Omicron ಭೀತಿ: ವ್ಯಾಕ್ಸಿನ್‌ಗೆ ಮುಗಿಬಿದ್ದ ಜನ, ಬೆಂಗ್ಳೂರಲ್ಲಿ ಲಸಿಕಾ ಕೇಂದ್ರ ಸಂಖ್ಯೆ ಹೆಚ್ಚಳ

By Kannadaprabha NewsFirst Published Dec 4, 2021, 6:43 AM IST
Highlights

*  ಸಂಪರ್ಕಿತರ ಪತ್ತೆ ಕಾರ್ಯ ಚುರುಕು
*  ವಿದೇಶದಿಂದ ಬರುವವರಿಗೆ ಕಡ್ಡಾಯ ಕ್ವಾರಂಟೈನ್‌
*  ಬೆಂಗಳೂರಿಗೆ ಪ್ರತ್ಯೇಕವಾಗಿ ಯಾವುದೇ ಮಾರ್ಗಸೂಚಿ ಇಲ್ಲ
 

ಬೆಂಗಳೂರು(ಡಿ.04):  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(BBMP) ವ್ಯಾಪ್ತಿಯಲ್ಲಿ ಒಮಿಕ್ರೋನ್‌ ಭೀತಿ ಹೆಚ್ಚಾಗಿದ್ದು, ಕೋವಿಡ್‌ ಲಸಿಕೆ(Covid Vaccine) ಪಡೆಯುವವರ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಗಳ ಬೇಡಿಕೆ ಹೆಚ್ಚಳವಾಗಿದೆ.

ಕಳೆದೊಂದು ವಾರದ ಹಿಂದೆ ಲಸಿಕೆ ಪಡೆಯುವಂತೆ ಬಿಬಿಎಂಪಿ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಲಸಿಕಾ ಕೇಂದ್ರಗಳತ್ತ ಧಾವಿಸದ ಜನರು, ಒಮಿಕ್ರೋನ್‌(Omicron)  ಪತ್ತೆಯಾದ ಬೆನ್ನಲ್ಲೇ ಲಸಿಕೆ ಪಡೆಯುಲು ಮುಗಿಬೀಳುತ್ತಿದ್ದಾರೆ. ಹೀಗಾಗಿ ದಿನವಿಡೀ ಲಸಿಕಾ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಲಸಿಕೆಗಾಗಿ ಕಾಯುತ್ತಿರುವ ದೃಶ್ಯ ಶುಕ್ರವಾರ ಕಂಡುಬಂತು.

ದಿನಕ್ಕೆ ಕೇವಲ 100 ಲಸಿಕೆಯೂ ಖಾಲಿಯಾಗದಿದ್ದ ಜಾಗದಲ್ಲಿ ಇದೀಗ 300ಕ್ಕೂ ಹೆಚ್ಚು ಡೋಸ್‌ ಲಸಿಕೆಗೆ ಬೇಡಿಕೆ ಬಂದಿದೆ. ಇದರಿಂದ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ. 2ನೇ ಡೋಸ್‌ ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಹೀಗೆಯೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಶೇ.100ರಷ್ಟು ಗುರಿ ತಲುಪಬಹುದು ಎಂದು ಹೇಳುತ್ತಾರೆ.

Omicron Variant: ಕರ್ನಾಟಕಕ್ಕೆ ಕೊರೋನಾ ಮೂರನೇ ಅಲೆ ಅಪ್ಪಳಿಸುವ ಭೀತಿ?

