ಹೈನುಗಾರಿಕೆಗೆ ಒತ್ತು ನೀಡಿರುವ ಜನತೆ| ನಿತ್ಯ 20 ಸಾವಿರ ಲೀಟರ್ ಹೆಚ್ಚುವರಿ ಉತ್ಪಾದನೆ| ಕೊರೋನಾ ಹಿನ್ನೆಲೆ ನಗರ ಪ್ರದೇಶದ ಜನರು ಹಳ್ಳಿಗಳಿಗೆ ಮರಳಿದ ಹಲವರು ಹೈನೋದ್ಯಮದತ್ತ ಆಸಕ್ತಿ| ಉತ್ಪಾದನೆಯಾಗುತ್ತಿರುವ ಹಾಲಿನ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕು|
ಹಾವೇರಿ(ಸೆ.16): ಕೊರೋನಾ ಲಾಕ್‌ಡೌನ್‌ನಿಂದ ಹಲವು ಕ್ಷೇತ್ರಗಳು ಸಮಸ್ಯೆ ಎದುರಿಸುತ್ತಿವೆ. ಆದರೆ, ಜಿಲ್ಲೆಯಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಕ್ಷೀರೋತ್ಪಾದನೆಯಲ್ಲಿ ಗಣನೀಯ ಹೆಚ್ಚಳವಾಗಿದೆ.
ಲಾಕ್‌ಡೌನ್ ಕಾರಣದಿಂದ ನಗರ ಪ್ರದೇಶದದಿಂದ ಗ್ರಾಮೀಣ ಪ್ರದೇಶಕ್ಕೆ ಮರಳಿ ಸ್ವಯಂ ಉದ್ಯೋಗ ಕಂಡುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಬಹುತೇಕ ಜನರು ಹಳ್ಳಿಗಳಲ್ಲಿ ಹೈನುಗಾರಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ಕಳೆದ ಮಾರ್ಚ್ ತಿಂಗಳು ಜಿಲ್ಲೆಯಲ್ಲಿ ಆಗುತ್ತಿದ್ದ ಹಾಲಿನ ಉತ್ಪಾದನೆಗೂ ಹಾಗೂ ಆಗಸ್ಟ್ ತಿಂಗಳಲ್ಲಿ ಕಂಡುಬಂದ ಉತ್ಪಾದನೆಗೂ ಹೋಲಿಸಿದರೆ ಬರೋಬ್ಬರಿ ಪ್ರತಿದಿನ 20 ಸಾವಿರ ಲೀಟರ್‌ಗೂ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ಪ್ರತಿದಿನ 89,468 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದರೆ, ಈಗ ಪ್ರತಿದಿನ 1,09,574 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಅಲ್ಲದೇ ಹಾಲಿನ ಗುಣಮಟ್ಟದಲ್ಲಿಯೂ ಹೆಚ್ಚಳವಾಗಿದ್ದು ಗಮನಾರ್ಹ ಸಂಗತಿಯಾಗಿದೆ.
ಸಚಿವರೇ ಗಮನಿಸಿ; ನಿಮ್ಮ ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರೇ ಇಂಜೆಕ್ಷನ್ ಮಾಡ್ಕೋಬೇಕು.!
ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿದ್ದ ಲಾಕ್‌ಡೌನ್ ಹಾಗೂ ಸೋಂಕು ಹರಡುವಿಕೆಯ ಭಯದ ಕಾರಣದಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧಡೆಯಿಂದ ಆಗಮಿಸಿದ್ದ ಅನೇಕರು ಗ್ರಾಮೀಣ ಪ್ರದೇಶದಲ್ಲಿಯೇ ಉಳಿದುಕೊಂಡು ಸ್ವಯಂ ಉದ್ಯೋಗದ ದಾರಿ ಕಂಡುಕೊಂಡಿದ್ದಾರೆ. ಅದರಲ್ಲಿ ಹೆಚ್ಚಾಗಿ ಅನೇಕರು ಹೈನುಗಾರಿಕೆಯತ್ತ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಜತೆಗೆ ಪಶುಪಾಲನೆಯಲ್ಲಿಯೂ ಹೆಚ್ಚೆಚ್ಚು ಯುವಕರು ತೊಡಗಿಸಿಕೊಂಡಿರುವುದು ಹಾಲು ಉತ್ಪಾದನೆ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.
