Land Slides: ಉತ್ತರ ಕನ್ನಡ ಜಿಲ್ಲೆಯ 5 ಸ್ಥಳಗಳಲ್ಲಿ ಮತ್ತೆ ಭೂಕುಸಿತ ಸಾಧ್ಯತೆ: ಈ 5 ಪ್ರದೇಶಗಳಿಗೆ ಅಪಾಯವಂತೆ!

By Govindaraj S  |  First Published May 22, 2022, 1:40 AM IST

ಮಳೆಗಾಲ ಪ್ರಾರಂಭವಾಗಲು ಇನ್ನೇನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿಯಿವೆ. ಆದ್ರೆ, ಅಸಾನಿ ಚಂಡಮಾರುತದ ಕಾರಣದಿಂದ ರಾಜ್ಯದ ಹಲವೆಡೆ ಭಾರೀ ಮಳೆ ಮುಂದುವರಿದಿದೆ.


ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಮೇ.22): ಮಳೆಗಾಲ ಪ್ರಾರಂಭವಾಗಲು ಇನ್ನೇನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿಯಿವೆ. ಆದ್ರೆ, ಅಸಾನಿ ಚಂಡಮಾರುತದ ಕಾರಣದಿಂದ ರಾಜ್ಯದ ಹಲವೆಡೆ ಭಾರೀ ಮಳೆ ಮುಂದುವರಿದಿದೆ. ಕರಾವಳಿ ಕರ್ನಾಟಕ ಭಾಗದ ಉತ್ತರಕನ್ನಡ ಜಿಲ್ಲೆಯಂತೂ ಈ ಬಾರಿಯ ಮಳೆ ಮತ್ತಷ್ಟು ಆತಂಕ ತಂದೊಡ್ಡಿದೆ.  ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಈ ಬಾರಿಯೂ ಜಿಲ್ಲೆಯ ಐದು ಸ್ಥಳಗಳಲ್ಲಿ ಮತ್ತೆ ಭೂಕುಸಿತ ಸಾಧ್ಯತೆಯ ಎಚ್ಚರಿಗೆ ನೀಡಿದ್ದು, ಜನರನ್ನು ಭೀತಿಗೊಳಗಾಗುವಂತೆ ಮಾಡಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

Latest Videos

undefined

ಕಳೆದ ಮೂರು ವರ್ಷಗಳಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಉತ್ತರಕನ್ನಡ‌ ಜಿಲ್ಲೆಯಂತೂ ಅಕ್ಷರಶಃ ತತ್ತರಿಸಿ ಹೋಗಿದೆ. ಇದೀಗ ಅಸಾನಿ ಚಂಡಮಾರುತದ ಪ್ರಭಾವದಿಂದ ಅವಧಿ ಮುಂಚಿತವಾಗಿ ಕುಮಟಾ, ಮುಂಡಗೋಡು, ಯಲ್ಲಾಪುರ, ಭಟ್ಕಳ, ಅಂಕೋಲಾ, ಗೋಕರ್ಣ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮನೆಗಳು, ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಮುಂಡಗೋಡು, ಕುಮಟಾ ಭಾಗದಲ್ಲಂತೂ ಮಳೆಯಿಂದ‌ ಸುಮಾರು ಮೂವತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಸೊತ್ತುಗಳು ನಷ್ಟವಾಗಿದೆ. ಇನ್ನು ಕಳೆದ ವರ್ಷ ಯಲ್ಲಾಪುರದ ಅರಬೈಲ್ ಘಾಟ್, ಕಳಚೆ, ಜೋಯಿಡಾ ಭಾಗದ ಅಣಶಿ ಘಾಟ್, ಕೈಗಾ, ಕದ್ರಾ, ಕೊಡಸಳ್ಳಿ, ಶಿರಸಿ ತಾಲೂಕಿನ ಜಾಜಿಗುಡ್ಡ, ಸಿದ್ದಾಪುರ ತಾಲೂಕಿನ ವಿವೇಕಾನಂದ ನಗರ, ಕಾನಸೂರು ಭಾಗದಲ್ಲಿ ದೊಡ್ಡ ಮಟ್ಟದ ಭೂಕುಸಿತವಾಗಿತ್ತು. 

Karwar: ಕಡುಬಡತನದಲ್ಲಿ ಅರಳಿದ ಪ್ರತಿಭೆ: ಅಂಗವಿಕಲ ಯುವತಿಯ ಶಿಕ್ಷಣಕ್ಕೆ ಬೇಕಿದೆ ಸಹಾಯ ಹಸ್ತ

ಇದರಿಂದ ತೋಟ, ಮನೆಗಳು, ರಸ್ತೆಗಳು ಸಂಪೂರ್ಣ ಹಾನಿಯಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ತಂಡವನ್ನು ಅಧ್ಯಯನಕ್ಕೆ ಕಳುಹಿಸಿತ್ತು. ಇದೀಗ ಈ ಅಧ್ಯಯನ ತಂಡ ತನ್ನ ವರದಿಯನ್ನ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ಈ ಬಾರಿ ಮತ್ತೆ ಗುಡ್ಡ ಕುಸಿತ, ಭೂ ಕುಸಿತದ ಎಚ್ಚರಿಕೆ ನೀಡಿದೆ‌. 3 ಜನವಸತಿ, 2 ರಸ್ತೆ ಭಾಗವಿರುವ ಯಲ್ಲಾಪುರದ ಅರಬೈಲ್ ಘಾಟ್, ಕಳಚೆ, ಜೊಯಿಡಾದ ಅಣಶಿ ಘಾಟ್, ಶಿರಸಿಯ ಜಾಜಿಗುಡ್ಡ, ಸಿದ್ಧಾಪುರದ ವಿವೇಕಾನಂದ ನಗರದಲ್ಲಿ ಭೂ ಕುಸಿತ ಹಾಗೂ ಗುಡ್ಡ ಕುಸಿತದ ಸಾಧ್ಯತೆಗಳ ಬಗ್ಗೆ ತಿಳಿಸಿದೆ. ಇದರಿಂದಾಗಿ ಸಮಸ್ಯೆ ಎದುರಾಗುವ ಸ್ಥಳಗಳ ಜನರನ್ನು ಸ್ಥಳಾಂತರಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. 

