ಪ್ರತಿಯೊಬ್ಬರಿಗೂ ಸಚಿವನಾಗುವ ಆಸೆ ಇದ್ದೇ ಇರುತ್ತದೆ. ಅದೇ ರೀತಿ ನನಗೂ ಸಚಿವನಾಗಬೇಕೆಂಬ ಮಹತ್ವಾಕಾಂಕ್ಷೆ ಇದೆ. ಆದರೆ ಬಾಯಿಗೆ ಬಂದಂತೆ ಮಾತಾಡಿದ್ರೆ ಯಾವುದೂ ಆಗಲ್ಲ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ [ಫೆ.09]: ಶಾಸಕನಾದ ಪ್ರತಿಯೊಬ್ಬರಿಗೂ ಸಚಿವನಾಗುವ ಆಸೆ ಇದ್ದೇ ಇರುತ್ತದೆ. ಅದೇ ರೀತಿ ನನಗೂ ಸಚಿವನಾಗಬೇಕೆಂಬ ಮಹತ್ವಾಕಾಂಕ್ಷೆ ಇದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಜಿಲ್ಲೆಯ ಹೊನ್ನಾಳಿ ತಾಲೂಕು ಸೂರಗೊಂಡನಕೊಪ್ಪದಲ್ಲಿ ಶ್ರೀ ಸಂತ ಸೇವಾಲಾಲ್‌ರ ಜಯಂತಿ ಸಿದ್ಧತೆ ಕಾರ್ಯಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವನಾಗಬೇಕೆಂಬ ಆಸೆ ಇದೆ. ಹಾಗೆಂದು ಮಾಧ್ಯಮಗಳ ಮುಂದೆ ಹೇಳಿಕೊಂಡರೆ ಸಚಿವನಾಗಲ್ಲ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ನಾನು ಸಚಿವ ಸ್ಥಾನವನ್ನು ಕೇಳಿ, ಗೊಂದಲವನ್ನುಂಟು ಮಾಡುವುದಿಲ್ಲ. ನಾಡಿನ ಕೇಂದ್ರ ಬಿಂದುವಾದ, ಇಡೀ ರಾಜ್ಯಕ್ಕೆ ಸಂಪರ್ಕ ಸೇತುವೆಯಂತಿರುವ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಬೇಕಿತ್ತು. ಆದರೆ, ಸಿಕ್ಕಿಲ್ಲ ಎಂದು ಅವರು ವಿಷಾದಿಸಿದರು.
ಬಿಜೆಪಿಯಲ್ಲಿ ಭಿನ್ನಮತ, ಬಂಡಾಯ ಇಲ್ಲ: ರೇಣುಕಾಚಾರ್ಯ...
ಶಾಸಕರಾದ ನಾವು ಯಡಿಯೂರಪ್ಪ ಅವರ ಮಕ್ಕಳಿದ್ದಂತೆ. ಬಿಎಸ್‌ವೈ ನಮಗೆ ತಂದೆ ಸಮಾನರು. ಈಗಿನ ಸದ್ಯದ ಪರಿಸ್ಥಿತಿಯಲ್ಲಿ ಸಚಿವ ಸ್ಥಾನವನ್ನು ಕೇಳಿ, ಗೊಂದಲವನ್ನುಂಟು ಮಾಡುವುದಿಲ್ಲ. ಅಲ್ಲದೇ, ಮಾಧ್ಯಮಗಳ ಮುಂದೆ ಹೇಳಿಕೊಂಡರೆ ಅದು ಈಡೇರಲ್ಲ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಮಾಧ್ಯಮಗಳ ಮುಂದೆ ಹೇಳಿಕೊಂಡ ಬೇಡಿಕೆಗಳೆಲ್ಲವೂ ಈಡೇರಲ್ಲ. ರಾಜಕೀಯವಾಗಿ ನಾನು ಇನ್ನೂ ಸಣ್ಣವನು. ಸಾಧಿಸುವುದು ಇನ್ನೂ ತುಂಬಾ ಇದೆ. ಬರೀ ಮಾತನಾಡುವುದೇ ಸಾಧನೆ ಆಗಬಾರದು. ನಾನು ಮಾಧ್ಯಮಗಳ ಮುಂದೆ ಮುಖ್ಯಮಂತ್ರಿ ಆಗಬೇಕೆಂದಿದ್ದೇನೆಂದರೆ ಅದು ಆಗುತ್ತದೆಯೇ? ಸುಮ್ಮನೇ ಬಾಯಿಗೆ ಬಂದಂತೆ ಮಾತನಾಡಿದರೆ ನಮ್ಮ ಘನತೆ ಕಡಿಮೆಯಾಗುತ್ತದಷ್ಟೇ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಫೆ.9ರಂದು ಹರಿಹರ ತಾಲೂಕು ರಾಜನಹಳ್ಳಿ ಗ್ರಾಮದ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ ಉದ್ಘಾಟನಾ ಸಮಾರಂಭಕ್ಕೆ ಬರಲಿದ್ದಾರೆ. ಯಡಿಯೂರಪ್ಪ ಅನುಭವಿ ರಾಜಕೀಯ ನಾಯಕನಾಗಿದ್ದು, ಎಂತಹದ್ದೇ ಸಮಸ್ಯೆ ಎದುರಾದರೂ ಬಗೆಹರಿಸುತ್ತಾರೆ ಎಂದು ರೇಣುಕಾಚಾರ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.