ತವರು ಪಕ್ಷಕ್ಕೆ ಮರಳಲು ಮನಸು ಮಾಡಿದ್ದೇನೆ : ವಿಶ್ವನಾಥ್

By Kannadaprabha NewsFirst Published Jan 14, 2023, 6:36 AM IST
Highlights

ಕಾಂಗ್ರೆಸ್‌ ನನ್ನ ಮನೆಯಿದ್ದಂತೆ, ಹಾಗಾಗಿ ತವರು ಪಕ್ಷಕ್ಕೆ ಮರಳಲು ಮನಸು ಮಾಡಿದ್ದೇನೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

  ಹುಣಸೂರು :  ಕಾಂಗ್ರೆಸ್‌ ನನ್ನ ಮನೆಯಿದ್ದಂತೆ, ಹಾಗಾಗಿ ತವರು ಪಕ್ಷಕ್ಕೆ ಮರಳಲು ಮನಸು ಮಾಡಿದ್ದೇನೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

ಪಟ್ಟಣದ ಕನಕಭವನದಲ್ಲಿ ಶುಕ್ರವಾರ ತಮ್ಮ ಅಭಿಮಾನಿಗಳೊಂದಿಗೆ ಆಯೋಜಿಸಿದ್ದ ವಿಶ್ವಾಸ ಸಭೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಆಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ನನ್ನನ್ನು ಆರಿಸಿ ಕಳುಹಿಸಿದ ಮತದಾರ, ದೀಕ್ಷೆ ನೀಡಿದ ದೇವರಾಜ ಅರಸರು ಮತ್ತು ಹಿರಿಯರಾದ ಎಚ್‌.ಡಿ. ದೇವೇಗೌಡರ ಮರ್ಜಿಗೆ ಒಳಗಾಗಿದ್ದೇನೆಯೇ ಹೊರತು, ಇನ್ನಾರದೇ ಮರ್ಜಿಯಲ್ಲಿ ನಾನಿಲ್ಲ.

2017ರಲ್ಲಿ ಕಾಂಗ್ರೆಸ್‌ ತೊರೆದ ನಾನು ಮತ್ತೆ ಅದೇ ಪಕ್ಷಕ್ಕೆ ತೆರಳಲು ಮನಸು ಮಾಡಿದ್ದೇನೆ. ಎಲ್ಲ ಪಕ್ಷಗಳಲ್ಲೂ ಉತ್ತಮ ತತ್ವಾದರ್ಶಗಳಿವೆ, ಆದರೆ ಅದರ ಜಾರಿಯಲ್ಲಿ ಎಲ್ಲವೂ ಎಡವಿದೆ. ಕಾಂಗ್ರೆಸ್‌ನಲ್ಲಿದ್ದರೆ ನನಗೊಂದು ಸಮಾಧಾನ ಸಿಗುತ್ತದೆ. ನನ್ನ ಮನೆಯಲ್ಲಿ ಇದ್ದೇನೆಂಬ ಭಾವನೆ ಮೂಡುತ್ತದೆ. 2023ರ ಚುನಾವಣಾ ರಾಜಕೀಯದಲ್ಲಿ ನಾನಿಲ್ಲ. ಹುಣಸೂರಿನ ಜನರು ನನ್ನನ್ನು ತಮ್ಮ ನಾಯಕನನ್ನಾಗಿ ಆರಿಸಿ ಕಳುಹಿಸಿದ್ದಾರೆ. 14 ತಿಂಗಳ ಕಾಲ ಶಾಸಕನಾಗಿ 150ಕ್ಕೂ ಹೆಚು ಕೋಟಿ ರು.ಗಳ ಅಭಿವೃದ್ಧಿ ಕಾರ್ಯ ಮಾಡಿದ ಸಮಾಧಾನ ನನ್ನದಾಗಿದೆ ಎಂದು ಹೇಳಿದರು.

ಎಲ್ಲ ಪಕ್ಷಗಳಲ್ಲೂ ನನಗೆ ಆತ್ಮೀಯರಿದ್ದಾರೆ. ಅವರನ್ನೆಲ್ಲ ಒಂದು ಕಡೆ ಸೇರಿಸಿ ನನ್ನೊಂದಿಗಿನ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದು ಕೋರಲು ಈ ಸಭೆ ಕರೆದಿದ್ದೇನೆ. ನಾನು ಯಾವುದೇ ಪಕ್ಷಕ್ಕೆ ಹೋಗಲಿ, ಯಾರನ್ನೂ ಬಲವಂತದಿಂದ ಬಾ ಎನ್ನುವುದಿಲ್ಲ. ನನ್ನ ಅಭಿಮಾನಿಗಳನ್ನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದರೆ ತಡೆಯುವವನೂ ನಾನಲ್ಲ. ಎಲ್ಲರಿಗೂ ತಮ್ಮದೇ ಅಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯವಿದೆ. ಎಂದಿಗೂ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಡಿ.ಕೆ. ಕುನ್ನೇಗೌಡ, ನಗರಸಭಾಧ್ಯಕ್ಷೆ ಗೀತಾ ನಿಂಗರಾಜು, ಸದಸ್ಯರಾದ ಸತೀಶ್‌ಕುಮಾರ್‌, ಶರವಣ, ಕೃಷ್ಣರಾಜ ಗುಪ್ತ, ಹರೀಶ್‌, ಮುಖಂಡರಾದ ಬಸವಣ್ಣ, ಪುಟ್ಟಮ್ಮ, ಸುನೀತಾ ಜಯರಾಮೇಗೌಡ, ವಾಸೇಗೌಡ, ಶಿವಶೇಖರ್‌, ಪ್ರಾಣೇಶ್‌ಶೆಟ್ಟಿ, ಫಯಾಜ್‌, ಪ್ರಸನ್ನ, ಗೋವಿಂದೇಗೌಡ, ಸ್ವಾಮಿ, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಸತ್ಯಪ್ಪ, ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಇದ್ದರು.

