ನಿಧಿ ಸಿಕ್ಕವರ ಅದೃಷ್ಟ ಬದಲಾಯಿಸಲಿದೆ ಆ ಒಂದು ಪರೀಕ್ಷೆ! ಯಾರಿಗೆ ಸಿಗತ್ತೆ ಸಂಪತ್ತು? ಕಾನೂನು ಹೇಳೋದೇನು?

Published : Jan 23, 2026, 07:15 PM IST
Law about treasure

ಸಾರಾಂಶ

ಗದಗದ ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಹಿನ್ನೆಲೆಯಲ್ಲಿ, 1878ರ ಭಾರತೀಯ ನಿಧಿ ಕಾಯ್ದೆ ಮತ್ತು 1972ರ ಪ್ರಾಚೀನ ವಸ್ತುಗಳ ಕಾಯ್ದೆಯ ಪ್ರಕಾರ ನಿಧಿಯ ಮಾಲೀಕತ್ವವನ್ನು ಹೇಗೆ ನಿರ್ಧರಿಸಲಾಗುತ್ತದೆ ಮತ್ತು ವಸ್ತುಗಳ ವಯಸ್ಸನ್ನು ಪತ್ತೆಹಚ್ಚುವ ವೈಜ್ಞಾನಿಕ ವಿಧಾನಗಳೇನು ಎಂಬುದನ್ನು ಇದು ಚರ್ಚಿಸುತ್ತದೆ.

ಇದೀಗ ಕರ್ನಾಟಕ ಅಷ್ಟೇ ಅಲ್ಲದೇ ಕರ್ನಾಟಕದ ಹೊರಗೂ ಗದಗದ ಲಕ್ಕುಂಡಿ ಫೇಮಸ್​ ಆಗಿಬಿಟ್ಟಿದೆ (Gadag Lakkundu Treasure). ಅಲ್ಲಿ ಸಿಕ್ಕಿರುವ ನಿಧಿಯ ಬಗ್ಗೆಯೇ ಇದೀಗ ಎಲ್ಲೆಲ್ಲೂ ಮಾತುಕತೆ. ಇದೇ ಕಾರಣಕ್ಕೆ ಲಕ್ಕುಂಡಿ ಎನ್ನುವ ಗ್ರಾಮದ ಮೇಲೆ ಹಲವರ ಕಣ್ಣು ನೆಟ್ಟಿದೆ. ಇಲ್ಲಿ ನಿಧಿ ಸಿಕ್ಕಿರುವ ಕಾರಣ, ಮನೆ ಕಟ್ಟಲಾಗದೇ ನಿಧಿ ಸಿಕ್ಕವರು ಗೋಳಾಡುತ್ತಿರುವುದು ಒಂದೆಡೆಯಾದರೆ, ಉತ್ಖನನ ಮಾಡಿದಷ್ಟೂ ವಿಧವಿಧ ಬಗೆಯ ವಸ್ತುಗಳು ಪತ್ತೆಯಾಗುತ್ತಿರುವುದರಿಂದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಈ ಗ್ರಾಮದ ಘಟನೆ.

ಎಲ್ಲವನ್ನೂ ಸರ್ಕಾರ ತೆಗೆದುಕೊಳ್ಳತ್ತಾ?

ಹಾಗಿದ್ದರೆ, ಹೀಗೆ ಎಲ್ಲಿಯಾದರೂ ಸಿಕ್ಕಿರುವ ನಿಧಿ ಎಲ್ಲವನ್ನೂ ಸರ್ಕಾರವೇ ತೆಗೆದುಕೊಳ್ಳತ್ತಾ? ಅದನ್ನು ಮೊದಲಿಗೆ ಕಂಡುಹಿಡಿದವರಿಗೆ ಪಾಲು ಏನೂ ಸಿಗಲ್ವಾ? ಸರ್ಕಾರ ಇಂಥ ನಿಧಿ ತಗೊಂಡು ಏನು ಮಾಡುತ್ತೆ? ನಮ್ಮ ಕಾನೂನು ಹೇಳೋದು ಏನು ಎಂಬಿತ್ಯಾದಿ ಪ್ರಶ್ನೆಗಳು ಜನರನ್ನು ಕಾಡುತ್ತಲೇ ಇದೆ. ಅದಕ್ಕೆ ಭಾರತದ ಕಾನೂನು ಈ ಬಗ್ಗೆ ಏನು ಹೇಳುತ್ತದೆ ಎನ್ನುವ ಬಗ್ಗೆ ಇಲ್ಲಿ ವಿಶ್ಲೇಷಿಸಲಾಗಿದೆ. ಅಷ್ಟಕ್ಕೂ ನಿಧಿ ಸಿಕ್ಕರೆ, ಅದನ್ನು ಏನು ಮಾಡಬೇಕು ಎನ್ನುವುದನ್ನು ತಿಳಿಸುವುದು ಅತ್ಯಂತ ಪುರಾತನವಾಗಿರುವ ಅಂದರೆ 1878 ರ ಭಾರತೀಯ ನಿಧಿ ಕಾಯ್ದೆ. ಮಣ್ಣಿನಲ್ಲಿ ಅಥವಾ ಅದಕ್ಕೆ ಅಂಟಿಸಲಾದ ಯಾವುದೇ ವಸ್ತುವಿನಲ್ಲಿ ಹತ್ತು ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಯಾವುದೇ ನಿಧಿಯನ್ನು ಮರೆಮಾಡಲಾಗಿದೆ ಎಂದು ಕಂಡುಬಂದರೆ, ಅದನ್ನು ಜಿಲ್ಲಾಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಕಾನೂನು ಹೇಳುತ್ತದೆ.

