ಶ್ರಮಿಕರಿಗೆ ಪ್ರತ್ಯೇಕ ಪೇಟೆ ನಿರ್ಮಿಸಿದ್ದ ಕೆಂಪೇಗೌಡ

By Kannadaprabha News  |  First Published Aug 12, 2023, 7:43 AM IST

ಸಂವಿಧಾನದಲ್ಲಿ ಸರ್ವ ಜನಾಂಗಕ್ಕೂ ಬದುಕುವ ಹಕ್ಕು ಕಲ್ಪಿಸುವ ಮೊದಲೇ ಕೆಂಪೇಗೌಡರು ಬೆಂಗಳೂರಿನಲ್ಲಿ ಎಲ್ಲಾ ಶ್ರಮಿಕ ಸಮುದಾಯಗಳಿಗೆ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿ, ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಟ್ಟಿರುವುದು ಮಹತ್ವದ ಹೆಜ್ಜೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟಿದ್ದಾರೆ.


 ತುಮಕೂರು :  ಸಂವಿಧಾನದಲ್ಲಿ ಸರ್ವ ಜನಾಂಗಕ್ಕೂ ಬದುಕುವ ಹಕ್ಕು ಕಲ್ಪಿಸುವ ಮೊದಲೇ ಕೆಂಪೇಗೌಡರು ಬೆಂಗಳೂರಿನಲ್ಲಿ ಎಲ್ಲಾ ಶ್ರಮಿಕ ಸಮುದಾಯಗಳಿಗೆ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿ, ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಟ್ಟಿರುವುದು ಮಹತ್ವದ ಹೆಜ್ಜೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟಿದ್ದಾರೆ.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಡಪ್ರಭು ರ 514ನೇ ಜಯಂತ್ಯುತ್ಸವ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತಿ, ಕೆಂಪೇಗೌಡ ಪ್ರಶಸ್ತಿ ಪ್ರದಾನ, ಪ್ರಗತಿಪರರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Latest Videos

undefined

ಶ್ರಮಿಕ ವರ್ಗವನ್ನು ಅಭಿವೃದ್ಧಿಯ ಭಾಗವನ್ನಾಗಿಸುವ ಕೆಂಪೇಗೌಡರ ದೂರದೃಷ್ಟಿಯನ್ನು ನಾವೆಲ್ಲರೂ ಅನುಸರಿಸುವಂತಹದ್ದು. ಇಂದಿನ ಆಧುನಿಕ ಜಗತ್ತಿಗೆ ಅನುಗುಣವಾಗಿ 514 ವರ್ಷಗಳ ಹಿಂದೆಯೇ ಒಂದು ಪಟ್ಟಣವನ್ನು ವಿನ್ಯಾಸಗೊಳಿಸಿದ ವ್ಯಕ್ತಿಯನ್ನು ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ. ವೃತ್ತಿಗೆ ಅನುಗುಣವಾಗಿ ಪೇಟೆಗಳ ನಿರ್ಮಾಣ ಮಾಡಿ, ಎಲ್ಲ ಶ್ರಮಿಕ ವರ್ಗಗಳು ಸಂತೋಷದಿಂದ ಬದುಕುವಂತಹ ವಾತಾವರಣ ಅಂದೇ ನಿರ್ಮಾಣವಾಗಿತ್ತು ಎಂದರೆ, ಇದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ. ಹಾಗಾಗಿ ಕೆಂಪೇಗೌಡರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿ, ಟೀಕಿಸುವುದು ಸಲ್ಲದು, ಎಲ್ಲರು ಅವರ ಆದರ್ಶ ಗಳನ್ನು ಗೌರವಿಸುವಂತಾಗಬೇಕು ಎಂದು ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ತಿಪಟೂರಿನ ಗಂಗನಘಟ್ಟದ ಡಾ.ವಿವೇಚನಗೌಡ ದಂಪತಿಗಳಿಗೆ 2023ನೇ ಸಾಲಿನ ಜಿಲ್ಲಾ ಮಟ್ಟದ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದ ಸಹಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ, ತಾವು ಕಟ್ಟಿದ ಪೇಟೆಯಲ್ಲಿ ಎಲ್ಲಾ ವರ್ಗದ ಜನರಿಗೆ ಆಶ್ರಯ ಕಲ್ಪಿಸಿದ ಕೆಂಪೇಗೌಡರ ಆಶಯದ ಹಿಂದೆ ಮಾನವತಾವಾದವಿದೆ. ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಅವಕಾಶ ಕಲ್ಪಿಸಿದ ಕುರುಹುಗಳಿವೆ. ಶೋಷಿತ ಸಮುದಾಯಗಳು ಸಾವಲಂಬಿ ಬದುಕು ಕಟ್ಟಿಕೊಳ್ಳಲು ಅವರು ಅವಕಾಶ ಕಲ್ಪಿಸಿದ್ದರು. ಓರ್ವ ರಾಜಕಾರಣಿಗೆ ರಾಜಕೀಯ ಮುಖ್ಯವಾದರೆ, ಓರ್ವ ದಾರ್ಶನಿಕನಿಗೆ ಇಡೀ ಸಮುದಾಯ ಮುಖ್ಯವಾಗುತ್ತದೆ ಎಂಬುದಕ್ಕೆ ಕೆಂಪೇಗೌಡರ ಆಡಳಿತವೇ ಸಾಕ್ಷಿ ಎಂದರು.

