
ಬೆಂಗಳೂರು (ಸೆ.06): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಕಾವೇರಿ ನೀರು ಬಳಸೋ ಹಾಗಿಲ್ಲ. ಒಂದು ವೇಳೆ ಕಾವೇರಿ ನೀರನ್ನು ಗಣೇಶ ಮೂರ್ತಿ ವಿಸರ್ಜನೆಗೆ ಬಳಕೆ ಮಾಡಿದಲ್ಲಿ ಅಂಥವರಿಗೆ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಎಚ್ಚರಿಕೆ ನೀಡಿದೆ.
ಬೆಂಗಳೂರಿನ ಜನತೆಗೆ ಕುಡಿಯಲು ಹಾಗೂ ನಿತ್ಯ ಬಳಕೆಗೆ ಉಪಯೋಗಿಸಲು ಮಾತ್ರ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತದೆ. ಆದರೆ, ಕಾವೇರಿ ನೀರನ್ನು ಅತನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಕಠಿಣ ಕ್ರಮವನ್ನು ಕೈಗೊಂಡಿದೆ. ಬಯಲು ಸೀಮೆ, ಬಿಸಿಲ ನಾಡು ಬಳ್ಳಾರಿಯ ಜಿಲ್ಲಾಧಿಕಾರಿ ಆಗಿದ್ದ ಐಎಎಸ್ ಅಧಿಕಾರಿ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಬೆಂಗಳೂರು ಜಲಮಂಡಳಿಗೆ ಅಧ್ಯಕ್ಷರಾಗಿ ಬಂದ ನಂತರ ಕಾವೇರಿ ನೀರಿನ ಸದ್ಬಳಕೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ.
ಕಳೆದ ವರ್ಷ ರಾಜ್ಯದಲ್ಲಿ ಆವರಿಸಿದ್ದ ಭೀಕರ ಬರಗಾಲದಿಂದಾಗಿ ಜನವರಿ ತಿಂಗಳಿಂದ ಜೂನ್ ತಿಂಗಳವರೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರ ಶುರುವಾಗಿತ್ತು. ಈ ವೇಳೆ ಕಾವೇರಿ ನೀರನ್ನು ಕುಡಿಯಲು ಮತ್ತು ದಿನಬಳಕೆಗೆ ಬಿಟ್ಟರೆ ಬೇರಾವ ಉದ್ದೇಶಕ್ಕೂ ಬಳಕೆ ಮಾಡದಂತೆ ನಿರ್ಬಂಧ ಹೇರಲಾಗಿತ್ತು. ಈ ವೇಳೆ ಮನೆಯ ಮುಂದಿನ ಗಾರ್ಡನ್, ಕೈತೋಟ, ಹೂ ಕುಂಡಗಳು, ಬೈಕ್ ಮತ್ತು ಕಾರನ್ನು ತೊಳೆಯಲು, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕಾವೇರಿ ನೀರನ್ನು ಬಳಸದಂತೆ ಕಠಿಣ ಆದೇಶ ಹೊರಡಿಸಿದ್ದರು. ಜೊತೆಗೆ, ನಿರ್ಬಂಧದ ನಡುವೆಯೂ ಕಾವೇರಿ ನೀರನ್ನು ದುರುಪಯೋಗ ಮಾಡಿದ್ದವರಿಗೆ ದಂಡವನ್ನೂ ವಿಧಿಸಿದ್ದರು.
ಇದನ್ನೂ ಓದಿ: ಗಣೇಶ ಹಬ್ಬದಲ್ಲಿ ಪ್ರಸಾದ ವಿತರಣೆಗೆ FSSAI ಲೈಸೆನ್ಸ್ ಕಡ್ಡಾಯ; ಹಿಂದೂ ವಿರೋಧಿ ಸರ್ಕಾರವೆಂದ ಬಿಜೆಪಿ!
ಮುಂದುವರೆದು ಬೆಂಗಳೂರಿನಲ್ಲಿ ಕಾವೇರಿ ನೀರನ್ನು ಬಳಸುವ ಸ್ವಮ್ಮಿಂಗ್ ಪೂಲ್ ಬಂದ್ ಮಾಡಲಾಗಿತ್ತು. ಎಲ್ಲ ಖಾಸಗಿ ನೀರಿನ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲಾಗಿತ್ತು. ಎಲ್ಲೆಡೆ ಕೊಳೆಗೇರಿ ಸ್ಥಳಗಳಲ್ಲಿ ಜಲಮಂಡಳಿಯಿಂದ ತಾತ್ಕಾಲಿಕ ನೀರಿನ ಸಿಂಟೆಕ್ಸ್ ಅಳವಡಿಕೆ ಮಾಡಿ ನೀರು ಪೂರೈಕೆ ಮಾಡಲಾಗುತ್ತಿತ್ತು. ಇನ್ನು ಒಂದೊಂದು ಹನಿ ನೀರನ್ನು ಉಳಿಸುವ ನಿಟ್ಟಿನಲ್ಲಿ ಜಲಮಂಡಳಿ ಅಧ್ಯಕ್ಷರು ಮುತುವರ್ಜಿವಹಿಸಿ ಎಲ್ಲ ಹೋಟೆಲ್ ಉದ್ಯಮಗಳು, ದೊಡ್ಡ ಅಪಾರ್ಟ್‌ಮೆಂಟ್‌ಗಳು ಹಾಗೂ ಮನೆಗಳಲ್ಲಿ ಕಡ್ಡಾಯವಾಗಿ ಏರಿಯೇಟರ್ ಹೊಂದಿರುವ ನಲ್ಲಿಗಳನ್ನು ಬಳಕೆ ಮಾಡುವಂತೆ ಆದೇಶ ಹೊರಡಿಸಿದ್ದರು. ಇದರ ಬೆನ್ನಲ್ಲಿಯೇ ಲಕ್ಷಾಂತರ ಲೀಟರ್ ನೀರು ಬೆಂಗಳೂರಿನಲ್ಲಿ ಉಳಿತಾಯವಾಗಿತ್ತು.
