101 ದೇವಸ್ಥಾನ, 101 ಬಾವಿಗಳ ಉತ್ಖನನ: ಲಕ್ಕುಂಡಿ ಜನರನ್ನು ಊರಿಂದಾಚೆ ಕಳಿಸೋದು ಅನಿವಾರ್ಯ; ಎಚ್.ಕೆ. ಪಾಟೀಲ

Published : Feb 06, 2026, 04:19 PM IST
HK Patil Grants ₹10 Cr for Lakkundi: Focus on 5 Temples and 5 Stepwell

ಸಾರಾಂಶ

ಐತಿಹಾಸಿಕ ಲಕ್ಕುಂಡಿಯಲ್ಲಿ ₹10 ಕೋಟಿ ವೆಚ್ಚದಲ್ಲಿ 'ಪಂಚ ದೇವಾಲಯ' ಮತ್ತು 'ಪಂಚ ಬಾವಿ' ಅಭಿವೃದ್ಧಿ ಯೋಜನೆಗೆ ಸಚಿವ ಎಚ್.ಕೆ. ಪಾಟೀಲ ಚಾಲನೆ ನೀಡಿದರು. ಲಕ್ಕುಂಡಿಯ 101 ದೇವಾಲಯಗಳು ಮತ್ತು 101 ಬಾವಿಗಳ ಉತ್ಖನನಕ್ಕಾಗಿ ಗ್ರಾಮವನ್ನು ಸ್ಥಳಾಂತರಿಸಿ 'ನವ ಲಕ್ಕುಂಡಿ' ನಿರ್ಮಿಸುವ ಪ್ರಸ್ತಾಪವೂ ಚರ್ಚೆಯಲ್ಲಿದೆ.

ಗದಗ (ಫೆ.06): ಕನ್ನಡ ನಾಡಿನ ಐತಿಹಾಸಿಕ ಲಕ್ಕುಂಡಿಯು 101 ದೇವಾಲಯಗಳು ಹಾಗೂ 101 ಬಾವಿಗಳ ತವರು ಎಂದು ಖ್ಯಾತಿ ಪಡೆದಿದ್ದು, ಇವೆಲ್ಲವುಗಳನ್ನು ಹುಡುಕುವುದಕ್ಕೆ ಉತ್ಖನನ ಮಾಡುವುದಕ್ಕೆ ಊರಿನ ಜನರನ್ನು ಬೇರೆಡೆ ಕಳಿಸುವ ಅಗತ್ಯವಿದೆ ಎಂದು ಕಾನೂನು ಮತ್ತು ಸಂಸದೀಯ ಆಡಳಿತ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಐತಿಹಾಸಿಕ ಲಕ್ಕುಂಡಿ ಗ್ರಾಮದ ಮಣ್ಣಿನ ಅಡಿಯಲ್ಲಿ ಹುದುಗಿ ಹೋಗಿದ್ದ ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವ ಮತ್ತು ನಮ್ಮ ಪೂರ್ವಜರ ವಾಸ್ತುಶಿಲ್ಪದ ವೈಭವವನ್ನು ಮರುಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದರು. ಶಾಸಕ ಸಿ.ಸಿ. ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರ ಉಪಸ್ಥಿತಿಯಲ್ಲಿ ಕೋಟೆ ವೀರಭದ್ರೇಶ್ವರ ದೇವಾಲಯದ ಅಂಗಳದಲ್ಲಿ ಈ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಅವರು, ಲಕ್ಕುಂಡಿಯಲ್ಲಿ 'ಪಂಚ ದೇವಾಲಯ' ಮತ್ತು 'ಪಂಚ ಬಾವಿ'ಗಳ ಅನಾವರಣ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ₹10 ಕೋಟಿ ಅನುದಾನದಲ್ಲಿ ಭೂಮಿಪೂಜೆ ನೆರವೇರಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಶಿಥಿಲಗೊಂಡಿದ್ದ ಸ್ಮಾರಕಗಳ ಜೀರ್ಣೋದ್ಧಾರ

