
ಬಳ್ಳಾರಿ[ಅ.24]: ಕೆಲವು ಮುಖಂಡರು ನನ್ನ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದು, ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜಿಲ್ಲೆಯ ಎಲ್ಲ ಮತ ಬಾಂಧವರಿಗೆ ಖಚಿತವಾಗಿ ಸ್ಪಷ್ಟಪಡಿಸುತ್ತಿದ್ದೇನೆ, ನಾನು ಸ್ಪರ್ಧೆಯಲ್ಲಿದ್ದೇನೆ. ಜನರ ವಿಶ್ವಾಸಗಳಿಸಿ ಉಪ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಡಾ.ಟಿ.ಆರ್. ಶ್ರೀನಿವಾಸ್ ಸ್ಪಷ್ಟಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ತಮ್ಮ ವಿರುದ್ಧ ಕೆಲವರು ವಿನಾಕಾರಣ ಅಪ ಪ್ರಚಾರ ಮಾಡುತ್ತಿದ್ದು, ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಪ್ರಚಾರದ ಭರಾಟೆಯಲ್ಲಿ ನಾನು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದಿರಬಹುದು. ಆದರೆ, ಇಡೀ ಜಿಲ್ಲಾದ್ಯಂತ ಸಂಚಾರ ಮಾಡುತ್ತಿದ್ದೇನೆ. ಪ್ರತಿ ಹಳ್ಳಿಯನ್ನು ತಲುಪಿ ಮತ ಕೇಳುತ್ತಿದ್ದೇನೆ. ಸಮಯ ಬಂದಾಗ ಮಾತ್ರ ನಾನು
ಮಾಧ್ಯಮಗಳ ಮುಂದೆ ಬಂದು ನನ್ನ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದೇನೆ. ಆದರೆ, ಕೆಲವು ರಾಜ್ಯ ನಾಯಕರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ಈ ರೀತಿಯ ಬೆಳವಣಿಗೆ ಎಷ್ಟರ ಮಟ್ಟಿಗೆ ಸರಿ ? ಎಂದು ಪ್ರಶ್ನಿಸಿದರು.
ಉತ್ತಮ ಪ್ರತಿಕ್ರಿಯೆ: ಜಿಲ್ಲೆಯ ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಈಗಾಗಲೇ ಹೊಸಪೇಟೆ ತಾಲೂಕು, ಹಡಗಲಿ, ಹಗರಿಬೊಮ್ಮನಹಳ್ಳಿ, ಬಳ್ಳಾರಿ ಗ್ರಾಮೀಣ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿರುವೆ. ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ವಿದ್ಯಾವಂತರು ಲೋಕಸಭೆ ಪ್ರವೇಶಿಸಬೇಕು ಎಂದು ಮತದಾರರು ಹೇಳುತ್ತಿದ್ದಾರೆ. ಈ ಹಿಂದೆ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದವರಿಂದ ಯಾವ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಗ್ರಾಮೀಣ
ಭಾಗಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳ ಕೊರತೆಗಳು ಕಂಡು ಬರುತ್ತಿದ್ದು, ಜನರು ತಮ್ಮ ಸಂಕಟ ಹೇಳಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಜಾತಿ ಹೆಸರಿನಲ್ಲಿ ರಾಜಕೀಯ ಬೇಡ: ಉಪ ಚುನಾವಣೆ ಹಿನ್ನೆಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರ ವಾಗ್ವಾದಗಳು, ಪರಸ್ಪರ ಆರೋಪ-ಪ್ರತ್ಯಾರೋಪ ಆಲಿಸುತ್ತಿದ್ದೇನೆ. ಚುನಾವಣೆಯಲ್ಲಿ ಜಾತಿ ರಾಜಕಾರಣ ಮಧ್ಯಪ್ರವೇಶ ಪಡೆಯುವುದು ಸರಿಯಲ್ಲ. ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆಗಳು ನಡೆಯಬೇಕೇ ವಿನಃ ಜಾತಿ-ಧರ್ಮದ ಹೆಸರಿನಲ್ಲಲ್ಲ. ಇದು ಜಿಲ್ಲೆಯ ಮಟ್ಟಿಗೆ ಉತ್ತಮ ಬೆಳವಣಿಗೆ ಸಹ ಅಲ್ಲ. ನಾನು ಚುನಾವಣೆ ಪ್ರಚಾರದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಬಗ್ಗೆ ಮಾತನಾಡುತ್ತಿರುವೆ. ಈಗಾಗಲೇ ಹಲವಾರು ವರ್ಷಗಳಿಂದ ವೈದ್ಯ ವೃತ್ತಿಯ ಜೊತೆಗೆ ಸಾಮಾಜಿಕ ಸೇವೆಯಲ್ಲಿರುವ ನಾನು, ರಾಜಕೀಯ ಪ್ರವೇಶ ಮೂಲಕ ಮತ್ತಷ್ಟೂ ಜನಸೇವೆಯ ಆಶಯ ಹೊಂದಿದ್ದೇನೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಮತದಾರರೇ ಸ್ಟಾರ್ ಪ್ರಚಾರಕರು: ನನ್ನ ಪರ ಪ್ರಚಾರಕ್ಕೆ ಯಾರೂ ಸ್ಟಾರ್ ಪ್ರಚಾರಕರು ಬರುವುದಿಲ್ಲ. ಸಮಾನ ಮನಸ್ಕ ಗೆಳೆಯರು, ಬೆಂಬಲಿಗರು ಹಾಗೂ ಆಪ್ತರೊಂದಿಗೆ ಸೇರಿ ಜಿಲ್ಲೆಯ ಎಲ್ಲ ಕಡೆ ಪ್ರಚಾರ ಮಾಡುತ್ತಿರುವೆ. ವೈದ್ಯರು, ವಕೀಲರು ಸೇರಿದಂತೆ ಎಲ್ಲ ವಿದ್ಯಾವಂತ ವರ್ಗದವರು, ರೈತರು, ಕೃಷಿ ಕೂಲಿಕಾರರು ಎಲ್ಲ ದುಡಿವ ವರ್ಗದ ಜನರು ನನ್ನ ಪರ ವಾಗಿದ್ದಾರೆ. ಮತದಾರರೇ ನನ್ನ ಸ್ಟಾರ್ ಪ್ರಚಾರಕರು ಇದ್ದಂತೆ. ಅವರೇ ನನ್ನ ಸರ್ವಸ್ವ.
ಸಮಾಜಿಕ ಬದಲಾವಣೆ ಆಗುವುದೇ ಮತದಾರರ ಶಕ್ತಿಯಿಂದ ಎಂದು ನಂಬಿದ್ದೇನೆ ಎಂದರು.
ಟ್ರ್ಯಾಕ್ಟರ್ ಓಡಿಸುವ ರೈತ: ನಾನು ರೈತ ಕುಟುಂಬದಿಂದ ಬಂದಿದ್ದೇನೆ. ಹೀಗಾಗಿ ಚುನಾವಣೆಗೆ ‘ಟ್ರ್ಯಾಕ್ಟರ್ ಓಡಿಸುವ ರೈತ’ ಚಿಹ್ನೆ ಪಡೆದಿರುವೆ. ಸಾಮಾನ್ಯವಾಗಿ ಮೊದಲು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗೆ ಚಿಹ್ನೆ ಆಯ್ಕೆಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ನಾನು ರೈತ ಕುಟುಂಬದಿಂದ ಬಂದಿರುವುದರಿಂದ ಹಾಗೂ ರೈತಾಪಿ ಜನರ ಮೇಲೆ ಹೆಚ್ಚಿನ ಪ್ರೀತಿ ಇರುವುದರಿಂದ ಟ್ರ್ಯಾಕ್ಟರ್ ಓಡಿಸುವ ರೈತನ ಚಿಹ್ನೆ ಪಡೆದಿರುವೆ ಎಂದರು.