4 ದಿನದಲ್ಲಿ E-Kyc ಮಾಡದಿದ್ದರೆ ರೇಷನ್​ ಬಂದ್​! ಮೊಬೈಲ್​ನಲ್ಲೇ ಹೀಗೆ ಮಾಡಿ- ಹಂತ ಹಂತದ ಮಾಹಿತಿ

Published : Oct 16, 2026, 06:39 PM IST
Ration Card

ಸಾರಾಂಶ

ರಾಜ್ಯದಲ್ಲಿ ಅಕ್ರಮ ಪಡಿತರ ಪಡೆಯುವುದನ್ನು ತಡೆಯಲು ಸರ್ಕಾರ ರೇಷನ್ ಕಾರ್ಡ್ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದ್ದು, ಅಕ್ಟೋಬರ್ 20 ಕೊನೆಯ ದಿನವಾಗಿದೆ. ಇ-ಕೆವೈಸಿ ಮಾಡಿಸದಿದ್ದರೆ ರೇಷನ್ ಸಿಗುವುದಿಲ್ಲ. 'ಅನ್ನ ಸೇವೆ' ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಸುಲಭವಾಗಿ ಇ-ಕೆವೈಸಿ ಮಾಡಿಕೊಳ್ಳಬಹುದು.

ರೇಷನ್​ಕಾರ್ಡ್​ ಫಲಾನುಭವಿಗಳ ಸಂಖ್ಯೆ ರಾಜ್ಯದಲ್ಲಿ 2 ಕೋಟಿ 67 ಲಕ್ಷದ 64 ಸಾವಿರದ 276 ಇದ್ದಾರೆ. ಇವರಲ್ಲಿ ಕೆಲವರು ಅಕ್ರಮವಾಗಿ ರೇಷನ್​ ಪಡೆಯುತ್ತಿರುವುದು ತಿಳಿದುಬಂದಿದೆ. ಬೆಂಗಳೂರಿನಂಥ ಮಹಾನಗರಗಳಲ್ಲಿಯೂ ಮನೆಗಳನ್ನು ಬಾಡಿಗೆಗೆ ಕೊಟ್ಟವರು, ಐಷಾರಾಮಿ ಕಾರುಗಳಲ್ಲಿ ತಿರುಗುತ್ತಿರುವವರೂ ಕೂಡ ಫಲಾನುಭವಿ ಎನ್ನುವುದು ರೇಷನ್​ ಅಂಗಡಿಯ ಮುಂದೆ ಕಾರಿನಲ್ಲಿ ಹೋಗಿ ರೇಷನ್​ಗೆ ಕ್ಯೂ ನಿಲ್ಲುವುದನ್ನು ನೋಡಿದರೆ ತಿಳಿಯುತ್ತದೆ. ಆದರೆ ಇವರ ಪೈಕಿ ಕೆಲವರನ್ನು ಗುರುತಿಸುವುದು ಕಷ್ಟ. ಆದರೂ, ಅಕ್ರಮವನ್ನು ಒಂದಷ್ಟು ಮಟ್ಟಿಗೆ ತಡೆಯುವುದಕ್ಕಾಗಿ ಸರ್ಕಾರವು ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ. ಇ-ಕೆವೈಸಿ ಮಾಡಿಸಿದರಷ್ಟೇ ರೇಷನ್​ ಸಿಗಲಿದೆ. ಇದಕ್ಕೆ ಇದೇ 20 ಕೊನೆಯ ದಿನವಾಗಿದೆ. ಇದಾಗಲೇ ಅಕ್ಟೋಬರ್​ 16 ಮುಗಿಯುತ್ತಾ ಬಂದಿದ್ದು, ನಾಲ್ಕು ದಿನಗಳಲ್ಲಿ ಇ-ಕೆವೈಸಿ ಮಾಡಿಸದಿದ್ದರೆ ರೇಷನ್​ ಸಿಗುವುದಿಲ್ಲ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಮೂಲಗಳು, ಕೇಂದ್ರದ ನಿರ್ದೇಶನಗಳನ್ನು ಅನುಸರಿಸಿ, ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರು ಇಲಾಖೆಯ ಮೂಲಕ ಕಡ್ಡಾಯ ಆಧಾರ್ ಇ-ಕೆವೈಸಿ ಪರಿಶೀಲನೆಯನ್ನು ಪೂರ್ಣಗೊಳಿಸಲು ಕೇಳಿಕೊಳ್ಳಲಾಗಿದೆ. ಆದರೆ ಕುತೂಹಲ ಎನ್ನುವಂತೆ ಇದುವರೆಗೆ 60 ಲಕ್ಷದ 87 ಸಾವಿರದ 998 ಫಲಾನುಭವಿಗಳು ಇನ್ನೂ ಇ-ಕೆವೈಸಿ ಸಲ್ಲಿಸಿಲ್ಲ. ತಾವು ಸಿಕ್ಕಿಬೀಳುವ ಉದ್ದೇಶವೇ ಅಥವಾ ಇ-ಕೆವೈಸಿ ಮಾಡುವುದು ತಿಳಿಯದೇ ಮಾಡಿಲ್ಲವೋ ಎನ್ನುವ ಗುಮಾನಿ ಇದೆ. ಅದೇನೇ ಇದ್ದರೂ ರೇಷನ್​ ಬೇಕು ಎಂದರೆ E-Kyc ಕಡ್ಡಾಯವಾಗಿ ನಾಲ್ಕು ದಿನಗಳಲ್ಲಿ ಮಾಡಿಸಲೇಬೇಕಿದೆ. ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಸೇರಿದಂತೆ 35 ಆಡಳಿತ ಜಿಲ್ಲೆಗಳಲ್ಲಿ, ಬೆಳಗಾವಿ 84.08% ಪ್ರಗತಿಯೊಂದಿಗೆ ರಾಜ್ಯದಲ್ಲೇ ಇ-ಕೆವೈಸಿ ಮಾಡಿಸಿರುವ ಅಗ್ರಸ್ಥಾನದಲ್ಲಿದೆ.

