ಮಾದನ ಹಿಪ್ಪರಗಾ ಆಸ್ಪತ್ರೆಯ ಅವ್ಯವಸ್ಥೆಗೆ ಸಾರ್ವಜನಿಕರಿಂದ ಹಿಡಿ ಶಾಪ
ಚವಡಾಪುರ(ಅ.06): ಹೆರಿಗೆ ಕಾಲದಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗು ಸಾವನ್ನಪ್ಪಿದೆ ಎಂಬ ಆರೋಪ ಮಾದನಹಿಪ್ಪರಗಾ ಪಿಎಚ್‌ಸಿಯಿಂದ ಪ್ರತಿಧ್ವನಿಸಿದೆ. ಅಫಜಲ್ಪುರ ತಾಲೂಕಿನ ಚಿಂಚೋಳಿ ಗ್ರಾಮದ ಚಂದ್ರಕಲಾ ರಾಜಕುಮಾರ ನಿಂಬಾಳ ಎನ್ನುವವರು ಎರಡನೇಯ ಹೆರಿಗೆಗಾಗಿ ಆಳಂದ ತಾಲೂಕಿನ ತಮ್ಮ ತವರು ಮನೆ ಖ್ಯಾಡ ಉಮ್ಮರಗಿ ಗ್ರಾಮಕ್ಕೆ ಹೋಗಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮಾದನ ಹಿಪ್ಪರಗಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅ.3ರಂದು ಪಾಲಕರು ದಾಖಲಿಸಿದ್ದರು.
ಆದರೆ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಬನ್ನಪ್ಪ ಪಾಟೀಲ್ ಇರಲಿಲ್ಲ, ಅಲ್ಲದೆ ಉಳಿದ ವೈದ್ಯರು ಕೂಡ ಆಸ್ಪತ್ರೆಯಲ್ಲಿ ಇರಲಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿನ ನರ್ಸ್ ಒಬ್ಬರು ಅನುಭವ ಇಲ್ಲದಿದ್ದರೂ ಹೆರಿಗೆ ಮಾಡಿಸಿಕೊಂಡಿದ್ದಾರೆ. ಆದರೆ ನರ್ಸ್ ಅವರ ಅಚಾತುರ್ಯದಿಂದಾಗಿ ಕೂಸು ಮೃತ ಪಟ್ಟಿದೆ.
ಕಲಬುರಗಿ: ಪುಟ್ಟ ಕಂದಮ್ಮನಿಗೆ ಹೃದಯ ಕಾಯಿಲೆ, ಪೋಷಕರಿಗೆ ಅಲೆಯುವಂತೆ ಮಾಡಿದ್ರಾ ಜಿಮ್ಸ್ ವೈದ್ಯರು!?
ಈ ಕುರಿತು ಆಡಳಿತ ವೈದ್ಯಾಧಿಕಾರಿ ಡಾ. ಬನ್ನಪ್ಪ ಪಾಟೀಲ್ ಅವರಿಗೆ ದೂರವಾಣಿ ಕರೆ ಮಾಡಿದರೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಬೇಜವಾಬ್ದಾರಿಯಿಂದ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆಂದು ಕುಟುಂಬದವರು ದೂರಿದ್ದಾರೆ.
