ಹಸುಗೂಸುಗಳಿಗೂ ಮಹಾಮಾರಿ ಕೊರೋನಾ ಕಾಟ: ಪೋಷಕರಲ್ಲಿ ಹೆಚ್ಚಿದ ಆತಂಕ

Kannadaprabha News   | Asianet News
Published : Jun 24, 2020, 09:01 AM IST
ಹಸುಗೂಸುಗಳಿಗೂ ಮಹಾಮಾರಿ ಕೊರೋನಾ ಕಾಟ: ಪೋಷಕರಲ್ಲಿ ಹೆಚ್ಚಿದ ಆತಂಕ

ಸಾರಾಂಶ

2 ದಿನ​ಗಳ ಹಿಂದೆ 4 ತಿಂಗಳ ಮಗು, ಸೋಮ​ವಾರ 1 ತಿಂಗಳ ಮಗು​ವಿಗೆ ಸೋಂಕು| ತಂದೆ-ತಾಯಿ​ಗ​ಳಲ್ಲಿ ಕಾಣಿ​ಸಿ​ಕೊ​ಳ್ಳದೆ ಮಕ್ಕಳ ಬಾಧಿ​ಸು​ತ್ತಿದೆ ಕೊರೋ​ನಾ| 1 ರಿಂದ 5 ವರ್ಷದೊಳಗಿನ ಸುಮಾರು 20ಕ್ಕೂ ಹೆಚ್ಚು ಮಕ್ಕಳಿಗೆ ಈ ವರೆಗೆ ಕೊರೋನಾ| 4 ತಿಂಗಳ ಹಸುಗೂಸು ಸೇರಿದಂತೆ 5 ವರ್ಷದ ಮಕ್ಕಳಲ್ಲಿ ಕಾಣಿಸಿಕೊಂಡಿರುವ ಬಹುತೇಕ ಪ್ರಕರಣಗಳಲ್ಲಿ ತಂದೆ-ತಾಯಿಗಳಿಗೆ ವೈರಸ್‌ ಇಲ್ಲ|

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಜೂ.24): ಕೊರೋನಾ ವೈರಸ್‌ ಇದೀಗ ಹುಟ್ಟಿದ ಕೂಸುಗಳನ್ನೂ ಕಾಡಲಾರಂಭಿಸಿದೆ! ತಂದೆ-ತಾಯಿಗೆ ಕಾಣಿಸಿಕೊಳ್ಳದ ವೈರಸ್‌ ಪುಟ್ಟ ಕಂದಮ್ಮಗಳಲ್ಲಿ ದೃಢಪಡುತ್ತಿರುವುದು ಪೋಷಕರು ಸೇರಿದಂತೆ ಸಾರ್ವಜನಿಕರಲ್ಲೂ ಆತಂಕವನ್ನು ಸೃಷ್ಟಿಸಿದೆ.

ಜಿಲ್ಲೆಯಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಕಳೆದ ಎರಡು ದಿನಗಳ ಹಿಂದೆ 4 ತಿಂಗಳ ಮಗುವಿಗೆ ಕರೋನಾ ವೈರಸ್‌ ಇರುವುದು ಖಚಿತವಾಗಿತ್ತು. ಸೋಮವಾರ ದೃಢಗೊಂಡ ಹೊಸ ಪ್ರಕರಣಗಳಲ್ಲಿ ಬಳ್ಳಾರಿಯ 1 ತಿಂಗಳ ಹಸುಗೂಸಿಗೆ ಕೊರೋನಾ ವೈರಸ್‌ ಸೋಂಕು ತಗುಲಿದೆ. ಇನ್ನು 1 ರಿಂದ 5 ವರ್ಷದೊಳಗಿನ ಸುಮಾರು 20ಕ್ಕೂ ಹೆಚ್ಚು ಮಕ್ಕಳಿಗೆ ಈ ವರೆಗೆ ಕೊರೋನಾ ಬಾಧಿಸಿದೆ. ಗಮನಾರ್ಹ ಸಂಗತಿ ಎಂದರೆ 4 ತಿಂಗಳ ಹಸುಗೂಸು ಸೇರಿದಂತೆ 5 ವರ್ಷದ ಮಕ್ಕಳಲ್ಲಿ ಕಾಣಿಸಿಕೊಂಡಿರುವ ಬಹುತೇಕ ಪ್ರಕರಣಗಳಲ್ಲಿ ತಂದೆ-ತಾಯಿಗಳಿಗೆ ವೈರಸ್‌ ಇಲ್ಲ. ಆದರೆ, ಮಕ್ಕಳಲ್ಲಿ ಮಾತ್ರ ರೋಗ ಪತ್ತೆಯಾಗಿರುವುದು ಪಾಲಕರಲ್ಲಿ ಭೀತಿಯನ್ನುಂಟು ಮಾಡಿದೆ.

ಹರಪನಹಳ್ಳಿ: ವರದಿಗೂ ಮುನ್ನವೇ ಗ್ರಾಮಕ್ಕೆ ಬಂದ ಕೊರೋನಾ ಸೋಂಕಿತ..!

