ಸಾಕ್ಷರತೆ ಪ್ರಮಾಣ ಹೆಚ್ಚಿಸುವ ಹಾಗೂ ಬಡ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಜಾರಿಗೆ ತಂದಿರುವ ಮಧ್ಯಾಹ್ನ ಬಿಸಿಯೂಟಕ್ಕೆ ಅಕ್ಕಿಯ ಕೊರತೆ ಎದುರಾಗಿದೆ. ಹೀಗಾಗಿ ಮಕ್ಕಲಿಗೆ ಜಪ್ತಿಯಾಗಿರುವ ಅಕ್ರಮ ಅಕ್ಕಿಯನ್ನೇ ಪೂರೈಕೆ ಮಾಡಲಾಗುತ್ತಿದೆ.
ಜಗದೀಶ ವಿರಕ್ತಮಠ
ಬೆಳಗಾವಿ (ಜ.16): ಸಾಕ್ಷರತೆ ಪ್ರಮಾಣ ಹೆಚ್ಚಿಸುವ ಹಾಗೂ ಬಡ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಜಾರಿಗೆ ತಂದಿರುವ ಮಧ್ಯಾಹ್ನ ಬಿಸಿಯೂಟಕ್ಕೆ ಅಕ್ಕಿಯ ಕೊರತೆ ಎದುರಾಗಿದೆ. ಹೀಗಾಗಿ ಮಕ್ಕಲಿಗೆ ಜಪ್ತಿಯಾಗಿರುವ ಅಕ್ರಮ ಅಕ್ಕಿಯನ್ನೇ ಪೂರೈಕೆ ಮಾಡಲಾಗುತ್ತಿದೆ. ಈ ಮೂಲಕ ಮಕ್ಕಳ ಒಂದು ಹೊತ್ತಿನ ಊಟಕ್ಕೂ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡದಂತಹ ಪರಿಸ್ಥಿತಿಗೆ ರಾಜ್ಯ ಸರ್ಕಾರ ಬಂದು ನಿಂತಿದೆಯೇ ಎನ್ನುವ ಅನುಮಾನ ಕೂಡ ಬಂದಿದೆ.
ಶಾಲಾ ಹಾಜರಾತಿ ಹಾಗೂ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ರಾಜ್ಯ ಸರ್ಕಾರ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಇದೀಗ ಕುತ್ತು ಬಂದಿದೆ. ಮಕ್ಕಳ ಮಧ್ಯಾಹ್ನ ಊಟಕ್ಕೆ ಬೇಕಾಗಿರುವ ಅಕ್ಕಿಯೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಮಕ್ಕಳ ಬಿಸಿಯೂಟವನ್ನು ಅಕ್ರಮ ಅಕ್ಕಿ ಸಾಗಣೆ ವೇಳೆ ಜಪ್ತಿ ಮಾಡಿರುವುದನ್ನೇ ಕೊಟ್ಟು ಸರಿದೂಗಿಸುವ ಲೆಕ್ಕಾಚಾರ ನಡೆದಿದೆ.
ಜ.17ರಂದು ಹೊಸಪೇಟೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ: ಶಾಸಕ ಪರಮೇಶ್ವರ ನಾಯ್ಕ
ಯಾಕೆ ಅಕ್ರಮ ಜಪ್ತಿ ಅಕ್ಕಿ ಬಳಕೆ?: ಮಕ್ಕಳ ಬಿಸಿಯೂಟಕ್ಕೆ ಅವಶ್ಯಕವಾಗಿರುವ ಅಕ್ಕಿ ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ಸರ್ಕಾರ ವಿತರಿಸುತ್ತಿದೆ. ಇದಕ್ಕೆ 1-8ನೇ ತರಗತಿವರೆಗೆ ಕೇಂದ್ರ ಸರ್ಕಾರದಿಂದ ಪೂರೈಕೆ ಮಾಡಲಾಗುತ್ತಿದೆ. ಆದರೆ ಕಳೆದ ಐದಾರು ತಿಂಗಳಿಂದ ರಾಜ್ಯ ಸರ್ಕಾರ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯವಿರುವ ಅಕ್ಕಿಯನ್ನು ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಪೂರೈಕೆ ಮಾಡಲು ಕ್ರಮಕೈಗೊಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಶಾಲೆಗಳಲ್ಲಿ ಶಿಕ್ಷಕರೇ ತಮ್ಮ ಕಿಸೆಯಿಂದ ಲಕ್ಷಾಂತರ ರು. ಹಣ ವ್ಯಯಿಸಿ ಮಕ್ಕಳ ಹಸಿವನ್ನು ನೀಗಿಸುವ ಕಾರ್ಯ ಮಾಡಿದ್ದಾರೆ. ಇನ್ನೂ ಕೆಲವು ಶಾಲೆಗಳಲ್ಲಿ ಬಿಸಿಯೂಟವನ್ನೇ ತಾತ್ಕಾಲಿಕವಾಗಿ ಸ್ಥಗಿತ ಮಾಡುವ ಅನಿವಾರ್ಯ ಸ್ಥಿತಿಗೆ ಬಂದುನಿಂತಿದೆ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲಾಡಳಿತಗಳು ಅಕ್ರಮವಾಗಿ ಸಾಗಾಟ ಮಾಡುವ ಸಂದರ್ಭದಲ್ಲಿ ದಾಳಿ ನಡೆಸಿ ಜಪ್ತಿ ಮಾಡಲಾದ ಅಕ್ಕಿಯನ್ನೇ ಇದೀಗ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಪೂರೈಕೆ ಮಾಡಲಾಗುತ್ತಿದೆ.