ಇದೀಗ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಕಾವೇರಿ ನೀರನ್ನು ಪೂರೈಕೆ ಮಾಡುವ ಮೂಲವಾಗಿರುವ ಕೃಷ್ಣರಾಜಸಾಗರ (ಕೆಆರ್‌ಎಸ್) ಆಣೆಕಟ್ಟು ಭರ್ತಿಯಾಗಿದೆ. ಮುಂದಿನ ಮಳೆಗಾಲದವರೆಗೂ ಬೆಂಗಳೂರಿಗೆ ನೀರಿನ ಸಮಸ್ಯೆ ಎನ್ನುವುದೇ ಬರುವುದಿಲ್ಲ. ಹೀಗಿದ್ದರೂ, ನೀರಿನ ಸದ್ಬಳಕೆಗೆ ಆದ್ಯತೆ ನೀಡಿರುವ ಜಲಮಂಡಳಿ ಅಧ್ಯಕ್ಷರು ಗಣೇಶ ಮೂರ್ತಿ ವಿಸರ್ಜನೆಗೆ ಕಾವೇರಿ ನೀರನ್ನು ಬಳಕೆ ಮಾಡದಂತೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಹೀಗೇನಾದರೂ ಗಣೇಶ ಮೂರ್ತಿಗಳ ವಿಸರ್ಜನೆಗೆ ಕಾವೇರಿ ನೀರು ಬಳಸಿದರೆ ದಂಡ ವಿಧಿಸಲಾಗುತ್ತದೆ ಎಂಬ ಸೂಚನೆ ರವಾನಿಸಲಾಗಿದೆ.
ಕಾವೇರಿ ನೀರು ಕೇವಲ ಕುಡಿಯೋದಕ್ಕೆ ಮಾತ್ರ ಬಳಕೆ ಮಾಡಬೇಕು. ಹಬ್ಬದ ವೇಳೆ ಅನ್ಯ ಉದ್ದೇಶಕ್ಕೆ ಕಾವೇರಿ ನೀರು ಬಳಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ಗಣೇಶೋತ್ವವ ವೇಳೆಯೂ ಜಲಮಂಡಳಿಯಿಂದ ದಂಡ ಅಭಿಯಾನ ನಿರ್ಧಾರ ಮಾಡಲಾಗಿದೆ. ಈಗಾಘಲೇ ಬೇಸಿಗೆ ವೇಳೆ ಕಾವೇರಿ ನೀರಲ್ಲಿ ಕಾರ್ ವಾಶ್ ಮಾಡೋರಿಗೆ 5 ಸಾವಿರ ದಂಡ ಹಾಕಲಾಗಿತ್ತು. ಕಾವೇರಿ ನೀರು ವ್ಯರ್ಥ ಮಾಡೋರಿಗೆ ಜಲಮಂಡಳಿ ನಿಯಮದ ಪ್ರಕಾರ ದಂಡ ಇದೆ. ಹೀಗಾಗಿ ಗಣೇಶೋತ್ಸವದ ವೇಳೆಯೂ ದಂಡಾಸ್ತ್ರ ಪ್ರಯೋಗಕ್ಕೆ ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿ ಒಬ್ಬಂಟಿ ಯುವತಿಗೆ ಮರ್ಮಾಂಗ ತೋರಿಸಿದ ಫಯಾಜ್ ಪಾಷಾ!
ಈಗಾಗಲೇ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದವರಿಗೆ ಮಂಡಳಿಯ ನಿಯಮದಂತೆ ದಂಡ ವಿಧಿಸಲಾಗುತ್ತಿದೆ. ಇದೀಗ ಗೌರಿ ಗಣೇಶ ಹಬ್ಬದ ವೇಳೆಯೂ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವರ ಮೇಲೆ ಕ್ರಮಕ್ಕೆ ನಿರ್ಧರಿಸಲಾಗಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಕಾವೇರಿ ನೀರು ಅನ್ಯ ಉದ್ದೇಶಕ್ಕೆ ಬಳಕೆ ಮಾಡೋರ ಮೇಲೆ ಹದ್ದಿನಕಣ್ಣು ಇಡಲಾಗಿದೆ. ಸದ್ಯ ಬೆಂಗಳೂರಿಗೆ ಕಾವೇರಿ ನದಿಯಿಂದ 1,450 MLD ನೀರು ಸರಬರಾಜು ಮಾಡಲಾಗುತ್ತಿದೆ. ಬೇಡಿಕೆ ತಕ್ಕಂತೆ ನೀರು ಪೂರೈಕೆ ಮಾಡೋದಕ್ಕೆ ಮಂಡಳಿ ಹರಸಾಹಸ ಮಾಡುತ್ತಿದೆ. ಹೀಗಿರುವಾಗ ಕಾವೇರಿ ನೀರು ಪೋಲು ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.