ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂನ್ 24): ಭೂ ದಾಖಲಾತಿಗೆ ಸಂಬಂಧಿಸಿದಂತೆ ಕಳೆದ 30 ವರ್ಷಗಳ ದೀರ್ಘಕಾಲದಿಂದ ಉತ್ತರ ಸಿಗದ ಪ್ರಶ್ನೆಗೆ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳಾದ ನಾಗರಾಜ್ ಕೇವಲ 7 ದಿನಗಳಲ್ಲಿ ಪರಿಹಾರ ಕೊಡಿಸಿದ್ದಾರೆ. ಇದು ಜಿಲ್ಲಾಧಿಕಾರಿಗಳ ಗ್ರಾಮ ಭೇಟಿ ಕಾರ್ಯಕ್ರಮದ ಫಲಶೃತಿಯೂ ಆಗಿರುವುದು ವಿಶೇಷವಾಗಿದೆ.
ಚಿಕ್ಕಮಗಳೂರು ತಾಲೂಕು ಶಿರವಾಸೆಯಲ್ಲಿ ಕಳೆದ ವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಡಿಸಿ ನಡೆ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮದ ಏಳೆಂಟು ಮಂದಿ ಸಭೆಯಲ್ಲಿ ಅರ್ಜಿ ನೀಡಿ ತಾವು ಸ್ವಾಧೀನದಲ್ಲಿರುವ ಜಾಗಕ್ಕೆ 30 ವರ್ಷಗಳಿಂದಲೂ ಪಹಣಿ ಸಿಗುತ್ತಿಲ್ಲ. ಇ-ಖಾತೆಯನ್ನೂ ಮಾಡಿಸಲು ಆಗುತ್ತಿಲ್ಲ. ಕಚೇರಿಗಳನ್ನು ಅಲೆದು ಸಾಕಾಗಿದೆ. ದಾಖಲೆಗಳು ಸರಿಯಾಗಿಲ್ಲ ಎನ್ನುವ ಉತ್ತವಷ್ಟೇ ಬರುತ್ತಿದೆ ಎಂದು ಅವಲತ್ತುಕೊಂಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಭೆಯಲ್ಲಿದ್ದ ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರು, ಸಭೆ ಮುಗಿದ ಮರುದಿನವೇ ಅವರನ್ನೆಲ್ಲಾ ತಮ್ಮ ಕಚೇರಿಗೆ ಕರೆಸಿಕೊಂಡು ಎಸಿ ಕೋರ್ಟ್ಗೆ ಅರ್ಜಿ ಹಾಕಿಸಿಕೊಂಡು ಅವರಿಗೆ ಹಿಂದೆ ಜಮೀನು ಮಾರಾಟ ಮಾಡಿದ್ದವರನ್ನೂ ಕರೆಸಿಕೊಂಡು ತಾವು ಆಸ್ತಿ ಮಾರಾಟ ಮಾಡಿರುವುದು ನಿಜ ಅದನ್ನು ಕೊಂಡುಕೊಂಡವರಿಗೆ ವರ್ಗಾವಣೆ ಮಾಡಬಹುದು ಎಂದು ಪ್ರಮಾಣಪತ್ರವನ್ನು ಪಡೆದು ನಂತರ ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 136/2 ರ ಪ್ರಕಾರ ಆಸ್ತಿ ಮಾರಾಟ ಮಾಡುವಾಗ ಸ.ನಂ.ನಮೂದಿಸದಿರುವುದು ನಮ್ಮಿಂದಲೇ ಆದ ತಪ್ಪು, ಈಗ ಸ್ವಾಧೀನದಲ್ಲಿರುವವರಿಗೆ ಖಾತೆ ವರ್ಗಾವಣೆ ಮಾಡಿಕೊಡಬಹುದು ಎಂದು ಸ್ವಯಂ ಇಚ್ಛಾ ನಿರಾಪೇಕ್ಷಣಾ ಪತ್ರವನ್ನು ಬರೆಸಿಕೊಂಡು ಅರ್ಜಿ ದಾರರಿಗೆ ಕಾನೂನು ಬದ್ಧವಾಗಿ ಕ್ರಯಪತ್ರವನ್ನು ಮಾಡಿಕೊಟ್ಟಿದ್ದಾರೆ.
