ಮಂಗಳೂರಿನಲ್ಲಿ 159 ಎಕರೆಯಲ್ಲಿ ಕೋಸ್ಟ್‌ಗಾರ್ಡ್‌ ತರಬೇತಿ ಅಕಾಡೆಮಿ ಸ್ಥಾಪನೆ: ಡಿಪಿಆರ್‌ ಬಾಕಿ

By Kannadaprabha NewsFirst Published Oct 16, 2022, 12:36 PM IST
Highlights

ಮಂಗಳೂರಿನಲ್ಲಿ ದೇಶದಲ್ಲೇ ಮೊದಲ ಕೋಸ್ಟ್‌ಗಾರ್ಡ್‌ ತರಬೇತಿ ಅಕಾಡೆಮಿ ಸ್ಥಾಪನಾ ಕಾರ್ಯ ಚುರುಕು ಪಡೆಯುತ್ತಿದೆ. ಭೂಸ್ವಾಧೀನ ಸೇರಿದಂತೆ ರಾಜ್ಯ ಸರ್ಕಾರದ ಕಡೆಯಿಂದ ಆಗಬೇಕಾದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದೆ.

ಮಂಗಳೂರು (ಅ.16): ಮಂಗಳೂರಿನಲ್ಲಿ ದೇಶದಲ್ಲೇ ಮೊದಲ ಕೋಸ್ಟ್‌ಗಾರ್ಡ್‌ ತರಬೇತಿ ಅಕಾಡೆಮಿ ಸ್ಥಾಪನಾ ಕಾರ್ಯ ಚುರುಕು ಪಡೆಯುತ್ತಿದೆ. ಭೂಸ್ವಾಧೀನ ಸೇರಿದಂತೆ ರಾಜ್ಯ ಸರ್ಕಾರದ ಕಡೆಯಿಂದ ಆಗಬೇಕಾದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದೆ. ಇನ್ನು ವಿಸ್ತೃತ ಯೋಜನಾ ವರದಿ(ಡಿಪಿಆರ್‌) ತಯಾರಿ ಕೆಲಸ ನಡೆಯಬೇಕಿದೆ ಎಂದು ಕೋಸ್ಟ್‌ಗಾರ್ಡ್‌ ಪಶ್ಚಿಮ ವಲಯ ಕಮಾಂಡರ್‌ ಮನೋಜ್‌ ವಿ.ಬಾಡ್ಕರ್‌ ಹೇಳಿದ್ದಾರೆ. ಪಶ್ಚಿಮ ವಲಯ ಕಮಾಂಡರ್‌ ಆಗಿ ಅಧಿಕಾರ ವಹಿಸಿದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದ ಅವರು ಶನಿವಾರ ಪಣಂಬೂರಿನ ಕೋಸ್ಟ್‌ಗಾರ್ಡ್‌ ನೌಕೆ ಐಸಿಜಿಎಸ್‌ ವರಾಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ಅನುಮೋದನೆಗಳು ಪ್ರಗತಿಯಲ್ಲಿವೆ. 159 ಎಕರೆ ಜಾಗದಲ್ಲಿ ತಲೆಯೆತ್ತಲಿರುವ ಅಕಾಡೆಮಿಯಿಂದಾಗಿ ಕೋಸ್ಟ್‌ಗಾರ್ಡ್‌ ಪ್ರತ್ಯೇಕ ತರಬೇತಿ ವಿಧಾನಗಳು ಸಾಧ್ಯವಾಗಲಿವೆ. ಇದುವರೆಗೆ ನೌಕಾಪಡೆ ಅಕಾಡೆಮಿ ಹಾಗೂ ವಿದೇಶಗಳಲ್ಲಿ ಕೆಲವೊಂದು ವಿಶೇಷ ರೀತಿಯ ತರಬೇತಿ ನೀಡಬೇಕಾಗುತ್ತಿತ್ತು ಎಂದರು.ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಎರಡು ಹೋವರ್‌ ಕ್ರಾಪ್ಟರ್‌ಗಳನ್ನು ಗುಜರಾತ್‌ನಲ್ಲಿ ಭಾರತ-ಪಾಕಿಸ್ತಾನದ ಗಡಿಭಾಗದ ಭದ್ರತೆಗಾಗಿ ಕಳುಹಿಸಲಾಗಿದೆ. ಇಲ್ಲಿಗಿಂತಲೂ ಅಲ್ಲಿ ಅದರ ಅವಶ್ಯಕತೆ ಹೆಚ್ಚಿರುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ನಮ್ಮಲ್ಲಿ 18 ಹೋವರ್‌ ಕ್ರಾಪ್ಟರ್‌ಗಳಿದ್ದು, ಮುಂದೆ ಸಂಖ್ಯೆ ಹೆಚ್ಚಳವಾದಾಗ ಮತ್ತೆ ಮಂಗಳೂರಿಗೆ ಬರುವ ಸಾಧ್ಯತೆ ಇದೆ ಎಂದರು.

