ಕೊಡಗಿನಲ್ಲಿ ಕಂಕಣ ಭಾಗ್ಯ, ಸಂತಾನ ಪ್ರಾಪ್ತಿಗೆ ಪ್ರಾರ್ಥಿಸಿದ ನವ ವಧುವರರು: ಬಾಗಿನ ಅರ್ಪಿಸಿದ ಶಾಸಕ ಮಂತರ್ ಗೌಡ

By Govindaraj S  |  First Published Sep 6, 2024, 8:03 PM IST

ಹಿಂದೂ ಸಂಪ್ರದಾಯದಲ್ಲಿ ಇಂದಿಗೂ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವುದು ಎಂದರೆ ಅದೊಂದು ಅತ್ಯಂತ ಭಾವನಾತ್ಮಕ ವಿಷಯ. ಬಾಗಿನ ಎಂದ ಕೂಡಲೇ ಹೆಣ್ಣಿಗೆ ತನ್ನ ತವರಿನ ಸಿರಿ ನೆನಪಾಗುತ್ತದೆ. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಸೆ.06): ಹಿಂದೂ ಸಂಪ್ರದಾಯದಲ್ಲಿ ಇಂದಿಗೂ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವುದು ಎಂದರೆ ಅದೊಂದು ಅತ್ಯಂತ ಭಾವನಾತ್ಮಕ ವಿಷಯ. ಬಾಗಿನ ಎಂದ ಕೂಡಲೇ ಹೆಣ್ಣಿಗೆ ತನ್ನ ತವರಿನ ಸಿರಿ ನೆನಪಾಗುತ್ತದೆ. ಆದರೆ ಇಲ್ಲಿ ಮಾತ್ರ ಹೆಣ್ಣು ಮಕ್ಕಳು ಕಂಕಣಭಾಗ್ಯ, ಸಂತಾನ ಭಾಗ್ಯವನ್ನು ಬೇಡಿ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುತ್ತಾರೆ. ಹೌದು ಇಂತಹ ಅಪರೂಪದ ಜಾತ್ರೆ ನಡೆಯುವುದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮದಲ್ಲಿ. ಶ್ರೀ ಸಿದ್ದೇಶ್ವರ ಮತ್ತು ಬಸವೇಶ್ವರ ಹಾಗೂ ತಾಯಿ ಹೊನ್ನಮ್ಮ ದೇವಾಲಯದಲ್ಲಿ ಇಂತಹ ಅಪರೂಪದ ಜಾತ್ರಾ ಮಹೋತ್ಸವ ನಡೆಯಿತು. ಕೊಡಗು ಜಿಲ್ಲೆಯಿಂದ ಅಷ್ಟೇ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಬಾಗಿನ ಅರ್ಪಣೆಯ ಈ ಜಾತ್ರೆಗೆ ಆಗಮಿಸಿದ್ದರು. 

Latest Videos

undefined

ಐತಿಹಾಸಿಕ ಹೊನ್ನಮ್ಮನಿಗೆ ಹರಕೆ ಹೊತ್ತರೆ ಕಂಕಣ ಭಾಗ್ಯ ಕೂಡಿ ಬರುತ್ತದೆ, ಸಂತಾನ ಭಾಗ್ಯವಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ಅಪಾರ ನಂಬಿಕೆ ಇದೆ. ಹೀಗಾಗಿ ಮದುವೆಯಾಗದ ಹೆಣ್ಣು ಮಕ್ಕಳು ನಮಗೆ ಕಂಕಣ ಭಾಗ್ಯ ಕೂಡಿ ಬಂದರೆ ಹೊನ್ನಮ್ಮನಿಗೆ ಬಾಗಿನ ಅರ್ಪಣೆ ಮಾಡುತ್ತೇವೆ ಎಂತಲೂ ಹಾಗೂ ಸಂತಾನ ಪ್ರಾಪ್ತಿಯಾದರೆ ಬಾಗಿನ ಅರ್ಪಣೆ ಮಾಡುತ್ತೇವೆ ಎಂದು ಹರಕೆ ಹೊತ್ತುಕೊಳ್ಳುತ್ತಾರೆ. ಹೀಗಾಗಿ ಈ ಎರಡು ಬೇಡಿಕೆಗಳು ಈಡೇರಿದ ನವ ದಂಪತಿಗಳು ಹಾಗೂ ಬಾಣಂತಿಯರು ಹೊನ್ನಮ್ಮನ ಕೆರೆಗೆ ಬಂದು ಪೂಜೆ ಸಲ್ಲಿಸಿ ಭಕ್ತಿ ಭಾವದಿಂದ ಬಾಗಿನ ಅರ್ಪಿಸಿದರು. ಜೊತೆಗೆ ಅಲ್ಲಿನ ಸಿದ್ದೇಶ್ವರ ಮತ್ತು ಬಸವೇಶ್ವರ ದೇವರುಗಳಿಗೂ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಭಾವದಿಂದ ಬೇಡಿದರು. 

ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಕೂಡ ಗೌರಿ ಹಬ್ಬದ ದಿನವಾದ ಶುಕ್ರವಾರ ಐತಿಹಾಸಿಕ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿ ಭಕ್ತಿ ಭಾವ ಮೆರೆದರು. ನೂರಾರು ವರ್ಷಗಳ ಹಿಂದೆ ಈ ಗ್ರಾಮಕ್ಕೆ ತೀವ್ರ ಬರಗಾಲ ಬಂದು ಕುಡಿಯುವುದಕ್ಕೂ ನೀರು ಇರಲಿಲ್ಲ. ಹೀಗಾಗಿ ಗ್ರಾಮದ ಗೌಡ ಕೆರೆಯೊಂದನ್ನು ತೆಗೆಸಿದರು. ಆದರೆ ನೀರು ತುಂಬಲೇ ಇಲ್ಲ. ಕೆರೆ ತುಂಬಬೇಕಾದರೆ ಕೆರೆಗೆ ಹಿರಿಯ ಸೊಸೆಯ ಬಲಿ ಕೊಡಬೇಕಾಗಿದೆ ಎಂಬ ವಿಷಯ ತಿಳಿದು ಚಿಂತೆಗೆ ಒಳಗಾಗುತ್ತಾರೆ. ಆದರೆ ಸೊಸೆ ಹೊನ್ನಮ್ಮ ಗ್ರಾಮದ ಏಳಿಗೆಗಾಗಿ ಧೈರ್ಯದಿಂದಲೇ ಕೆರೆಗೆ ಆಹುತಿಯಾಗುತ್ತಾಳೆ. ಇಂತಹ ಹೊನ್ನಮ್ಮನಿಗೆ ಬಾಗಿನ ಅರ್ಪಿಸಿದರೆ ಎಲ್ಲವೂ ಒಳಿತಾಗಲಿದೆ ಎಂಬ ನಂಬಿಕೆಯಿಂದ ಇನ್ನೂರು ವರ್ಷಗಳಿಗೂ ಹೆಚ್ಚು ಸಮಯದಿಂದ ಇಂದಿಗೂ ನವ ದಂಪತಿಗಳು ಶ್ರದ್ಧಾಭಕ್ತಿಯಿಂದ ಪೂಜಿಸಿ ಬಾಗಿನ ಅರ್ಪಿಸುತ್ತಾರೆ. 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಪರವಾದ ಏಕೈಕ ಪಕ್ಷ ಬಿಜೆಪಿ: ಸಂಸದ ಯದುವೀರ ಒಡೆಯರ್‌

ಸುಮಾರು ಇನ್ನೂರು, ಮುನ್ನೂರು ವರ್ಷಗಳಿಂದ ತಾಯಿ ಹೊನ್ನಮ್ಮನ ಕೆರೆಗೆ ನವ ದಂಪತಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ ಎಂದು ದೇವಾಲಯದ ಅರ್ಚಕ ವೀರೇಶ್ ಹಿರೇಮಠ್ ಹೇಳಿದರು. ಈ ಸಂದರ್ಭ ಮಾತನಾಡಿದ ಮಡಿಕೇರಿ ಶಾಸಕ ಮಂತರ್ ಗೌಡ ಈ ಬಾರಿ ಒಳ್ಳೆಯ ಮಳೆಯಾಗಿದ್ದು, ಉತ್ತಮ ಬೆಳೆಯಾಗಲಿದೆ. ಹೆಚ್ಚಿನ ಮಳೆಯಿಂದಾಗಿ ಕೆಲವು ಕಡೆ ತೊಂದರೆಯೂ ಸಹ ಆಗಿದೆ. ಆದರೆ ಉತ್ತಮ ಮಳೆಯಿಂದ ನಾಡು ಸಮೃದ್ಧಿಯಾಗುತ್ತಿದೆ ಎಂದಿದ್ದಾರೆ. ಒಟ್ಟಿನಲ್ಲಿ ಗೌರಿ ಹಬ್ಬದ ದಿನದಂದು ಹೊನ್ನಮ್ಮನ ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು.

click me!