ರಸ್ತೆ ಅವ್ಯವಸ್ಥೆ: ಅಸ್ವಸ್ಥ ವೃದ್ಧೆಯನ್ನು ಹೊತ್ತು ಆಸ್ಪತ್ರೆಗೆ ಸಾಗಿಸಿದ ಸಂಬಂಧಿಕರು!

By Kannadaprabha NewsFirst Published Aug 21, 2022, 8:23 AM IST
Highlights
  • ಸಂಪರ್ಕ ರಸ್ತೆ ಒದಗಿಸಿಕೊಡಿ ಎಂದು ಸುದೀರ್ಘ ಮನವಿ ಸಲ್ಲಿಸಿದರೂ ಇದುವರೆಗೆ ಸ್ಪಂದಿಸಿಲ್ಲ.
  • ಸಮರ್ಪಕ ರಸ್ತೆ ಸೌಲಭ್ಯವಿಲ್ಲದೆ ಗ್ರಾಮಸ್ಥರು ದಿನನಿತ್ಯ ಪರದಾಡುತ್ತಿದ್ದಾರೆ.
  • ಸಚಿವ ಅಂಗಾರ ಕ್ಷೇತ್ರ ಕಡಬ ತಾಲೂಕಿನ ನೂಜಿಬಾಳ್ತಲ ಗ್ರಾಮದ ಬಳಕ್ಕ ಜನರ ಗೋಳು ಕೇಳೋರಿಲ್ಲ.

ಉಪ್ಪಿನಂಗಡಿ (ಆ.21): ಸಂಪರ್ಕ ರಸ್ತೆ ಒದಗಿಸಿಕೊಡಿ ಎಂದು ಸುದೀರ್ಘ ಮನವಿ ಸಲ್ಲಿಸುತ್ತಾ ಬಂದರೂ ಸಮರ್ಪಕ ರಸ್ತೆ ಸೌಲಭ್ಯವಿಲ್ಲದ ಕಾರಣ ಅನಾರೋಗ್ಯ ಪೀಡಿತ ವೃದ್ಧೆಯೋರ್ವರನ್ನು ಮರದ ಬಡಿಗೆಯಲ್ಲಿ ಹೊತ್ತುಕೊಂಡು ಆಸ್ಪತ್ರೆಯತ್ತ ಸಾಗಿಸಿದ ಘಟನೆ ಸಚಿವ ಅಂಗಾರ ಕ್ಷೇತ್ರ ಕಡಬ ತಾಲೂಕಿನ ನೂಜಿಬಾಳ್ತಲ ಗ್ರಾಮದ ಬಳಕ್ಕ ಎಂಬಲ್ಲಿ ನಡೆದಿದೆ.

