ದಸರಾ ಬಳಿಕ ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ ಗರ್ಜನೆ: ಬಿಬಿಎಂಪಿ ಸ್ಪಷ್ಟನೆ

By Govindaraj SFirst Published Oct 2, 2022, 6:48 AM IST
Highlights

ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ತಕರಾರು ಇರುವ ಮಾಲಿಕರ ಸಮ್ಮುಖದಲ್ಲಿ ಜಂಟಿ ಸರ್ವೇ ನಡೆಸಿ ತೆರವು ಮಾಡುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದ್ದು, ದಸರಾ ಹಬ್ಬದ ಬಳಿಕ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌ ತಿಳಿಸಿದ್ದಾರೆ.

ಬೆಂಗಳೂರು (ಅ.02): ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ತಕರಾರು ಇರುವ ಮಾಲಿಕರ ಸಮ್ಮುಖದಲ್ಲಿ ಜಂಟಿ ಸರ್ವೇ ನಡೆಸಿ ತೆರವು ಮಾಡುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದ್ದು, ದಸರಾ ಹಬ್ಬದ ಬಳಿಕ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌ ತಿಳಿಸಿದ್ದಾರೆ. ಶನಿವಾರ ಈ ಕುರಿತು ವಿವರಣೆ ನೀಡಿದ ಅವರು, ರಾಜಕಾಲುವೆ ಒತ್ತುವರಿ ಸಂಬಂಧಿಸಿದಂತೆ ಅನೇಕ ಆಸ್ತಿ ಮಾಲಿಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಈ ತಡೆಯಾಜ್ಞೆಯನ್ನು ತೆರವು ಮಾಡಿರುವ ನ್ಯಾಯಾಲಯವು ಸಂಬಂಧಪಟ್ಟ ಮಾಲಿಕರ ಸಮ್ಮುಖದಲ್ಲಿ ಮರು ಸರ್ವೇ ನಡೆಸಬೇಕು. 

ಸರ್ವೇ ಮಾಹಿತಿಯನ್ನು ಮಾಲಿಕರಿಗೆ ನೀಡಿ ನಂತರ ಒತ್ತುವರಿಯನ್ನು ತೆರವು ಮಾಡಿವಂತೆ ಆದೇಶಿಸಿದೆ. ಹಾಗಾಗಿ, ಬಿಬಿಎಂಪಿಯು ಜಂಟಿ ಸರ್ವೇಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ದಸರಾ ಹಬ್ಬ ಮುಕ್ತಾಯಗೊಳ್ಳುತ್ತಿದಂತೆ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ತಿಳಿಸಿದರು. ಜತೆಗೆ, ನ್ಯಾಯಾಲಯವು ಅ.25ರ ಒಳಗಾಗಿ ಬಾಕಿ ಇರುವ ಎಲ್ಲ 600ಕ್ಕೂ ಅಧಿಕ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ನಿರ್ದೇಶಿಸಿದೆ. ವಿಳಂಬವಿಲ್ಲದೇ ದಸರಾ ಹಬ್ಬ ಮುಕ್ತಾಯಗೊಳ್ಳುತ್ತಿದಂತೆ ಸಮರೋಪಾದಿಯಲ್ಲಿ ಸರ್ವೇ ಹಾಗೂ ತೆರವು ಕಾರ್ಯಾಚರಣೆ ನಡೆಸಲಾಗುವುದು. ಅದಕ್ಕೆ ಅಗತ್ಯವಿರುವ ಅಧಿಕಾರಿ, ಸಿಬ್ಬಂದಿ, ಜೆಸಿಬಿ, ಹಿಟಾಚಿ ಯಂತ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಒತ್ತುವರಿ ತೆರವಿಗೆ ಪಾಲಿಕೆ ತಾರತಮ್ಯ; ಸ್ಥಳೀಯರಿಂದ ತೀವ್ರ ಆಕ್ರೋಶ