ಪ್ರತಿದಿನ 20 ಸಾವಿರ ಲೀಟರ್ ಹೆಚ್ಚಳ:
ಲಾಕ್‌ಡೌನ್‌ಗೂ ಮುನ್ನ ಹಾಗೂ ಈಗಿನ ಹಾಲಿನ ಉತ್ಪಾದನೆ ತುಲನೆ ಮಾಡಿದರೆ ಜಿಲ್ಲೆಯಲ್ಲಿ 20 ಸಾವಿರ ಲೀಟರ್ ಹಾಲು ಹೆಚ್ಚಳವಾಗಿದೆ. ಬೇಸಿಗೆಗಿಂತ ಮುಂಗಾರು ಅವಧಿಯಲ್ಲಿ ಹಸಿ ಹುಲ್ಲು, ಮೇವು ಇರುವುದರಿಂದ ಸಹಜವಾಗಿಯೇ ಹಾಲು ಉತ್ಪಾದನೆ ಅಧಿಕವಾಗುತ್ತಿತ್ತು. ಆದರೆ, ಈ ವರ್ಷ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಅಲ್ಲದೇ ಸರ್ಕಾರದಿಂದಲೂ ಸಹಾಯಧನ ಸಿಗುತ್ತಿರುವುದರಿಂದ ಅನೇಕ ರೈತರು ಹಾನುಗಾರಿಕೆಯನ್ನು ಮುಖ್ಯ ಕಸುಬಾಗಿ ಮಾಡುಕೊಂಡಿದ್ದಾರೆ.
ಕೊರೋನಾ ಸೃಷ್ಟಿಸಿದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಗರಪ್ರದೇಶದಲ್ಲಿದ್ದ ಅನೇಕರು ಉದ್ಯೋಗ ಕಳೆದುಕೊಂಡು ಹೈನುಗಾರಿಕೆಯತ್ತ ಆಸಕ್ತಿ ವಹಿಸಿದ್ದಾರೆ. ಹೀಗಾಗಿ ಹೈನೋದ್ಯಮದ ಬೆಳವಣಿಗೆ ತೀವ್ರತೆ ಪಡೆದುಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಕ್ಷೀರಕ್ರಾಂತಿ ಕಂಡುಬರುತ್ತಿದೆ. ಅಲ್ಲದೇ ಅನೇಕ ಬಡವರು ಪ್ರಸಕ್ತ ಸಾಲಿನ ‘ಪಶುಭಾಗ್ಯ’ ಯೋಜನೆ ಅನುಷ್ಠಾನಗೊಳ್ಳುವುದನ್ನೇ ಎದುರು ನೋಡುತ್ತಿದ್ದು, ಪಶುಭಾಗ್ಯ ಯೋಜನೆ ಜಾರಿಯಾದರೆ ಹೈನೋದ್ಯಮದಲ್ಲಿ ಇನ್ನಷ್ಟುಹೆಚ್ಚಿನ ಬೆಳವಣಿಗೆ ಕಾಣಬಹುದಾಗಿದೆ.