ಇದಕ್ಕಾಗಿ ಇದಾಗಲೇ ಸರ್ಕಾರ ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಆರಂಭಿಸಿದ್ದರೂ, ಇದು ಸದ್ಯ ಕೇವಲ ಎಂಟು ಜಿಲ್ಲೆಗಳಲ್ಲಿ ಮಾತ್ರ ಲಭ್ಯವಿದೆ. ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಸೇರಿದಂತೆ 23 ಜಿಲ್ಲೆಗಳ ಕಾರ್ಡ್‌ದಾರರು ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಸೌಲಭ್ಯದಿಂದ ವಂಚಿತರಾಗಿರುವುದರಿಂದ ನ್ಯಾಯಬೆಲೆ ಅಂಗಡಿಗಳ ಮುಂದೆ ತಮ್ಮ ಕುಟುಂಬ ಸದಸ್ಯರ ವಿವರಗಳನ್ನು ನವೀಕರಿಸಲು ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಅಪ್ಲಿಕೇಷನ್​ ಇದ್ದರೆ, ಇದರ ಮೂಲಕ ಕಾರ್ಡ್‌ದಾರರು ನ್ಯಾಯಯುತ ಬೆಲೆ ಅಂಗಡಿಗಳಿಗೆ ಭೇಟಿ ನೀಡದೆ ಮೊಬೈಲ್ ಫೋನ್ ಮೂಲಕ ತಮ್ಮ ವಿವರಗಳನ್ನು ನವೀಕರಿಸಬಹುದಾಗಿದೆ. ಕುಟುಂಬದ ಎಲ್ಲರ ಹೆಸರನ್ನೂ ಇ-ಕೆವೈಸಿ ಮಾಡಿಸುವುದು ಮುಖ್ಯವಾಗಿದೆ.

ನೀವು ಮಾಡಬೇಕಿರುವುದು ಏನು?

