Chikkamagaluru; ಟಿಂಬರ್ ಮಾಫಿಯಾದಿಂದ ಮಲೆನಾಡಿಗೆ ಕಂಟಕ

By Suvarna NewsFirst Published Jun 24, 2022, 6:48 PM IST
Highlights
  • ಮಳೆಗಾಲ ಆರಂಭವಾದ್ರೂ ಇನ್ನು ನಿಂತಿಲ್ಲ ಮರಗಳ ಮಾರಣಹೋಮ
  • ಮಳೆಗಾಲದಲ್ಲಿ ಮರಗಳ ಕಟಿಂಗ್ ಅಪಾಯಕ್ಕೆ ಆಹ್ವಾನ ಪರಿಸರವಾದಿಗಳು ಆತಂಕ
  • ಕಾಫಿತೋಟ, ಗುಡ್ಡಗಾಡು ಪ್ರದೇಶದಲ್ಲಿ ಸ್ವೀಲರ್ ಮರಗಳನ್ನು ತೆಗೆಯುವ ಕೆಲಸವೂ ಜೋರು 
  • ಮಳೆಗಾಲದಲ್ಲಿ ಮರಗಳನ್ನು ತೆಗೆಯುವುದರಿಂದ ಭೂಕುಸಿತ ಉಂಟಾಗುವ 
  • ಜಿಲ್ಲಾಡಳಿತ ಸ್ವೀಲರ್ , ಮರಗಳ ಸಾಗಟಕ್ಕೆ ಬ್ರೇಕ್  ಹಾಕಲು ಒತ್ತಾಯ 
  • ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಎನ್ ಆರ್ ಪುರ ತಾಲೂಕು

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜೂನ್ 23): ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಅಬ್ಬರಕ್ಕೆ ಕಾಫಿನಾಡು ಅಕ್ಷರಶಃ ಕಂಗಾಲಾಗಿದೆ. ಎಲ್ಲೆಂದರಲ್ಲಿ ಬೆಟ್ಟ-ಗುಡ್ಡ ಕುಸಿತ, ರಸ್ತೆ ಕುಸಿತ, ರಸ್ತೆಯೇ ಅರ್ಧಕರ್ಧ ಕಟ್ ಆಗಿದ್ದು ಒಂದೋ, ಎರಡೋ, ಮಲೆನಾಡ ಜನಜೀವನವೇ ಅಸ್ತವ್ಯಸ್ತವಾಗಿತ್ತು. ಆದ್ರೆ, ಜನರಿಗೆ ಆ ಭಯ-ಭೀತಿ ಇನ್ನೂ ಹೋಗಿಲ್ಲ. ಆ ಪ್ರಮಾಣದ ಬೆಟ್ಟಗುಡ್ಡಗಳ ಕುಸಿತಕ್ಕೆ ಎಗ್ಗಿಲ್ಲದೆ ಮರಗಳನ್ನ ಕಡಿದು ಜೆಸಿಬಿ-ಇಟಾಚಿಗಳಲ್ಲಿ ಕೆಲಸ ಮಾಡಿದ್ದೇ ಕಾರಣವೆಂದು ಹೇಳಲಾಗಿತ್ತು. ಈ ವರ್ಷವೂ ಜನವರಿಯಿಂದಲೇ ಮಳೆ ಆರಂಭವಾಗಿದ್ದು, ಆತಂಕದಿಂದಿರೋ ಜನ ಮಳೆಗಾಲ ಮುಗಿಯೋವರೆಗೂ ಟಿಂಬರ್ ಸಾಗಾಟಕ್ಕೆ ಬ್ರೇಕ್ ಹಾಕಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಮಳೆಗಾಲ ಮುಗಿಯೋವರೆಗೂ ಟಿಂಬರ್ ಸಾಗಾಟಕ್ಕೆ ಬ್ರೇಕ್ ಹಾಕಲು ಒತ್ತಾಯ: ಮುಗಿಲೆತ್ತರಕ್ಕೆ ಬೆಳೆದು ನಿಂತಿರೋ ಮರಗಳು. ಕಡಿತಲೆವಾದ ಮರಗಳನ್ನ ರಸ್ತೆ ಬದಿ ಸಾಲಾಗಿ ತಂದು ಹಾಕಿರೋ ಟಿಂಬರ್ ವ್ಯಾಪಾರಸ್ಥರು. ಇದನ್ನೆಲ್ಲಾ ನೋಡಿ ಆತಂಕದಿಂದ ಭಯದಲ್ಲಿರೋ ಮಲೆನಾಡಿಗ್ರು. ಇದು ಚಿಕ್ಕಮಗಳೂರು ಜಿಲ್ಲೆಯ ಯಾವ್ದೋ ಒಂದು ತಾಲೂಕು-ಹಳ್ಳಿಯ ಆತಂಕವಲ್ಲ. ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ, ಕಳಸ, ಕೊಪ್ಪ, ಚಿಕ್ಕಮಗಳೂರು ತಾಲೂಕಿನ ಕೆಲಭಾಗ ಎಲ್ಲರದ್ದೂ ಒಂದೇ ಭಯ. ಅದೇ ಆತಂಕ. ಮಲೆನಾಡಿನಾದ್ಯಂತ ಈ ಮರಗಳನ್ನ 8-10-12 ಚಕ್ರದ ಲಾರಿಗಳಲ್ಲಿ ಸಾಗಿಸಿದ್ರೆ ಮಳೆಗಾಲದಲ್ಲಿ ರಸ್ತೆಯ ಕಥೆ ಏನೆಂಬುದು ಮಲೆನಾಡಿಗರ ಪ್ರಶ್ನೆ. ಈಗಾಗಲೇ ಮಳೆಗಾಲ ಆರಂಭವಾಗಿದೆ.

