ಕೊಬ್ಬರಿ ನಫೆಡ್‌ ಕೇಂದ್ರ ತೆರೆಯದಿದ್ದರೆ ಹೈವೆ ಬಂದ್‌

By Kannadaprabha News  |  First Published Jan 14, 2023, 6:05 AM IST

ಕೊಬ್ಬರಿ ಬೆಲೆ ತೀರ ಕುಸಿದಿದ್ದರೂ ನಫೆಡ್‌ ತೆರೆದು ಕೊಬ್ಬರಿ ಕೊಂಡುಕೊಳ್ಳದೆ ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದು ಒಂದು ವಾರದೊಳಗೆ ನಫೆಡ್‌ ತೆರೆಯದಿದ್ದರೆ ಜ.25ರಂದು ತಾಲೂಕಿನ ಕೆ.ಬಿ. ಕ್ರಾಸ್‌ನ ಎರಡು ಹೈವೆಗಳನ್ನು ಬಂದ್‌ ಮಾಡಿ ಪ್ರತಿಭಟಿಸಲಾಗುವುದು ಎಂದು ತಿಪಟೂರು ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಲೋಕೇಶ್ವರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


 ತಿಪಟೂರು (ಜ. 14):  ಕೊಬ್ಬರಿ ಬೆಲೆ ತೀರ ಕುಸಿದಿದ್ದರೂ ನಫೆಡ್‌ ತೆರೆದು ಕೊಬ್ಬರಿ ಕೊಂಡುಕೊಳ್ಳದೆ ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದು ಒಂದು ವಾರದೊಳಗೆ ನಫೆಡ್‌ ತೆರೆಯದಿದ್ದರೆ ಜ.25ರಂದು ತಾಲೂಕಿನ ಕೆ.ಬಿ. ಕ್ರಾಸ್‌ನ ಎರಡು ಹೈವೆಗಳನ್ನು ಬಂದ್‌ ಮಾಡಿ ಪ್ರತಿಭಟಿಸಲಾಗುವುದು ಎಂದು ತಿಪಟೂರು ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಲೋಕೇಶ್ವರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದ ಕಲ್ಪತರು ಗ್ರ್ಯಾಂಡ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕ್ವಿಂಟಾಲ್‌ ಕೊಬ್ಬರಿಗೆ 750 ರು. ಪೋ›ತ್ಸಾಹ ಧನ ಘೋಷಣೆ ಮಾಡಿ ಮೂರು ವಾರಗಳಾದರೂ ಇನ್ನೂ ಅಧಿಕೃತವಾಗಿ ಜಾರಿಯಾಗಿಲ್ಲ. ಕೊಬ್ಬರಿಗೆ ಬೆಲೆಯಿಲ್ಲದೆ ರೈತರು ಕಂಗಾಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತೆಲ್ಲಿ ಬೆಲೆ ಕಡಿಮೆಯಾಗುತ್ತದೆ ಎಂಬ ಭಯದಿಂದ ಮಾರುಕಟ್ಟೆಗೆ ಕೊಬ್ಬರಿಯನ್ನು ತರುತ್ತಿದ್ದಾರೆ. ಈಗಿರುವ ಬೆಲೆ ರೈತರ ಖರ್ಚಿಗೆ ಸಾಕಾಗುತ್ತಿಲ್ಲ. ಆರ್ಥಿಕ ಸಂಕಷ್ಟದಿಂದ ರೈತರು ಪರಿತಪಿಸುತ್ತಿದ್ದು ಇಲ್ಲಿನ ಸಚಿವರಿಗೆ ಯಾರ ಕಷ್ಟವೂ ಅರ್ಥವಾಗುತ್ತಿಲ್ಲ. ಉಪಯೋಗಕ್ಕೆ ಬಾರದ ಸಚಿವರಾಗಿದ್ದಾರೆ. ಕೊಬ್ಬರಿ ಬೆಲೆಯನ್ನು ಹೆಚ್ಚಿಸಬೇಕೆಂದು ತಿಪಟೂರು ಬಂದ್‌ಗೂ ಕರೆದುಕೊಡಲಾಯಿತು. ಹಲವು ತಾಲೂಕುಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಂಡು ಹೋರಾಟ ಮಾಡಿದರೂ ಸರ್ಕಾರ ಮಾತ್ರ ಸ್ಪಂದಿಸದೆ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದರು.