* ಆ್ಯಪ್ ಡೌನ್‌ಲೋಡ್: ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ಗೆ (Google Play Store) ಹೋಗಿ 'ಅನ್ನ ಸೇವೆ' (Anna Seve) ಮತ್ತು 'ಆಧಾರ್ ಫೇಸ್ ಆರ್‌ಡಿ' (AadhaarFaceRD) ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ

* ನೋಂದಣಿ: ಆ್ಯಪ್ ಓಪನ್ ಮಾಡಿ ನಿಮ್ಮ ರೇಷನ್ ಕಾರ್ಡ್ ನಂಬರ್ ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಮೂದಿಸಿ.

* ಒಟಿಪಿ ಪರಿಶೀಲನೆ: ನಿಮ್ಮ ಮೊಬೈಲ್‌ಗೆ ಬರುವ OTP ನಮೂದಿಸಿ ಲಾಗಿನ್ ಆಗಿ.

* ಫೇಸ್ ಅಥೆಂಟಿಕೇಶನ್ (Face Authentication): UIDAI ಫೇಸ್ ಅಥೆಂಟಿಕೇಶನ್ ಸೌಲಭ್ಯ ಬಳಸಿ, ರೇಷನ್ ಕಾರ್ಡ್‌ನಲ್ಲಿರುವ ಸದಸ್ಯರ ಮುಖವನ್ನು ಕ್ಯಾಮೆರಾ ಮುಂದೆ ತೋರಿಸಿ ಸ್ಕ್ಯಾನ್ ಮಾಡಿ.

* ಪೂರ್ಣಗೊಳಿಸುವಿಕೆ: ಮುಖದ ಗುರುತು ಸರಿಯಾಗಿ ಮ್ಯಾಚ್ ಆದ ನಂತರ ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಪ್ರಕ್ರಿಯೆ ಮನೆಯಲ್ಲೇ ಪೂರ್ಣಗೊಳ್ಳುತ್ತದೆ.

ಇನ್ನು ನಿಮ್ಮ ಇ-ಕೆವೈಸಿ ಆಗಿದ್ಯೋ ಇಲ್ಲವೋ ಎಂದೂ ಹಾಗೂ ಆ್ಯಪ್​ ಸೌಲಭ್ಯ ಇಲ್ಲದವರು ಆನ್​ಲೈನ್​ನಲ್ಲಿ ಹೇಗೆ ಮಾಡಿಸಬೇಕು ಎನ್ನುವ ವಿವರವನ್ನು ಈ ಕೆಳಸಿನ ಲಿಂಕ್​ನಲ್ಲಿ ತಿಳಿಸಲಾಗಿದ್ದು, ಅದನ್ನು ನೋಡಿ, ನೀವು ಮನೆಯಲ್ಲಿಯೇ ಆನ್​ಲೈನ್​ನಲ್ಲಿ ಮಾಡಬಹುದಾಗಿದೆ. 
ಆನ್​ಲೈನ್​ನಲ್ಲಿ ಇ-ಕೆವೈಸಿ ಮಾಡಿಸುವ ವಿಧಾನ ಹಾಗೂ ಕೆವೈಸಿ ಆಗಿದೆಯೋ ನೋಡುವ ವಿಧಾನದ ಕುರಿತು ಈ ಕೆಳಗಿನ ಲಿಂಕ್​ನಲ್ಲಿದೆ ಮಾಹಿತಿ:

 https://kannada.asianetnews.com/karnataka-districts/ration-will-be-closed-if-you-dont-do-e-kyc-last-day-is-september-30-online-and-offline-methods-suc/articleshow-zxdq0l9

PREV
Read more Articles on
click me!

Recommended Stories

ಚಾಮರಾಜನಗರ ಹೆಲಿ ಟೂರಿಸಂ ಆರಂಭ, ದಸರಾ ಸಂಭ್ರಮಕ್ಕೆ ಮೆರಗು ಕೊಟ್ಟ ವಿಶೇಷ ಯೋಜನೆ
HDK: ಕರ್ನಾಟಕದ ಹಣ ಲೂಟಿ ಮಾಡಿ 'ಕಾಕ್ರೋಚ್'ಗೆ ಫಂಡಿಂಗ್; ಎಚ್.ಡಿ.ಕುಮಾರಸ್ವಾಮಿ ಸ್ಫೋಟಕ ಆರೋಪ!