ಪಿಒಪಿ ಗಣಪತಿ ಸ್ಥಾಪಿಸಿದರೆ ದಂಡ, ಜೈಲು..!

By Kannadaprabha News  |  First Published Aug 19, 2022, 6:21 AM IST

ಕನ್ನಡಪ್ರಭ ವಿಶೇಷ ವರದಿ ಪರಿಣಾಮ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ


ಧಾರವಾಡ(ಆ.19):  ಪಿಒಪಿ ಗಣಪತಿ ಮೂರ್ತಿ ಸ್ಥಾಪನೆಯನ್ನು 2016ರಲ್ಲಿ ರಾಜ್ಯ ಸರ್ಕಾರ ನಿಷೇಧಿಸಿದೆ. ಈ ಆದೇಶ ಉಲ್ಲಂಘಿಸಿ ಪಿಒಪಿ ಗಣಪತಿ ಮೂರ್ತಿ ಸಿದ್ಧಪಡಿಸುವುದು, ಸ್ಥಾಪಿಸುವುದು ಹಾಗೂ ಜಲಮೂಲಗಳಲ್ಲಿ ವಿಸರ್ಜನೆ ಮಾಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ, 10 ಸಾವಿರ ದಂಡದೊಂದಿಗೆ ಜೈಲುವಾಸ ವಿಧಿಸಲಾಗುವುದು, ಜತೆಗೆ 5 ಅಡಿ ಗಣೇಶ ಮೂರ್ತಿ ಸ್ಥಾಪನೆಗೆ ಮಾತ್ರ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ನಿಷೇಧವಿದ್ದರೂ ಪಿಒಪಿ ಗಣೇಶ ಮೂರ್ತಿಗಳ ಪಾರುಪತ್ಯ’ ಶೀರ್ಷಿಕೆ ಅಡಿ ಆ. 17ರಂದು ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು. ನಿಷೇಧವಿದ್ದರೂ ಜಿಲ್ಲಾಡಳಿತದ ಭಯವಿಲ್ಲದೇ ರಾಜಾರೋಷವಾಗಿ ಈ ಮೂರ್ತಿಗಳ ಮಾರಾಟದ ಕುರಿತಾಗಿ ವರದಿ ಪ್ರಕಟವಾದ ಮರುದಿನವೇ ಜಿಲ್ಲಾಧಿಕಾರಿ ತಮ್ಮ ಕಚೇರಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ನಿಮಿತ್ತ ಗಣೇಶೋತ್ಸವ ಸಮಿತಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪಿಒಪಿ ಮೂರ್ತಿ ಕುರಿತು ಎಚ್ಚರಿಕೆ ನೀಡಿದ್ದಾರೆ.

Tap to resize

Latest Videos

ದೇಗುಲಕ್ಕೆಂದು ರೆಸಾರ್ಟ್‌ಗೆ ಕರೆದೊಯ್ದ ಕಾಲೇಜು ಮುಖ್ಯಸ್ಥ: ಹೆಣ್ಣುಮಕ್ಕಳ ದೂರು

ಹು-ಧಾ ಮಹಾನಗರ ಸೇರಿ ಜಿಲ್ಲೆಯ ಯಾವುದೇ ಸ್ಥಳದಲ್ಲಿ ಪಿಒಪಿ ಗಣೇಶ ವಿಗ್ರಹಗಳ ದಾಸ್ತಾನು, ಮಾರಾಟ ಕಂಡುಬಂದರೆ ಸಾರ್ವಜನಿಕರು ಜಿಲ್ಲಾಧಿ​ಕಾರಿ ಕಚೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿಗಳ ಕಚೇರಿ ಹಾಗೂ ಮಹಾನಗರ ಪಾಲಿಕೆ ಸಹಾಯವಾಣಿಗೆ ಕರೆಮಾಡಿ ಮಾಹಿತಿ ನೀಡಬೇಕು. ಅಧಿ​ಕಾರಿಗಳ ತಂಡ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತದೆ. ದಾಸ್ತಾನು ಹೊಂದಿರುವ ಪಿಒಪಿ ವಿಗ್ರಹ ಜಪ್ತಿ ಮಾಡಿ, ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹ ಸ್ಥಾಪಿಸಿ ಹಬ್ಬ ಆಚರಿಸಬೇಕೆಂದು ಜಿಲ್ಲಾಧಿ​ಕಾರಿ ಮನವಿ ಮಾಡಿದರು.

