ಮೂಲಸೌಕರ್ಯ ವಂಚಿತ ಹಂಪಾಪುರ; ಇಲ್ಲಿವರೆಗೂ ಸಾರಿಗೆ ಬಸ್ ಬಂದಿಲ್ಲ!

By Kannadaprabha News  |  First Published Aug 23, 2022, 1:46 PM IST

ಕಳೆದ ವಾರ ಭಾರತ  ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿತು. 75 ವರ್ಷಗಳು ಗತಿಸಿದರೂ ಮೂಲಸೌಕರ್ಯಗಳಿಂದ ವಂಚಿತಗೊಂಡ ಕುಗ್ರಾಮ ಹರಪನಹಳ್ಳಿ ತಾಲೂಕಿನಲ್ಲಿದೆ.ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು!


ಬಿ.ರಾಮಪ್ರಸಾದ್‌ ಗಾಂಧಿ

 ಹರಪನಹಳ್ಳಿ (ಆ.23) : ಈಚೆಗೆ ಭಾರತ ದೇಶ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿತು. 75 ವರ್ಷಗಳು ಗತಿಸಿದರೂ ಮೂಲಸೌಕರ್ಯಗಳಿಂದ ವಂಚಿತಗೊಂಡ ಕುಗ್ರಾಮ ಹರಪನಹಳ್ಳಿ ತಾಲೂಕಿನಲ್ಲಿದೆ. ಅದುವೇ ಹಂಪಾಪುರ. ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹಂಪಾಪುರ ಗ್ರಾಮ ಮೂಲೆಕಟ್ಟಿನಲ್ಲಿದ್ದು, ಕಲ್ಲಹಳ್ಳಿ-ಹುಲಿಕಟ್ಟಿಅರಣ್ಯ ಪ್ರದೇಶ ಸಮೀಪದ ಗುಡ್ಡಕ್ಕೆ ಹೊಂದಿಕೊಂಡಿದ್ದು, ಹಲವಾರು ವರ್ಷಗಳಿಂದ ದುರಸ್ತಿ ಕಾಣದ ರಸ್ತೆಯಲ್ಲಿಯೇ ಗ್ರಾಮದ ರೈತರು, ಮಕ್ಕಳು, ಸಾರ್ವಜನಿಕರು ಓಡಾಟ ಮಾಡಬೇಕಾಗಿದೆ.

Tap to resize

Latest Videos

undefined

ಈ ಹಳ್ಳಿಗೆ ಯಾರೂ ಹೆಣ್ಣು ಕೊಡೋದಿಲ್ಲ; ಇಲ್ಲಿನ ಹೆಣ್ಣನ್ನು ಯಾರೂ ಮದುವೆ ಮಾಡಿಕೊಳ್ಳುವುದಿಲ್ಲ!

ಗ್ರಾಮದ ಹೊರಹೊಲಯದ ಹುಲಿಕಟ್ಟಿಮೇನ್‌ ರಸ್ತೆಯಿಂದ ಕೋವಿ ನೀಲಮ್ಮನ ಹೊಲದವರೆಗೆ ತಲುಪುವ ರಸ್ತೆ ತೀವ್ರ ಹದಗೆಟ್ಟಿದ್ದು, ಈ ರಸ್ತೆಯಲ್ಲಿಯೇ ಗ್ರಾಮದ ಜನರು ತಮ್ಮ ಜಮೀನುಗಳಲ್ಲಿನ ಕೆಲಸ ಕಾರ್ಯಗಳಿಗಾಗಿ ಓಡಾಡುತ್ತಾರೆ. ಅಲ್ಲದೇ ಗ್ರಾಮದ ಸ್ಮಶಾನಕ್ಕೆ ಇದೆ ದಾರಿಯಲ್ಲಿಯೇ ಹೋಗಬೇಕಾಗಿದೆ. ರಸ್ತೆ ಸಹ ಕಿರಿದಾಗಿದ್ದು, ರಸ್ತೆಯ ಬದಿಯಲ್ಲಿ ಗಿಡ ಗಂಟೆಗಳು ವ್ಯಾಪಕವಾಗಿ ಬೆಳೆದಿರುವ ಪರಿಣಾಮ ಮಹಿಳೆಯರು ಮಕ್ಕಳು ಓಡಾಡಲು ಭಯಪಡುವಂತಾಗಿದೆ.

