* ಸರ್ಕಾರಿ ಆಸ್ಪತ್ರೆಗೆ ಪೂರೈಸಿರುವ ವೆಂಟಿಲೇಟರ್ ಕಳಪೆ
* ಸರ್ಕಾರ ಘೋಷಿಸಿರುವ ಪರಿಹಾರ ಪ್ಯಾಕೇಜ್ ಯಾವುದಕ್ಕೂ ಸಾಲುವುದಿಲ್ಲ
* ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಯಾವ ವ್ಯವಸ್ಥೆ ಮಾಡುತ್ತಿಲ್ಲ
ಹಾವೇರಿ(ಮೇ.24): ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗಿರುವ ವೆಂಟಿಲೇಟರ್ ಕೂಡ ಕಳಪೆಯಾಗಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಆಗ್ರಹಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ 23 ವೆಂಟಿಲೇಟರ್ ಖಾಲಿ ಇವೆ. ಅವು ಕಳಪೆಯಾಗಿರುವುದರ ಜತೆಗೆ ವೈದ್ಯರು, ತಂತ್ರಜ್ಞರ ಕೊರತೆಯಿಂದ ಮೂಲೆಗೆ ಸೇರುವಂತಾಗಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಈ ರೀತಿ ಜನರ ಪ್ರಾಣದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಹಾವೇರಿಯಲ್ಲಿ 3ನೇ ಅಲೆಗೂ ಮುನ್ನವೇ 300 ಮಕ್ಕಳಿಗೆ ಕೊರೋನಾ..!
ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಖಾಲಿಯಿಲ್ಲ ಎಂದು ಬೋರ್ಡ್ ಹಾಕಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ. ಆಕ್ಸಿಜನ್ ಸಮಸ್ಯೆ ಎಲ್ಲ ಆಸ್ಪತ್ರೆಗಳಲ್ಲಿ ಮಾಮೂಲಿಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗುತ್ತಿದೆ. ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಿದರೆ ಸರ್ಕಾರಿ ಆಸ್ಪತ್ರೆ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಎಲ್ಲಿ ಕೇಳಿದರೂ ಆಕ್ಸಿಜನ್ ಬೆಡ್ ಇಲ್ಲ ಎಂಬ ಸಿದ್ಧ ಉತ್ತರ ಬರುತ್ತಿದೆ. ಮೊದಲೇ ಆತಂಕದಲ್ಲಿರುವ ಜನರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸ್ಯಾನಿಟೈಸರ್, ಮಾಸ್ಕ್ ಸರಿಯಾಗಿ ಪೂರೈಸುತ್ತಿಲ್ಲ. ಅವರಿಗೆ ಮೂರು ತಿಂಗಳಿಂದ ಗೌರವಧನ ನೀಡಿಲ್ಲ. ಸರ್ಕಾರ ಘೋಷಿಸಿರುವ ಪರಿಹಾರ ಪ್ಯಾಕೇಜ್ ಯಾವುದಕ್ಕೂ ಸಾಲುವುದಿಲ್ಲ. ಇದನ್ನು ಹೆಚ್ಚಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕು. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಯಾವ ವ್ಯವಸ್ಥೆಯನ್ನೂ ಮಾಡುತ್ತಿಲ್ಲ. ಕೊರೋನಾ ಟೆಸ್ಟ್ ವರದಿ ಬರುವುದು ವಿಳಂಬವಾಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಶವ ಸಂಸ್ಕಾರ ಮುಗಿದ ಮೇಲೆ ರಿಪೋರ್ಟ್ ಕೈಸೇರುತ್ತಿದೆ. ಇದರಿಂದಲೂ ಸೋಂಕು ಹಬ್ಬುತ್ತಿದೆ. ಎಲ್ಲ ರೀತಿಯಲ್ಲೂ ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಜಿಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇತರರು ಇದ್ದರು.