ಶಿಷ್ಟಾಚಾರದಂತೆ ಸ್ವಾತಂತ್ರ್ಯ ದಿನಾಚರಣೆಗೆ ಆಗಲಿ : ಶಾಸಕ ಡಿ. ರವಿಶಂಕರ್‌

By Kannadaprabha NewsFirst Published Aug 12, 2023, 7:47 AM IST
Highlights

ಆ.15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಅಗತ್ಯವಿರುವ ಎಲ್ಲ ಸೂಕ್ತ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಶಾಸಕ ಡಿ. ರವಿಶಂಕರ್‌ ಹೇಳಿದರು.

  ಕೆ.ಆರ್‌. ನಗರ :  ಆ.15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಅಗತ್ಯವಿರುವ ಎಲ್ಲ ಸೂಕ್ತ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಶಾಸಕ ಡಿ. ರವಿಶಂಕರ್‌ ಹೇಳಿದರು.

ಪಟ್ಟಣದ ತಾಪಂ ಕೃಷ್ಣ ರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಮಟ್ಟದ ಅಧಿಕಾರಿಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.

ಶಿಷ್ಟಾಚಾರದಂತೆ ನಿಗದಿತ ಅವಧಿಯಲ್ಲಿಯೇ ನೆರವೇರಿಸಬೇಕು ಎಂದು ಆದೇಶ ನೀಡಿದ ಅವರು, ಬೆಳಗ್ಗೆ 7ಕ್ಕೆ ಪಟ್ಟಣದ ಕೃಷ್ಣರಾಜೇಂದ್ರ ಪದವಿ ಪೂರ್ವ ಕಾಲೇಜು ಆವರಣದಿಂದ ಮೆರವಣಿಗೆ ಹೊರಡಲಿದ್ದು, ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳು ಆ ಸಮಯದಲ್ಲಿ ಹಾಜರಿರುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕೆಂದು ಸೂಚಿಸಿದರು.

ಮೆರವಣಿಗೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ನೀಡಿದ ನಂತರ ಸ್ತಬ್ಧ ಚಿತ್ರಗಳೊಂದಿಗೆ ಕಾಲೇಜು ಆವರಣದಿಂದ ಹೊರಡಲಿರುವ ಮೆರವಣಿಗೆ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆಯ ಮೂಲಕ ಸಾಗಿ ಆನಂತರ ಹಾಸನ ಮೈಸೂರು ರಸ್ತೆಯಲ್ಲಿ ತೆರಳಿ ಪುರಸಭಾ ವೃತ್ತದ ಮೂಲಕ ಸಿ.ಎಂ. ರಸ್ತೆಯಲ್ಲಿ ನಡೆದು, ಆಂಜನೇಯ ಬಡಾವಣೆಯನ್ನು ಸುತ್ತಿ ಆನಂತರ ಬಜಾರ್‌ ರಸ್ತೆಯಲ್ಲಿ ಸಾಗಿ ಬಂದು ಕಾರ್ಯಕ್ರಮ ನಡೆಯುವ ಪುರಸಭಾ ಬಯಲು ರಂಗಮಂದಿರದ ಆವರಣ ತಲುಪಲಿದೆ ಎಂದು ಮಾಹಿತಿ ನೀಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ದಿನವನ್ನು ನಾವು ಮನೆ ಮನೆ ಹಬ್ಬದಂತೆ ಆಚರಿಸಬೇಕು ಎಂದು ಸಲಹೆ ನೀಡಿದ ಅವರು, ಸ್ವಾತಂತ್ರ್ಯ ಬಂದಿರುವುದರಿಂದ ನಾವೆಲ್ಲರೂ ಸಂತಸ ಮತ್ತು ಸಮಾಧಾನದಿಂದ ಬದುಕಲು ಸಾಧ್ಯವಾಗಿದ್ದು, ಇದಕ್ಕೆ ಕಾರಣರಾದರವನ್ನು ನೆನೆದು ಅವರೆಲ್ಲರಿಗೂ ಗೌರವ ಸಲ್ಲಿಸಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.

ಪುರಸಭೆಯಿಂದ ಇಲ್ಲಿನ ಕೃಷ್ಣರಾಜೇಂದ್ರ ವೃತ್ತ ಮತ್ತು ಹೆರಿಗೆ ಆಸ್ಪತ್ರೆಯ ವೃತ್ತಕ್ಕೆ ದೀಪಾಲಂಕಾರ ಮಾಡುವುದರ ಜೊತೆಗೆ ಎಲ್ಲ ಸರ್ಕಾರಿ ಕಟ್ಟಡಗಳಿಗೂ ಕಡ್ಡಾಯವಾಗಿ ದೀಪಾಲಂಕಾರ ಮಾಡಬೇಕೆಂದು ಆದೇಶ ನೀಡಿದರು. ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಕಡ್ಡಾಯವಾಗಿ ಹಾಜರಿರಬೇಕೆಂದು ಕಟ್ಟಪ್ಪಣೆ ಮಾಡಿದರು.

ಬೆಳಗ್ಗೆ 8.20ಕ್ಕೆ ನಾನು ಎಲ್ಲ ಅಧಿಕಾರಿಗಳ ಹಾಜರಾತಿ ಪರಿಶೀಲನೆ ಮಾಡಲಿದ್ದು, ಕಾರ್ಯಕ್ರಮಕ್ಕೆ ಗೈರಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರಲ್ಲದೆ, ಇಂದಿನ ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ತಹಸೀಲ್ದಾರ್‌ ಪೂರ್ಣಿಮಾ ಅವರಿಗೆ ಸೂಚಿಸಿದರು.

ತಾಪಂ ಇಒ ಎಚ್‌.ಕೆ. ಸತೀಶ್‌, ಮೈಸೂರು ನಗರಪಾಲಿಕೆ ಮಾಜಿ ಸದಸ್ಯ ಬಿ.ಎಂ.ನಟರಾಜು, ತಾಲೂಕು ಕುರುಬರ ಸಂಘದ ಖಜಾಂಚಿ ಬ.ಮ. ಗಿರೀಶ್‌, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

click me!