ಪ್ರಾದೇಶಿಕ ಸಾರಿಗೆ ಇಲಾಖೆ ಅ​ಧಿಕಾರಿಗಳು ಪೊಲೀಸ್‌ ಅ​ಧಿಕಾರಿಗಳೊಂದಿಗೆ ಗಣೇಶ ವಿಗ್ರಹಗಳ ಸಾಗಾಟ ಹಾಗೂ ಮಾರಾಟ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಬೇರೆಡೆಯಿಂದ ಪಿಒಪಿ ಗಣೇಶ ವಿಗ್ರಹಗಳು ಜಿಲ್ಲೆಗೆ ಬರದಂತೆ ತಡೆಯಲು ಪೊಲೀಸ್‌ ಚೆಕ್‌ಪೋಸ್ಟ್‌ಗಳಲ್ಲಿ ನಿರಂತರ ನಿಗಾವಹಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಮಹಾನಗರ ಪಾಲಿಕೆ ಹಾಗೂ ನಗರ ಪ್ರದೇಶಗಳಲ್ಲಿ ಏಕಗವಾಕ್ಷಿ (ಸಿಂಗಲ್‌ ವಿಂಡೋ) ಮೂಲಕ ವ್ಯವಸ್ಥೆ ಕಲ್ಪಿಸಲಾಗುವುದು. ಗಣೇಶ ವಿಸರ್ಜನೆಯ ದಿನಗಳಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ಮೊಬೈಲ್‌ ಟ್ಯಾಂಕರ್‌ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

ಪ್ಲೆಕ್ಸ್‌, ಬ್ಯಾನರ್‌ ಸಹ ನಿಷೇಧ:

ಗಣೇಶೋತ್ಸವದಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ಪ್ಲೆಕ್ಸ್‌ ಹಾಗೂ ಬ್ಯಾನರ್‌ ಬಳಕೆ ನಿಷೇಧಿಸಲಾಗಿದೆ. ಸರ್ಕಾರವು ಜು. 1, 2022ರಿಂದಲೇ ಏಕಬಳಕೆಯ ಪ್ಲಾಸ್ಟಿಕ್‌ ನಿಷೇಧಿ​ಸಿ ಆದೇಶಿಸಿದೆ. ಸಮಿತಿ ಹಾಗೂ ಸಾರ್ವಜನಿಕರು ಬಟ್ಟೆಬ್ಯಾನರ್‌ ಮಾತ್ರ ಬಳಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಎಸ್ಪಿ ಲೋಕೇಶ್‌ ಜಗಲಾಸರ್‌ ಮಾತನಾಡಿ, ಗಣೇಶ ವಿಗ್ರಹ 5 ಅಡಿಗೆ ಮಾತ್ರ ಸೀಮಿತವಿರಲಿ. ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಮಾತ್ರ ನಿಗದಿಪಡಿಸಿದ ಡಿಸೆಬಲ್‌ ಹೊಂದಿರುವ ಧ್ವನಿವರ್ಧಕ ಬಳಸಲು ಅವಕಾಶವಿದೆ. ಡಿಜೆ ಬಳಕೆಗೆ ಅವಕಾಶವಿಲ್ಲ. ಈ ಕುರಿತು ಸಮಿತಿಯವರು ಸಹಕಾರ ನೀಡಬೇಕು ಎಂದರು.

ಹಲವು ಕಾರ್ಖಾನೆಗಳಿಂದ ನಿಯಮ ಉಲ್ಲಂಘನೆ; ಸರ್ವೇ ವೇಳೆ ಬೆಳಕಿಗೆ!

ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ., ಮಾತನಾಡಿ, ಹಬ್ಬದ ಅಂಗವಾಗಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಗಣೇಶ ವಿಗ್ರಹಗಳ ವಿಸರ್ಜನೆಗೆ ಜಲಮೂಲ ಗುರುತಿಸಿ, ಸ್ವಚ್ಛಗೊಳಿಸಿ, ದೀಪದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಉಪಪೊಲೀಸ್‌ ಆಯುಕ್ತ ಸಾಹೀಲ್‌ ಬಾಗ್ಲಾ, ಗಣೇಶೋತ್ಸವ ಸಮಿತಿ ಮಹಾಮಂಡಳದ ಅಮರೇಶ ಹಿಪ್ಪರಗಿ, ಅಲ್ತಾಫ್‌ ಹಳ್ಳೂರ, ವಸಂತ ಅರ್ಕಾಚಾರಿ, ಸಿದ್ದು ಮೊಗಲಿಶೆಟ್ಟರ್‌, ಶಂಕರ ಕುಂಬಿ, ಕಲಾವಿದ ಮಂಜುನಾಥ ಹಿರೇಮಠ ಮಾತನಾಡಿದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅ​ಧಿಕಾರಿ ಶೋಭಾ ಪೋಳ್‌ ಸ್ವಾಗತಿಸಿದರು. ಪ್ರಾದೇಶಿಕ ಸಾರಿಗೆ ಅಧಿ​ಕಾರಿ ಬಿ. ಶಂಕ್ರಪ್ಪ, ಪಾಲಿಕೆಯ ಪರಿಸರ ಅ​ಧಿಕಾರಿ ನಯನಾ ಇದ್ದರು.
 

click me!