ಕಾನೂನು ಹೇಳೋದೇನು?

ಪ್ರಾಚೀನ ವಸ್ತುಗಳು ಮತ್ತು ಕಲಾ ನಿಧಿಗಳ ಕಾಯ್ದೆ- 1972 ರ ಅಡಿಯಲ್ಲಿ ವಸ್ತುಗಳು ಪ್ರಾಚೀನ ವಸ್ತುಗಳಾಗಿದ್ದರೆ ಸರ್ಕಾರವು ಅವುಗಳನ್ನು ವಸ್ತು ಸಂಗ್ರಹಾಲಯಗಳಲ್ಲಿ ಸಂರಕ್ಷಣೆಗಾಗಿ ವಶಪಡಿಸಿಕೊಳ್ಳಬಹುದು ಎಂದು ಕಾನೂನು ಹೇಳುತ್ತದೆ. ಪ್ರಾಚೀನ ಎಂದರೆ 100 ವರ್ಷಗಳಷ್ಟು ಹಳೆಯದು ಎನ್ನುತ್ತದೆ ಈ ಕಾನೂನು. ಒಂದು ವೇಳೆ ಇಷ್ಟು ಹಳೆಯದ್ದಾಗಿದ್ದರೆ ಶೇಕಡಾ 20ರಷ್ಟು ಪಾಲು ಅದನ್ನು ಪತ್ತೆ ಹಚ್ಚಿದವರಿಗೆ ನೀಡಬೇಕು. ಇಲ್ಲದಿದ್ದರೆ ಅದು ನಿಧಿಯ ವ್ಯಾಪ್ತಿಗೆ ಬರದಿದ್ದ ಕಾರಣ, ಯಾರ ಜಾಗದಲ್ಲಿ ಸಿಕ್ಕಿದೆಯೇ ಅವರೇ ಅದರ ಮಾಲೀಕರು ಎನ್ನೋದು ಕಾನೂನು.

ವಸ್ತುಗಳ ವಯಸ್ಸು ಪತ್ತೆ ಮಾಡೋದು ಹೇಗೆ?

ಹಾಗಿದ್ದರೆ ಸಿಕ್ಕ ಚಿನ್ನಾಭರಣ, ವಸ್ತುಗಳು 100 ವರ್ಷ ಹಳೆಯದು ಎಂದು ಪತ್ತೆ ಮಾಡೋದು ಹೇಗೆ? ಈ ಒಂದು ಪರೀಕ್ಷೆಯ ಮೇಲೆ, ನಿಧಿ ಯಾರ ಸ್ವತ್ತು ಎನ್ನೋದು ನಿರ್ಧಾರಿತವಾಗುತ್ತದೆ. ಹಾಗಿದ್ದರೆ ಆ ಪರೀಕ್ಷೆ ಹೇಗೆ ಮಾಡುತ್ತಾರೆ ಎನ್ನುವ ಬಗ್ಗೆ ಇಲ್ಲಿದೆ ಡಿಟೇಲ್ಸ್​:

ಭೌತಿಕ ತಪಾಸಣೆ (ತಯಾರಕರ ಗುರುತುಗಳು, ಶೈಲಿ ಮತ್ತು ಉಡುಗೆಗಳನ್ನು ಗುರುತಿಸುವುದು), ಸಂದರ್ಭೋಚಿತ ವಿಶ್ಲೇಷಣೆ (ಆಳ ಮತ್ತು ಮಣ್ಣಿನ ಪದರ) ಮತ್ತು ವೈಜ್ಞಾನಿಕ ಮಾಹಿತಿ (ರೇಡಿಯೊಕಾರ್ಬನ್, ನಿಧಿಯ ಪ್ರಕಾಶಮಾನತೆ) ಇವುಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. 

