
ಸೋಮರಡ್ಡಿ ಅಳವಂಡಿ
ಕೊಪ್ಪಳ : ಈ ಗ್ರಾಮದಲ್ಲಿ ಮಕ್ಕಳು, ವೃದ್ಧರು ಕನಿಷ್ಠ ವಾರಕ್ಕೆ ಮೂರು ದಿನ ನೆಬುಲೈಜೇಷನ್ ಮಾಡಿಸಿಕೊಳ್ಳಬೇಕು. ಇದಿಲ್ಲದಿದ್ದರೆ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಂತ ಇದು ಯುದ್ಧಪೀಡಿತ ಪ್ರದೇಶವಲ್ಲ. ಅನಿಲ ಸೋರಿಕೆಯಿಂದ ಆದ ತೊಂದರೆಯೂ ಅಲ್ಲ. ಬದಲಾಗಿ, ಕಾರ್ಖಾನೆಗಳ ಧೂಳು, ಕಪ್ಪು ಬಣ್ಣದ ಹಾರುಬೂದಿಯಿಂದ ಉದ್ಭವಿಸಿರುವ ಸಮಸ್ಯೆ. ಈ ಸಮಸ್ಯೆ ಇಲ್ಲಿನ ಜನರ ಆರೋಗ್ಯವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.
ಕೊಪ್ಪಳದ ಹಿರೇಬಗನಾಳ ಗ್ರಾಮಸ್ಥರ ಗೋಳಿದು. ಕಾರ್ಖಾನೆ ತ್ಯಾಜ್ಯದಿಂದ, ಧೂಳಿನಿಂದ ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿರುವ ಗ್ರಾಮದ ಬಹುತೇಕ ಮನೆಗಳಲ್ಲಿ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಜನರು ನೆಬುಲೈಜೇಷನ್ ಮಾಸ್ಕ್‌ಗಳನ್ನಿಟ್ಟುಕೊಂಡಿದ್ದಾರೆ.
ಹಿರೇಬಗನಾಳ ಗ್ರಾಮದಲ್ಲಿ ಹಾಗೆ ಸುತ್ತಾಡಿದರೇ ಸಾಕು, ಒಂದಿಲ್ಲೊಂದು ಮಗು, ಇಲ್ಲವೇ ವೃದ್ಧರು ನೆಬುಲೈಜೇಷನ್ ಮಾಸ್ಕ್ ಹಾಕಿಕೊಂಡಿರುವುದು ಕಂಡು ಬರುತ್ತದೆ. ಅತಿಯಾದ ಕಾರ್ಖಾನೆಯ ಧೂಳು ಮತ್ತು ತ್ಯಾಜ್ಯದ ಹೊಗೆಯಿಂದ ಇಲ್ಲಿಯ ಜನರು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ, ವೈದ್ಯರ ಸಲಹೆಯಂತೆ ಪ್ರತಿ ಮನೆಯಲ್ಲಿಯೂ ನೆಬುಲೈಜೇಷನ್ ಮಾಸ್ಕ್ ಖರೀದಿಸಿಟ್ಟುಕೊಂಡಿದ್ದಾರೆ.
ಈ ಕುರಿತು ಗ್ರಾಮದ ಮಲ್ಲೇಶಪ್ಪ ಎಂಬುವರು ಮಾತನಾಡಿ, ‘ಅದೇನೋ ನೋಡ್ರಿ, ನಮ್ಮೂರಿನ ಕಾರ್ಖಾನೆಯ ಹೊಗೆಯ ಧೂಳಿನಿಂದ ಹೊಲದಲ್ಲಿನ ಮೇವನ್ನು ಜಾನುವಾರುಗಳು ತಿನ್ನುವುದಿಲ್ಲ. ಮನೆಯಲ್ಲಿಯೂ ನಾವು ನೆಮ್ಮದಿಯಾಗಿರುವಂತೆ ಇಲ್ಲ. ಮನೆಯೆಲ್ಲಾ ಕರಿ ಮಸಿಯಂತಾಗುತ್ತದೆ. ಅದುವೆ ನಮ್ಮ ದೇಹದೊಳಗೆ ಹೋಗುತ್ತದೆ. ಅದರಿಂದಲೇ ನಮಗೆ ಉಸಿರಾಟದ ಸಮಸ್ಯೆಯಾಗಿದೆ ಎಂದು ಗೋಳು ತೋಡಿಕೊಂಡರು.