ಆಸ್ಪತ್ರೆಯ ಅವ್ಯವಸ್ಥೆಗೆ ಸಾರ್ವಜನಿಕರಿಂದ ಹಿಡಿ ಶಾಪ:
ಹಸುಗೂಸು ಮೃತಪಟ್ಟರಾತ್ರಿ ಆಸ್ಪತ್ರೆಗೆ ಅನೇಕ ರೋಗಿಗಳು, ಗಾಯಾಳುಗಳು ಬಂದಿದ್ದರು. ಅವರಿಗೂ ಕೂಡ ಚಿಕಿತ್ಸೆ ನೀಡುವವರು ಯಾರೂ ಇಲ್ಲದಂತಾಗಿ ಎಲ್ಲರೂ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯತನದ ಬಗ್ಗೆ ಹಿಡಿ ಶಾಪ ಹಾಕಿದ್ದಾರೆ.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮತ್ತು ಮಕ್ಕಳ ತಜ್ಞ ಡಾ. ಬನ್ನಪ್ಪ ಪಾಟೀಲ್ ಅವರು ಆಸ್ಪತ್ರೆಗೆ ಸರಿಯಾಗಿ ಬರುತ್ತಿಲ್ಲ, ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ, ಬೇಕಾಬಿಟ್ಟಿಯಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ಇವರ ವರ್ತನೆಯಿಂದ ಸಾಕಷ್ಟುಟೀಕೆಗಳು ಬರುತ್ತಿದ್ದು ಸಂಬಂಧ ಪಟ್ಟವರು ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಾಕಷ್ಟುಜನ ಆಗ್ರಹ ಪಡಿಸಿದರೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ವೈದ್ಯರ ಬೇಜವಾಬ್ದಾರಿಯಿಂದಾಗಿ ಜನ ಪರಿತಪಿಸುವಂತಾಗಿದೆ. ಅಲ್ಲದೆ ಈಗ ಒಂದು ಹಸುಗೂಸು ಕೂಡ ಮೃತ ಪಟ್ಟಿದೆ. ಈಗಲೂ ಇವರ ಮೇಲೆ ಶಿಸ್ತು ಕ್ರಮವಾಗದಿದ್ದರೆ ಇನ್ನೂ ಅದೇಷ್ಟುಹಸುಗೂಸುಗಳು ಬಲಿಯಾಗಬೇಕು? ಎನ್ನುವುದು ಪ್ರಶ್ನೆಯಾಗಿದೆ.
ಅಕ್ರಮ ಗಾಂಜಾ ದಂಧೆಕೋರರ ದಾಳಿ: ಹಲ್ಲೆಗೀಡಾದ ಸಿಪಿಐ ಇಲ್ಲಾಳ್‌ಗೆ ಶ್ವಾಸನಾಳ ಶಸ್ತ್ರ ಚಿಕಿತ್ಸೆ
ಡಾ. ಬನ್ನಪ್ಪ ಪಾಟೀಲ್ ಅವರ ಕರ್ತವ್ಯ ಲೋಪದ ಕುರಿತು ಕ್ರಮ ಕೈಗೊಳ್ಳುವಂತೆ ಐದು ಬಾರಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಹಸುಗೂಸು ಮೃತ ಪಟ್ಟಿರುವ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಅಂತ ಆಳಂದ ತಾಲೂಕು ಆರೋಗ್ಯಾಧಿಕಾರಿ ಡಾ. ಸುಶೀಲಕುಮಾರ ಅಂಬೂರೆ ಹೇಳಿದ್ದಾರೆ.
ನಾವು ಆಸ್ಪತ್ರೆಗೆ ಬಂದಾಗ ಯಾರೊಬ್ಬರೂ ವೈದ್ಯರು ಇರಲಿಲ್ಲ. ನರ್ಸ್ ಒಬ್ಬರೇ ಹೆರಿಗೆ ಮಾಡಿಕೊಂಡಿದ್ದಾರೆ. ಮೊದಲ ಹೆರಿಗೆ ನಾರ್ಮಲ್ ಡೆಲಿವರಿ ಆಗಿತ್ತು. ಆದರೆ ಎರಡನೇ ಡೆಲಿವರಿಗೆ ಸಮಸ್ಯೆ ಮಾಡಿ ಹಸುಗೂಸನ್ನು ಕೊಂದಿದ್ದಾರೆ. ನನ್ನ ಕೂಸು ಸತ್ತಂತೆ ಇನ್ನೊಬ್ಬರ ಕೂಸು ಸಾಯಬಾರದು. ಹೀಗಾಗಿ ಬೇಜವಾಬ್ದಾರಿ ತೋರಿದವರ ಮೇಲೆ ಕಠಿಣ ಕಾನೂನು ಕ್ರಮ ಆಗಲೇಬೇಕು ಅಂತ ಮೃತ ಹಸುಗೂಸಿನ ತಂದೆ ರಾಜಕುಮಾರ ನಿಂಬಾಳ ತಿಳಿಸಿದ್ದಾರೆ.