ಒತ್ತುವರಿಯಾದ 30 ಕೆರೆ ಮರು ಸರ್ವೇಗೆ ಸರ್ಕಾರಕ್ಕೆ ಪಾಲಿಕೆ ಪತ್ರ: ನಗರ ಜಿಲ್ಲೆಯ ಪೂರ್ವ ತಾಲೂಕು ವ್ಯಾಪ್ತಿಯ 30 ಕೆರೆಗಳ ಒತ್ತುವರಿಯನ್ನು ತುರ್ತಾಗಿ ಮರು ಸರ್ವೇ ಮಾಡಿ ವರದಿ ನೀಡುವಂತೆ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ‘ಬಿಬಿಎಂಪಿ ಕೆರೆಗಳ ವಿಭಾಗ’ ಪತ್ರ ಬರೆದಿದೆ. ಕಳೆದ ಒಂದು ತಿಂಗಳಿನಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇದೇ ಅವಧಿಯಲ್ಲಿ ಕೆರೆಯ ಒತ್ತುವರಿಯನ್ನೂ ತೆರವು ಮಾಡುವ ಉದ್ದೇಶದಿಂದ ಪೂರ್ವ ತಾಲೂಕು ವ್ಯಾಪ್ತಿಯಲ್ಲಿನ 30 ಕೆರೆಗಳ ಒತ್ತುವರಿಯನ್ನು ಮರು ಸರ್ವೇ ಮಾಡಿ ತೆರವು ಮಾಡಬೇಕಿರುವ ಭಾಗವನ್ನು ಗುರುತಿಸಿ ಕೊಡುವಂತೆ ಕೇಳಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಒತ್ತುವರಿ ಮತ್ತು ತೆರವು ಕಾರ್ಯದ ಬಗ್ಗೆ ಮಾಹಿತಿ ನೀಡಬೇಕಿರುವ ಹಿನ್ನೆಲೆಯಲ್ಲಿ ತುರ್ತಾಗಿ ಈ ಕಾರ್ಯ ಪೂರ್ಣಗೊಳಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ.

ಈಗಾಗಲೇ ಮೂರು ಪತ್ರ: 2020ರಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಕ್ಕೆ ಜಿಲ್ಲಾಡಳಿತದಿಂದ 4 ವಿಶೇಷ ತಹಸೀಲ್ದಾರರನ್ನು ನಿಯೋಜಿಸಲಾಗಿತ್ತು. ಈ ವೇಳೆ ಕೆಲವು ಕೆರೆಗಳಲ್ಲಿ ಸಣ್ಣ ಪುಟ್ಟಒತ್ತುವರಿ ಮಾತ್ರ ತೆರವು ಮಾಡಲಾಗಿತ್ತು. ಕೆಲವು ಕಡೆ ಒತ್ತುವರಿದಾರರಿಗೆ ನೋಟಿಸ್‌ ನೀಡಿ ತೆರವು ಕಾರ್ಯಕ್ಕೆ ಮುಂದಾದಾಗ ಮರು ಸರ್ವೇ ಮಾಡುವಂತೆ ಸ್ಥಳೀಯರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಜತೆಗೆ, ಕೆಲವು ಒತ್ತುವರಿದಾರರು ಪಾಲಿಕೆ ಅಧಿಕಾರಿಗಳ ಮೇಲೆ ಜಾತಿ ನಿಂದನೆ, ದೌರ್ಜನ್ಯದ ಕೇಸ್‌ಗಳನ್ನು ದಾಖಲಿಸಿದ್ದರು. ಹೀಗಾಗಿ ತೆರವು ಕಾರ್ಯ ಸ್ಥಗಿತಗೊಳಿಸಿ, ಮರು ಸರ್ವೇಗೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿತ್ತು. ಕಳೆದೆರಡು ವರ್ಷಗಳಿಂದ ನಾಲ್ಕಕ್ಕಿಂತ ಅಧಿಕ ಬಾರಿ ಜಿಲ್ಲಾಡಳಿತ ಮತ್ತು ಭೂಮಾಪನ ಇಲಾಖೆಗೆ ಪಾಲಿಕೆಯಿಂದ ಮೂರು ಪತ್ರ ಬರೆಯಲಾಗಿತ್ತು. ಆದರೆ ಈವರೆಗೂ ಸಮೀಕ್ಷಾ ಕಾರ್ಯ ನಡೆದಿರಲಿಲ್ಲ.