ಎಚ್ಚರಿಕೆಯೊಂದಿಗೆ ಅನುಮತಿ: ಬೆಳಗಾವಿ ಜಿಲ್ಲೆಯೊಂದರಲ್ಲೇ ಕಳೆದ ಒಂದು ವರ್ಷದ ಅವಧಿಯಲ್ಲಿ ಅಕ್ರಮ ಅಕ್ಕಿ ಸಾಗಾಟ ಮಾಡುವ ವೇಳೆ ದಾಳಿ ನಡೆಸಿದ ಸುಮಾರು 45ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಅಂದಾಜು 2500 ರಿಂದ 3000 ಟನ್ ಅಕ್ಕಿಯನ್ನು ಜಪ್ತಿ ಮಾಡಿ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದೆ. ಈ ಹಿನ್ನೆಲೆಯಲ್ಲಿ ನಿಗಮದ ಸಗಟು ಮಳಿಗೆಯಲ್ಲಿ ಸಂಗ್ರಹಿಸಿಡಲಾಗಿರುವ ಜಪ್ತಾದ ಅಕ್ರಮ ಅಕ್ಕಿ ತ್ವರಿತವಾಗಿ ಹಾಳಾಗುವ ಹಿನ್ನೆಲೆಯಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಪೂರೈಕೆ ಮಾಡಲು ಜಿಲ್ಲಾಧಿಕಾರಿ ಸಮ್ಮತಿ ಹಿನ್ನೆಲೆಯಲ್ಲಿ ಜಿಪಂ ಸಿಇಒ ದರ್ಶನ್.ಎಚ್.ವಿ ಅವರು ಉತ್ತಮ ಗುಣಮಟ್ಟದ ಅಕ್ಕಿಯನ್ನು ಮಾತ್ರ ಶಾಲೆಗಳಿಗೆ ವಿತರಿಸಬೇಕು. ಅಲ್ಲದೇ ಆಹಾರ ಧಾನ್ಯದ ಗುಣಮಟ್ಟದ ಕುರಿತು ದೂರುಗಳು ಬಂದಲ್ಲಿ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಕೆಎಫ್‌ಸಿಎಸ್‌ಸಿ ಬೆಳಗಾವಿ ಜಿಲ್ಲಾ ವ್ಯವಸ್ಥಾಪಕರಿಗೆ ಎಚ್ಚರಿಕೆಯೊಂದಿಗೆ ಅನುಮತಿಯನ್ನು ನೀಡಿ ಆದೇಶ ಹೊರಡಿಸಿದ್ದಾರೆ.
ಆಹಾರ ಸಚಿವರು ಇಲ್ಲದೇ ಸಮಸ್ಯೆ ಆಯಿತಾ?: ದಿ.ಉಮೇಶ ಕತ್ತಿ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಸಚಿರಾಗಿದ್ದಾಗ 9 ಮತ್ತು 10ನೇ ತರಗತಿ ಮಕ್ಕಳ ಬಿಸಿಯೂಟಕ್ಕೆ ಅಕ್ಕಿ ಪೂರೈಕೆ ಸರಿಯಾಗಿಯೇ ಇತ್ತು. ಆದರೆ, ಅವರ ನಿಧನದ ನಂತರ ಇದೀಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಇಲ್ಲದ ಕಾರಣಕ್ಕೆ ಅಧಿಕಾರವೆಲ್ಲ ಇದೀಗ ಸರ್ಕಾರಿ ಅಧಿಕಾರಿಗಳ ಕೈಯಲ್ಲಿದೆ. ಹೀಗಾಗಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ಮಾಡುತ್ತಿಲ್ಲ. ಇದರಿಂದ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೂ ಕುತ್ತು ಬಂದಿದೆ. ಇದೀಗ ನೀಡುತ್ತಿರುವ ಜಪ್ತಿ ಮಾಡಿದ ಅಕ್ಕಿ ಖಾಲಿಯಾದರೆ, ಮಕ್ಕಳ ಬಿಸಿಯೂಟಕ್ಕೆ ಎಲ್ಲಿಂದ ಅಕ್ಕಿ ನೀಡುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ 9 ಮತ್ತು 10ನೇ ತರಗತಿ ಮಕ್ಕಳ ಬಿಸಿಯೂಟ ಬಂದ್ ಆಗೋ ಮುಂಚೆ ಸಮಸ್ಯೆ ಸರಿಪಡಿಸಬೇಕಾಗಿದೆ.
ಹಿಂದುಳಿದ ಗಂಗಾಮತ ಸಮಾಜ ಎಸ್ಟಿಗೆ ಸೇರಿಸಿ: ವಿಧಾನಪರಿಷತ್ ಸದಸ್ಯ ರವಿಕುಮಾರ್
ಪಡಿತರ ಆಹಾರ ಧಾನ್ಯವನ್ನು ಅಕ್ರಮವಾಗಿ ಸಾಗಾಟ ಮಾಡುವ ಸಮಯದಲ್ಲಿ ದಾಳಿ ನಡೆಸಿ ಜಪ್ತಿ ಮಾಡಲಾಗಿರುವ ಅಕ್ಕಿಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಸಿಇಒ ಅವರ ಅನುಮತಿಯೊಂದಿಗೆ ಎಪಿಎಲ್ ಚೀಟಿದಾರರಿಗೆ ಅಥವಾ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಪೂರೈಕೆ ಮಾಡಲು ಅವಕಾಶ ಇದೆ.
-ಶ್ರೀಶೈಲ್ ಕಂಕಣವಾಡಿ, ಜಂಟಿ ನಿರ್ದೆಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಳಗಾವಿ