ಹಂಪಿಯಲ್ಲಿ 200ಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇ ಹಾವಳಿ! ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉಪಲೋಕಾಯುಕ್ತ ಗರಂ

Kannadaprabha News   | Kannada Prabha
Published : Jul 28, 2026, 12:19 PM IST
Justic b Veerappa ivsit hampi

ಸಾರಾಂಶ

ವಿಶ್ವ ಪಾರಂಪರಿಕ ತಾಣ ಹಂಪಿಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ, 200ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದನ್ನು ಪತ್ತೆಹಚ್ಚಿದರು. ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಹೊಸಪೇಟೆ (ಜು.28): ವಿಶ್ವ ಪಾರಂಪರಿಕ ತಾಣ ಹಂಪಿಗೆ ಶನಿವಾರ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ದಿಢೀರ್ ಭೇಟಿ ನೀಡಿ, ಹಂಪಿ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಹೋಂ ಸ್ಟೇಗಳ ಕುರಿತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಹಂಪಿಯಲ್ಲಿ 200ಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇ!

ಪರಿಶೀಲನೆ ವೇಳೆ ಸ್ಥಳೀಯವಾಗಿ ಸುಮಾರು 200ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇಗಳು ಕಾರ್ಯ ನಿರ್ವಹಿಸುತ್ತಿರುವುದು ಉಪ ಲೋಕಾಯುಕ್ತರ ಗಮನಕ್ಕೆ ಬಂದಿದ್ದು, ಯಾವುದೇ ಸೂಕ್ತ ಅನುಮತಿ, ಪಂಚಾಯತ್ ಪ್ರಾಧಿಕಾರದ ಪರವಾನಗಿ ಇಲ್ಲದೇ ಇಷ್ಟೊಂದು ಸಂಖ್ಯೆಯ ಹೋಂ ಸ್ಟೇಗಳು ಹೇಗೆ ನಡೆಯುತ್ತಿವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಅನಧಿಕೃತ ವಹಿವಾಟು ನಡೆಸಲು ಹೇಗೆ ಅವಕಾಶ ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಏಕೆ ವಿಫಲರಾಗಿದ್ದಾರೆ ಎಂದು ಕಠಿಣವಾಗಿ ಪ್ರಶ್ನಿಸಿದರು.

ಕೃಷಿ ಅಥವಾ ವಾಸಯೋಗ್ಯ ಭೂಮಿಯಲ್ಲಿ ಕಾನೂನುಬಾಹಿರವಾಗಿ ವಾಣಿಜ್ಯ ಉದ್ದೇಶದ ಹೋಂ ಸ್ಟೇಗಳನ್ನು ನಡೆಸುತ್ತಿರುವುದಕ್ಕೆ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಸೂಚಿಸಿದರು. ಪಿಡಿಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜತೆ ತಕ್ಷಣವೇ ಪರಿಶೀಲನೆ ನಡೆಸಿ, ಅನಧಿಕೃತವಾಗಿ ನಡೆಯುತ್ತಿರುವ ಎಲ್ಲಾ ಹೋಂ ಸ್ಟೇಗಳ ಮೇಲೆ ಕಾನೂನುಬದ್ಧ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ತೆರವುಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.ಅನಧಿಕೃತ ಹೋಂ ಸ್ಟೇಗಳನ್ನು ನಡೆಸಲು ಅವಕಾಶ ನೀಡಿದ ಸಂಬಂಧಿಸಿದ ಪ್ರಾಧಿಕಾರಗಳ ಮೇಲೆ ಸುಮೋಟೊ ಪ್ರಕರಣ ದಾಖಲಿಸಲು ಸೂಚನೆ ನೀಡಿದರು.

ಅಧಿಕಾರಿಗಳಿಗೆ ಉಪಲೋಕಾಯುಕ್ತ ತರಾಟೆ

ಈ ವೇಳೆ ಹಂಪಿ ಜನತಾ ಸ್ಟ್ರೀಟ್ ಸ್ಥಳಕ್ಕೆ ಭೇಟಿ ನೀಡಿದ ಅವರು, ವಿಶ್ವ ಪಾರಂಪರಿಕ ಸ್ಥಳದ ಸುತ್ತಮುತ್ತ ಕಾನೂನು ಬಾಹಿರವಾಗಿ 100ಮೀಟರ್ ಪ್ರದೇಶದಲ್ಲಿ ವಾಸಿಸುತ್ತಿರುವ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆಯಾಗುವ ಬಗ್ಗೆ ಕಂಡುಬಂದಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಲ್ಲಿನ ಜನರಿಗೆ ಪರ್ಯಾಯವಾಗಿ ಬೇರೆ ಸ್ಥಳದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಲು ಸೂಕ್ತ ಸ್ಥಳ ಗುರುತಿಸಿ ಇಲ್ಲಿನ ವ್ಯಾಪಾರಿಗಳಿಗೆ ಅವಕಾಶ ಕೊಟ್ಟು ಜನತಾ ಸ್ಟ್ರೀಟ್‌ನಲ್ಲಿ ಯಾವುದೇ ಕಾರಣಕ್ಕೂ ವ್ಯವಹಾರಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ

ಹಂಪಿ ಶ್ರೀ ವಿರೂಪಾಕ್ಷೇಶ್ವರ ಗರ್ಭಗುಡಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ಭಕ್ತರಿಗೆ ಅಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳ ಬಗ್ಗೆ ವೀಕ್ಷಿಸಿದರು. ಈ ವೇಳೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ವಿರೂಪಾಕ್ಷೇಶ್ವರ ಗರ್ಭಗುಡಿಯಲ್ಲಿ ಗಾಳಿಯ ಚಲನೆ ಇಲ್ಲದ ಕಾರಣ ಎಸಿ ಅಳವಡಿಕೆಗೆ ಎಎಸ್‌ಐಯಿಂದ ಅನುಮತಿ ಪಡೆಯಲಾಗಿದ್ದು, ಕೆಲವೇ ದಿನಗಳಲ್ಲಿ ಎಸಿ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಉಪನಿಬಂಧಕ ಅರವಿಂದ್, ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಎಸ್ಪಿ ಎಸ್.ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ವಿವೇಕಾನಂದ ಇದ್ದರು.

PREV
Read more Articles on
click me!

Recommended Stories

ಬೆಂಗಳೂರು ಲೀಸ್‌ ಮನೆಗಳ ಬ್ರಹ್ಮಾಂಡ ರಹಸ್ಯ ಬಯಲು: 6 ಬಾರಿ ಜೈಲಿಗೆ ಹೋದ ವಂಚಕನ ಕೈಗೆ ಸಿಕ್ಕೀರಿ ಜೋಕೆ!
'ಇದೇ ರೀತಿ ಮಾತು ಮುಂದುವರಿಸಿದ್ರೆ..' ಮುಲ್ಲಾನ ಬಗ್ಗೆ ಸಿಟಿ ರವಿ ಹೇಳಿಕೆಗೆ ಎಸ್‌ಡಿಪಿಐ ವಾರ್ನಿಂಗ್