
ಬೆಂಗಳೂರು (ಅ.02): ಜನಪರ ಆಡಳಿತ ಸರ್ಕಾರದ ಗುರಿಯಾಗಿದ್ದು, ಶೀಘ್ರವೇ ‘ಆಡಳಿತ ಸುಧಾರಣೆ-2’ಅನ್ನು ಅನುಷ್ಠಾನ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಡಾ. ರಾಜ್‌ಕುಮಾರ್ ಸಿವಿಲ್ ಸವೀರ್‍ಸ್ ಅಕಾಡೆಮಿಯಿಂದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕೆಪಿಎಸ್‌ಸಿ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಜನಪರ ನಿರ್ಧಾರ ತೆಗೆದುಕೊಳ್ಳುವುದರಿಂದ ಮಾತ್ರ ಆಡಳಿತವನ್ನು ಜನರ ಹತ್ತಿರ ತೆಗೆದುಕೊಂಡು ಹೋಗಬಹುದು.
ಅಧಿಕಾರಿಗಳು ಕಾನೂನು ಹಾಗೂ ಮಾನವೀಯತೆ ನಡುವೆ ಧರ್ಮಸಂಕಟಕ್ಕೆ ಸಿಲುಕಿದಾಗ ಬಡವನ ಕಣ್ಣೀರನ್ನೇ ಸ್ಮರಣೆಗೆ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರೊಬೆಷರಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಈ ನಿಟ್ಟಿನಲ್ಲಿ ಸರ್ಕಾರ ಆಡಳಿತ ಸುಧಾರಣೆ-2 ಜಾರಿಗೊಳಿಸಲಿದೆ ಎಂದರು. ಇಂಧನ ಇಲಾಖೆ, ಸಾರಿಗೆ ಇಲಾಖೆಯಲ್ಲಿನ ಆರ್ಥಿಕ ಸಮಸ್ಯೆ ನಿವಾರಿಸಿಕೊಳ್ಳುವುದು ಸವಾಲು. ಅಧಿಕಾರ ಇಂತಹ ಆಡಳಿತಾತ್ಮಕ ಮಾತ್ರವಲ್ಲದೆ ಹಲವು ಪರೀಕ್ಷೆಗೆ ಒಡ್ಡುತ್ತದೆ. ಆಳುವುದು, ಆಡಳಿತ ಮಾಡುವುದರ ನಡುವಿನ ಸೂಕ್ಷ್ಮತೆ ಅರಿತು ನಡೆಯಬೇಕು. ಶಾಸಕಾಂಗ ಹಾಗೂ ಕಾರ್ಯಾಂಗದ ನಡುವೆ ಸಂಘರ್ಷ ಎದುರಾದಾಗ ಸ್ಪಷ್ಟತೆಯಿಂದ ನಿರ್ಧಾರ ತೆಗೆದುಕೊಂಡು ಸಮಸ್ಯೆ ನಿವಾರಿಸಬಹುದು ಎಂದರು.
ಚರ್ಮಗಂಟಿಗೆ ಬಲಿಯಾದ ಜಾನುವಾರಿಗೆ ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ
ದಂತಕತೆ ಡಾ.ರಾಜಕುಮಾರ ಅವರ ಬದುಕು ಎಲ್ಲರಿಗೂ ಸ್ಪೂರ್ತಿ. ಪುನೀತ್ ಒಂದು ಕಾಲಘಟ್ಟದ ವ್ಯಕ್ತಿ ಅಲ್ಲ, ಜಗತ್ತು ಇರುವವರೆಗೆ ಜೀವಿಸುವ ವ್ಯಕ್ತಿತ್ವ. ಅವರನ್ನು ಮಾದರಿಯಾಗಿಸಿ ಬದುಕು ನಡೆಸಬೇಕು. ಡಾ.ರಾಜಕುಮಾರ್ ಕುಟುಂಬ ಸಿವಿಲ್ ಸವೀರ್‍ಸ್ ಅಕಾಡೆಮಿ ಮೂಲಕ ಆಡಳಿತ ವಿಭಾಗಕ್ಕೆ ಬಹು ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಘವೇಂದ್ರ ರಾಜಕುಮಾರ ಮಾತನಾಡಿ, ಗುರಿ ಮುಟ್ಟಲು ಗುರುಗಳು ಬೇಕು. ರಾಜಕುಮಾರ್ ಅಕಾಡೆಮಿ ಅವರಿಂದಲೇ ನಡೆಯುತ್ತಿದೆ. ಸರ್ಕಾರಿ ಅಧಿಕಾರಿಗಳಾಗುವವರು ತಮ್ಮ ಮುಂದೆ ಬರುವ ಪ್ರತಿಯೊಂದು ಕಡತವನ್ನು ಮಾನವೀಯ ದೃಷ್ಟಿಕೋನದಿಂದ ನೋಡಬೇಕು. ಆ ಫೈಲ್‌ಗಳಲ್ಲಿ ಇನ್ನೊಬ್ಬರ ಜೀವನ ಅಡಗಿರುತ್ತದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ನವೆಂಬರ್‌ನಲ್ಲೇ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಸಿಎಂ ಬೊಮ್ಮಾಯಿ
ಯುವರಾಜಕುಮಾರ್ ಮಾತನಾಡಿ, ಬಡ, ಗ್ರಾಮೀಣ ಅಭ್ಯರ್ಥಿಗಳ ನಾಗರಿಕ ಸೇವೆ ಕನಸು ಸಾಕಾರಕ್ಕಾಗಿ ಸಂಸ್ಥೆಯು ಪ್ರತಿವರ್ಷ ಸ್ಕಾಲರ್‌ಶಿಪ್ ಪರೀಕ್ಷೆ ನಡೆಸಿ 1500ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿದೆ. ಡಾ. ರಾಜಕುಮಾರ್ ಲರ್ನಿಂಗ್ ಆ್ಯಪ್ ಮೂಲಕ ಪಿಯುಸಿ, ಪಿಎಸ್‌ಐ, ಎಫ್‌ಡಿಎ, ಎಸ್‌ಎಸ್‌ಸಿ ತರಬೇತಿ ನೀಡಲಾಗುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು. ನಿವೃತ್ತ ಐಎಎಸ್ ಅಧಿಕಾರಿಗಳಾದ ಡಾ.ಶ್ರೀನಿವಾಸನ್ ಮಾತನಾಡಿದರು. ಅಶ್ವಿನಿ ಪುನೀತ್‌ರಾಜ್‌ಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠಲ್ ಮೂರ್ತಿ, ಎಸ್.ವಿ.ರಂಗನಾಥ್ ಉಪಸ್ಥಿತರಿದ್ದರು.