ಹಗರಿಗಜಾಪುರ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಹೋಗುವುದೇ ಹರಸಾಹಸ

ಕಡಬ(Kadaba) ತಾಲೂಕಿನ ನೂಜಿಬಾಳ್ತಿಲ(Noolibaltila) ಗ್ರಾಮದ ಬಳಕ್ಕ ನಿವಾಸಿ ಕಮಲ (70) ಎಂಬ ವೃದ್ಧೆ ತಿಂಗಳ ಹಿಂದೆ ಬಿದ್ದು ಕಾಲು ಮುರಿತಕ್ಕೊಳಗಾಗಿದ್ದರು. ಅವರ ಕಾಲಿಗೆ ಪ್ಲಾಸ್ಟರ್‌ ಅಳವಡಿಸಲಾಗಿದ್ದು, ಅದನ್ನು ತೆಗೆಯಲು ಆಸ್ಪತ್ರೆಗೆ ತೆರಳುವ ವೇಳೆ ಈ ಭಾಗಕ್ಕೆ ವಾಹನ ಬರಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಕಮಲ ಅವರ ಸ್ಥಳೀಯ ಸಂಬಂಧಿಕರಿಬ್ಬರು ಮರದ ಬಡಿಗೆಗೆ ಬಟ್ಟೆಕಟ್ಟಿಅದರಲ್ಲಿ ವೃದ್ದೆಯನ್ನು ಕುಳ್ಳಿರಿಸಿ ಸುಮಾರು ಅರ್ಧ ಕಿ.ಮೀ. ದೂರದ ವರೆಗೆ ಹೊತ್ತುಕೊಂಡು ಸಾಗಿಸಿದ್ದಾರೆ. ಬಳಿಕ ಅಲ್ಲಿಂದ ಬೈಕ್‌ ಮೂಲಕ ವೃದ್ಧೆಯನ್ನು ಕುಳ್ಳಿರಿಸಿ ಕರೆದೊಯ್ದು ಅಲ್ಲಿಂದ ಉಪ್ಪಿನಂಗಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನೂಜಿಬಾಳ್ತಿಲದ ಬಳಕ್ಕ ಪ್ರದೇಶದಲ್ಲಿ ಸುಮಾರು ಮನೆಗಳಿಗೆ ಸಂಪರ್ಕಿಸಲು ತೋಡು ದಾಟಬೇಕಾಗಿದ್ದು, ಅಲ್ಲಿ ಸೇತುವೆ ನಿರ್ಮಾಣಗೊಂಡಿಲ್ಲದ ಕಾರಣ ಮಳೆಗಾಲದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತದೆ. ಬಳಕ್ಕದಿಂದ ಉದನೆ-ಕಲ್ಲುಗುಡ್ಡೆ ಸಂಪರ್ಕ ರಸ್ತೆಯಲ್ಲಿ ರಸ್ತೆ ತೀರಾ ಹದಗೆಟ್ಟಿದ್ದು ದುರಸ್ತಿಗೆ ಹಲವು ಭಾರಿ ಮನವಿ ಸಲ್ಲಿಸಿದ್ದೇವೆ ಕಾರ್ಯಗತವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮರದ ಬಡಿಗೆಯಲ್ಲಿ ಇಬ್ಬರು ಹೊತ್ತುಕೊಂಡು ಸಾಗುತ್ತಿರುವ ದೃಶ್ಯದ ವಿಡಿಯೋ ವೈರಲ್‌ ಆಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷೆ ಗಂಗಮ್ಮ, ಪ್ರಭಾರ ಪಿಡಿಒ ಗುರುವ ಎಸ…., ಸದಸ್ಯೆ ವಿನಯ ಕುಮಾರಿ ಬಳಕ್ಕ ಅವರು ಜೀಪು ಮೂಲಕ ಬಳಕ್ಕದ ವೃದ್ಧೆಯ ಮನೆಯವರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಸಿದ್ದಾಪುರ- ನಂದಿಹಳ್ಳಿ ರಸ್ತೆ ದುರಸ್ತಿಗಾಗಿ ಪ್ರತಿಭಟನೆ

ವೃದ್ಧೆಯನ್ನು ಹೊತ್ತುಕೊಂಡು ಕೊಂಡೊಯ್ಯುತ್ತಿರುವ ವಿಡಿಯೋ ವೈರಲ್‌ ಆದ ಮಾಹಿತಿ ಬಂದ ಕೂಡಲೇ ನಾನು ಹಾಗೂ ಪಿಡಿಒ, ಸದಸ್ಯರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದೇವೆ. ನಾವು ಬಳಕ್ಕಕ್ಕೆ ಜೀಪು ಮೂಲಕ ತೆರಳಿದ್ದೇವೆ. ಅಲ್ಲಿಯವರಿಗೆ ಬದಲಿ ರಸ್ತೆ ವ್ಯವಸ್ಥೆ ಇದೆ. ಆಗಿದ್ದೂ ಅವರು ಬೇರೆ ರಸ್ತೆ ಮೂಲಕ ಹೊತ್ತುಕೊಂಡು ಹೋಗಿರುವ ಸಾಧ್ಯತೆ ಇದೆ. ಬೇಡಿಕೆ ಇರುವ ಕಡೆ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿಡಿಯೋ ದಲ್ಲಿ ಆರೋಪಿಸಿರುವಂತೆ ಬಳಕ್ಕಕ್ಕೆ ರಸ್ತೆಯೇ ಇಲ್ಲವೆನ್ನುವುದು ಸತ್ಯಕ್ಕೆ ದೂರವಾಗಿದೆ ಎಂದು ನೂಜಿಬಾಳ್ತಿಲ ಗ್ರಾ. ಪಂ. ಅಧ್ಯಕ್ಷೆ ಗಂಗಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ರಸ್ತೆಯಲ್ಲಿದ್ದ ಹೊಂಡಕ್ಕೆ ಬಿದ್ದೆದ್ದ ರಾಜ್ಯ ಸಾರಿಗೆ ಬಸ್‌: ಪ್ರಯಾಣಿಕನ ಸೊಂಟ ಮುರಿತ:

ಮಂಗಳೂರಿನಿಂದ ಪುತ್ತೂರಿಗೆ ಕೆಎಸ್‌ಆರ್‌ಟಿಸಿ ಬಸ್‌ ರಸ್ತೆಯ ಅವ್ಯವಸ್ಥೆಯಿಂದಾಗಿ ಒಮ್ಮಿಂದೊಮ್ಮೆಲೆ ಗುಂಡಿಗೆ ಬಿದ್ದು ಎದ್ದಾಗ ಹಿಂಬದಿ ಸೀಟಿನಲ್ಲಿದ್ದ ಬೆಳ್ಳಾರೆಯ ವ್ಯಕ್ತಿ ಸೀಟಿನಿಂದ ಮೇಲಕ್ಕೆ ಎಸೆಯಲ್ಪಟ್ಟು, ಸೊಂಟಕ್ಕೆ ಏಟು ತಗುಲಿ ಗಂಭೀರಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ಬೆಳ್ಳಾರೆಯ ತಡೆಗಜೆ ವಿಜಯ ಕುಮಾರ್‌ ಸುಳ್ಯದ ಮೊಬೈಲ್‌ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಕಾರ್ಯ ನಿಮಿತ್ತ ಮಂಗಳೂರಿಗೆ ಹೋಗಿ ವಾಪಸ್‌ ಬೆಳ್ಳಾರೆಗೆ ರಾಜ್ಯ ಸಾರಿಗೆ ಬಸ್‌ನಲ್ಲಿ ಬರುತ್ತಿದ್ದರು. ಬಸ್‌ ಕಲ್ಲಡ್ಕ ಬಳಿ ತಲುಪುತ್ತಿದ್ದಂತೆ ಒಮ್ಮಿಂದೊಮ್ಮೆಲೆ ರಸ್ತೆಯಲ್ಲಿದ್ದ ಹೊಂಡಕ್ಕೆ ಬಿದ್ದು ಎದ್ದಿದೆ. ಬಸ್‌ ಗುಂಡಿಗೆ ಬಿದ್ದ ರಭಸಕ್ಕೆ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವಿಜಯ ಕುಮಾರ್‌ ಮೇಲಕ್ಕೆ ಎಸೆಯಲ್ಪಟ್ಟು ಬೀಳುವಾಗ ಸೀಟಿನ ರಾಡ್‌ ಸೊಂಟಕ್ಕೆ ತಾಗಿ ಗಂಭೀರ ಗಾಯಗೊಂಡರಲ್ಲದೆ, ಸೊಂಟದಿಂದ ಕೆಳಭಾಗ ಸ್ಪರ್ಶ ಕಳೆದುಕೊಂಡು, ಬೊಬ್ಬೆ ಹಾಕಿದ್ದಾರೆ. ತಕ್ಷಣ ಬಸ್ಸು ನಿಲ್ಲಿಸಿದ ಚಾಲಕ ಗಂಭೀರ ಸ್ಥಿತಿಯಲ್ಲಿದ್ದ ವಿಜಯರವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.

ವೆನ್ಲಾಕ್‌ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಬೆನ್ನುಹುರಿ ಹಾಗೂ ಕುತ್ತಿಗೆ ಸಮೀಪದ ಎಲುಬು ಜಖಂಗೊಂಡಿರುವುದಾಗಿಯೂ ಶಸ್ತ್ರಚಿಕಿತ್ಸೆಗೆ ಮಾಡಬೇಕಾಗಿರುವುದಾಗಿಯೂ ತಿಳಿಸಿದ್ದಾರೆ. ರಸ್ತೆಯ ಅವ್ಯವಸ್ಥೆ ಹಾಗೂ ಬಸ್‌ ಚಾಲಕನ ನಿರ್ಲಕ್ಷ್ಯತನದ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದ್ದು, ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!