ಕೊಡಗು ವೈದ್ಯಕೀಯ ಆಸ್ಪತ್ರೆಯಲ್ಲಿ 10.7 ಕೋಟಿ ವೆಚ್ಚದ ಎಂಆರ್‌ಐ ಸ್ಕ್ಯಾನಿಂಗ್ ಸೆಂಟರ್ ಉದ್ಘಾಟನೆ!

By Govindaraj S  |  First Published Sep 29, 2024, 8:46 PM IST

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನೂತನವಾಗಿ 10.71 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಎಂಆರ್ಐ ಸ್ಕ್ಯಾನಿಂಗ್ ಉಪಕರಣಗಳನ್ನು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ ಅವರು ಲೋಕಾರ್ಪಣೆಗೊಳಿಸಿದರು. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಸೆ.29): ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನೂತನವಾಗಿ 10.71 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಎಂಆರ್ಐ ಸ್ಕ್ಯಾನಿಂಗ್ ಉಪಕರಣಗಳನ್ನು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ ಅವರು ಲೋಕಾರ್ಪಣೆಗೊಳಿಸಿದರು. ಕೊಡಗು ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಾದ ಎಂಆರ್ ಐ ಸ್ಕ್ಯಾನಿಂಗ್ ಯಂತ್ರವನ್ನು  ಅಳವಡಿಸಲಾಗಿದೆ. ಆ ನಿಟ್ಟಿನಲ್ಲಿ ಇಬ್ಬರು ವೈದ್ಯಕೀಯ ತಾಂತ್ರಿಕರನ್ನು ನೇಮಿಸಲು ತುರ್ತು ಕ್ರಮ ವಹಿಸಲಾಗುವುದು ಎಂದು ಶರಣ ಪ್ರಕಾಶ ಪಾಟೀಲ ಅವರು ಹೇಳಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಂದುವರೆದ ಕಾಮಗಾರಿಗೆ ಇನ್ನೂ 50 ರಿಂದ  60 ಕೋಟಿ ರೂ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 

Tap to resize

Latest Videos

ಆ ದಿಸೆಯಲ್ಲಿ ಶೀಘ್ರ ಹಣ ಬಿಡುಗಡೆಗೆ  ಪ್ರಯತ್ನಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದರು. ಸರ್ಕಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಆ ನಿಟ್ಟಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿ ನಿಲಯ, ವಸತಿ ಗೃಹ ಸೇರಿದಂತೆ  ಹಲವು ಮೂಲ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಶರಣ ಪ್ರಕಾಶ ಪಾಟೀಲ ಅವರು ವಿವರಿಸಿದರು. ರಾಜ್ಯದಲ್ಲಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳು, 2 ಇಎಸ್ ಐ ಆಸ್ಪತ್ರೆಗಳು ಸೇರಿ ಒಟ್ಟು 24 ವೈದ್ಯಕೀಯ ಆಸ್ಪತ್ರೆಗಳು ಹಾಗೂ 71 ವೈದ್ಯಕೀಯ ಕಾಲೇಜುಗಳು ಇದ್ದು, ರಾಜ್ಯದ ಪ್ರತಿಭಾವಂತ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ವೈದ್ಯರಾಗುವಲ್ಲಿ ವೈದ್ಯಕೀಯ ಕಾಲೇಜುಗಳು ಸಹಕಾರಿಯಾಗಿದೆ ಎಂದು ಸಚಿವರು ತಿಳಿಸಿದರು. 

ಎಚ್‌ಡಿಕೆಯದ್ದು ಹಿಟ್ ಅಂಡ್ ರನ್, ಜೇಬಿನಲ್ಲೇ ಇದೆ ತೆಗೆಯುತ್ತೇನೆ ಎನ್ನುವ ರಾಜಕಾರಣಿ: ಸಚಿವ ಶರಣ ಪ್ರಕಾಶ ಪಾಟೀಲ ಲೇವಡಿ

ಬಡವರ ಮಕ್ಕಳು ವೈದ್ಯರಾಗಬೇಕು ಎಂಬ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿಯೂ ವೈದ್ಯಕೀಯ ಕಾಲೇಜು ಆರಂಭಿಸಲು ಸರ್ಕಾರ ಪ್ರಯತ್ನಿಸಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜಿನ ಜತೆಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕ್ರಿಟಿಕಲ್ ಕೇರ್  ಸೆಂಟರ್ ಆರಂಭಕ್ಕೆ ಪ್ರಯತ್ನಿಸಲಾಗಿದೆ ಎಂದು ಶರಣ ಪ್ರಕಾಶ ಪಾಟೀಲ ತಿಳಿಸಿದರು. ಮುಂದಿನ ದಿನದಲ್ಲಿ ಸರ್ಕಾರ, ಸಾರ್ವಜನಿಕರು ಹಾಗೂ ಖಾಸಗಿ(ಪಿಪಿಪಿ) ಅವರ ಸಹಭಾಗಿತ್ವದಲ್ಲಿ ಟ್ರಾಮ ಕೇರ್ ಸೆಂಟರ್ ಆರಂಭಕ್ಕೆ ಚಾಲನೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದರು. 

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಹಲವು ವರ್ಷಗಳ ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗಿದೆ. ಮೈಸೂರು, ಮಂಗಳೂರು ಹಾಗೂ ಸುಳ್ಯಕ್ಕೆ ಹೋಗುವುದು ತಪ್ಪಲಿದೆ ಎಂದರು. ಎಂಆರ್ ಐ ಸ್ಕ್ಯಾನಿಂಗ್ ಮಾಡಿಸುವುದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ, ಪಾರ್ಶ್ವವಾಯು, ಮೂಳೆ ಸೇರಿದಂತೆ ದೇಹದಲ್ಲಿ ಎಲ್ಲಾ ರೀತಿಯ ರೋಗವನ್ನು ಪತ್ತೆಹಚ್ಚಲು ಎಂಆರ್ ಐ ಸಹಕಾರಿಯಾಗಿದೆ ಎಂದು ವಿವರಿಸಿದರು. ಎಂಆರ್ ಐ ಸ್ಕ್ಯಾನಿಂಗ್ ಯಂತ್ರ ಅಳವಡಿಸಲಾಗಿದ್ದು, ಕೂಡಲೇ ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. 

ನಿರ್ಮಲಾ ಸೀತಾರಾಮನ್, ಜೆ.ಪಿ.ನಡ್ಡಾ ಸೇರಿ ಕೇಂದ್ರ ಸಚಿವರುಗಳು ರಾಜೀನಾಮೆ ಕೊಡಲಿ: ಸಚಿವ ಶರಣ ಪ್ರಕಾಶ್ ಪಾಟೀಲ್

ವೈದ್ಯಕೀಯ ಶಿಕ್ಷಣ ಸಂಸ್ಥೆಯ ಮುಂದುವರೆದ ಅಭಿವೃದ್ಧಿ ಕಾಮಗಾರಿಗೆ 50 ರಿಂದ 60 ಕೋಟಿ ರೂ ಬಿಡುಗಡೆಗೆ ಸಚಿವರಲ್ಲಿ ಮನವಿ ಮಾಡಿದರು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಸರ್ಕಾರ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದು ತಿಳಿಸಿದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಸಿನ್ ಅವರು ಜಿಲ್ಲೆಯಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಶೀಘ್ರ ಆರಂಭವಾಗಲಿದೆ ಎಂದು ತಿಳಿಸಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ವಿಶಾಲ್ ಕುಮಾರ್ ಅವರು ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಇದ್ದರು.

click me!