48 ದಿನಗಳು ಕಳೆದ ಬಾಲಕ

ಸಿರುಗುಪ್ಪ ತಾಲೂಕಿನ ಹೊಸಹಳ್ಳಿ ಗ್ರಾಮದ ಬಾಲಕ 48 ದಿನಗಳ ಕಾಲ ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ಕಳೆದಿದ್ದ. ನಿರಂತರವಾಗಿ ಈ ಬಾಲಕನಿಗೆ ನಡೆಸಿದ ಗಂಟಲುದ್ರವ ಪರೀಕ್ಷೆಯಲ್ಲಿ ಪಾಸಿಟೀವ್‌ ಬಂದಿದ್ದರಿಂದ ಈ ಬಾಲಕನನ್ನು ಆಸ್ಪತ್ರೆಯಲ್ಲಿಯೇ ಉಳಿಸಿಕೊಳ್ಳುವುದು ವೈದ್ಯರಿಗೆ ಅನಿವಾರ್ಯವಾಗಿತ್ತು. ಬಾಲಕನ ತಂದೆ ನಂಜನಗೂಡಿನ ಕಾರ್ಖಾನೆಯ ಉದ್ಯೋಗಿಯಾಗಿದ್ದು, ತಂದೆಯಿಂದ ಮಗನಿಗೆ ಸೋಂಕು ಹರಡಿತ್ತು. ಜಿಲ್ಲೆಯಲ್ಲಿ ನಿತ್ಯ ಹೊರ ಬೀಳುತ್ತಿರುವ ಪ್ರಕರಣಗಳಲ್ಲಿ ಪುಟ್ಟಮಕ್ಕಳಿಗೂ ವೈರಸ್‌ ಹಬ್ಬುತ್ತಿರುವುದು ಖಚಿತವಾಗುತ್ತಿದೆ. ಪುಟ್ಟಮಕ್ಕಳಿಗೆ ವೈರಸ್‌ ಕಾಣಿಸಿಕೊಳ್ಳುತ್ತಿರುವುದರಿಂದ ಪೋಷಕರು ಸಹ ಸಾಂಸ್ಥಿಕ ಕ್ವಾರಂಟೈನ್‌ ಆಗುವುದು ಅನಿವಾರ್ಯವಾಗಿದೆ.
1 ತಿಂಗಳು, 1 ವರ್ಷದ ಕೂಸುಗಳಿಗೆ ವೈರಸ್‌ ದೃಢಪಟ್ಟಿರುವುದರಿಂದ ತಾಯಿ ಸಹ ಕ್ವಾರಂಟೈನ್‌ ಮಾಡಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಸರೆಡ್ಡಿ.

ಮಕ್ಕಳ ರಕ್ಷಣೆ ದೊಡ್ಡ ಸವಾಲು

ಹಸುಕೂಸುಗಳು ಹಾಗೂ ಬಾಲಕರಿಗೆ ಸೋಂಕು ಕಾಣಿಸಿಕೊಳ್ಳುವುದು ವೈದ್ಯಕೀಯ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. 14 ವರ್ಷದ ಅನೇಕ ಮಕ್ಕಳು ಕ್ವಾರಂಟೈನ್‌ ಆಗಿದ್ದರು. ಅವರನ್ನು ನಿಯಂತ್ರಣ ಮಾಡುವುದು ದೊಡ್ಡ ಸವಾಲು. ಮಕ್ಕಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗದಂತೆ ನೋಡಿಕೊಳ್ಳಬೇಕು. ತಂದೆ-ತಾಯಿಯಿಂದ ದೂರ ಇರುವ ಮಕ್ಕಳನ್ನು ಕ್ವಾರಂಟೈನ್‌ನಲ್ಲಿ ಇರಿಸಿಕೊಳ್ಳುವುದು ಅಷ್ಟುಸುಲಭವಲ್ಲ. ಪ್ರತಿ ಗಂಟೆಗೊಮ್ಮೆ ಅವರ ಕಡೆ ಗಮನ ಇಡಬೇಕು. ಪೋಷಕರು ಆತಂಕದಲ್ಲಿರುತ್ತಾರೆ. ಮಕ್ಕಳೂ ಆತಂಕದಲ್ಲಿರುತ್ತಾರೆ. ಈ ಎಲ್ಲವನ್ನು ನಿಭಾಯಿಸುವುದು ಸಾಕಷ್ಟು ಹೆಣಗಾಗಬೇಕಾಗುತ್ತದೆ ಎನ್ನುತ್ತಾರೆ ವೈದ್ಯ ಸಿಬ್ಬಂದಿ. ನಗರದ ಕೊರೋನಾ ಆಸ್ಪತ್ರೆಯಲ್ಲಿ ಅನೇಕ ಬಾಲಕರಿಗೆ ಚಿಕಿತ್ಸೆ ನೀಡಲಾಯಿತು. ಅವರನ್ನು ಇಟ್ಟುಕೊಳ್ಳುವುದು ಅಷ್ಟುಸುಲಭವಿಲ್ಲ. ಮಕ್ಕಳ ಖಿನ್ನತೆಗೆ ಒಳಗಾಗದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸರೆಡ್ಡಿ ಅವರು ಹೇಳಿದ್ದಾರೆ. 
 

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