ಮುಂದುವರೆದು, ಲಕ್ಕುಂಡಿಯು 101 ದೇವಾಲಯಗಳು ಹಾಗೂ 101 ಬಾವಿಗಳ ತವರು ಎಂದು ಖ್ಯಾತಿ ಪಡೆದಿದ್ದು, ಈ ಪೈಕಿ ಕಣ್ಮರೆಯಾಗಿದ್ದ ಅಥವಾ ಶಿಥಿಲಗೊಂಡಿದ್ದ ಪ್ರಮುಖ ಸ್ಮಾರಕಗಳನ್ನು ಈಗ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಲಕ್ಕುಂಡಿಯ ಗತವೈಭವವನ್ನು ಸಂಪೂರ್ಣವಾಗಿ ಮರುಸ್ಥಾಪಿಸಬೇಕಾದರೆ, ಪ್ರಸ್ತುತ ಇರುವ ಗ್ರಾಮವನ್ನು ಸ್ಥಳಾಂತರಿಸಿ 'ನವ ಲಕ್ಕುಂಡಿ' ನಿರ್ಮಿಸಬೇಕು ಎಂಬ ಮನವಿಯನ್ನು ಸ್ಥಳೀಯರು ಸಚಿವರಿಗೆ ಸಲ್ಲಿಸಿದರು. 101 ದೇವಾಲಯಗಳು ಮತ್ತು 101 ಬಾವಿಗಳನ್ನು ಹೊರತೆಗೆಯಲು ಗ್ರಾಮಸ್ಥರನ್ನು ಇಲ್ಲಿಂದ ಸ್ಥಳಾಂತರ ಮಾಡುವುದು ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಹಣಕಾಸಿನ ಕೊರತೆ ಇಲ್ಲ

ಲಕ್ಕುಂಡಿಯನ್ನು ಜಗತ್ತಿಗೆ ತೋರಿಸಿದ ಕೀರ್ತಿ ಮಾಧ್ಯಮಗಳಿಗೆ ಸಲ್ಲಬೇಕು. ಅಧಿವೇಶನದಲ್ಲೂ ಲಕ್ಕುಂಡಿಯ ಬಗ್ಗೆ ನಿತ್ಯ ಪ್ರಶ್ನೆಗಳು ಬರುವಂತಾಗಿತ್ತು. ಸಿಎಂ ಸಿದ್ದರಾಮಯ್ಯ ಅವರೂ ಕೂಡ ಲಕ್ಕುಂಡಿಯ ಅಭಿವೃದ್ಧಿಗೆ ಬದ್ಧರಾಗಿದ್ದಾರೆ. ಎಷ್ಟೇ ಕಷ್ಟವಾದರೂ ಈ ಉತ್ಖನನ ಮತ್ತು ಅಭಿವೃದ್ಧಿ ಕಾರ್ಯಕ್ಕೆ ನಮ್ಮ ಸರ್ಕಾರ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳಲಿದೆ' ಎಂದು ಎಚ್.ಕೆ. ಪಾಟೀಲ ಭರವಸೆ ನೀಡಿದರು.

ಪಂಚ ದೇವಾಲಯ-ಬಾವಿಗಳ ಪುನರುಜ್ಜೀವನ

ಇದೇ ವೇಳೆ, ಸರ್ಕಾರದ ಈ 10 ಕೋಟಿ ರೂಪಾಯಿ ಯೋಜನೆಯಡಿ ಛಬ್ಬೆರ ಬಾವಿ, ಸಿದ್ದರ ಬಾವಿ, ಫಕ್ಕೀರಸ್ವಾಮಿ ಮಠದ ಬಾವಿ, ಚೌಕಿಮಠ ಹಾಗೂ ಬಾವಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹಾಗೆಯೇ ವಿದ್ಯಾಶಂಕರ ಲಿಂಗ ದೇವಸ್ಥಾನ, ಸೋಮನಕಟ್ಟಿ ಈಶ್ವರ ದೇವಾಲಯ ಸೇರಿದಂತೆ ಐದು ಪ್ರಮುಖ ದೇವಾಲಯಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

PREV
Read more Articles on
click me!

Recommended Stories

ಸಾಣಾಪುರ ಬಳಿ ಇಸ್ರೇಲ್ ಮಹಿಳೆ ಮೇಲೆ ಬಲತ್ಕಾರ: ಪ್ರಕರಣದ ಆರೋಪಿಗಳು ದೋಷಿ, ಗಂಗಾವತಿ ಕೋರ್ಟ್ ಮಹತ್ವದ ಆದೇಶ, 16ಕ್ಕೆ ಅಂತಿಮ ತೀರ್ಪು!
ಕರ್ನಾಟಕದ ಎಲ್ಲೆಡೆ ಚಿನ್ನದ ಗಣಿ; ನಿಮ್ಮೂರಲ್ಲಿದ್ದರೂ ಸರ್ಕಾರ ಮಾಹಿತಿಯನ್ನೇ ಕೊಟ್ಟಿಲ್ಲ!