
ದೊಡ್ಡಬಳ್ಳಾಪುರ, (ಜೂ.25): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರನನ್ನು ಇಂದು (ಮಂಗಳವಾರ) ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಜೆಎಂಬಿ ಉಗ್ರ ಸಂಘಟನೆಯ ಪಶ್ಚಿಮ ಬಂಗಾಳ ಮೂಲದ ಹಬಿಬುಲ್ಲಾ ರೆಹಮಾನ್ ಎಂಬಾತನೇ ಬಂಧಿತ ಶಂಕಿತ ಉಗ್ರ. 2018ರ ಅಗಸ್ಟ್ ನಲ್ಲಿ ಎನ್ಐಎ ಅಧಿಕಾರಿಗಳ ದಾಳಿಯಲ್ಲಿ ಶಂಕಿತ ಉಗ್ರ ಕೌಸರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಆದ್ರೆ ಆ ವೇಳೆ ರೆಹಮಾನ್ ಎಸ್ಕೇಪ್ ಆಗಿದ್ದ. ಬಳಿಕ ಮೌಲ್ವಿ ಸಹಕಾರದಿಂದ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಅಡಗಿಕುಳಿತ್ತಿದ್ದ.
ಅಂದಿನಿಂದ ರೆಹಮಾನ್ ಗಾಗಿ ಬಲೆ ಬೀಸಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೆ, ರೆಹಮಾನ್ ದೊಡ್ಡಬಳ್ಳಾಪುರದ ಮಸೀದಿಯಲ್ಲಿರುವುದು ಮಾಹಿತಿ ಸಿಕ್ಕಿದೆ. ಈ ಮಾಹಿತಿಯ ಮೇರೆಗೆ ಮಸೀದಿ ಮೇಲೆ ದಾಳಿ ಮಾಡಿ ರೆಹಮಾನ್ ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
2014 ರಲ್ಲಿ ಪಶ್ಚಿಮ ಬಂಗಾಳದ ಮನೆಯೋಂದರಲ್ಲಿ ಕಚ್ಚಾ ಬಾಂಬ್ ತಯಾರು ಮಾಡುವ ವೇಳೆ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಟ್ರಾನ್ಸಿಟ್ ವಾರೆಂಟ್ ಮೂಲಕ ರೆಹಮಾನ್ನನ್ನು ಕೊಲ್ಕತ್ತಾ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ.
ಇನ್ನು ಉಗ್ರನಿಗೆ ಆಶ್ರಯ ನೀಡಿದ್ದ ಮೌಲ್ವಿ ಅನ್ವರ್ ಹುಸೇನ್ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.