
ತೀರ್ಥಹಳ್ಳಿ (ಅ.10): ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅಧಿಕಾರದ ಅವಧಿಯಲ್ಲಿ ಆಗಿರುವ ಒಪ್ಪಂದದಂತೆ ಭೂತಾನ್ ದೇಶದಿಂದ ಭಾರತಕ್ಕೆ ಹಸಿ ಅಡಕೆ ಮಾತ್ರ ಆಮದಾಗುತ್ತಿದೆ. ಇದರಿಂದ ದೇಶದ ಅಡಕೆ ಬೆಳೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ತಾಲೂಕಿನ ತೂದೂರು ಗ್ರಾಪಂ ವ್ಯಾಪ್ತಿಯ ಬೇಗುವಳ್ಳಿ- ಜಂಬುವಳ್ಳಿ ಗ್ರಾಮದ 2.75 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಭೂತಾನ್‌ನಿಂದ ಕೇವಲ 17 ಸಾವಿರ ಟನ್ ಹಸಿ ಅಡಕೆ ಬರುತ್ತಿದೆ. ಇದರಿಂದ ಶೇ. 12 ಒಣ ಅಡಕೆ ಮಾತ್ರ ಸಿದ್ಧವಾಗುತ್ತದೆ. ಭಾರತದಿಂದ ಇದರ ದುಪ್ಪಟ್ಟು ಅಡಕೆ ಉತ್ಪನ್ನಗಳು ಆ ದೇಶಕ್ಕೆ ನಿರ್ಯಾತವಾಗುತ್ತದೆ ಎಂಬುದನ್ನು ಮನಗಾಣಬೇಕಿದೆ. ಈ ಒಪ್ಪಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಒಪ್ಪಂದವೂ ಅಲ್ಲಾ. ಬಹಳ ಮುಖ್ಯವಾಗಿ ಆ ದೇಶ ಆಯಕಟ್ಟಿನ ಪ್ರದೇಶವಾದ ಕಾರಣ ಭೂತಾನಿನೊಂದಿಗೆ ಭಾರತಕ್ಕೆ ಸ್ನೇಹವೂ ಅನಿವಾರ್ಯವಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದವರು ಮಾಡುತ್ತಿರುವ ಟೀಕೆಗೆ ಅಡಕೆ ಬೆಳೆಗಾರರು ಕಿವಿಗೊಡಬಾರದು ಎಂದರು.
ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರ ಕೊರತೆ: ಈಶ್ವರಪ್ಪ
ಅಡಕೆಗೆ ತಗುಲಿರುವ ಎಲೆ ಚುಕ್ಕಿರೋಗದಿಂದಾಗಿ ಕೆಲವೆಡೆ ಅಡಕೆ ತೋಟವೇ ನಾಶವಾಗುವ ಹಂತ ತಲುಪಿರುವುದು ಆತಂಕದ ಸಂಗತಿಯಾಗಿದೆ. ಈ ಭೀಕರ ರೋಗದ ನಿಯಂತ್ರಣದ ಸಲುವಾಗಿ ಸರ್ಕಾರದಿಂದ 8 ಕೋಟಿ ರು. ಹಣವನ್ನು ಮಂಜೂರು ಮಾಡಿಸಲಾಗಿದ್ದು ಈಗಾಗಲೇ 4 ಕೋಟಿ ಹಣ ಬಿಡುಗಡೆಯಾಗಿದೆ. ಈ ರೋಗಕ್ಕೆ ಮೊದಲ ಸ್ಪ್ರೇಗೆ ಅಗತ್ಯವಿರುವ ಔಷಧವನ್ನು ಕೂಡಾ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಕ್ಷೇತ್ರಕ್ಕೆ 1500 ಕೋಟಿ ರು. ಅನುದಾನವನ್ನು ತಂದಿರುವ ನಾನು ಆಡಳಿತ ಪಕ್ಷದ ಸದಸ್ಯನಾಗಿ ಹೇಗೆ ಅಭಿವೃದ್ಧಿ ಕೆಲಸ ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದೇನೆ. ತೂದೂರು ಗ್ರಾಪಂ ಒಂದಕ್ಕೆ 50 ಕೋಟಿ ರು. ಹಣವನ್ನು ಮಂಜೂರು ಮಾಡಿಸಿದ್ದೇನೆ. ಬಗರ್ ಸಮಸ್ಯೆ ಭೂ ಮಂಜೂರಾತಿಗೆ ಅಡಚಣೆಯಾಗಿರುವ ಸೊಪ್ಪಿನ ಬೆಟ್ಟ, ಕಾನು ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಶಾಶ್ವತ ಪರಿಹಾರ ರೂಪಿಸುವ ಕುರಿತಂತೆ ಯತ್ನಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಿಂದ ವಲಸೆ ಬಂದಿರುವ ಎಸ್‌ಟಿ ಸಮುದಾಯ ಜಾತಿ ಸರ್ಟಿಫಿಕೇಟ್ ಸಮಸ್ಯೆ ವಿಚಾರವನ್ನು ಪ್ರಸ್ತಾಪಿಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಭೂತಾನ್ ಅಡಕೆ ಆಮದಿನಿಂದ ದೇಶಿ ಧಾರಣೆ ಕುಸಿಯಲ್ಲ : ವೈ.ಎಸ್. ಸುಬ್ರಹ್ಮಣ್ಯ
ಸಭೆಯ ಅಧ್ಯಕ್ಷತೆ ವಹಿಸಿದ್ದ ತೂದೂರು ಗ್ರಾಪಂ ಅಧ್ಯಕ್ಷ ಮಧುರಾಜ ಹೆಗ್ಡೆ ಮಾತನಾಡಿ, ಅಭಿವೃದ್ಧಿ ಮೂಲಕ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದ ಗೃಹ ಸಚಿವರು, ಮಳೆಹಾನಿಯಿಂದಾಗಿ ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಕಳೆದುಕೊಂಡಿದ್ದ 24 ಕುಟುಂಬಗಳಿಗೆ ತಲಾ 5 ಲಕ್ಷ ರು. ಮಂಜೂರು ಮಾಡಿಸುವ ಮೂಲಕ ಶಾಶ್ವತ ನೆಲೆಯನ್ನು ಕಲ್ಪಿಸಿದ್ದಾರೆ ಎಂದರು. ರಾಜ್ಯ ಕಂಪೋಸ್ಟ್ ನಿಗಮದ ಉಪಾಧ್ಯಕ್ಷ ಬೇಗುವಳ್ಳಿ ಸತೀಸ್, ರಾಜ್ಯ ನೀರು ಸರಬರಾಜು ಮಂಡಳಿ ನಿರ್ದೆಶಕ ಆರ್. ಮದನ್, ಬಿಜೆಪಿ ತಾ ಅದ್ಯಕ್ಷ ರಾಘವೇಂದ್ರ ನಾಯಕ್, ಎಸ್‌ಟಿ ಸಮುದಾಯದ ತಾಲೂಕು ಅಧ್ಯಕ್ಷ ರಮೇಶ್ ಮಾತನಾಡಿದರು. ತಾಪಂ ಮಾಜಿ ಸದಸ್ಯ ಬೇಗುವಳ್ಳಿ ಕವಿರಾಜ್ ನಿರೂಪಿಸಿದರು.