
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಅ.16): ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಹೊಸದಾಗಿ ಇನ್ನೂ 500ಕ್ಕೂ ಅಧಿಕ ರೋಡ್ ಹಂಪ್‌ಗಳು ಬರಲಿವೆ. ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಜನದಟ್ಟಣೆಯ ಜತೆಗೆ ವಾಹನ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ನಗರದ ರಸ್ತೆಗಳ ಸಾಮರ್ಥ್ಯಕ್ಕಿಂತ ನಾಲ್ಕು ಪಟ್ಟು ಅಧಿಕ ವಾಹನಗಳ ರಸ್ತೆಗಳಿಯುತ್ತಿವೆ. ಹೀಗಾಗಿ, ರಸ್ತೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ.
ರಸ್ತೆ ಅಪಘಾತ, ವಾಹನಗಳ ವೇಗ ನಿಯಂತ್ರಿಸುವುದರೊಂದಿಗೆ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಗರ ಸಂಚಾರ ಪೊಲೀಸರು, ಅಪಘಾತ ಸಂಭವಿಸುವ 524 ಕಡೆ ರೋಡ್ ಹಂಪ್ ಅಳವಡಿಕೆಗೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದೆ. ನಗರದ ಒಟ್ಟು 39 ಸಂಚಾರಿ ಪೊಲೀಸ್ ಠಾಣೆಗಳಿಂದ ಪ್ರತ್ಯೇಕವಾಗಿ ಈ ಪ್ರಸ್ತಾವನೆಗಳು ಸಲ್ಲಿಕೆ ಆಗಿವೆ. ಅದರಲ್ಲೂ ಅತಿ ಹೆಚ್ಚು ವಾಹನ ಸಂಚಾರ ದಟ್ಟಣೆ ಇರುವ ವೈಟ್‌ಫೀಲ್ಡ್, ಕೆಂಗೇರಿ, ಜಯನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 40ಕ್ಕಿಂತ ಹೆಚ್ಚಿನ ಹಂಪ್‌ಗಳನ್ನು ನಿರ್ಮಿಸುವುದಕ್ಕೆ ಮನವಿ ಮಾಡಲಾಗಿದೆ.
ಹಾಸನ: ಬಾಣಾವರ ಬಳಿ ಭೀಕರ ಅಪಘಾತ: 2 ಕಂದಮ್ಮ ಸೇರಿ ಸ್ಥಳದಲ್ಲೇ 9 ಜನರ ದುರ್ಮರಣ
ಬಿಬಿಎಂಪಿಯಿಂದ ರೋಡ್ ಹಂಪ್
ನಗರ ಸಂಚಾರಿ ಪೊಲೀಸರು ಸಲ್ಲಿಸಿದ ಪ್ರಸ್ತಾವನೆಗಳಿಗೆ ಅನುಗುಣವಾಗಿ ಬಿಬಿಎಂಪಿ ಟ್ರಾಫಿಕ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಾಗೂ ಸಂಚಾರಿ ಪೊಲೀಸರು ಜಂಟಿ ಪರಿಶೀಲನೆ ನಡೆಸಿ ಈ ಹಂಪ್‌ಗಳನ್ನು ನಿರ್ಮಿಣಕ್ಕೆ ಅನುಮೋದನೆ ನೀಡಲಿದ್ದಾರೆ. ಅನುಮೋದನೆ ದೊರೆತ ಕಡೆ ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ಹಾಗೂ ಯೋಜನಾ ವಿಭಾಗದ ಅಧಿಕಾರಿಗಳು ಯೋಜನೆ ರೂಪಿಸಿ ವೈಜ್ಞಾನಿಕವಾಗಿ ರಸ್ತೆ ಹಂಪನ್ನು ನಿರ್ಮಿಸಲಿದ್ದಾರೆ.