ಅಂದಹಾಗೆ, ಯಾವಾಗ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಜಿಲ್ಲೆಗೆ ಆಗಮಿಸಿತ್ತೋ ಈ ವೇಳೆ ಜಿಲ್ಲಾಧಿಕಾರಿಯ ಸೂಚನೆಯಂತೆ ಕೈಗಾ ಅಣುಸ್ಥಾವರ ಹಾಗೂ ಕೊಡಸಳ್ಳಿ ಡ್ಯಾಂ ಸುತ್ತಮುತ್ತಲಿನ ಗುಡ್ಡ ಪ್ರದೇಶಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗಿತ್ತು. ಕಳೆದ ಬಾರಿ ಮಳೆಯ ಕಾರಣದಿಂದಲೇ ಇಲ್ಲಿನ ಸುತ್ತಮುತ್ತಲ ಗುಡ್ಡಗಳಲ್ಲಿ ಕುಸಿತವಾಗಿದೆ ಎಂದು ತಿಳಿಸಿರುವ ತಂಡ, ಅಣುಸ್ಥಾವರ ಹಾಗೂ ಡ್ಯಾಮ್‌ಗೆ ಯಾವುದೇ ತೊಂದರೆಯಿಲ್ಲ ಎಂಬ ಮಾಹಿತಿಯನ್ನೂ ನೀಡಿದೆ. ಇನ್ನು ಯಲ್ಲಾಪುರ ಭಾಗದ ಕಳೆಚೆಯಲ್ಲಿ ಕಳೆದ ಬಾರಿ ಚಿಕ್ಕ ಹಳ್ಳದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದ್ದು, ಇಲ್ಲಿಯೂ ನಿರಂತರ ಕುಸಿತವಾಗುತ್ತಿವೆ. ಈ ಭಾಗದಲ್ಲಿ 331 ಮನೆಗಳಿದ್ದು, 1212 ಜನರು ವಾಸವಾಗಿದ್ದಾರೆ. ಆದರೆ, ಇಲ್ಲಿನ ಜನರನ್ನು ಈವರೆಗೂ ಸ್ಥಳಾಂತರ ಮಾಡೋ ಪ್ರಕ್ರಿಯೆ ನಡೆದಿಲ್ಲ. 

Karwar: ಅಡಿಕೆ ಮರದ ಸೇತುವೆಯೇ ಗತಿ ಈ ಗ್ರಾಮಸ್ಥರಿಗೆ: ಸಾಲ್ಕೋಡು ಹಳ್ಳ ದಾಟಲು ಹರಸಾಹಸ!

ಹೀಗಾಗಿ ಕೇಂದ್ರದ ತಂಡದ ವರದಿಯಿಂದ ಈ ಭಾಗದ ಜನರಲ್ಲೂ ಭೀತಿ ಮೂಡಿಸಿದೆ. ಈ ನಡುವೆ ಅವಧಿ ಮುಂಚಿತವಾಗಿ ಈ ಸಲ ಮಳೆ ಪ್ರಾರಂಭವಾಗಿದ್ದರಿಂದ ಜಿಲ್ಲಾಡಳಿತ ಜಿಲ್ಲೆಯಲ್ಲಿ ಅಲರ್ಟ್ ಘೋಷಣೆ ಮಾಡಿದ್ದು, ಪ್ರವಾಹದಿಂದ ತೊಂದರೆಗೊಳಗಾಗುವ ಪ್ರದೇಶದಲ್ಲಿ ರೆಸ್ಕ್ಯೂ ಟೀಮ್ ಸಜ್ಜುಗೊಳಿಸಿ, ಸೂಕ್ಷ್ಮ ಪ್ರದೇಶದಲ್ಲಿ ರಕ್ಷಣೆಗೆ ಬೋಟ್ ಗಳನ್ನು ಸಿದ್ಧಗೊಳಿಸಿದೆ. ಒಟ್ಟಿನಲ್ಲಿ ಪ್ರಸ್ತುತ, ಅಸಾನಿ ಚಂಡಮಾರುತದಿಂದ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಹಾನಿಗಳಾಗಿವೆ. ಆದರೆ, ಮುಂದಿನ ತಿಂಗಳಿಂದ ಮಾನ್ಸೂನ್ ಪ್ರಾರಂಭವಾದ ಬಳಿಕ ಜಿಲ್ಲೆಯಲ್ಲಿ ಮತ್ತೆ ಅಪಾರ ಹಾನಿ ಸಂಭವಿಸುವ ಸಾಧ್ಯತೆಗಳಿದೆ. ಈ ಕಾರಣದಿಂದ ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಭೂ ಕುಸಿತ ಸಾಧ್ಯತೆಗಳಿರುವ ಸ್ಥಳಗಳಿಂದ ಜನರನ್ನು ಬೇರೆಡೆ ಸ್ಥಳಾಂತರಿಸಿ, ಭಾರೀ ನಷ್ಟ ತಪ್ಪಿಸಬೇಕಿದೆ. 

click me!