ರಾಜ್ಯವನ್ನೇ ಬೆಚ್ಚಿಬೀಳಿಸಿದ ಅಕ್ರಮ ಶಸ್ತ್ರಾಸ್ತ್ರ ಜಾಲ, ಶಿಕಾರಿಪುರದಲ್ಲಿ ನಾಡ ಬಂದೂಕು ತಯಾರಿಕಾ ಜಾಲ ಪತ್ತೆ!

Published : Feb 06, 2026, 05:28 PM IST
gun

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಅಕ್ರಮ ನಾಡ ಬಂದೂಕು ತಯಾರಿಕಾ ಜಾಲವೊಂದು ಪತ್ತೆಯಾಗಿದೆ. ಭದ್ರಾಪುರ ಗ್ರಾಮದ ಕಾರ್ಪೆಂಟರ್ ಲಕ್ಷ್ಮಣಪ್ಪ ಎಂಬಾತನನ್ನು ಬಂಧಿಸಿದ್ದು, ಈತ ಗುಜರಿ ಸಾಮಾನು ಬಳಸಿ ಬಂದೂಕು ತಯಾರಿಸಿ ರೈತರಿಗೆ ಮಾರಾಟ ಮಾಡುತ್ತಿದ್ದ. 

ಶಿವಮೊಗ್ಗ: ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತವರು ಕ್ಷೇತ್ರವಾದ ಶಿಕಾರಿಪುರದಲ್ಲಿ ಬೆಳಕಿಗೆ ಬಂದಿದೆ. ಶಿಕಾರಿಪುರ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದ್ದು, ಈ ಸಂಬಂಧ ಕಾರ್ಪೆಂಟರ್ ವೃತ್ತಿಯ ಲಕ್ಷ್ಮಣಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಹಳೆಯ ಮನೆಯೊಳಗೆ ನಾಡ ಬಂದೂಕು ತಯಾರಿಕೆ

ಭದ್ರಾಪುರ ಗ್ರಾಮದ ಹಳೆಯ ಮನೆಯಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸುತ್ತಿದ್ದ ಆರೋಪಿಯು, ಯಾವುದೇ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ನಿರ್ಮಿಸಿ ಗ್ರಾಮೀಣ ಪ್ರದೇಶದ ರೈತರಿಗೆ ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಾಣಿಗಳ ಬೇಟೆಗಾಗಿ ಬಳಸುವ ಉದ್ದೇಶದಿಂದ ಈ ನಾಡ ಬಂದೂಕುಗಳನ್ನು ಸಿದ್ಧಪಡಿಸಿ ನೀಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಶಿವಮೊಗ್ಗದ ಗುಜರಿಗಳಿಂದ ಭಾಗಗಳ ಸಂಗ್ರಹ

ತನಿಖೆಯ ವೇಳೆ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆಯ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಬಂದೂಕುಗಳಿಗೆ ಅಗತ್ಯವಿರುವ ಟ್ರಿಗರ್, ಟ್ರಿಗರ್ ಗಾರ್ಡ್, ಬಿಡಿ ಭಾಗಗಳು ಹಾಗೂ ಹಳೆಯ ಸ್ಟೀರಿಂಗ್‌ಗಳನ್ನು ಶಿವಮೊಗ್ಗದ ವಿವಿಧ ಗುಜರಿ ಅಂಗಡಿಗಳಿಂದ ಖರೀದಿಸಲಾಗುತ್ತಿತ್ತು. ಬಂದೂಕಿಗೆ ಬೇಕಾದ ಮರದ ಹಿಡಿಕೆಗಳನ್ನು ಲಕ್ಷ್ಮಣಪ್ಪ ತಾನೇ ತಯಾರಿಸುತ್ತಿದ್ದನು ಎಂಬುದು ತನಿಖೆಯಿಂದ ಗೊತ್ತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಕಾಡಂಚಿನ ರೈತರು ಈತನ ಪ್ರಮುಖ ಗ್ರಾಹಕರಾಗಿದ್ದು, ಪ್ರಾಣಿಗಳ ದಾಳಿಯಿಂದ ರಕ್ಷಣೆ ಮತ್ತು ಬೇಟೆಯ ಉದ್ದೇಶಕ್ಕಾಗಿ ನಾಡ ಬಂದೂಕುಗಳನ್ನು ಖರೀದಿಸುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸ್ ಕಾರ್ಯಾಚರಣೆ: ಆರೋಪಿಯ ಬಂಧನ

ಶಿಕಾರಿಪುರ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶರತ್ ಹಾಗೂ ಸಿಪಿಐ ಸಂತೋಷ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಈ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಜಾಲವನ್ನು ಭೇದಿಸಲಾಗಿದೆ. ದಾಳಿ ವೇಳೆ ಆರೋಪಿಯಿಂದ 7 ಸಿಂಗಲ್ ಬ್ಯಾರಲ್ ನಾಡ ಬಂದೂಕುಗಳು, ಬಂದೂಕು ತಯಾರಿಕೆಗೆ ಬಳಸುತ್ತಿದ್ದ ವಿವಿಧ ಉಪಕರಣಗಳು ಮತ್ತು ಬಿಡಿಭಾಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು

ಆರೋಪಿ ಲಕ್ಷ್ಮಣಪ್ಪ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಕಲಂ 25(1)ಎ ಹಾಗೂ ಶಸ್ತ್ರಾಸ್ತ್ರ ತಿದ್ದುಪಡಿ ಅಧಿನಿಯಮ–2019ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಈ ಜಾಲಕ್ಕೆ ಇನ್ನಾರಾದರೂ ಸಹಕಾರ ನೀಡಿದ್ದಾರೆಯೇ, ಬಂದೂಕುಗಳನ್ನು ಯಾರು ಖರೀದಿಸಿದ್ದಾರೆ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ರಾಜಕೀಯ ನಾಯಕರ ತವರು ಕ್ಷೇತ್ರದಲ್ಲೇ ಇಂತಹ ಅಕ್ರಮ ಶಸ್ತ್ರಾಸ್ತ್ರ ಜಾಲ ಪತ್ತೆಯಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

PREV
Read more Articles on
click me!

Recommended Stories

ಹಾವೇರಿ ಹೆದ್ದಾರಿಯಲ್ಲಿ ಹೈಟೆಕ್ ದರೋಡೆ: ಮೂವಿಂಗ್ ಲಾರಿಯಿಂದಲೇ 25 ಲಕ್ಷದ ಫ್ಲಿಪ್‌ಕಾರ್ಟ್ ಮಾಲು ಮಂಗಮಾಯ!
ಮೆಟ್ರೋ ದರ ಏರಿಕೆ ಕೇಂದ್ರ ಸರ್ಕಾರದ ಆದೇಶ, ರಾಜ್ಯದ ಪಾತ್ರವಿಲ್ಲ; ಬಿಜೆಪಿ ಮೊಸಳೆ ಕಣ್ಣೀರು ನಿಲ್ಲಿಸಲಿ- ಸಿದ್ದರಾಮಯ್ಯ