ಒತ್ತುವರಿ ಹೆಚ್ಚಳ: ರಾಜಕಾಲುವೆಗಳು ಮತ್ತು ಕೆರೆಗಳು ಒತ್ತುವರಿ ಆಗಿರುವ ಬಗ್ಗೆ 2016 ಮತ್ತು 2017ರಲ್ಲಿ ಸರ್ವೇ ಮಾಡಲಾಗಿತ್ತು. ಆದರೆ, ಈ ವೇಳೆ ಒತ್ತುವರಿ ತೆರವುಗೊಳಿಸುವ ಅಥವಾ ಒತ್ತುವರಿ ತಡೆಗಟ್ಟುವ ನಿಟ್ಟಿನಲ್ಲಿ ಬೇಲಿ ನಿರ್ಮಾಣ ಕಾರ್ಯಕ್ಕೂ ಪಾಲಿಕೆ ಮುಂದಾಗಲಿಲ್ಲ. ಹೀಗಾಗಿ, ಕಳೆದ 5 ವರ್ಷಗಳ ಕೆರೆಗಳಲ್ಲಿ ಒತ್ತುವರಿ ಪ್ರಮಾಣವೂ ಅಧಿಕವಾಗಿದೆ. ಇದೀಗ ಮತ್ತಷ್ಟುಒತ್ತುವರಿ ಆಗಿರುವ ಹಿನ್ನೆಲೆಯಲ್ಲಿ ಮರು ಸರ್ವೇ ಅಗತ್ಯವಾಗಿದೆ. ಜತೆಗೆ, ಈಗಾಗಲೇ ಸರ್ವೇ ಮಾಡಿದ ಸ್ಥಳದಲ್ಲಿ ತೆರವು ಕಾರ್ಯಕ್ಕೆ ಮಾರ್ಕಿಂಗ್‌ ಮಾಡಲು ಇಂದಿನ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಸ್ವತಃ ಒತ್ತುವರಿ ಸರ್ವೇ ಮಾಡದೇ ಮಾರ್ಕಿಂಗ್‌ ಮಾಡುವುದಿಲ್ಲ ಎನ್ನುತ್ತಿದ್ದಾರೆ.

ಒತ್ತುವರಿ ತೆರವಿಗೆ ಪುರವಂಕರ ಕಟ್ಟಡದ ಮಹಿಳೆಯರ ಅಡ್ಡಿ!

ಸೆಪ್ಟಂಬರ್‌ನಲ್ಲಿ ತೆರವು ಕಾರ್ಯಾಚಣೆ ವಿವರ
ವಲಯ ತೆರವು ಬಾಕಿ

ಪೂರ್ವ 0 110
ಪಶ್ವಿಮ 1 58
ದಕ್ಷಿಣ 0 20
ಕೋರಮಂಗಲ ಕಣಿವೆ 0 3
ಯಲಹಂಕ 12 84
ಮಹದೇವಪುರ 48 88
ಮಹದೇವಪುರ(ಹೊಸ) 0 45
ಬೊಮ್ಮನಹಳ್ಳಿ 17 9
ಬೊಮ್ಮನಹಳ್ಳಿ(ಹೊಸ) 0 66
ಆರ್‌ಆರ್‌ನಗರ 3 6
ದಾಸರಹಳ್ಳಿ 13 113
ಒಟ್ಟು 94 602

click me!