ಮಳೆಗಾಲ ಪ್ರಾರಂಭವಾದರೆ ಸಾಕು ರಸ್ತೆ ತುಂಬೆಲ್ಲ ಗುಂಡಿಗಳಲ್ಲಿ ನೀರು ನಿಂತ್ತು ಕೆಸರು ಗದ್ದೆಯಂತಾಗುತ್ತದೆ. ಈ ರಸ್ತೆಯಲ್ಲಿ ಓಡಾಡುವುದಕ್ಕೆ ತೀವ್ರ ಕಷ್ಟವಾಗುತ್ತದೆ. ಜಮೀನುಗಳಲ್ಲಿನ ಕೆಲಸ ಮುಗಿಸಿಕೊಂಡು ಬರುವಷ್ಟರಲ್ಲಿಯೇ ಸಂಜೆ ಆಗಿ ಬಿಡುತ್ತದೆ. ಇಂತಹ ರಸ್ತೆಯಲ್ಲಿ ರಾತ್ರಿ ಹೋಗಲು ಭಯವಾಗುತ್ತದೆ. ರಸ್ತೆ ದುರಸ್ತಿ ಸಂಬಂಧ ಈಗಾಗಲೇ ಗ್ರಾಮ ಪಂಚಾಯ್ತಿ ಹಾಗೂ ಶಾಸಕರ ಗಮನಕ್ಕೆ ತಂದಿದ್ದೇವೆ. ಅದಷ್ಟು, ಬೇಗ ಶಾಸಕರು ಈ ಬಗ್ಗೆ ಗಮನ ಹರಿಸಿ ರಸ್ತೆ ಅಭಿವೃದ್ಧಿ ಪಡಿಸಿಕೊಡಬೇಕು ಎಂದು ಗ್ರಾಮಸ್ತರಾದ ಡಿ. ಭರಮಪ್ಪ, ಸಂತೋಷ, ಬೀರಪ್ಪ, ಹಲೆಶ್‌, ನೀಲಮ್ಮ, ನಾಗರಾಜ್‌ ಶಿವಪ್ಪ ಮನವಿ ಮಾಡಿದ್ದಾರೆ. 100 ಕುಟುಂಬಗಳು, ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಬಹುತೇಕ ಪರಿಶಿಷ್ಟಜಾತಿ, ಹಿಂದುಳಿದ ವರ್ಗದವರೇ ಹೆಚ್ಚಾಗಿದ್ದಾರೆ.

ಗುಡಿಸಲೇ ಹೆಚ್ಚು: ಗ್ರಾಮದಲ್ಲಿ ಸುಮಾರು ನೂರು ಕುಟುಂಬಗಳು ವಾಸವಿದ್ದು, 40ರಿಂದ 50 ಕುಟುಂಬಗಳು ಗುಡಿಸಲು, ಹಳೆಯ ಮನೆಯಲ್ಲಿಯೆ ವಾಸ ಮಾಡುತ್ತಿದ್ದಾರೆ. ಹಳೆಯ ಮನೆಗಳು ಅಪಾಯದಲ್ಲಿವೆ. ಇಲ್ಲಿ ಕೂಲಿ ಕಾರ್ಮಿಕರು, ಬಡವರೇ ಹೆಚ್ಚಾಗಿರುವ ಕಾರಣ ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಸರ್ಕಾರ ಅವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕಾಗಿದೆ.

ಬಳ್ಳಾರಿ: ಚಿರತೆ, ಕರಡಿ ಕಾಟಕ್ಕೆ ಹೈರಾಣಾದ ಜನತೆ..!

ಸಾರಿಗೆ ಸೌಕರ್ಯವಿಲ್ಲ: ಗ್ರಾಮಸ್ಥರು ಇದುವರೆಗೂ ಸಾರಿಗೆ ಬಸ್‌ ಸೌಕರ್ಯ ಕಂಡಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕೆಂಪು ಬಸ್‌ ನೋಡಿರುವ ಇಲ್ಲಿಯ ಜನ ಮತ್ಯಾವತ್ತೂ ಬಸ್‌ ಕಂಡಿಲ್ಲ. ಜನರು ಪಟ್ಟಣ, ನಗರಗಳಿಗೆ ತೆರಳಬೇಕಾದರೆ ಪಕ್ಕದ ಗ್ರಾಮಕ್ಕೆ ನಡೆದುಕೊಂಡು ಹೊಗಬೇಕಾಗಿದೆ. ಅದರಲ್ಲೂ ಮಕ್ಕಳನ್ನು ಕಾಲೇಜಿಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ನಮ್ಮ ಗ್ರಾಮಕ್ಕೆ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕಾದರೆ ಹರಸಾಹಸ ಪಡಬೇಕಾಗಿದೆ. ನಮ್ಮದು ಮೂಲೆಕಟ್ಟು ಗ್ರಾಮ. ಹಾಗಾಗಿ, ಅಧಿಕಾರಿಗಳು ಇಲ್ಲಿಗೆ ಬರಲು ಯೋಚನೆ ಮಾಡುತ್ತಾರೆ. ನಾವೇ ಕಚೇರಿಗಳಿಗೆ ಅಲೆದಾಡಿ ಕೆಲಸ ಮಾಡಿಸಿಕೊಳ್ಳಬೇಕಾಗಿದೆ. ರೈತರು, ಕೂಲಿ ಕಾರ್ಮಿಕರೇ ಹೆಚ್ಚು ವಾಸವಾಗಿರುವ ನಮ್ಮ ಗ್ರಾಮ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಸಂಬಂಧಪಟ್ಟಅಧಿಕಾರಿಗಳು ಜನಪ್ರತಿನಿಧಿಗಳು ನಮ್ಮ ಗ್ರಾಮದ ಕಡೆ ಹೆಚ್ಚು ಒತ್ತು ನೀಡಿ ಇಲ್ಲಿನ ಸಮಸ್ಯೆಗಳಿಗೆ ಪರಹಾರ ಒದಗಿಸಿಕೊಡಬೇಕು.

ಬಿ.ಬೀರಪ್ಪ ಗ್ರಾಮದ ಯುವಕ

click me!