ಬೆಂಗಳೂರಲ್ಲಿ ಸಾವಿನ ಖಚಿತತೆ ಪ್ರಮಾಣ ಶೇ.1.07ಕ್ಕೆ ಏರಿಕೆ| ಈ ತಿಂಗಳ ಮೊದಲ ನಾಲ್ಕು ದಿನದಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳ| ಸೋಂಕಿನ ಖಚಿತತೆ ಪ್ರಮಾಣವೂ ಶೇ.1.59ಕ್ಕೆ ಜಿಗಿತ| ನಗರದಲ್ಲಿ ವಾರದಿಂದ ನಿತ್ಯ ಸರಾಸರಿ 700ಕ್ಕೂ ಅಧಿಕ ಕೇಸ್|
ಬೆಂಗಳೂರು(ಡಿ.07): ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಎರಡನೇ ಅಲೆ ಆತಂಕಕ್ಕೆ ಪುಷ್ಟಿ ನೀಡುವಂತೆ ಡಿಸೆಂಬರ್ ತಿಂಗಳ ಮೊದಲ ನಾಲ್ಕು ದಿನದಲ್ಲಿ ಸೋಂಕಿತರ ಸಾವಿನ ಪ್ರಮಾಣ ಹೆಚ್ಚಾಗಿದೆ.
ಭಾರತ ಸೇರಿದಂತೆ ಪ್ರಪಂಚದಾದ್ಯಂತ ಕೊರೋನಾ ಎರಡನೇ ಅಲೇ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಆತಂಕ ಹೆಚ್ಚಿಸಿದೆ. ನಗರದಲ್ಲಿ ಪ್ರತಿನಿತ್ಯ 40 ಸಾವಿರಕ್ಕೂ ಅಧಿಕ ಸೋಂಕು ಪರೀಕ್ಷೆ ಮಾಡುತ್ತಿದ್ದು, ಇದರಲ್ಲಿ ಖಚಿತ ಪ್ರಕರಣ ಸಂಖ್ಯೆ ಶೇ.1.59ರಷ್ಟಿದೆ. ಆದರೆ, ಸಾವಿನ ಪ್ರಮಾಣ ಶೇ.1ಕ್ಕಿಂತ ಹೆಚ್ಚಾಗಿರುವುದು ಭೀತಿ ದುಪ್ಪಟ್ಟುಗೊಂಡಿದೆ.
undefined
ಮೊದಲು ಕೊರೋನಾ ಆರಂಭಗೊಂಡಾಗ ಕಳೆದ ಏಪ್ರಿಲ್‌ನಿಂದ ಆಗಸ್ಟ್‌ವರೆಗೂ ಪ್ರತಿನಿತ್ಯ ಕೋವಿಡ್ ಸಾವಿನ ಪ್ರಮಾಣ ಶೇ.2ರಿಂದ 5ರಷ್ಟಿತ್ತು. ಸೆಪ್ಟಂಬರ್‌ನಲ್ಲಿ ಶೇ.0.95, ಅಕ್ಟೋಬರ್‌ನಲ್ಲಿ ಶೇ.0.89 ಹಾಗೂ ನವೆಂಬರ್‌ನಲ್ಲಿ ಶೇ.0.85ರಷ್ಟು ಸಾವಿನ ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಾವಿನ ಪ್ರಮಾಣ ಶೇ.1ಕ್ಕಿಂತ ಕಡಿಮೆ ಆಗಿತ್ತು. ಇದೀಗ ಡಿ.1ರಿಂದ 4ರ ತನಕ ಅಂದರೆ 4 ದಿನಗಳಲ್ಲಿ 1,74,850 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 2,799 ಮಂದಿಗೆ ಸೋಂಕು ದೃಢವಾಗಿದೆ. ಈ ಮೂಲಕ ಸೋಂಕು ಖಚಿತತೆ ಪ್ರಮಾಣ ಶೇ.1.59 ರಷ್ಟಿದ್ದು, ಸಾವಿನ ಪ್ರಮಾಣ ಪುನಃ ಶೇ.1.07ಕ್ಕೆ ಏರಿಕೆಯಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಬೆಂಗ್ಳೂರಲ್ಲಿ 3.73 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ
ಸೋಂಕಿತರ ಪತ್ತೆಯಲ್ಲೂ ಏರಿಕೆ
ಕಳೆದ 15 ದಿನಗಳ ಸರಾಸರಿ 500 ಕ್ಕಿಂತ ಕಡಿಮೆಯಿದ್ದ ಸೋಂಕು ಪ್ರಕರಣಗಳ ಸಂಖ್ಯೆ ಡಿ.1ರಿಂದ ಡಿ.4ರ ನಾಲ್ಕು ದಿನಗಳಲ್ಲಿ ಸರಾಸರಿ ಸಂಖ್ಯೆ 700ಕ್ಕಿಂತ ಅಧಿಕವಾಗಿ ಪತ್ತೆಯಾಗುತ್ತಿವೆ. ಇದರಿಂದ ಎರಡನೇ ಅಲೆಯ ಆತಂಕ ಹೆಚ್ಚಾಗಿದೆ.
ಆರೋಗ್ಯ ತಜ್ಞರು ಚಳಿಗಾಲದಲ್ಲಿ ಕೊರೋನಾ ಸೋಂಕಿನ ಜೀವತಾವಧಿ ಹೆಚ್ಚಾಗಲಿದ್ದು, ಹೆಚ್ಚು ಜನರಿಗೆ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಅದೇ ಮಾದರಿಯಲ್ಲಿ ಕೊರೋನಾ ಸೋಂಕು ಪತ್ತೆ ಪ್ರಮಾಣದ ಜೊತೆಗೆ ಸಾವಿನ ಪ್ರಮಾಣವೂ ಹೆಚ್ಚಾಗಿರುವುದರಿಂದ ನಗರದಲ್ಲಿ ಭೀತಿ ಮನೆ ಮಾಡಿದೆ. ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.