CHIKKAMAGALURU; 30 ವರ್ಷಗಳ ದೀರ್ಘಕಾಲದ ಸಮಸ್ಯೆಗೆ ಕೇವಲ 7 ದಿನಗಳಲ್ಲಿ ಪರಿಹಾರ!

ಜನವರಿಯಿಂದಲೂ ಆಗಿಂದಾಗ್ಗೆ ಮಳೆ ಬಂದು ಕೆರೆಕಟ್ಟೆಗಳು ತುಂಬಿವೆ. ಈಗ ಮುಂಗಾರು ಎಂಟ್ರಿ ನೀಡಿದೆ. ಕೆಲ ಭಾಗ ಉತ್ತಮ ಮಳೆ ಸುರಿಯುತ್ತಿದೆ. ಇಷ್ಟು ದಿನ ಅನುಭವಿಸಿದ್ದೇ ಸಾಕು. ಮತ್ತೆ ಬೆಟ್ಟ-ಗುಡ್ಡ-ರಸ್ತೆ ಕುಸಿಯುವ ಪರಿಸ್ಥಿತಿ ಬರಬಹುದು. ಅದು ಬರುವುದು ಬೇಡ. ಹಾಗಾಗಿ, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಮಲೆನಾಡು ಭಾಗದ ಯಾವುದೇ ಭಾಗದಲ್ಲಾಗಲಿ, ಯಾವುದೇ ಜಾಗದಲ್ಲಾಗಲಿ ಮಳೆಗಾಲದಲ್ಲಿ ಮರಗಳನ್ನ ಕಡಿದು ಸಾಗಾಟ ಮಾಡಲು ಸಂಪೂರ್ಣ ಬ್ರೇಕ್ ಹಾಕುವಂತೆ  ಸರ್ಕಾರಕ್ಕೆ ರಾಜ್ಯ ವನ್ಯಜೀವಿ ಪರಿಪಾಲಕ ವಿರೇಶ್ ಮನವಿ ಮಾಡಿದ್ದಾರೆ. 

ಮಳೆಗಾಲದಲ್ಲಿ ಮರಗಳನ್ನ ಕಡಿಯುವುದರಿಂದ ಗುಡ್ಡ , ಭೂಕುಸಿತಕ್ಕೆ ಕಾರಣ ಎನ್ನುವ ಆತಂಕ: ಇನ್ನು ಮಳೆಗಾಲದಲ್ಲಿ ಭಾರೀ ಗಾತ್ರದ ಮರಗಳನ್ನ ಕಡಿಯುವುದರಿಂದ ಭೂಮಿಯ ತೇವಾಂಶ ಹೆಚ್ಚಾಗಿ ಬೆಟ್ಟ-ಗುಡ್ಡ-ರಸ್ತೆಗಳು ಬಿರುಕು ಬಿಡುವ ಸಾಧ್ಯತೆಯೂ ಇದೆ. ಬೆಟ್ಟ-ಗುಡ್ಡ-ಭೂಕುಸಿತಕ್ಕೆ ಕಾರಣವಾಗಬಹುದು. ಜೊತೆಗೆ, ಅತ್ಯಂತ ತೂಕದ ಕಾಡುಜಾತಿಯ ಮರಗಳನ್ನ ದೊಡ್ಡ-ದೊಡ್ಡ ಲಾರಿಗಳಲ್ಲಿ ಸಾಗಿಸುವುದು ಅಪಾಯವನ್ನ ಆಹ್ವಾನಿಸುವಂತೆ. ಇದರಿಂದ ರಸ್ತೆಗಳು ಡ್ಯಾಮೇಜ್ ಆಗಬಹುದು. ಗ್ರಾಮೀಣ ಭಾಗದ ಸಣ್ಣ-ಸಣ್ಣ ಸೇತುವೆಗಳು ಕೂಡ ಬಿರುಕು ಬಿಡಬಹುದು ಎಂಬುದು ಮಲೆನಾಡಿಗರ ಅಭಿಪ್ರಾಯ.