CHIKKAMAGALURU ಕಾಮಗಾರಿ ನಡೆಸಿದೇ ಬಿಲ್ ಪಾಸ್ ,ಕೆರೆ ಅಭಿವೃದ್ಧಿಯಲ್ಲಿ ಗೋಲ್ಮಾಲ್
ಈ ರೀತಿಯ 8 ಪ್ರಕರಣಗಳಿಗೆ ಕೇವಲ 7 ದಿನದಲ್ಲಿ ಉಪ ವಿಭಾಗಾಧಿಕಾರಿಗಳು ಪರಿಹಾರ ದೊರಕಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಅನಕ್ಷರತೆ, ನಿರ್ಲಕ್ಷ್ಯತೆ ಇನ್ನಿತರೆ ಕಾರಣಕ್ಕೆ ಜಮೀನು ಖರೀದಿ ಮಾಡಿ ನೋಂದಣಿ ಮಾಡಿಸಿಕೊಂಡರೂ ಇತರೆ ದಾಖಲೆಗಳನ್ನು ಮಾಡಿಸಿಕೊಳ್ಳದೆ ಅತಂತ್ರರಾಗಿರುವ ಇಂತಹ ಅದೆಷ್ಟೋ ಪ್ರಕರಣಗಳು ಇವೆ. ದಶಕಗಳಿಂದ ಜಟಿಲಗೊಂಡ ಇಂತಹ ಸಮಸ್ಯೆಗಳನ್ನು ಪರಿಹರಿಸುವುದು ಸ್ವಲ್ಪ ಕಷ್ಟವೇ ಆದರೂ ಇಚ್ಛಾಶಕ್ತಿ ಪ್ರದರ್ಶಿಸಿದಲ್ಲಿ ಎಲ್ಲವೂ ಸಾಧ್ಯ ಎನ್ನುವುದನ್ನು ಉಪವಿಭಾಗಾಧಿಕಾರಿ ಮಾಡಿ ತೋರಿಸಿದ್ದಾರೆ.
ಏನಿದು ಸಮಸ್ಯೆ: ಹತ್ತಾರು ವರ್ಷಗಳ ಹಿಂದೆ ಬೇರೆಯವರಿಂದ ಆಸ್ತಿ ಖರೀದಿ ಮಾಡಿದವರು ನೊಂದಣಿ ಆದ ಕೂಡಲೇ ಆಸ್ತಿ ನಮ್ಮ ಹೆಸರಿನಲ್ಲಿದೆ ಎಂದು ಸುಮ್ಮನಾಗುತ್ತಾರೆ. ಸೇಲ್ ಡೀಡ್, ಸ್ವಾಧೀನ ಎಲ್ಲವೂ ಇದ್ದರೂ ಗೊತ್ತಿಲ್ಲದೆ ಮಾಡಿಕೊಂಡ ತಪ್ಪಿನಿಂದಾಗಿ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿ ಎರಡೂ ಕಡೆಯೂ ಖಾತೆ ಬದಲಾವಣೆ ಪ್ರಕ್ರಿಯೆಗಳೇ ನಡೆದಿರುವುದಿಲ್ಲ. ಇದರಿಂದ ಹಲವು ಸಂದರ್ಭಗಳಲ್ಲಿ ಭೂಮಿಯ ಹಕ್ಕೇ ಅವರಿಗೆ ಸಿಗುತ್ತಿರರಿಲ್ಲ. ಕೆಲವು ಸೇಲ್ ಡೀಡ್ನಲ್ಲಿ ಆಸ್ತಿಯ ಸರ್ವೇ ನಂಬರ್ಗಳೇ ಇಲ್ಲ. ಇನ್ನೂ ಕೆಲವು ಪ್ರಕರಣದಲ್ಲಿ ಆರ್ಟಿಸಿ ಕೊಟ್ಟವರ ಹೆಸರಲ್ಲೇ ಆಸ್ತಿ ಪೌತಿ ಖಾತೆ ಆಗಿದೆ. ಈ ಕಾರಣಕ್ಕೆ ಆಸ್ತಿ ಖರೀದಿ ಮಾಡಿದವರು ಸ್ವಾಧೀನದಲ್ಲಿದ್ದರೂ ಅವರ ಹೆಸರಿನಲ್ಲಿ ಪಹಣಿ ಬರುವುದಿಲ್ಲ. ಇ-ಖಾತೆ ಮಾಡಿಸಲು ಸಾಧ್ಯವಾಗುತ್ತಿಲ್ಲ.