ಸದ್ಯ ಮಂಗಳೂರಿನ ಹಳೆ ವಿಮಾನ ನಿಲ್ದಾಣದಲ್ಲಿ ಕೋಸ್ಟ್‌ಗಾರ್ಡ್‌ ವಿಮಾನಗಳು ನಿಲ್ಲುತ್ತಿವೆ. ಅಲ್ಲಿ ವಿಮಾನ ನಿಲುಗಡೆ ಮಾಡುವ ಹ್ಯಾಂಗರ್‌ಗಳ ನಿರ್ಮಾಣ ನಡೆಯುತ್ತಿದೆ. ಅದು ಪೂರ್ಣಗೊಂಡಾಗ ನಾಲ್ಕು ಡಾರ್ನಿಯರ್‌ ವಿಮಾನಗಳಿಗೆ ನಿಲ್ಲಲು ಅವಕಾಶ ಇರಲಿದೆ. ಆಗ ಮಂಗಳೂರು ಕೋಸ್ಟ್‌ಗಾರ್ಡ್‌ಗೆ ಪ್ರಮುಖ ವಾಯುನೆಲೆಯಾಗಿ ಹೊರಹೊಮ್ಮಲಿದೆ ಎಂದರು.

Latest Videos

ಹೊಸ ಕಾಪ್ಟರ್‌: ಮೊದಲು ಕೋಸ್ಟ್‌ಗಾರ್ಡ್‌ಗೆ ಸಿಂಗಲ್‌ ಎಂಜಿನ್‌ನ ಚೇತಕ್‌ ಹೆಲಿಕಾಪ್ಟರ್‌ ನೀಡಲಾಗುತ್ತಿತ್ತು. ಆದರೆ ಈಗ ಎಚ್‌ಎಎಲ್‌ ನಿರ್ಮಾಣದ ಅತ್ಯಾಧುನಿಕ ಎಲ್ಸಿಎಚ್‌ ಮಾರ್ಕ್-3 ಹೆಲಿಕಾಪ್ಟರ್‌ ನೀಡಲಾಗುತ್ತಿದೆ. ಇದರಿಂದಾಗಿ ಕೋಸ್ಟ್‌ಗಾರ್ಡ್‌ ಕಡಲಿನಲ್ಲಿ 350 ಕಿ.ಮೀ ದೂರದವರೆಗೂ ತೆರಳಿ ಜೀವರಕ್ಷಣೆಯಂತಹ ಕಾರ್ಯಾಚರಣೆ ನಡೆಸುವುದಕ್ಕೆ ಅನುಕೂಲವಾಗಿದೆ ಎಂದರು. ಮಂಗಳೂರು ಕೋಸ್ಟ್‌ಗಾರ್ಡ್‌ ಕಮಾಂಡರ್‌ ಅರುಣ್‌ ಕುಮಾರ್‌ ಮಿಶ್ರ ಇದ್ದರು.

ಇದೇ ವೇಳೆ ಕಮಾಂಡರ್‌ ಅವರು ಮಂಗಳೂರಿನ ಕೋಸ್ಟ್‌ಗಾರ್ಡ್‌ ಅಧಿಕಾರಿ ಹಾಗೂ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿದರು. ಮಂಗಳೂರು ಹೆಡ್‌ಕ್ವಾರ್ಟರ್ಸ್‌ನ ಕಾರ್ಯವೈಖರಿಯ ಪರಿಶೀಲನೆ ನಡೆಸಿದರು.

