
ಭದ್ರಾವತಿ (ಮೇ.18): ಹಾಲಿನ ದರ ಹೆಚ್ಚಳ ಮಾಡುವ ಮೂಲಕ ರೈತರನ್ನು ಆರ್ಥಿಕವಾಗಿ ಬಲಪಡಿಸಲಾಗಿದ್ದು, ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗು ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್ ಹೇಳಿದರು. ಅವರು ನಗರದ ರಂಗಪ್ಪ ವೃತ್ತ ಸಮೀಪದ ಪಶು ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ನಗರಸಭೆ ವತಿಯಿಂದ ಆರ್‌ಐಡಿಎಫ್ ಟ್ರಾಂಚ್ 30 ಯೋಜನೆಯಡಿ ನೂತನ ಪಶು ಆಸ್ಪತ್ರೆ ಕಟ್ಟಡಕ್ಕೆ ಶಂಕಸ್ಥಾಪನೆ ನೆರವೇರಿಸಿ ಮಾತನಾಡಿದರು.
ಹಾಲಿನ ದರ 5 ರು. ಹೆಚ್ಚಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ವಿರೋಧ ಪಕ್ಷಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುವ ಉದ್ದೇಶದಿಂದ ೪ ರು. ಮಾತ್ರ ಹೆಚ್ಚಿಸಲಾಗಿದೆ. ಈ ಹಣ ರೈತರಿಗೆ ನೀಡಲಾಗುತ್ತಿದೆ. ಸರ್ಕಾರ ಪಾಪರ್ ಆಗಿದೆ ಎಂದು ವಿರೋಧ ಪಕ್ಷಗಳು ಬಾಯಿ ಬಡಿದುಕೊಳ್ಳುತ್ತಿವೆ. ಹಾಗಾದರೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದರು. ಸರ್ಕಾರ ರೈತರ ಪರವಾಗಿದ್ದು, ರೈತರಿಗೆ ಇನ್ನೂ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡಲಿದೆ ಎಂದರು. ಪ್ರಸ್ತುತ ಶಂಕುಸ್ಥಾಪನೆ ನೆರವೇರಿಸಿರುವ ಆಸ್ಪತ್ರೆ ಕಟ್ಟಡ ಕಾಮಗಾರಿ ತಕ್ಷಣ ಆರಂಭಗೊಳ್ಳಲಿದ್ದು, ಕೇವಲ ಕಟ್ಟಡ ನಿರ್ಮಾಣಗೊಂಡರೆ ಸಾಲದು ಅದಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವುದು ಮುಖ್ಯ.
ಈ ನಿಟ್ಟಿನಲ್ಲಿ ಈಗಾಗಲೇ ಹೊಸ ಕಟ್ಟಡಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಸಕರು ತಾಲೂಕಿನ ಕಲ್ಲಹಳ್ಳಿ ಮತ್ತು ದೊಡ್ಡೇರಿ ಗ್ರಾಮಗಳಲ್ಲಿ ೨ ಆಸ್ಪತ್ರೆಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಸರ್ಕಾರದ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಚಿವರು ನನ್ನ ಮನವಿಗೆ ಸ್ಪಂದಿಸಿ ಆಸ್ಪತ್ರೆ ಮಂಜೂರಾತಿ ಮಾಡುವ ಜೊತೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅವರಿಗೆ ಕ್ಷೇತ್ರದ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಸಿದ್ದರಾಮಯ್ಯರವರು ಆರ್ಥಿಕ ತಜ್ಞರಾಗಿದ್ದು, ಹೆಚ್ಚು ಬಾರಿ ಬಜೆಟ್ ಮಂಡಿಸಿರುವ ಏಕೈಕ ಜನಪ್ರತಿನಿಧಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷದವರು ವಿನಾಕಾರಣ ಆರೋಪಗಳನ್ನು ಮಾಡುವ ಜೊತೆಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜನರು ಕಿವಿ ಕೊಡಬಾರದು ಎಂದರು.
ಅಪಪ್ರಚಾರ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ: ಸಚಿವ ರಾಮಲಿಂಗಾರೆಡ್ಡಿ
ಶಿಮುಲ್ ನಿರ್ದೇಶಕ ಎಸ್. ಕುಮಾರ್ ಮಾತನಾಡಿ, ಪಶುಪಾಲನಾ ಕ್ಷೇತ್ರ ವಿಸ್ತಾರವಾಗಿದೆ. ಈ ಭಾಗದಲ್ಲಿ ಪಶುಪಾಲನಾ ಆಸ್ಪತ್ರೆ ಅಗತ್ಯವಿದ್ದು, ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಮಾತನಾಡಿ, ರೈತರು ಚಿಕಿತ್ಸೆ ಸೇರಿದಂತೆ ಹೆಚ್ಚಿನ ಸೌಲಭ್ಯಗಳನ್ನು ಪಡೆಯಲು ಬೇರೆ ಸ್ಥಳಗಳಿಗೆ ಹೋಗುವುದು ತಪ್ಪುತ್ತದೆ. ಇದರ ಸದುಪಯೋಗ ಪಡೆದುಕೊಂಡು ಪಶುಪಾಲನಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಂತೆ ಮನವಿ ಮಾಡಿದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಸದಸ್ಯರಾದ ಅನುಸುಧಾ ಮೋಹನ್ ಪಳನಿ, ಚನ್ನಪ್ಪ, ಎಸ್. ಮಣಿಶೇಖರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಶಿಮುಲ್ ನಿರ್ದೇಶಕ ಎಸ್. ಕುಮಾರ್, ಜಿ.ಪಂ. ಮಾಜಿ ಸದಸ್ಯ ಎಚ್.ಎಲ್ ಷಡಾಕ್ಷರಿ, ದಶರಥಗಿರಿ ಹಾಗೂ ಇಲಾಖೆ ಉಪ ನಿರ್ದೇಶಕ ಡಾ. ಎ. ಬಾಬುರತ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.