ಕಳೆದೊಂದು ವಾರದಿಂದ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರಗಳ ಸಂಖ್ಯೆಯನ್ನೂ ಕೂಡ ಬಿಬಿಎಂಪಿ ಹೆಚ್ಚಿಸಿದೆ. ಶುಕ್ರವಾರ 380 ಸರ್ಕಾರಿ ಮತ್ತು 176 ಖಾಸಗಿ ಲಸಿಕಾ ಕೇಂದ್ರಗಳು ಸೇರಿ 556 ಲಸಿಕಾ ಕೇಂದ್ರಗಳಲ್ಲಿ 63,731 ಮಂದಿ ಲಸಿಕೆ(Vaccine) ಪಡೆದುಕೊಂಡಿದ್ದಾರೆ. ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 1,42,24,617 ಡೋಸ್‌ ಲಸಿಕೆ ನೀಡಲಾಗಿದ್ದು, 81,43,025 ಮಂದಿ ಮೊದಲ ಮತ್ತು 60,81,592 ಜನರು ದ್ವಿತೀಯ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ ಇಳಿಕೆಯಾಗಿದೆ. ಶುಕ್ರವಾರ 57 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ಬೊಮ್ಮನಹಳ್ಳಿ 22, ಪೂರ್ವ 12, ದಕ್ಷಿಣ ವಲಯ 7, ಯಲಹಂಕ 7, ಪಶ್ಚಿಮ 6, ಮಹದೇವಪುರ 3 ಮೈಕ್ರೋ ಕಂಟೈನ್ಮೆಂಟ್‌ಗಳಿದ್ದು, ದಾಸರಹಳ್ಳಿ ಮತ್ತು ರಾಜರಾಜೇಶ್ವರಿ ನಗರ ವಲಯ ಮೈಕ್ರೋ ಕಂಟೈನ್ಮೆಂಟ್‌ ಮುಕ್ತವಾಗಿವೆ.

ರಸ್ತೆ ಸೀಲ್‌ಡೌನ್‌

ಒಮಿಕ್ರೋನ್‌ ಸೋಂಕಿತ ವೈದ್ಯನ ಮನೆ ಮತ್ತು ಅವರು ವಾಸವಿರುವ ರಸ್ತೆಯನ್ನು ಬಿಬಿಎಂಪಿ ಸಿಬ್ಬಂದಿ ಸೀಲ್‌ಡೌನ್‌(Sealdown) ಮಾಡಿದ್ದಾರೆ. ಜೆ.ಪಿ.ನಗರ 7ನೇ ಹಂತರ ಆರ್‌ಬಿಐ ಲೇಔಟ್‌ನಲ್ಲಿರುವ ರಸ್ತೆಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ವಾಹನ ಮತ್ತು ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮನೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ. ಉಳಿದಂತೆ ಒಮಿಕ್ರೋನ್‌ ಸೋಂಕಿತನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಿಂದ ಕೋವಿಡ್‌ ಸೋಂಕಿತರಾಗಿರುವ ಕೋರಮಂಗಲ ಮತ್ತು ಬಸವನಗುಡಿಯ ಮನೆಗಳನ್ನು ಮೈಕ್ರೋ ಕಂಟೈನ್ಮೆಂಟ್‌ಗಳಾಗಿ(Micro Containment) ಗುರುತಿಸಲಾಗಿದೆ.

ಸೋಂಕಿತ ವೈದ್ಯನ ಪತ್ನಿಗೂ ಕೋವಿಡ್‌

ಒಮಿಕ್ರಾನ್‌ ವೈರಸ್‌ ಸೋಂಕಿತ ವೈದ್ಯನ ಪತ್ನಿ(ವೈದ್ಯೆ) ಕೂಡಾ ಕೋವಿಡ್‌ ಸೋಂಕಿತರಾಗಿದ್ದು ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ದಂಪತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸೋಂಕಿತ ವೈದ್ಯೆ, ಸದ್ಯಕ್ಕೆ ಭಯಗೊಂಡಿದ್ದು ಮೈಕೈ ನೋವು, ಸುಸ್ತು, ಚಳಿ ಇದೆ. ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತಿಲ್ಲ. ಸುಧಾರಿಸಿಕೊಳ್ಳಲು ಸ್ವಲ್ಪ ಸಮಯಬೇಕು ಎಂದು ತಿಳಿಸಿದರು.

