ಇತರ ಜಿಲ್ಲೆಗಳಿಗೂ ಹಬ್ಬಿದ ಒಳಮೀಸಲು ಕಿಚ್ಚು: ಬಾಗಲಕೋಟೆ, ವಿಜಯನಗರದಲ್ಲೂ ಪ್ರತಿಭಟನೆ

By Kannadaprabha News  |  First Published Mar 29, 2023, 12:13 AM IST

ಎಸ್ಸಿ ಒಳ ಮೀಸಲಾತಿ ವಿರೋಧಿಸಿ ಸೋಮವಾರ ಬಂಜಾರ ಸಮುದಾಯ ಆರಂಭಿಸಿದ ಪ್ರತಿಭಟನೆಯ ಕಿಚ್ಚು ಮಂಗಳವಾರವೂ ಮುಂದುವರಿದಿದೆ. ಶಿವಮೊಗ್ಗ-ಶಿಕಾರಿಪುರ ನಡುವಿನ ಕುಂಚೇನಹಳ್ಳಿಯಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸ್ಥಳೀಯರು ರಸ್ತೆ ತಡೆ ನಡೆಸಿ ಒಳ ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಸಿದರು.


ಶಿವಮೊಗ್ಗ (ಮಾ.29) : ಎಸ್ಸಿ ಒಳ ಮೀಸಲಾತಿ ವಿರೋಧಿಸಿ ಸೋಮವಾರ ಬಂಜಾರ ಸಮುದಾಯ ಆರಂಭಿಸಿದ ಪ್ರತಿಭಟನೆಯ ಕಿಚ್ಚು ಮಂಗಳವಾರವೂ ಮುಂದುವರಿದಿದೆ. ಶಿವಮೊಗ್ಗ-ಶಿಕಾರಿಪುರ ನಡುವಿನ ಕುಂಚೇನಹಳ್ಳಿಯಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸ್ಥಳೀಯರು ರಸ್ತೆ ತಡೆ ನಡೆಸಿ ಒಳ ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ಇದೇ ವೇಳೆ, ಪ್ರತಿಭಟನೆಯ ಕಿಚ್ಚು ಇತರ ಜಿಲ್ಲೆಗಳಿಗೂ ವ್ಯಾಪಿಸಿದ್ದು, ಮಂಗಳವಾರ ಬಾಗಲಕೋಟೆ, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಗಳಲ್ಲಿಯೂ ಪ್ರತಿಭಟನೆಗಳು ನಡೆದಿವೆ.

ಸೋಮವಾರ ಬಂಜಾರ ಸಮುದಾಯದ ನೇತೃತ್ವದಲ್ಲಿ ಶಿಕಾರಿಪುರShikaripurದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲುತೂರಾಟ ನಡೆದಿತ್ತು. ಅಲ್ಲದೆ ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯಗಳಾಗಿದ್ದವು. ಇದರ ಬೆನ್ನಲ್ಲೇ ಬಂಜಾರ ಸಮುದಾಯದವರೇ ವಾಸಿಸುವ ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದ ಸ್ಥಳೀಯರು, ರಸ್ತೆಯಲ್ಲಿ ಟೈರ್‌ ಇಟ್ಟು, ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು. ಇದರಿಂದಾಗಿ ಕೆಲ ಸಮಯ ವಾಹನಗಳ ಓಡಾಟಕ್ಕೆ ತೊಂದರೆಯಾಯಿತು.

Tap to resize

Latest Videos

ಮೀಸಲಾತಿ ಅಸಮಾಧಾನ ಇದ್ದರೆ ನಮ್ಮನೆ ಮೇಲೆ ಕಲ್ಲೆಸೆಯಿರಿ: ಸಿಎಂ ಬೊಮ್ಮಾಯಿ

ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ಯಾವುದೇ ಕಾರಣಕ್ಕೂ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.

ಈ ಮಧ್ಯೆ, ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ಆಲ್‌ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷ ಚಂದ್ರನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಚಿವ ಜೆ.ಸಿ.ಮಾಧುಸ್ವಾಮಿ ಉಪಸಮಿತಿಯ ವರದಿಯಲ್ಲಿ ಪರಿಶಿಷ್ಟಜಾತಿ ಪಟ್ಟಿಯಲ್ಲಿರುವ ಸಹೋದರ ಸಮುದಾಯಗಳ ಕುರಿತು ವಸ್ತುನಿಷ್ಟಅಧ್ಯಯನ ಮಾಡದೆ, ಅನಗತ್ಯವಾಗಿ ಸ್ೊ್ರಶ್ಯರು, ಅಸ್ಪೃಶ್ಯರು, ಎಡಗೈ, ಬಲಗೈ, ಎಲ್ಲ ಸೌಲಭ್ಯ ಪಡೆದವರು, ಮುಂದುವರಿದವರು, ಅಭಿವೃದ್ಧಿ ಆಗಿರುವವರು ಎಂದು ಆರೋಪಿಸಲಾಗಿದೆ. ಈ ವರದಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾದಲ್ಲಿ ಪ್ರತಿಭಟನೆ ನಡೆಸಿದ ಲಂಬಾಣಿ ಸಮುದಾಯದವರು, ಬಿಜೆಪಿ ಬಾವುಟ ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಬಾಗಲಕೋಟೆ ಹಾಗೂ ಹುನಗುಂದ ತಾಲೂಕಿನ ತಾಂಡಾಗಳಿಗೆ ಬಿಜೆಪಿ ಶಾಸಕರು, ನಾಯಕರು ಪ್ರವೇಶಿಸುವುದಕ್ಕೆ ನಿಷೇಧ ವಿಧಿಸಿ ಬ್ಯಾನರ್‌ ಕಟ್ಟಿದ್ದಾರೆ. ಜೊತೆಗೆ, ಒಳ ಮೀಸಲಾತಿಯನ್ನು ಹಿಂಪಡೆಯದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದಾರೆ.

ಶಿಕಾರಿಪುರದಲ್ಲಿ ತಾರಕಕ್ಕೇರಿದ ಒಳ ಮೀಸಲಾತಿ ಪ್ರತಿಭಟನೆ, ಬಿಎಸ್‌ವೈ ಮನೆಗೆ ಕಲ್ಲು ತೂರಾಟ, 144 ಸೆಕ್ಷನ್ ಜಾರಿ!

ಇದೇ ವೇಳೆ, ಶಿವಮೊಗ್ಗದ ಡಿಸಿ ಕಚೇರಿ ಎದುರು ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಸೇರಿದಂತೆ ಹಲವು ಜಾತಿಯ ಪ್ರಮುಖರು ಭಾಗಿಯಾಗಿದ್ದರು. ಈ ಮಧ್ಯೆ, ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಯಾಳಗಿ ತಾಂಡಾದಲ್ಲಿ ಬಂಜಾರ ಸಮುದಾಯದ ಯುವಕರು ಒಳಮೀಸಲಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದು, ಆದೇಶ ಹಿಂಪಡೆಯದಿದ್ದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

click me!