ಏರಿಕೆ ಪ್ರಮಾಣ:
ಮಾಚ್‌ರ್ ತಿಂಗಳಲ್ಲಿ ಪ್ರತಿದಿನ ಬ್ಯಾಡಗಿ ತಾಲೂಕಿನಲ್ಲಿ 9,686 ಲೀ., ಹಾನಗಲ್ಲ ತಾಲೂಕಿನಲ್ಲಿ 12,266 ಲೀ., ಹಾವೇರಿ ತಾಲೂಕಿನಲ್ಲಿ 11,530 ಲೀ., ಹಿರೇಕೆರೂರು ತಾಲೂಕಿನಲ್ಲಿ 21,550 ಲೀ., ರಾಣಿಬೆನ್ನೂರು ತಾಲೂಕಿನಲ್ಲಿ 9,264 ಲೀ., ರಟ್ಟಿಹಳ್ಳಿ ತಾಲೂಕಿನಲ್ಲಿ 14,311 ಲೀ, ಸವಣೂರು ತಾಲೂಕಿನಲ್ಲಿ 4,902 ಲೀ. ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ 5,960 ಲೀ. ಸೇರಿ ಒಟ್ಟು ಜಿಲ್ಲೆಯಲ್ಲಿ 89,468 ಸಾವಿರ ಲೀಟರ್ ಪ್ರತಿದಿನ ಹಾಲು ಉತ್ಪಾದನೆಯಾಗಿತ್ತು. ಆಗಸ್ಟ್ ತಿಂಗಳಲ್ಲಿ ಪ್ರತಿದಿನ ಬ್ಯಾಡಗಿ ತಾಲೂಕಿನಲ್ಲಿ 11,600 ಲೀ., ಹಾನಗಲ್ಲ ತಾಲೂಕಿನಲ್ಲಿ 15,200 ಲೀ., ಹಾವೇರಿ ತಾಲೂಕಿನಲ್ಲಿ 14,435 ಲೀ., ಹಿರೇಕೆರೂರು ತಾಲೂಕಿನಲ್ಲಿ 26,246 ಲೀ., ರಾಣಿಬೆನ್ನೂರು ತಾಲೂಕಿನಲ್ಲಿ 11,193 ಲೀ., ರಟ್ಟಿಹಳ್ಳಿ ತಾಲೂಕಿನಲ್ಲಿ 18,755 ಲೀ, ಸವಣೂರು ತಾಲೂಕಿನಲ್ಲಿ 5,928 ಲೀ. ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ 6,217 ಲೀ., ಸೇರಿ ಒಟ್ಟು ಜಿಲ್ಲೆಯಲ್ಲಿ 1,09,574 ಲೀಟರ್ ಪ್ರತಿದಿನ ಹಾಲು ಉತ್ಪಾದನೆಯಾಗುತ್ತಿದೆ.
ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿನ ಪ್ರಮಾಣದಲ್ಲಿ ಹಿರೇಕೆರೂರು ತಾಲೂಕು ಮೊದಲ ಸ್ಥಾನದಲ್ಲಿದೆ. ನಂತರ ಸ್ಥಾನದಲ್ಲಿ ರಟ್ಟಿಹಳ್ಳಿ, ಹಾನಗಲ್ಲ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಶಿಗ್ಗಾಂವಿ ಹಾಗೂ ಸವಣೂರು ತಾಲೂಕು ಕೊನೆಯ ಸ್ಥಾನದಲ್ಲಿದೆ.
ಸರ್ಕಾರದ ಪ್ರೋತ್ಸಾಹಧನ, ಪಶು ಆಹಾರದ ಸಬ್ಸಿಡಿ, ಹಸಿರು ಮೇವಿನ ಬೀಜಗಳ ಪೂರೈಕೆ, ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ದರ, ನಿಯಮಿತ ಲಸಿಕೆ ಕಾರ್ಯಕ್ರಮಗಳ ಆಯೋಜನೆಯಿಂದ ಹೈನೋದ್ಯಮದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ ಕೊರೋನಾ ಹಿನ್ನೆಲೆ ನಗರಪ್ರದೇಶದ ಜನರು ಹಳ್ಳಿಗಳಿಗೆ ಮರಳಿ ಹಲವರು ಹೈನೋದ್ಯಮದತ್ತ ಆಸಕ್ತಿ ತೋರುತ್ತಿದ್ದಾರೆ. ಈ ಕಾರಣದಿಂದ ಜಿಲ್ಲೆಯಲ್ಲಿ ಹಾಲು ಉತ್ಪಾದನೆಯ ಪ್ರಮಾಣ ಹೆಚ್ಚಳವಾಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಅವರು ತಿಳಿಸಿದ್ದಾರೆ.