ಯಾವುದೇ ಒಂದು ಸಮುದಾಯ ರಾಜಕೀಯ ಅಧಿಕಾರ ಪಡೆಯಬೇಕೆಂದರೆ ಒಗ್ಗಟ್ಟು ಮುಖ್ಯ. ಬಹಳ ವರ್ಷಗಳ ನಂತರ ಒಕ್ಕಲಿಗ ಸಮಾಜ ಇಂತಹ ಒಂದು ಕಾರ್ಯಕ್ರಮ ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಹೀಗೆಯೇ ಮುಂದುವರೆಯಲಿ ಎಂಬ ಆಶಯ ವ್ಯಕ್ತಪಡಿಸಿದ ಸಹಕಾರ ಸಚಿವರು, ಕೆಂಪೇಗೌಡರ ಆಶಯಗಳನ್ನು ಯುವಜನರು ತಿಳಿದು ಮುನ್ನೆಡೆಯುವಂತಹ ವಾತಾವರಣ ಸೃಷ್ಟಿಯಾಗಬೇಕೆಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಾಥನಂದ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಒಕ್ಕಲಿಗ ಸಮುದಾಯವೆಂದರೆ ಎಲ್ಲಾ ಸಮುದಾಯವನ್ನು ತನ್ನೊಟ್ಟಿಗೆ ತೆಗೆದುಕೊಂಡು ಹೋಗುವ ವಿಶ್ವಮಾನವ ಪರಿಕಲ್ಪನೆ ಹೊಂದಿರುವ ಸಮುದಾಯ. ಇದೇ ಪರಿಕಲ್ಪನೆಯಲ್ಲಿ ಕೆಂಪೇಗೌಡರು ಎಲ್ಲ ಸಮುದಾಯಗಳಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬೆಳೆಯಲು ಅವಕಾಶ ಕಲ್ಪಿಸಿದ್ದರು. ಕೌಶಲವನ್ನು ಆಧರಿಸಿ ಸುಮಾರು 64 ಪೇಟೆಗಳನ್ನು ನಿರ್ಮಿಸಿ, ಅವರ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದ್ದರು. ಅವರ ಆಶಯದಂತೆ ನಾವೆಲ್ಲರೂ ನಡೆಯಬೇಕಾಗಿದೆ ಎಂದರು.

ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ ಮಾತನಾಡಿ, ಬಹುಸಂಖ್ಯಾತರಿರುವ ಒಕ್ಕಲಿಗ ಸಮುದಾಯ ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಸಾಕಷ್ಟುಕೊಡುಗೆಯನ್ನು ನೀಡಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಒಕ್ಕಲಿಗರ ಭವನಗಳಿವೆ. ಆದರೆ ಬೆಂಗಳೂರಿಗೆ ಹತ್ತಿರದಲ್ಲಿರುವ ತುಮಕೂರಿನಲ್ಲಿ ಸಮುದಾಯ ಭವನವಿಲ್ಲ. ಹಾಗಾಗಿ ಜಿಲ್ಲಾಡಳಿತ ಎರಡು ಎಕರೆ ಭೂಮಿ ನೀಡಿದರೆ ಸುಸಜ್ಜಿತ ಭವನ ನಿರ್ಮಾಣಕ್ಕೆ ಸಹಾಯ ಮಾಡಿದಂತಾಗುತ್ತದೆ. ಇದರ ಜೊತೆಗೆ ನಗರ ಟೌನ್‌ಹಾಲ್‌ ಮುಂಭಾಗದಲ್ಲಿ ಬಾಲ ಗಂಗಾಧರನಾಥಸ್ವಾಮೀಜಿಯವರ ಪುತ್ಥಳಿ ಹಾಗೂ ಜಿಲ್ಲಾಡಳಿತದ ಮಿನಿ ವಿಧಾನಸೌಧದ ಮುಂಭಾಗ ಕೆಂಪೇಗೌಡರ ಪುತ್ಥಳಿ ಅನಾವರಣ ಮಾಡಬೇಕೆಂಬ ಮನವಿಯನ್ನು ಗೃಹ ಸಚಿವರು ಹಾಗೂ ಸಹಕಾರ ಸಚಿವರಿಗೆ ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ 10 ಜನ ಪ್ರಗತಿಪರ ರೈತರಿಗೆ ಹಾಗೂ ನೂರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೆರವೇರಿಸಲಾಯಿತು. ಆದಿಚುಂಚನಗಿರಿ ತುಮಕೂರು ಶಾಖಾ ಮಠದ ಮಂಗಳನಾಥಸ್ವಾಮೀಜಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಶಾಸಕರಾದ ಎಸ್‌.ಆರ್‌.ಶ್ರೀನಿವಾಸ್‌, ಬಿ.ಸುರೇಶಗೌಡ, ಡಾ.ಕೆ.ರಂಗನಾಥ್‌, ಜಿ.ಬಿ. ಜ್ಯೋತಿಗಣೇಶ್‌, ಚಿದಾನಂದಗೌಡ, ಮಾಜಿ ಸಂಸದ ಮುದ್ದಹನುಮೇಗೌಡ, ಮೇಯರ್‌ ಪ್ರಭಾವತಿ ಸುಧೀಶ್ವರ್‌, ಮಾಜಿ ಶಾಸಕ ಎಚ್‌.ನಿಂಗಪ್ಪ, ಮುರಳೀಧರ ಹಾಲಪ್ಪ, ಪಾಲಿಕೆ ಸದಸ್ಯ ಜೆ.ಕುಮಾರ್‌, ಧರಣೇಂದ್ರಕುಮಾರ್‌, ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತ ರಾಯಪ್ಪ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜು, ಗಿರೀಶ್‌, ಕೃಷ್ಣೇಗೌಡ, ಕೆ.ಮುನು, ಶ್ರೀನಿವಾಸಮೂರ್ತಿ, ಉದಯ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಒಕ್ಕಲಿಗರ ಸಂಘಕ್ಕೆ 2 ಎಕರೆ ಭೂಮಿ: ಪರಂ

ಇಡೀ ಪ್ರಪಂಚದಲ್ಲಿಯೇ ಅತಿ ಹೆಚ್ಚು ತಾಂತ್ರಿಕ ಮಾನವ ಸಂಪನ್ಮೂಲವನ್ನು ಉತ್ಪಾದಿಸುವುದರಲ್ಲಿ ಭಾರತ, ಅದರಲ್ಲಿಯೂ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಹಾಗಾಗಿ ವಿಶ್ವದ ಯಾವುದೇ ಭಾಗಕ್ಕೆ ಹೋದರೂ ಭಾರತೀಯರು, ಅದರಲ್ಲಿಯೂ ಕನ್ನಡಿಗರನ್ನು ಕಾಣಲು ಸಾಧ್ಯವಾಗುತ್ತದೆ. ಇದಕ್ಕೆ ಕೆಂಪೇಗೌಡರ ಕೊಡುಗೆ ಅಪಾರ. ಒಕ್ಕಲಿಗರ ಸಂಘದ ಕೋರಿಕೆಯಂತೆ ಸಮುದಾಯ ಭವನ ನಿರ್ಮಾಣಕ್ಕೆ 2 ಎಕರೆ ಭೂಮಿ ದೊರಕಿಸಿಕೊಡಲು ಜಿಲ್ಲಾಡಳಿತಕ್ಕೆ ಇಂದೇ ಸೂಚನೆ ನೀಡುತ್ತೇನೆ. ಆ ಸಮುದಾಯ ಭವನದಲ್ಲಿ ಎಲ್ಲಾ ವರ್ಗಗಳ ಶುಭ ಸಮಾರಂಭಕ್ಕೂ ತಾವುಗಳು ಅವಕಾಶ ಮಾಡಿಕೊಡಬೇಕು. ಇದೇ ಕೆಂಪೇಗೌಡರ ನಿಜವಾದ ಆಶಯ ಎಂದು ಸಚಿವ ಡಾ.ಜಿ.ಪರಮೇಶ್ವರ್‌ ನುಡಿದರು.

click me!