ಅವುಗಳನ್ನು ಈ ಕೆಳಗೆ ವಿಸ್ತರಿಸಿ ಹೇಳಲಾಗಿದೆ.

  • ಸಿಕ್ಕಿರುವ ವಸ್ತುಗಳು ಲೋಹದ ವಸ್ತುಗಳು, ಪಿಂಗಾಣಿ ವಸ್ತುಗಳು ಅಥವಾ ಆಭರಣ ಇತ್ಯಾದಿ ಆಗಿದ್ದರೆ, ಆಗಿನ ಪೋಸ್ಟ್​ ಮುದ್ರಣ, ಹಾಲ್‌ಮಾರ್ಕ್‌ಗಳು ಅಥವಾ ಕೆತ್ತಿದ ವರ್ಷ ಇರುತ್ತದೆ. ಆ ಪರೀಕ್ಷೆಯ ಮೂಲಕ ತಜ್ಞರು ಅದರ ಆಯಸ್ಸು ಅಳೆಯುತ್ತಾರೆ.
  •   ನಾಣ್ಯಗಳು ಮತ್ತು ಆಭರಣಗಳಾಗಿದ್ದರೆ, ಅವುಗಳ ಉತ್ಪಾದನೆ, ಯಂತ್ರ ನಿರ್ಮಿತ ಗುಣಲಕ್ಷಣಗಳು, ಕೈಯಿಂದ ಮಾಡಿದ ಗುಣಲಕ್ಷಣಗಳ ಆಧಾರದ ಮೇಲೆ ತಜ್ಞರು ಅವುಗಳ ಆಯಸ್ಸನ್ನು ಅಳೆಯುತ್ತಾರೆ.
  • ಕಂಚು, ಬೆಳ್ಳಿ ಅಥವಾ ಚಿನ್ನದ ಮೇಲೆ ನೈಸರ್ಗಿಕ ಆಕ್ಸಿಡೀಕರಣ ಇರುವುದನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿಯೂ ಆಯಸ್ಸು ಕಂಡು ಹಿಡಿಯಲಾಗುತ್ತದೆ.
  • ವಸ್ತುವಿನ ವಿನ್ಯಾಸ, ಆಕಾರ ಮತ್ತು ಕಲಾತ್ಮಕ ಶೈಲಿಯನ್ನು ಹೋಲಿಕೆ ಮಾಡಿ ಅದು ಎಷ್ಟು ವರ್ಷಗಳ ಹಳೆಯದ್ದು ಎಂದು ಗುರುತು ಹಚ್ಚಲು ಸಾಧ್ಯವಾಗಿದೆ.
  • ಇನ್ನು ಆ ವಸ್ತುಗಳು ಎಷ್ಟು ಆಳವಾಗಿ ಸಿಕ್ಕಿವೆ, ಎಷ್ಟು ಹಳೆಯ ಮಣ್ಣಿನ ಪದರಗಳಲ್ಲಿ ಇಳಿದಿವೆ ಎನ್ನುವ ಆಧಾರದ ಮೇಲೆಯೂ, ಪರೀಕ್ಷೆ ಮಾಡಿ ವರ್ಷವನ್ನು ಪತ್ತೆ ಹಚ್ಚಲಾಗುತ್ತದೆ.
  • ಕಂಟೇನರ್ ತಪಾಸಣೆ ಕೂಡ ನಡೆಯುತ್ತದೆ. ಇದರ ಅರ್ಥ, ಸಾಮಾನ್ಯವಾಗಿ, ನಿಧಿಗಳು ಮಡಿಕೆಗಳು ಅಥವಾ ಪೆಟ್ಟಿಗೆಗಳಲ್ಲಿ ಕಂಡುಬಂದರೆ, ಕೈಯಿಂದ ಮಾಡಿದ ತಾಮ್ರ, ಜೇಡಿಮಣ್ಣು ಅಥವಾ ಮರದ ಪಾತ್ರೆಯನ್ನು ಪ್ರಯೋಗಾಲಯಕ್ಕೆ ಒಡ್ಡಲಾಗುತ್ತದೆ. ಇದು ಯಾವ ಶತಮಾನದ್ದು ಎಂದು ತೋರಿಸಲಾಗುತ್ತದೆ