ಕೋವಿಡ್‌ ಪರೀಕ್ಷೆ ಮತ್ತಷ್ಟು ಹೆಚ್ಚಳ

ನಗರದಲ್ಲಿ(Bengaluru) ಇಬ್ಬರಲ್ಲಿ ಒಮಿಕ್ರೋನ್‌ ಪತ್ತೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಎಚ್ಚೆತ್ತಿರುವ ಬಿಬಿಎಂಪಿ ಲಸಿಕಾಕರಣ, ಕೋವಿಡ್‌ ಪರೀಕ್ಷೆ ಹೆಚ್ಚಳ ಮತ್ತು ಪಾಸಿಟಿವ್‌ ಸಂಪರ್ಕಿತರ ಪತ್ತೆ ಕಾರ್ಯವನ್ನು ಚುರುಕುಗೊಳಿಸಿದೆ.
ಒಮಿಕ್ರೋನ್‌ ಪತ್ತೆಯಾಗಿರುವ ದೇಶಗಳಿಂದ ಬರುವ ಪ್ರಯಾಣಿಕರಿಗೆ(Passengers) ಕ್ವಾರಂಟೈನ್‌(Quarantine) ಕಡ್ಡಾಯ ಮಾಡಿದ್ದು, ಕೋವಿಡ್‌ ಪಾಸಿಟಿವ್‌ ಬಂದ ಪ್ರಯಾಣಿಕರ ಮಾದರಿ(ಸ್ಯಾಂಪಲ್‌) ಅನ್ನು ಜಿನೊಮ್‌ ಸಿಕ್ವೆನ್ಸಿಂಗ್‌ ಪರೀಕ್ಷೆಗೆ ಕಳುಹಿಸಲಿದೆ. ನಂತರ ವರದಿ ಬರುವವರೆಗೆ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಲು ನಿರ್ಧರಿಸಲಾಗಿದೆ. ಕೊರೋನಾ ಕ್ಲಸ್ಟರ್‌ಗಳು ಪತ್ತೆಯಾದ ಕಡೆಗಳಲ್ಲಿ ಅಲ್ಲಿನ ಪಾಸಿಟಿವ್‌ ಮಾದರಿಗಳನ್ನು ಜಿನೊಮ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸಲು ವಲಯಗಳ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

Omicron ಕರ್ನಾಟಕದಲ್ಲಿ ಈಗಾಗಲೇ ಹಬ್ಬಿದೆಯಾ?: ಆಘಾತಕಾರಿ ಸುದ್ದಿ ನೀಡಿದ ವೈದ್ಯರು

ಕ್ರಿಸ್‌ಮಸ್‌(Christmas) ಹಾಗೂ ಹೊಸ ವರ್ಷಾಚರಣೆಗೆ(New Year) ಸಂಭ್ರಮಕ್ಕೆ ಕಡಿವಾಣ ಹಾಕಲು ಕೂಡ ಬಿಬಿಎಂಪಿ ಚಿಂತನೆ ನಡೆಸಿದೆ. ಕಳೆದ ಬಾರಿಯಂತೆ ಈ ಬಾರಿಯೂ ಸರಳವಾಗಿ ಆಚರಣೆ ಮಾಡುವಂತೆ ನಿಯಮ ರೂಪಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ಅವರು, ಸಭೆ, ಸಮಾರಂಭದಲ್ಲಿ 500 ಜನರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷ ಸಂಭ್ರಮಾಚರಣೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು. ನಗರದೆಲ್ಲೆಡೆ ಕೋವಿಡ್‌ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯಲ್ಲಿ ಮೊದಲಿನಿಂದ ಕೊರೋನಾ(Coronavirus) ಸೋಂಕಿತರ ಮೇಲೆ ನಿಗಾ ವಹಿಸಲಾಗಿದೆ. ಪರೀಕ್ಷೆ ಹೆಚ್ಚಿಸಿ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ವಿದೇಶಿ ಪ್ರಯಾಣಿಕರನ್ನು ಕ್ವಾರಂಟೈನ್‌ ಮಾಡಲಾಗುತ್ತಿದೆ. ಇಂತಹ ಒಂದು ಸನ್ನಿವೇಶ ಬರಬಹುದು ಎಂದು ನಾವು ಮೊದಲಿನಿಂದ ತಯಾರಿ ಮಾಡಿಕೊಂಡಿದ್ದೇವೆ. ರಾಜ್ಯಾದ್ಯಂತ ಒಂದೇ ಮಾರ್ಗಸೂಚಿ ಇರಲಿದ್ದು, ಬೆಂಗಳೂರಿಗೆ ಪ್ರತ್ಯೇಕವಾಗಿ ಯಾವುದೇ ಮಾರ್ಗಸೂಚಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
 

click me!