ಸಸಿಗಳು ಹಾಗೂ ಪುಸ್ತಕಗಳನ್ನು ವಿತರಣೆ ಮಾಡಲಿದ್ದಾರೆ. ನೂರಾರು ಹೂವಿನ ಸಸಿಗಳು ಹಾಗೂ ಪುಸ್ತಕಗಳ ಖರೀದಿ ಈಗಾಗಲೇ ಶುರುವಾಗಿದೆ.

ಗಮನ ಸೆಳೆದ ಆಹ್ವಾನ ಪತ್ರಿಕೆ:

ರಂಗಾಸಕ್ತ ಅಡವಿಸ್ವಾಮಿ ಅವರು ತಮ್ಮ ಮದುವೆಯ ಆಹ್ವಾನಪತ್ರಿಕೆಯಲ್ಲಿ ತಮ್ಮ ಮನೆ ದೇವರಾದ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ‘ಪುರ’ಗ್ರಾಮದ ಐತಿಹಾಸಿಕ ಶ್ರೀ ಸೋಮನಾಥ ದೇವಾಲಯದ ಕೋಟಿಲಿಂಗಗಳ ಕುರಿತು ಪರಿಚಯ ಮಾಡಿಕೊಟ್ಟಿದ್ದಾರೆ. ದೇವಸ್ಥಾನ ಹಾಗೂ ಕೋಟಿ ಲಿಂಗಗಳ ಚಿತ್ರಗಳ ಜೊತೆಗೆ ದೇವಸ್ಥಾನದ ಮಹತ್ವ ಒಂದಷ್ಟುಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ.

‘ನನಗೆ ಗೊತ್ತಿರುವಂತೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ‘ಪುರ’ಗ್ರಾಮದ ಸೋಮನಾಥ ದೇವಾಲಯದಲ್ಲಿರುವ ಕೋಟಿಲಿಂಗಗಳು ಐತಿಹಾಸಿಕವಾದವು. ಬಳಿಕ ಅನೇಕ ಕಡೆ ಆಗಿರಬಹುದು. 1469ರ ವೇಳೆಯಲ್ಲಿ ವಿಜಯನಗರ ಅರಸ ಎರಡನೇ ವೀರಪ್ರತಾಪ ಸದಾಶಿವರಾಯ ಕಟ್ಟಿಸಿದ್ದಾನೆ ಎಂದು ಮಾಹಿತಿ ಇದೆ. ಆದರೆ, ದೇವಸ್ಥಾನ ಹಾಗೂ ಕೋಟಿಲಿಂಗಗಳ ಬಗ್ಗೆ ಹೆಚ್ಚು ಪ್ರಚಾರವಿಲ್ಲ. ಹೀಗಾಗಿಯೇ ಆಹ್ವಾನಪತ್ರಿಕೆಯಲ್ಲಿ ದೇವಸ್ಥಾನಗಳ ಚಿತ್ರಗಳು ಹಾಗೂ ಮಹತ್ವವನ್ನು ತಿಳಿಸಿಕೊಡುವ ಪ್ರಯತ್ನ ಮಾಡಿದ್ದೇನೆ’ಎನ್ನುತ್ತಾರೆ ಅಡವಿಸ್ವಾಮಿ.

ಅಡವಿಸ್ವಾಮಿ ಅವರು ಕಳೆದ 15 ವರ್ಷಗಳಿಂದ ರಂಗಭೂಮಿ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾರೆ. ಅವರ ಮದುವೆಯಲ್ಲಿ ನಾಟಕ ಪ್ರದರ್ಶನ ಏರ್ಪಡಿಸಿರುವುದು ನೋಡಿದರೆ ಅವರಿಗೆ ರಂಗಭೂಮಿ ಮೇಲಿನ ಬದ್ಧತೆ ತೋರಿಸುತ್ತದೆ. ಮದುವೆಗೆ ಬಂದವರಿಗೆ ಸದಭಿರುಚಿ ಮೂಡಿಸುವ ಕೆಲಸವಾಗಲಿದೆ ಎಂದು  ಬಳ್ಳಾರಿ ರಂಗತೋರಣ  ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್‌ ಅವರು ಹೇಳಿದ್ದಾರೆ.

click me!