ಕಾರ್ಯ ವಿಧಾನದಲ್ಲೂ ಬದಲಾವಣೆ: ನಾನು ಮೂಲತಃ ಕನ್ನಡಿಗ, ಕಾರವಾರದವನು. ಈ ಹಿಂದೆ 2006ರ ಸುಮಾರಿಗೆ ಮಂಗಳೂರಿನ ಕೋಸ್ಟ್‌ಗಾರ್ಡ್‌ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆಗ ಹಾಗೂ ಈಗಿನ ಕರಾವಳಿಯ ಸನ್ನಿವೇಶಗಳಲ್ಲಿ ಬಹಳಷ್ಟುವ್ಯತ್ಯಾಸ ಉಂಟಾಗಿದೆ. ಈಗ ತಂತ್ರಜ್ಞಾನದಲ್ಲಿ ಸುಧಾರಣೆಯಾಗಿದೆ, ನಮ್ಮ ಕಾರ್ಯವಿಧಾನದಲ್ಲೂ ಬಹಳ ಪರಿವರ್ತನೆಯಾಗಿದೆ. ಹೆಚ್ಚು ಮೀನುಗಾರರಿಗೆ ನೆರವು, ಮರ್ಚೆಂಟ್‌ ಹಡಗುಗಳಿಗೆ ನೆರವು ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಮನೋಜ್‌ ವಿ. ಬಾಡ್ಕರ್‌ ಹೇಳಿದರು.

ಸಬ್‌ಮರೀನ್‌ನಿಂದ ಬ್ಯಾಲಿಸ್ಟಿಕ್‌ ಕ್ಷಿಪಣಿ ಉಡಾವಣೆ ಯಶಸ್ವಿ
ನವದೆಹಲಿ: ಸಬ್‌ಮರೀನ್‌ಗಳ ಮೂಲಕ ಹಾರಿಸಿಬಹುದಾದ ಕ್ಷಿಪಣಿ ಪ್ರಯೋಗವನ್ನು ಭಾರತ ಶುಕ್ರವಾರ ಯಶಸ್ವಿಯಾಗಿ ನೆರೆವೇರಿಸಿದೆ. ದೇಶದ ಮೊಟ್ಟಮೊದಲ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಎಂಬ ಹಿರಿಮೆ ಹೊಂದಿರುವ ಐಎನ್‌ಎಸ್‌ ಅರಿಹಂತ್‌, ಶುಕ್ರವಾರ ಜಲಾಂತರ್ಗಾಮಿ ಉಡಾವಣಾ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು (ಎಸ್‌ಎಲ್‌ಬಿಎಂ)ಬಂಗಾಳಕೊಲ್ಲಿಯಲ್ಲಿ ಅತಿ ಹೆಚ್ಚು ನಿಖರತೆಯೊಂದಿಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

NASA ರಾಕೆಟ್‌ ಡಿಕ್ಕಿ ಹೊಡೆಸಿ ಕ್ಷುದ್ರಗ್ರಹದ ದಿಕ್ಕೇ ಬದಲು: ಅಮೆರಿಕ ಅಪೂರ್ವ ಸಾಹಸ

ಈ ಶಸ್ತ್ರಾಸ್ತ್ರ ವ್ಯವಸ್ಥೆಯ ಎಲ್ಲ ಕಾರ್ಯಾಚರಣೆ ಮತ್ತು ತಾಂತ್ರಿಕ ಮಾನದಂಡಗಳು ಯೋಜಿತ ರೀತಿಯಲ್ಲಿ ಅತ್ಯಂತ ನಿಖರವಾಗಿತ್ತು. ಇದು ಭಾರತದ ವ್ಯೂಹಾತ್ಮಕ ದಾಳಿ ಸಾಮರ್ಥ್ಯವನ್ನು ಇನ್ನಷ್ಟುಬಲಪಡಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಈ ಸಬ್‌ಮರೀನ್‌ನಲ್ಲಿ ಅಳವಡಿಸಿರುವ ಕ್ಷಿಪಣಿಗಳು 750 ಕಿ.ಮೀ ದೂರ ಸಾಗುವ ಸಾಮರ್ಥ್ಯ ಹೊಂದಿವೆ.

ಉತ್ತರಕನ್ನಡ: ವಿಕ್ರಮಾದಿತ್ಯದ ಸಾಹಸಗಾಥೆಯ ಮ್ಯೂಸಿಯಂ..!

ಐಎನ್‌ಎಸ್‌ ಅರಿಹಂತ ಭಾರತದ ಪರಮಾಣು ಚಾಲಿತ ಬ್ಯಾಲಿಸ್ಟಿಕ್‌ ಕ್ಷಿಪಣಿ ಜಲಾಂತರ್ಗಾಮಿ ಕಾರ್ಯಕ್ರಮದ (ಎಸ್‌ಎಸ್‌ಬಿಎನ್‌) ಅಡಿಯಲ್ಲಿ ನಿರ್ಮಿಸಲಾದ ಮೊದಲ ನೌಕೆಯಾಗಿದ್ದು, ಇದರ ಬಳಿಕ ಐಎನ್‌ಎಸ್‌ ಅರಿಘಾತ್‌ ನಿರ್ಮಿಸಲಾಗುತ್ತಿದೆ.

click me!