* ಮಕ್ಕಳಲ್ಲಿ ಸೋಂಕು ಲಕ್ಷಣ ಕಂಡುಬಂದರೂ ಕೋವಿಡ್ ಪರೀಕ್ಷೆಗೆ ಪಾಲಕರ ನಿರ್ಲಕ್ಷ್ಯ
* ಪಾಲಕರಲ್ಲಿ ಅರಿವಿನ ಕೊರತೆಯಿಂದ ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಕರೆತರುತ್ತಿಲ್ಲ: ವೈದ್ಯರು
* ಮೂರನೇ ಅಲೆಗೆ ಸಿದ್ಧರಾಗಲು ಸೂಚನೆ
ಹಾವೇರಿ(ಮೇ.24): ಕೊರೋನಾ ಮೂರನೇ ಅಲೆ ಮಕ್ಕಳಿಗೆ ಕಂಟಕ ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೆ, ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲೇ 300ಕ್ಕೂ ಹೆಚ್ಚು ಮಕ್ಕಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
undefined
ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮರಣ ಪ್ರಮಾಣವಂತೂ ರಾಜ್ಯದಲ್ಲೇ ಅಧಿಕವಾಗಿದೆ. ಇದು ಎಲ್ಲರನ್ನು ಆತಂಕಕ್ಕೆ ತಳ್ಳಿದೆ. ಸೆಮಿ ಲಾಕ್‌ಡೌನ್ ಆದೇಶವನ್ನು ಜನರು ಸರಿಯಾಗಿ ಪಾಲಿಸದ್ದರಿಂದ ಕಳೆದ ಮೂರು ದಿನಗಳಿಂದ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಎರಡನೇ ಅಲೆಯನ್ನು ಎದುರಿಸುವುದೇ ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿದೆ. ಇನ್ನು ಮೂರನೇ ಅಲೆ ಎದುರಾದರೆ ಅದನ್ನು ಎದುರಿಸುವುದು ಹೇಗೆಂಬ ಚಿಂತೆ ಕಾಡುತ್ತಿದೆ. ಅದರಲ್ಲೂ ಮಕ್ಕಳಿಗೆ ಸೋಂಕು ತಗುಲಿದರೆ ಏನು ಮಾಡುವುದು ಎಂಬ ಆತಂಕ ಎಲ್ಲರಲ್ಲಿ ಮನೆ ಮಾಡಿದೆ. ಮೂರನೇ ಅಲೆಯಲ್ಲಿ ಮಕ್ಕಳನ್ನು ಸೋಂಕು ಕಾಡಲಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಆದರೆ, ಈಗಲೇ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಮಕ್ಕಳಿಗೆ ಪಾಸಿಟಿವ್ ಬಂದಿದೆ.
ಮಕ್ಕಳಲ್ಲಿ ಪಾಸಿಟಿವ್:
ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 300ಕ್ಕೂ ಹೆಚ್ಚು ಮಕ್ಕಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ 10 ವರ್ಷದೊಳಗಿನ ಸುಮಾರು 150 ಮಕ್ಕಳಿದ್ದರೆ, 10ರಿಂದ 15 ವರ್ಷದೊಳಗಿನ 150 ಮಕ್ಕಳಿಗೆ ಸೋಂಕು ಬಂದಿದೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಪಾಸಿಟಿವ್ ಬಂದವರು ಹೋಂ ಐಸೋಲೇಶನ್‌ನಲ್ಲಿ ಇರುವುದರಿಂದ ಆ ಕುಟುಂಬದ ಮಕ್ಕಳಿಗೂ ಪಾಸಿಟಿವ್ ಬರುತ್ತಿದೆ. ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸದ್ದರಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಸುಲಭವಾಗಿ ಮಕ್ಕಳು ತುತ್ತಾಗುತ್ತಿದ್ದಾರೆ. ಮಕ್ಕಳಲ್ಲಿ ಸೋಂಕು ಲಕ್ಷಣಗಳು ಕಂಡುಬಂದರೂ ಪಾಲಕರು ನಿರ್ಲಕ್ಷ್ಯ ತೋರುತ್ತಿರುವುದು ಕಂಡುಬರುತ್ತಿದೆ. ಅಲ್ಲದೇ ಲಕ್ಷಣ ಇದ್ದರೂ ಟೆಸ್ಟ್ ಮಾಡಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದರೆ, ಸೋಂಕು ಕಂಡುಬಂದ ಮಕ್ಕಳು ಶೀಘ್ರವಾಗಿ ಗುಣಮುಖರಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.
ಎಲ್ಲ ಪಿಎಚ್‌ಸಿಯಲ್ಲೂ ಕೋವಿಡ್ ಚಿಕಿತ್ಸೆ: ಗೃಹ ಸಚಿವ ಬೊಮ್ಮಾಯಿ
ಅರಿವಿನ ಕೊರತೆ:
ನಿತ್ಯವೂ ಹತ್ತಾರು ಮಕ್ಕಳು ಕೋವಿಡ್ ಲಕ್ಷಣವಿರುವವರು ನಮ್ಮ ಆಸ್ಪತ್ರೆಗೆ ಬರುತ್ತಿದ್ದಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಿರುವುದರಿಂದ ಪಾಲಕರಲ್ಲಿ ಅರಿವಿನ ಕೊರತೆಯಿಂದಾಗಿ ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಕರೆತರುತ್ತಿಲ್ಲ. ಇದು ನಮಗೆ ಸವಾಲಾಗಿ ಪರಿಣಮಿಸಿದೆ. ಅದಕ್ಕಾಗಿ ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ನಗರದ ಮಕ್ಕಳ ತಜ್ಞ ಡಾ. ಕೆ. ವಿನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.
ಮೂರನೇ ಅಲೆಗೆ ಸಿದ್ಧರಾಗಲು ಸೂಚನೆ
ಮುಂದಿನ ದಿನಗಳಲ್ಲಿ ಕೊರೋನಾ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಮೂರನೇ ಅಲೆ ಎದುರಿಸಲು ಜಿಲ್ಲೆಯ ಆರೋಗ್ಯ ಇಲಾಖೆ ಸಿದ್ಧವಾಗಬೇಕು. ಮಕ್ಕಳ ವಾರ್ಡ್‌ಗಳನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡಬೇಕು. ಆ ವಾರ್ಡ್‌ನಲ್ಲಿ ಐಸಿಯು ಚಿಕಿತ್ಸಾ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಆ ಮೂಲಕ ಮಕ್ಕಳ ಚಿಕಿತ್ಸೆಗಾಗಿ ಸಕಲ ರೀತಿಯಲ್ಲಿ ಸಜ್ಜಾಗಿರಬೇಕು ಎಂದು ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲದ್ದರಿಂದ ಈಗಿರುವ ವ್ಯವಸ್ಥೆಯಲ್ಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ.
ಜಿಲ್ಲೆಯಲ್ಲಿ 15 ವರ್ಷದೊಳಗಿನ 300ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಹಾಗಂತ ಅದನ್ನು ಈಗಲೇ ಮೂರನೇ ಅಲೆ ಎಂದು ಭಾವಿಸಲು ಸಾಧ್ಯವಿಲ್ಲ. ಈ ಬಗ್ಗೆ ತಜ್ಞ ವೈದ್ಯರ ಅಭಿಪ್ರಾಯ ಪಡೆದುಕೊಂಡ ಬಳಿಕ ಮಾತನಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.