ಬಿಜೆಪಿಯಂತ ಸರ್ಕಾರ ನೋಡಿಲ್ಲ

ಅರಕಲಗೂಡು (ಜ.14): ನನ್ನ 44 ವರ್ಷಗಳ ರಾಜಕೀಯ ಜೀವನದಲ್ಲಿ ಬಿಜೆಪಿಯಂಥ ಭ್ರಷ್ಟ ಸರ್ಕಾರವನ್ನು ಯಾವತ್ತೂ ನೋಡಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನ ರಾಮನಾಥಪುರ ಹೋಬಳಿಯ ಬಿಳಗೂಲಿ ಗ್ರಾಮದಲ್ಲಿ ಸ್ಥಾಪಿಸಿರುವ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಶುಕ್ರವಾರ ಉದ್ಘಾಟಿಸಿ, ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಬಿಜೆಪಿಯಂತಹ ಭ್ರಷ್ಟಾಚಾರಿಗಳು, ವಚನ ಭ್ರಷ್ಟರು ರಾಜ್ಯದ ಇತಿಹಾಸದಲ್ಲಿ ಯಾರೂ ಇಲ್ಲ. ಬಿಜೆಪಿ ಬರೀ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯದ ಇತಿಹಾಸದಲ್ಲಿ ಯಾರಾದರೂ ಒಂದು ಸರ್ಕಾರವನ್ನು 40 ಪರ್ಸೆಂಟ್‌ ಕಮಿಷನ್‌ ಸರ್ಕಾರವೆಂದು ಹೇಳಿದ್ದಾರಾ? ಈ ಕುರಿತು ಕಂಟ್ರಾಕ್ಟರ್‌ ಅಸೋಸಿಯೇಷನ್‌ ಅವರು 40 ಪರ್ಸೆಂಟ್‌ನಿಂದ ತಮ್ಮನ್ನು ಉಳಿಸುವಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೂ ಮೋದಿ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ಕಿಡಿಕಾರಿದರು.

ಸುಳ್ಳುಗಳನ್ನು ತಯಾರು ಮಾಡುವ ಫ್ಯಾಕ್ಟರಿ ಬಿಜೆಪಿ: ಸಿದ್ದರಾಮಯ್ಯ

ಗೆದ್ದೆತ್ತಿನ ಬಾಲ ಹಿಡಿಯೋ ಜೆಡಿಎಸ್‌: ಜೆಡಿಎಸ್‌ ಬಗ್ಗೆ ನಾನು ಮಾತನಾಡಲ್ಲ. ಕಾರಣ, ಅವರೇನು ಅ​ಧಿಕಾರಕ್ಕೆ ಬರುವವರಲ್ಲ. ಅವರು ಗೆದ್ದೆತ್ತಿನ ಬಾಲ ಹಿಡಿಯುವವರು. ಅವರಿಂದ ರಾಜ್ಯಕ್ಕೆ ಒಳ್ಳೆಯದಾಗಲ್ಲ ಎಂದರು.

ಧಮ್‌ ಇದ್ರೆ ಚರ್ಚೆಗೆ ಬರಲಿ: ನಾವು 2013ರಲ್ಲಿ ನೀಡಿದ್ದ 165 ಭರವಸೆಗಳಲ್ಲಿ 159 ಭರವಸೆಗಳನ್ನು ನನ್ನ ಸರ್ಕಾರಾವಧಿಯಲ್ಲಿ ಈಡೇರಿಸಿದ್ದೇವೆ. ಆದರೆ, 2018ರಲ್ಲಿ ಬಿಜೆಪಿ ನೀಡಿದ್ದ 600 ಭರವಸೆಗಳಲ್ಲಿ ಶೇ.10ರಷ್ಟನ್ನೂ ಈಡೇರಿಸಿಲ್ಲ. ಈ ಕುರಿತು ಚರ್ಚಿಸಲು ವೇದಿಕೆಗೆ ಬನ್ನಿ ಎಂದು ಕರೆದರೂ ಬರಲು ಬಿಜೆಪಿಗೆ ದಮ್‌ ಇಲ್ಲ, ತಾಕತ್‌ ಇಲ್ಲ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತೆತ್ತಿದರೆ ದಮ್‌ ಇದ್ರೆ, ತಾಕತ್‌ ಇದ್ರೆ ಎನ್ನುತ್ತಾರೆ. ಬನ್ನಿ ತೋರಿಸಿ ದಮ್‌, ತಾಕತ್ತು ಎಂದು ಸವಾಲೆಸೆದರು.

ಎಲ್ಲಾ ಕ್ಷೇತ್ರದ ಅಭಿವೃದ್ಧಿಯಿಂದ ಸಮಾನತೆ: ಪ್ರತಿಯೊಬ್ಬರು ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದುವುದರ ಮುಖಾಂತರ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನುಡಿದರು. ತಾಲೂಕಿನ ತಿಂಥಿಣಿ ಸೇತುವೆ ಸಮೀಪದಲ್ಲಿರುವ ಕಲಬುರಗಿ ವಿಭಾಗದ ಕಾಗಿನೆಲೆ ಕನಕಗುರು ಪೀಠದಲ್ಲಿ ಗುರುವಾರ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಹಾಲುಮತ ಸಂಸ್ಕೃತಿ ವೈಭವದ ಮೊದಲ ದಿನ ನಡೆದ ಹಾಲುಮತ ಕಲಾ ಪ್ರಕಾರಗಳು ಮತ್ತು ಕಲಾವಿದರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

click me!