ಗ್ರಾಮದ ಮಹೇಶ ವದಗನಾಳ ಹೇಳುವ ಕಥೆ ಇನ್ನೂ ಘನಘೋರ. ನಮ್ಮ ಮನೆಗಳಲ್ಲಿನ ಜಾನುವಾರುಗಳು ಸಣಕಲಾಗಿದ್ದು, ಕಟ್ಟಿಗೆಯಾದಂತೆ (ಸೊರಗಿ) ಆಗಿವೆ. ಅಷ್ಟೇ ಅಲ್ಲ, ಮಕ್ಕಳು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ಹೊಸ ಸಮಸ್ಯೆ ಸೃಷ್ಟಿಯಾಗಿದ್ದು, ನನಗೆ ಕಣ್ಣಿನಲ್ಲಿ ದುರ್ಮಾಂಸ ಬೆಳೆದಿದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ, ನಾನಿನ್ನು 25-30 ವರ್ಷದವನಾಗಿದ್ದರೂ ಕಣ್ಣಿನ ಆಪರೇಶನ್ ಮಾಡಿಸಬೇಕಾಗಿದೆ. ಈಗ ಈರುಳ್ಳಿ ಬೆಳೆ ಫಸಲಿಗೆ ಬಂದಿದ್ದು, ಅದನ್ನು ಕಿತ್ತಿದ್ದೇವೆ. ಅದನ್ನು ಮಾರುಕಟ್ಟೆಗೆ ಸಾಗಿಸಿದ ನಂತರ ಆಸ್ಪತ್ರೆಗೆ ಹೋಗಿ ಕಣ್ಣಿನ ಆಪರೇಶನ್ ಮಾಡಿಸಿಕೊಂಡು ಬರುತ್ತೇನೆ ಎಂದು ಕಣ್ಣೀರಿಟ್ಟರು.
ಹಿರಿಯ ಸಾಹಿತಿ ಹಾಗೂ ಪರಿಸರ ಮಾಲಿನ್ಯ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ನಾವು ಇದಕ್ಕಾಗಿಯೇ ಕೊಪ್ಪಳ ತಾಲೂಕಿನ ಬಾಧಿತ 20 ಗ್ರಾಮಗಳ ಆರೋಗ್ಯ ಸರ್ವೇ ಮಾಡಿಸಿ ಎಂದು ಆಗ್ರಹಿಸುತ್ತಲೇ ಇದ್ದೇವೆ. ಈಗಾಗಲೇ ಕಾರ್ಖಾನೆಗಳ ತ್ಯಾಜ್ಯದಿಂದ ಇಲ್ಲಿಯ ಜನರು ಕ್ಯಾನ್ಸರ್ ನಿಂದ ಸಾಯುತ್ತಿದ್ದಾರೆ. ಕೆಮ್ಮು, ಧಮ್ಮನಿಂದ ಬಳಲುತ್ತಿದ್ದಾರೆ. ಇದೆಲ್ಲವನ್ನು ನಾವು ಸರ್ವೇ ಮಾಡಿದ್ದೇವೆ. ಹಿರೇಬಗನಾಳ ಸೇರಿದಂತೆ ಇಲ್ಲಿನ ಸುತ್ತಮುತ್ತಲ 20 ಗ್ರಾಮಗಳಲ್ಲಿ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಅವರ ಹೊಲದಲ್ಲಿ ಬೆಳೆಯೂ ಬೆಳೆಯುತ್ತಿಲ್ಲ, ಮನೆಯಲ್ಲಿ ನೆಮ್ಮದಿಯಿಂದ ಉಸಿರಾಡಲೂ ಆಗುತ್ತಿಲ್ಲ. ಸರ್ಕಾರ ಈ ದಿಸೆಯಲ್ಲಿ ಕ್ರಮ ವಹಿಸಬೇಕಾಗಿದೆ ಎಂದು ಅಳಲು ತೋಡಿಕೊಂಡರು.
ನೆಬುಲೈಜೇಷನ್ ಮಾಸ್ಕ್ ಎಂಬುದು ಉಸಿರಾಟದ ಸಮಸ್ಯೆಗಳಿಗೆ ಔಷಧಿಗಳನ್ನು ನೇರವಾಗಿ ಶ್ವಾಸಕೋಶಕ್ಕೆ ತಲುಪಿಸಲು ಬಳಸುವ ವೈದ್ಯಕೀಯ ಸಾಧನ. ಇದು ವಿಷಕಾರಿಯಲ್ಲದ ಪಿವಿಸಿಯಿಂದ ಮಾಡಲ್ಪಟ್ಟಿದ್ದು, ಮಕ್ಕಳು ಮತ್ತು ವಯಸ್ಕರಿಗೆ ಬೇರೆ, ಬೇರೆ ಗಾತ್ರಗಳಲ್ಲಿ ಲಭ್ಯವಿದೆ. ಈ ಮಾಸ್ಕ್‌ಗಳು ನಮ್ಮ ಉಸಿರಾಟದ ಗಾಳಿಯಲ್ಲಿರುವ ಹಾನಿಕಾರಕ ಕಣಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತವೆ. ಸಾಧಾರಣವಾಗಿ ಇದನ್ನು ಆಸ್ತಮಾ, ಬ್ರಾಂಕೈಟಿಸ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.