  •  ಇವೆಲ್ಲಕ್ಕಿಂತಲೂ ಮುಖ್ಯವಾಗಿ ಪ್ರಯೋಗಾಲಯದಲ್ಲಿ ಮಾಡುವ ಪರೀಕ್ಷೆಯಿಂದ ಸಿಕ್ಕ ವಸ್ತುಗಳು 100 ವರ್ಷಗಳಷ್ಟು ಹಳೆಯದ್ದು ಹೌದೋ ಅಲ್ಲವೋ ಎನ್ನುವುದನ್ನು ಪತ್ತೆ ಮಾಡಬಹುದಾಗಿದೆ. ಮೇಲೆ ತಿಳಿಸಿದ ಯಾವುದರಿಂದಲೂ ಸಾಧ್ಯವಿಲ್ಲವಾದಾಗ ಅಥವಾ ಏನಾದರೂ ಸಂದೇಹವಿದ್ದಲ್ಲಿ ರೇಡಿಯೊಕಾರ್ಬನ್ (C-14) ಡೇಟಿಂಗ್ ಮೂಲಕ ಅದನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸಾವಯವ ವಸ್ತುಗಳಿಗೆ (ಮರ, ಚರ್ಮ, ಮೂಳೆ ಅಥವಾ ಬಟ್ಟೆ) ಇತ್ಯಾದಿಗಳಿಗೆ ಈ ಪರೀಕ್ಷೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಇಂಗಾಲ-14 ರ ಕೊಳೆಯುವಿಕೆಯನ್ನು ಅಳೆಯುತ್ತದೆ. ಇದು ಒಂದು ಜೀವಿ ಎಷ್ಟು ಸಮಯದ ಹಿಂದೆ ಸತ್ತಿತು ಎಂಬುದನ್ನು ಸೂಚಿಸುತ್ತದೆ
  • ಥರ್ಮೋಲುಮಿನೆಸೆನ್ಸ್ (TL) ಡೇಟಿಂಗ್: ಸೆರಾಮಿಕ್ಸ್, ಕುಂಬಾರಿಕೆ ಅಥವಾ ಸುಟ್ಟ ಜೇಡಿಮಣ್ಣಿನ ಆಯಸ್ಸನ್ನು ಅಳೆಯಲು ಇದನ್ನು ಪ್ರಯೋಗಾಲಯಕ್ಕೆ ಒಡ್ಡಲಾಗುತ್ತದೆ.
  • ವಿದ್ಯುತ್​ ರಾಸಾಯನಿಕ ವಿಶ್ಲೇಷಣೆ: ಲೋಹದ ನಾಣ್ಯಗಳಿಗೆ, ತುಕ್ಕು ಮೇಲ್ಮೈಯ (ಪ್ಯಾಟಿನಾ) ಎಲೆಕ್ಟ್ರೋಕೆಮಿಕಲ್ ಅಧ್ಯಯನಗಳು ನಿಖರವಾದ ದಿನಾಂಕವನ್ನು ಒದಗಿಸಬಹುದು, ವಿಶೇಷವಾಗಿ ಬೆಳ್ಳಿ-ತಾಮ್ರ ಮಿಶ್ರಲೋಹಗಳಿಗೆ ಈ ಪ್ರಯೋಗದ ಮೂಲಕ ನಿರ್ಧರಿಸಬಹುದಾಗಿದೆ. ಈ ಪ್ರಯೋಗಾಲಯದಲ್ಲಿ ಬಂದ ವರದಿಯಿಂದ ಇದು ಸರ್ಕಾರಕ್ಕೆ ಸೇರಬೇಕು, ನಿಧಿ ಸಿಕ್ಕವರಿಗೆ ಸೇರಬೇಕೋ ಎನ್ನುವುದು ನಿರ್ಧಾರಿತವಾಗುತ್ತದೆ.

PREV
Read more Articles on
click me!

Recommended Stories

ಲಕ್ಕುಂಡಿ ಉತ್ಖನನ ಕೆಲಸಕ್ಕೆ ಅಡ್ಡಪಡಿಸಿದ ಕಾರ್ಮಿಕ ಮುಖಂಡ ಅಶ್ವಥ್: ಸ್ಥಳೀಯರ ತರಾಟೆ, ಎತ್ತಾಕೊಂಡೋದ ಪೊಲೀಸರು!
ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಕಾಂಗ್ರೆಸ್ MLA ಕ್ಯಾಂಡಿಡೇಟ್ ರಾಜೀವ್ ಗೌಡಗೆ ಪಕ್ಷದಿಂದಲೇ ಗೇಟ್ ಪಾಸ್!