ಚಿಕ್ಕಮಗಳೂರು: ವಾರದ ಹಿಂದೆ ಓಪನ್ ಆಗಿದ್ದ ಸೇತುವೆ ಕುಸಿತ, ಲಕ್ಷಾಂತರ ಹಣ ಮಣ್ಣುಪಾಲು..!
ಸರಕಾರದ ಕೆಲವು ಸವಲತ್ತುಗಳನ್ನು ಪಡೆಯಲು, ಆಸ್ತಿಮೇಲೆ ಸಾಲ ಸೌಲಭ್ಯ ಪಡೆಯಲು ಹೋದಾಗ ಈ ಸಮಸ್ಯೆಗಳು ಹೊರಬಂದಿವೆ. ಆಸ್ತಿ ಖರೀದಿಸಿ ಹತ್ತಾರು ವರ್ಷಗಳಾದ ಕಾರಣ ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಈ ಸಮಸ್ಯೆ ಪರಿಹರಿಸಲು ಸಾಧ್ಯವಾಗುವುದಿಲ್ಲ. ಕಾನೂನು ಪ್ರಕಾರ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲೇ ಸಮಸ್ಯೆ ಬಗೆಹರಿಯಬೇಕು. ಅದೂ ಸಹ ಅಷ್ಟು ಸುಲಭದ ಮಾತಲ್ಲ. ಆದರೆ ಇಷ್ಟೆಲ್ಲಾ ಪ್ರಕ್ರಿಯಗಳನ್ನು ಸಮಾಧಾನವಾಗಿ ಮಾಡಿ ಮುಗಿಸಿರುವ ಉಪ ವಿಭಾಗಾಧಿಕಾರಿಗಳು ಜಟಿಲವಾದ ಸಮಸ್ಯೆ ಪರಿಹಾರವನ್ನು ಸಾಧ್ಯವಾಗಿಸಿದ್ದಾರೆ.
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಶಿರವಾಸೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಪ್ರೇಮಾಕ್ಷಿ ಎಸಿ ಡಾ. ನಾಗರಾಜು ಅವರು ದೊಡ್ಡ ಉಪಕಾರ ಮಾಡಿಕೊಟ್ಟಿದ್ದಾರೆ. ಇಂತಹ ಇಚ್ಛಾಶಕ್ತಿ ಇರುವ ಅಧಿಕಾರಿಗಳು ಇದ್ದರೆ ಗ್ರಾಮ ಸಭೆಯಂತಹ ಸರ್ಕಾರದ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ. ಮಾನವೀಯತೆ, ಬದ್ಧತೆ ಇದ್ದಲ್ಲಿ ಏನು ಬೇಕಾದರೂ ಸಾಧ್ಯ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದರು. ಒಟ್ಟಾರೆ ಭೂದಾಖಲೆಗಳ ತಿದ್ದುಪಡಿಗೆ ಕಾನೂನಿನಲ್ಲಿ ಎಲ್ಲಾ ರೀತಿ ಅವಕಾಶಗಳು ಇದ್ರೂ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ಸಮಸ್ಯೆ ಜಟಲವಾಗಿಯೇ ಉಳಿದುಕೊಳ್ಳುತ್ತೆ. ಇದಕ್ಕೆ ಶಿರವಾಸೆ ಗ್ರಾಮದ 30 ವರ್ಷದ ಸಮಸ್ಯೆ ಒಂದು ಉದಾಹರಣೆ.ಇಚ್ಚಾಶಕ್ತಿಯ ಅಧಿಕಾರಿಗಳು ಇದ್ರೆ 30 ವರ್ಷದ ಸಮಸ್ಯೆಯನ್ನು ಕೇವಲ 7 ದಿನದಲ್ಲೇ ಬಗೆಹರಿಸಬಹುದು ಎನ್ನುವುದನ್ನು ಎಸಿ ನಾಗರಾಜ್ ತೋರಿಸಿಕೊಟ್ಟಿದ್ದಾರೆ.