ಹಂಪ್ ಪ್ರಸ್ತಾವನೆ ವಿವರ
ವೈಟ್‌ಫೀಲ್ಡ್ ಸಂಚಾರಿ ಪೊಲೀಸರು 48 ಕಡೆ ಹಂಪ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಜಯನಗರ 47, ಕೆಂಗೇರಿ 44, ಹುಳಿಮಾವು 33, ಆರ್.ಟಿ.ನಗರ 32, ಬಾನಸವಾಡಿ 23, ಬಸವಗುಡಿ 22, ಮಹದೇವಪುರ ಹಾÜಗೂ ಜೆಪಿ.ನಗರ ತಲಾ 19, ಹಲಸೂರು ಗೇಟ್, ಜಾಲಹಳ್ಳಿ ತಲಾ 17, ರಾಜಾಜಿನಗರ 16, ಮಲ್ಲೇಶ್ವರ 14, ವಿವಿಪುರ 12, ದೇವನಹಳ್ಳಿ 11, ಯಶವಂತಪುರ 10, ವಾರ್ಡ್ ರಸ್ತೆಗಳಲ್ಲಿ 9, ಚಿಕ್ಕಪೇಟೆ 8, ಯಲಹಂಕ ಪೊಲೀಸರು ಹಾಗೂ ಬಿಬಿಎಂಪಿ ಎಂಜಿನಿಯರ್ ಶಿಫಾರಸು 6, ಹಲಸೂರು, ಮೈಕೋ ಲೇಔಟ್, ಪುಲಕೇಶಿನಗರ, ವಿಜಯ ನಗರ ಹಾÜಗೂ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ತಲಾ 4, ಪಶ್ಚಿಮ ಸಂಚಾರಿ ಪೊಲೀಸರು 3, ಚಿಕ್ಕಜಾಲ, ಎಚ್‌ಎಎಲ್, ಹೆಬ್ಬಾಳ, ಉಪ್ಪಾರು ಪೇಟೆ ಹಾಗೂ ವಿಲ್ಸನ್ ಗಾರ್ಡ್‌ನ್ ತಲಾ 2, ಶಿವಾಜಿ ನಗರ, ಪೀಣ್ಯ, ಹೈಗ್ರೌಂಡ್‌್ಸ, ಕೆಆರ್‌ಪುರ ಹಾಗೂ ಹೂಡಿ ಪೊಲೀಸರು ತಲಾ 1 ರಸ್ತೆ ಹಂಪ್ ನಿರ್ಮಾಣಕ್ಕೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಅವೈಜ್ಞಾನಿಕ ಹಂಪ್ ತೆರವು
ನಗರದಲ್ಲಿ ಕೆಲವು ಕಡೆ ಸಾರ್ವಜನಿಕರು ವಾಹನಗಳ ವೇಗ ನಿಯಂತ್ರಣಕ್ಕೆ ಅವೈಜ್ಞಾನಿಕ ರಸ್ತೆ ಹಂಪ್ ನಿರ್ಮಿಸುತ್ತಾರೆ. ಇದರಿಂದ ಅಪಘಾತ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ದೂರುಗಳು ಕೇಳಿ ಬಂದಾಗ ಪಾಲಿಕೆ ಪರಿಶೀಲನೆ ನಡೆಸಿ ಅವೈಜ್ಞಾನಿಕ ಹಂಪ್ ತೆರವುಗೊಳಿಸಲಿದ್ದಾರೆ ಎಂದು ಬಿಬಿಎಂಪಿಯ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
BMTC ಬಸ್‌ಗೆ ವಿದ್ಯಾರ್ಥಿನಿ ಸಾವು; ಜ್ಞಾನಭಾರತಿಯಲ್ಲಿ ವಾಹನ ವೇಗಕ್ಕೆ ಬ್ರೇಕ್
ಹಂಪ್‌ಗಳಿಂದಲೇ 3 ವರ್ಷದಲ್ಲಿ 30 ಸಾವು
ಅಪಘಾತ ತಪ್ಪಿಸುವ ಉದ್ದೇಶದಿಂದ ರಸ್ತೆ ಹಂಪ್ ನಿರ್ಮಿಸಲಾಗುತ್ತಿದೆ. ಆದರೆ, ಇದೇ ರೋಡ್ ಹಂಪ್‌ನಿಂದ ಕಳೆದ ಮೂರು ವರ್ಷದಲ್ಲಿ ಬರೋಬ್ಬರಿ 30 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ 2021 ಹಾಗೂ 2019ರಲ್ಲಿ ತಲಾ 6 ಮಂದಿ, 2020ರಲ್ಲಿ 18 ಮಂದಿ ರಸ್ತೆ ಉಬ್ಬುನಿಂದ ಸಾವನ್ನಪ್ಪಿದ್ದಾರೆ ಎಂದು ಸಂಚಾರಿ ಪೊಲೀಸ್ ಇಲಾಖೆಯೇ ಮಾಹಿತಿ ನೀಡಿದೆ.
ರಸ್ತೆ ಅಪಘಾತ ಹಾಗೂ ವಾಹನಗಳ ವೇಗ ನಿಯಂತ್ರಣಕ್ಕೆ ನಗರದ ವಿವಿಧ ಸಂಚಾರಿ ಪೊಲೀಸ್ ಠಾಣೆಯಿಂದ ಸೆ.15ರ ವರೆಗೆ ಒಟ್ಟು 524 ರಸ್ತೆ ಹಂಪ್ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದ್ದು, ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಅಂತ ಟಿಇಸಿ ಕಾರ್ಯಪಾಲಕ ಎಂಜಿನಿಯರ್ ಜಯಸಿಂಹ ತಿಳಿಸಿದ್ದಾರೆ.
ಕಳೆದ 3 ವರ್ಷದ ರಸ್ತೆ ಅಪಘಾತ ವಿವರ: ವರ್ಷ ಅಪಘಾತ ಸಂಖ್ಯೆ ಸಾವು
2019 810 832
2020 632 657
2021 618 651