Tap to resize

Latest Videos

ಕಲ್ಪತರು ನಾಡಿನಲ್ಲಿ ತೆಂಗು ಮೂಲ ಬೆಳೆಯಾಗಿದ್ದು ತೆಂಗು ಬೆಳೆಗಾರರು ನಲುಗಿ ಹೋಗುತ್ತಿದ್ದಾರೆ. ನಮ್ಮ ತಿಪಟೂರು ಹೋರಾಟ ಸಮಿತಿ ರೈತ ಪರವಾಗಿದ್ದು ತಾಲೂಕಿನ ಕೆ.ಬಿ. ಕ್ರಾಸ್‌ನಲ್ಲಿರುವ ಬೀದರ್‌-ಮೈಸೂರು ಹಾಗೂ ಶಿವಮೊಗ್ಗ-ಹೊನ್ನಾವರ ಹೈವೆಗಳನ್ನು ಬಂದ್‌ ಮಾಡುವ ಮೂಲಕ ಕೊಬ್ಬರಿ ಬೆಲೆ ಹೆಚ್ಚಿಸುವಂತೆ ಒತ್ತಡ ಹಾಕಲಾಗುವುದು. ನಮ್ಮ ಮೇಲೆ ಕೇಸ್‌ ಹಾಕಿ ಜೈಲಿಗೆ ಕಳುಹಿಸಿದರೂ ನಾವು ಹೈವೆ ಬಂದ್‌ ಮಾಡುವುದು ಖಚಿತ. ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲೂಕುಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ. ಈ ಬಂದ್‌ ಪಕ್ಷಾತೀತವಾಗಿದ್ದು ರಾಜಕೀಯ ಮುಖಂಡರು ಭಾಗವಹಿಸುವಂತೆ ಆಹ್ವಾನ ನೀಡಲಾಗುವುದು. ವಿವಿಧ ಸಂಘ ಸಂಸ್ಥೆಗಳು, ರೈತಪರ ಸಂಘಟನೆಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸರ್ಕಾರ ಶಾಶ್ವತ ನಫೆಡ್‌ ತೆರೆದು ರೈತರಿಗೆ ಅನುಕೂಲ ಕಲ್ಪಿಸಬೇಕು. ಕ್ವಿಂಟಾಲ್‌ ಕೊಬ್ಬರಿಗೆ 3 ಸಾವಿರ ರು. ಪೋ›ತ್ಸಾಹ ಧನ ನೀಡಬೇಕು. ಇದರಿಂದ ರೈತರಿಗೆ ಕ್ವಿಂಟಾಲ್‌ ಕೊಬ್ಬರಿಗೆ 15 ಸಾವಿರ ರು. ಸಿಗಲಿದ್ದು ನೆಮ್ಮದಿಯ ಜೀವನ ನಡೆಸಲಿದ್ದಾರೆ. ಸರ್ಕಾರ ರೈತರ ಬಗ್ಗೆ ಉದಾಸೀನತೆ ತಾಳದೆ ಒಂದು ವಾರದೊಳಗೆ ನಫೆಡ್‌ ತೆರೆದು ಕೊಬ್ಬರಿ ಖರೀದಿ ಮಾಡಬೇಕೆಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಸೊಪ್ಪುಗಣೇಶ್‌, ಸದಸ್ಯರಾದ ಭಾರತಿ ಮಂಜುನಾಥ್‌, ಆಶಿಫಾಬಾನು, ಲೋಕೇಶ್ವರ ಅಭಿಮಾನಿ ಬಳಗದ ನಾಗರಾಜು, ಶಶಿಧರ್‌, ಸಿದ್ದರಾಮಣ್ಣ, ಗಿರೀಶ್‌, ರಾಜಶೇಖರ್‌, ಪಂಚಾಕ್ಷರಿ, ಕಾಂತರಾಜು, ನಟರಾಜು, ಮಲ್ಲೇಶ್‌, ಗಂಗಣ್ಣ ಮತ್ತಿತರರಿದ್ದರು.

------------

ಫೋಟೋ 13-ಟಿಪಿಟಿ3ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ತಿಪಟೂರಿನ ಕಲ್ಪತರು ಗ್ರ್ಯಾಂಡ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಿಪಟೂರು ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಲೋಕೇಶ್ವರ.

click me!