Chikkamagaluru ಕಾಮಗಾರಿ ನಡೆಸದೇ ಬಿಲ್ ಪಾಸ್ ,ಕೆರೆ ಅಭಿವೃದ್ಧಿಯಲ್ಲಿ ಗೋಲ್ಮಾಲ್

ಮಳೆಗಾಲದಲ್ಲಿ ಪ್ರಕೃತಿ ಮಧ್ಯೆ ಕೆಲಸ ಮಾಡುವುದು ಮತ್ತಷ್ಟು ಅಪಾಯಕಾರಿ. ಹಾಗಾಗಿ, ಮಳೆಗಾಲ ಮುಗಿಯೋವರೆಗೂ ಮರಗಳನ್ನ ಕಡಿಯುವುದಕ್ಕಾಗಲಿ ಅಥವ ಸಾಗಿಸುವುದಕ್ಕಾಗಲಿ ಅನುಮತಿ ನೀಡಿಬಾರದು ಎಂದು ಸ್ಥಳಿಯರು ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ವತಿಯಿಂದ ಅನುಮತಿ ಪಡೆದು ಸಾಗಿಸೋ ಮರಗಳನ್ನು ನಿಲ್ಲಿಸುವಂತೆ ಅರಣ್ಯ ಇಲಾಖೆ ಈಗಾಗಲೇ ವ್ಯಾಪಾರಸ್ಥರಿಗೆ ಸೂಚನೆ ನೀಡಿದೆ., ಇದರ ಮಧ್ಯೆಯೂ ಟಿಂಬರ್ ಸಾಗಾಟ ನಿಂತಿಲ್ಲ. ಅನುಮತಿ ಇಲ್ಲದೇ ಸಾಗಿಸೋ ಸ್ವೀಲರ್ ಮರಗಳನ್ನ ಕಡಿಯೋದನ್ನ ನಿಲ್ಲಿಸೋಕೆ ಜಿಲಾಧಿಕಾರಿಗಳೇ ಆದೇಶಿಸಬೇಕಿದೆ ಎನ್ನುವುದು ಚಿಕ್ಕಮಗಳೂರು ಅರಣ್ಯ ಇಲಾಖೆ ಡಿಎಫ್ ಓ ಕ್ರಾಂತಿಯವರ ಅಭಿಪ್ರಾಯವಾಗಿದೆ.

ಒಟ್ಟಾರೆ, ಕಾಫಿನಾಡಲ್ಲಿ ಮುಂಗಾರು ಚುರುಕುಗೊಂಡಿದೆ. ಮಲೆನಾಡು ಭಾಗದಲ್ಲಿ ಅಲ್ಲಲ್ಲೇ ಮಳೆ ಅಬ್ಬರವೂ ಜೋರಿದೆ. ಈ ಮಧ್ಯೆ ಕಳೆದ ಮೂರ್ನಾಲ್ಕು ವರ್ಷದ ಅನಾಹುತಗಳನ್ನ ನೋಡಿದರೆ ಮರಗಳನ್ನ ಕಡಿದು ಸಾಗಿಸೋದು ಸೂಕ್ತವಲ್ಲ ಅನ್ನೋದು ಸ್ಥಳಿಯರ ವಾದ. ಭೂಮಿಯ ಮಣ್ಣು ಸಡಿಲಗೊಳ್ಳುತ್ತೆ. ಮಣ್ಣನ್ನ ಹಿಡಿದಿರೋ ಮರಗಳೇ ಇಲ್ಲದಂತಾದರೆ ಬಹುಶಃ ಅಪಾಯ ಕಟ್ಟಿಟ್ಟ ಬುತ್ತಿ ಅನ್ನಿಸುತ್ತೆ. ಶತಮಾನಗಳಿಂದ ಕಾಡಿನಲ್ಲೇ ಬದುಕಿರೋರ ಊಹೆ ಸುಳ್ಳಾಗಲ್ಲ. ಹಳೆಯ ಅನಾಹುತಗಳಿಗೆ ಇನ್ನೂ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಹಾಗಾಗಿ, ಸರ್ಕಾರ ಟಿಂಬರ್ ಸಾಗಾಟಕ್ಕೆ ಸಂಪೂರ್ಣ ಬ್ರೇಕ್ ಹಾಕುವುದು ಪ್ರಕೃತಿಯನ್ನ ಉಳಿಸೋ ನಿಟ್ಟಿನಲ್ಲಿ ಸೂಕ್ತ ಅನ್ನಿಸುತ್ತೆ.

click me!